

21st April 2026

ಕನಕಗಿರಿ.
ಬರುವ ಮೇ 16 ಮತ್ತು 17ರಂದು ಎರಡು ದಿನ ಐತಿಹಾಸಿಕ ಕನಕಗಿರಿ ಉತ್ಸವ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಯಶಸ್ವಿಗೆ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚನೆ ನೀಡಿದರು.
ಪೂರ್ವ ನಿಗದಿಯಂತೆ, ಏ.21 ರಂದು ಕನಕಗಿರಿ ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿಕೊಂಡು ಅವರು ಮಾತನಾಡಿದರು. ಪ್ರಾರಂಭದಲ್ಲಿ ಸಚಿವರು ಉತ್ಸವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ ಪಡೆದುಕೊಂಡರು. ಸ್ಥಳೀಯ ಜಾತ್ರೆಯ ಸಂಬಂಧ ವಾರ ಕಾಲ ಉತ್ಸವ ಮುಂದೂಡಬೇಕು. ಉತ್ಸವದ ಜೊತೆಗೆ ದೇವಾಲಯ, ಕೋಟೆದ್ವಾರಗಳನ್ನು ದುರಸ್ತಿಗೊಳಿಸಬೇಕು. ಬಿಸಿಲಿನ ಕಾರಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಾರ್ವಜನಿಕರು ಸಲಹೆ ಮಾಡಿದರು.
ಈ ವೇಳೆ ಸಚಿವರು ಮಾತನಾಡಿ, ಕನಕಾಚಲಪತಿ ಜಾತ್ರೆ ಮತ್ತು ಉತ್ಸವ ಎರಡು ಏಕಕಾಲಕ್ಕೆ ನಡೆದಲ್ಲಿ ಜಾತ್ರೆಗೆ ಸೇರುವ ಜನತೆಗೆ ಉತ್ಸವ ನೋಡಲು ಅನುಕೂಲವಾಗಲಿದೆ ಎಂದು ಯೋಜಿಸಿ ಮತ್ತು ಉತ್ಸವಕ್ಕೆ ಬರುವ ಜನತೆ ಜಾತ್ರೆಯನ್ನು ಸಹ ನೋಡಬೇಕು ಎಂದು ಆಶಿಸಿ ಜಾತ್ರೆ ಸಂದರ್ಭದಲ್ಲಿ ಉತ್ಸವ ನಿಗದಿಗೆ ಯೋಜಿಸಲಾಗಿತ್ತು ಎಂದು ತಿಳಿಸಿದರು. ಸಾರ್ವಜನಿಕರ ಸಲಹೆಯಂತೆ ಮೇ 9 ಮತ್ತು 10ರ ಬದಲಾಗಿ ಮೇ 16 ಮತ್ತು ಮೇ 17 ರಂದು ಉತ್ಸವ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು.
ಮುಂದುವರೆದು ಮಾತನಾಡಿದ ಅವರು ಈ ಬಾರಿಯ ಉತ್ಸವದಲ್ಲಿ
ಬೆಳಗ್ಗೆಯಿಂದ ಸಂಜೆವರೆಗೆ ಎರಡು ದಿನ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗುವುದು. ಕಳೆದ ಬಾರಿಗಿಂತ ಈ ಬಾರಿ ಅದ್ದೂರಿ ಉತ್ಸವ ಆಯೋಜನೆ ಮಾಡಲಾಗುವುದು.
ಮೇ 14 ಮತ್ತು ಮೇ 15ರಂದು ಕ್ರೀಡಾಕೂಟ ಆಯೋಜನೆ ಮಾಡಲಾಗುವುದು ಎಂದು ಸಬೆಯಲ್ಲಿ ಮಾಹಿತಿ ನೀಡಿದರಲ್ಲದೆ, ಈಗಾಗಲೇ ರಚನೆಯಾದ ಸಮಿತಿಗಳಿಂದ ಮೇಲಿಂದ ಮೇಲೆ ಸಿದ್ಧತಾ ಸಭೆಗಳು ಆಗಬೇಕು. ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಉತ್ತಮ ಪ್ರದರ್ಶನಕ್ಕೆ ಆಸಕ್ತಿ ವಹಿಸಬೇಕು. ಬಸ್ ಗಳ ಮೇಲೆ
ಪೋಸ್ಟರ್ ಅಂಟಿಸಿ ಪ್ರಚಾರ ನಡೆಸಬೇಕು.
ಬೆಳಗಿನ ಅವಧಿಯಲ್ಲೇ ಮೆರವಣಿಗೆ ಆಗಬೇಕು. ಕವಿಗೋಷ್ಠಿ ಸೇರಿದಂತೆ ಬೇರೆ ಬೇರೆ ಗೋಷ್ಠಿಗಳು ಎರಡೂ ದಿನ ನಡೆಯಬೇಕು. ಎರಡು ದಿನ ಕನಕಗಿರಿಯಲ್ಲಿ ಮೈಸೂರ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.
ಮುಖ್ಯ ವೇದಿಕೆಗೆ ಉಡಚಪ್ಪ ನಾಯಕ ವೇದಿಕೆ ಮತ್ತು ಕವಿಗೋಷ್ಠಿ ವೇದಿಕೆಗೆ ಜಯತೀರ್ಥ ರಾಜಪುರೋಹಿತ ಅವರ ಹೆಸರನ್ನಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಮಾತನಾಡಿ, ಕನಕಗಿರಿ ಉತ್ಸವಕ್ಕಾಗಿ ಈಗಾಗಲೇ
ರೂ.6 ಕೋಟಿ ಅನುದಾನ ನಿಗದಿಯಾಗಿದೆ. ಇದಕ್ಕಾಗಿ 18 ಸಮಿತಿಗಳನ್ನು ರಚಿಸಿದ್ದೇವೆ. ಕಾರ್ಯ ಹಂಚಿಕೆ ಮಾಡಿದ್ದೇವೆ. ಈ ಭಾರಿಯೂ ಪುನಃ ಎರಡು ವೇದಿಕೆಗಳ ನಿರ್ಮಾಣಕ್ಕೆ, ಸ್ಥಳೀಯ ಹಾಗೂ ರಾಜ್ಯದ ಕಲಾವಿದರ ಆಹ್ವಾನಕ್ಕೆ ಕ್ರಮ ವಹಿಸಿದ್ದೇವೆ. ಕ್ರೀಡಾಕೂಟ ಸೇರಿದಂತೆ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯಿಸುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ರಾಮಚಂದ್ರ, ಉಪಾಧ್ಯಕ್ಷ
ಕಂಠೀರಾವ್, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ನ್ಯಾಮಗೌಡರ ಸೇಇದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು..

ಗಂಗಾವತಿಗೆ ತಹಶೀಲ್ದಾರರಾಗಿ ಯು.ವಸಂತಕುಮಾರಿ ವರ್ಗ ರಾಜ್ಯ ಸರಕಾರದ ಆದೇಶ: ಏ.15ರಂದು ಕರ್ತವ್ಯಕ್ಕೆ