

22nd April 2026

ಗಂಗಾವತಿ.
ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್ ಹಾಗೂ ಜೆಏಂಎಪ್ ಸಿ ನ್ಯಾಯಾಧೀಶ ನಾಗೇಶ ಪಾಟೀಲ್ ಆದೇಶಿಸಿದ್ದಾರೆ
ಬುಧವಾರ ತೀರ್ಪು ಪ್ರಕಟವಾಗಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ:- 05-05-2021 ರಂದು ಬೆಳಗ್ಗೆ 06-00 ಅವಧಿಯಲ್ಲಿ ಆರೋಪಿ ಮಹೇಶ ತಂದೆ ಬಸ್ಸಪ್ಪ ಕುಡತ್ತಿ ಇತನು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಆರೋಪಿ ನಂ 2 ದುರಗಮ್ಮ ಗಂಡ ಕೃಷ್ಣಪ್ಪ ಇಕೆಯೊಂದಿಗೆ ಸೇರಿಕೊಂಡು ಆರೋಪಿ ಎ-1 ಈರಣ್ಣ ತಂದೆ ಕೃಷ್ಣಪ್ಪ ನಾಯಕ ಸಾ: ಕೆಡಿ ನಗರ ಗಂಗಾವತಿ ಇತನ ಸಂಗಡ ಕೆಡಿ ನಗರ ಮನೆಯಲ್ಲಿ ಬಾಲ್ಯ ವಿವಾಹ ಮಾಡಿದ್ದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09, 10 ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಪಿಎಸ್ ಐ ಯಲ್ಲಪ್ಪ ಮತ್ತು ಪಿಎಸ್ ಐ ಶಾರವ್ವ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ದಿನಾಂಕ 22-04-2026 ರಂದು ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜಿ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ಆರೋಪಿ ಎ-। ಈರಣ್ಣ ತಂದೆ ಕೃಷ್ಣಪ್ಪ ನಾಯಕ, ಆರೋಪಿ ನಂ 2 ದುರಗಮ್ಮ ಗಂಡ ಕೃಷ್ಣಪ್ಪ, ಆರೋಪಿ ಎ-3 ಮಹೇಶ ತಂದೆ ಬಸ್ಸಪ್ಪ ಕುಡಲ್ಲಿ ಇವರನ್ನು ದೋಷಿಯೆಂದು ತೀರ್ಪು ನೀಡಿ ಆರೋಪಿತರಿಗೆ ಅಪರಾಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10 ಅಪರಾಧಕ್ಕೆ 2 ವರ್ಷಗಳ ಕಾಲ ಸೆರೆಮನೆವಾಸ ಮತ್ತು ತಲಾ ರೂ. 10,000 ರೂಪಾಯಿ ಜುಲ್ಮಾನೆ ಶಿಕ್ಷೆಯನ್ನು ವಿಧಿಸಿದ್ದಾರೆ.
ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಡಾ:ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಸೈಯ್ ದ್ ಗೌಸ್, ಮಾಂತೇಶ ಅವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಒದಗಿಸಿದ್ದರು ಎಂದು ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ದೇವಯ್ಯ ಸ್ವಾಮಿ ಹಿರೇಮಠ ತಿಳಿಸಿದ್ದಾರೆ.