

16th May 2026

ಕೊಪ್ಪಳ.
೧೨ ವರ್ಷದಿಂದ ಈ ದೇಶದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿರುವ ನರೇಂದ್ರ ಮೋದಿ ಆಡಳಿತ ಸಂಪೂರ್ಣ ವೈಫಲ್ಯವಾಗಿದೆ. ಹೀಗಾಗಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದೆ. ಇದು ಸುಧಾರಣೆಯಾಗಬೇಕಾದರೆ ಮೋದಿ ತಕ್ಷಣ ರಾಜೀನಾಮೆ ನೀಡಿ ಆರ್ಥಿಕ ತಜ್ಞರಿಗೆ ಪ್ರಧಾನಮಂತ್ರಿ ಅಧಿಕಾರ ನೀಡಬೇಕು ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅಗ್ರಹಿಸಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ವಿಶೇಷ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳ ನಡುವೆ ಉಂಟಾಗಿರುವ ಯುದ್ಧದ ಪರಿಣಾಮ ಇಂಧನ ಬೆಲೆ ಏರಿಸಲು ಕಾರಣ ಎಂದು ಪ್ರಧಾನಮಂತ್ರಿ ಸಬೂಬು ನೀಡುತ್ತಿರುವುದು ಸುದ್ದು ಸುಳ್ಳು. ರೂಪಾಯಿ ಮೌಲ್ಯ ಕುಸಿದು ಡಾಲರ್ ದರ ಏರಿಕೆಯಾಗಿರುವ ಪರಿಣಾಮ ನಮ್ಮ ಭಾರತದ ಮೇಲೆ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗಿದೆ. ಇದನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಆಡಳಿತ ವಿಫಲವಾಗಿದೆ. ದೇಶದಲ್ಲಿ ನಡೆದ ಪಂಚರಾಜ್ಯ ಚುನಾವಣೆಗಳ ನಂತರ ದಿಡೀರ್ ಇಂಧನ ಬೆಲೆ ಏರಿಕೆ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿರುವ ರಾಯರೆಡ್ಡಿ ಅವರು ನಮ್ಮ ದೇಶದಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಮೂರು ವಿದೇಶಿ ಬ್ಯಾಂಕ್ಗಳು ಬಂದ್ ಮಾಡಿವೆ. ಕಚ್ಚಾ ತೈಲ ಬೆಲೆ ಗಗನಕ್ಕೆರಿದೆ. ಇದನ್ನು ಮರೆ ಮಾಚಲು ಈಗ ಮಿತವ್ಯಯ ಮಾಡಬೇಕು ಎಂದು ದೇಶದ ಜನರಿಗೆ ಸಲಹೆ ನೀಡಿದ್ದಾರೆ. ಪೇಟ್ರೋಲ್ ಬಳಕೆ ಕಡಿಮೆ ಮಾಡಿ. ಬಂಗಾರ ಖರೀದಿಸಬೇಡಿ ಎಂದು ಹೇಳುವ ಮೋದಿ ಅವರು ತಾವು ಐಷಾರಾಮಿ ವಿಮಾನದಲ್ಲಿ ವಿದೇಶಕ್ಕೆ ಹೋಗುವುದನ್ನು ನಿಲ್ಲಿಸಲಿ. ದೇಶದಲ್ಲಿ ತಮ್ಮ ಭದ್ರತೆಯ ವಾಹನ ಕಡಿಮೆ ಮಾಡಿದರೆ ಆರ್ಥಿಕ ಸ್ಥಿತಿ ಸುಧಾರಣೆಯಾಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ಮೋದಿ ಜನರಿಗೆ ಮರಳು ಮಾಡಿದ್ದಾರೆ. ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ೨೦೧೪ರಲ್ಲಿ ಈ ದೇಶದ ಸಾಲ ೫೨ ಲಕ್ಷ ಕೋಟಿ ಇತ್ತು. ಆದರೆ ಮೋದಿ ಆಡಳಿತದ ೧೨ ವರ್ಷದಲ್ಲಿ ರೂ.೨೧೬ ಲಕ್ಷ ಕೋಟಿ ಸಾಲ ಆಗಿದೆ. ಶೇ.೧೪ ವಿತ್ತಿಯ ಕೊರತೆಯಾಗಿದೆ. ಭಾರತ ಈಗ ಏಷ್ಯಾದಲ್ಲೆ ದುರ್ಬಲ ರಾಷ್ಟ್ರವಾಗುತ್ತಿದೆ. ಇದರಿಂದ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗುತ್ತಿದೆ. ಮೋದಿ ಅವರು ದೇಶದ ಜನರಿಗೆ ಪುಕ್ಕಟೆ ಸಲಹೆ ನೀಡುವ ಬದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ನಾನು ಸಮರ್ಥಿಸಿ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಗ್ರಹಿಸುತ್ತೇನೆ ಎಂದರು.
ಮುಂದುವರೆದು ಮಾತನಾಡಿದ ಅವರು ಬಂಗಾರದ ಬೆಲೆ ಏರಿಕೆಯಾಗಿಲ್ಲ. ಆದರೆ ಕಸ್ಟಮ್ ಟ್ಯಾಕ್ಸ್ ಹೆಚ್ಚಿಸಲಾಗಿದೆ. ಇದರಿಂದ ನಮಗೆ ಬಂಗಾರ ಖರೀದಿಸಲು ಕಷ್ಟವಾಗುತ್ತದೆ. ಒಂದು ವರ್ಷ ಬಂಗಾರ ಖರೀದಿಸಬೇಡಿ ಎಂದು ಪ್ರಧಾನಿ ನೀಡಿದ ಹೇಳಿಕೆ ಬೆನ್ನಲ್ಲೆ ಹತ್ತು ಗ್ರಾಂ ಬಂಗಾರದ ಬೆಲೆ ಹತ್ತು ಸಾವಿರ ಹೆಚ್ಚಾಗಿದೆ. ನಮ್ಮ ದೇಶದ ಮಹಿಳೆಯರಿಗೆ ಬಂಗಾರದ ಆಭರಣ ಹಾಕಿಕೊಳ್ಳುವುದು ಸಂಸ್ಕೃತಿಯ ಲಕ್ಷಣ. ಎಂಥಹ ಬಡ ಮಹಿಳೆಯಾದರೂ ಕನಿಷ್ಟ ಕೊರಳಲ್ಲಿ ಬಂಗಾರದ ತಾಳಿ, ಕೈಯಲ್ಲಿ ಬಳೆ, ಮುಗುತಿ, ಬೆಂಡವಾಲಿ ಇರಲೇಬೇಕು. ಇಂತಹ ಕನಿಷ್ಟ ಜ್ಞಾನ ಕೂಡಾ ಪ್ರಧಾನಿ ಮೋದಿ ಅವರಿಗೆ ಇಲ್ಲದಿರುವುದರಿಂದ ಭಾರತದ ಆರ್ಥಿಕ ಸ್ಥಿತಿ ಅಯೋಮಯೋವಾಗುತ್ತಿದೆ ಎಂದು ರಾಯರೆಡ್ಡಿ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಸಿ, ಕಾಂಗ್ರೆಸ್ ಮುಖಂಡ ರಾಘವೇಂದ್ರ ಜೋಶಿ ಗುನ್ನಾಳ್, ಹನುಮಂತಗೌಡ ಚಂಡೂರ, ಮಹೇಶ ಹಳ್ಳಿ, ಹನುಮೇಶ ಕಡೆಮನಿ ಇದ್ದರು.
ಬಾಕ್ಸ್:
ದೇಶದಲ್ಲಿ ಬಂಗಾರದ ಉತ್ಪಾದನೆ ಕ್ಷೀಣಿಸಿದೆ
ನಮ್ಮ ದೇಶದಲ್ಲಿ ಹಟ್ಟಿ ಚಿನ್ನದ ಗಣಿಯೊಂದು ಬಿಟ್ಟರೆ ಎಲ್ಲೂ ಬಂಗಾರದ ಉತ್ಪನ್ನ ಇಲ್ಲ. ಅದು ಸಹ ಈಗ ಕ್ಷೀಣಿಸುತ್ತಿದೆ. ಹೀಗಾಗಿ ಶೇ.೯೦ರಷ್ಟು ಬಂಗಾರವನ್ನು ವಿದೇಶದಿಂದ ಅಮುದು ಮಾಡಿಕೊಳ್ಳಬೇಕು. ಜೊತೆಗೆ ದೇಶದ ರೂಪಾಯಿ ಮೌಲ್ಯ ಕುಸಿದಿದೆ. ಭಾರತದಲ್ಲಿ ಇನ್ನಿತರ ವಸ್ತುಗಳ ಉತ್ಪನ್ನ ಕೂಡಾ ಕಡಿಮೆಯಾಗಿದೆ. ಇದರಿಂದ ರೂಪಾಯಿ ಮೌಲ್ಯ ಕುಸಿದಿದೆ. ಇದನ್ನು ಸರಿಯಾಗಿ ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ಆಡಳಿತ ವಿಫಲವಾಗಿದೆ. ಇದರಿಂದ ಈಗ ದೇಶದಲ್ಲಿ ಆರ್ಥಿಕ ದುಸ್ಥಿತಿ ಎದುರಾಗುತ್ತಿದೆ. ಇದನ್ನು ಮರೆ ಮಾಚಲು ಜನರಿಗೆ ಮಿತವ್ಯಯದ ಪಾಠ ಹೇಳುತ್ತಿದ್ದಾರೆ. ಪ್ರಧಾನಿ ಮತ್ತು ಕೆಲವು ಮಂತ್ರಿಗಳ ಬೆಂಗಾವಲು ವಾಹನ ಕಡಿತ ಮಾಡಿದ ತಕ್ಷಣ ಆರ್ಥಿಕ ಸ್ಥಿತಿ ಸುಧಾರಣೆಯಾಗಿಡುತ್ತದೆಯೇ. ಬಸವರಾಜ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರರು.
ಬಾಕ್ಸ್:
ಮಾಧ್ಯಮದವರ ಪ್ರಶ್ನೇಗೆ ಉತ್ತರಿಸಲು ತಡಕಾಡಿದ ರಾಯರೆಡ್ಡಿ.!!
ದೇಶದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಸಾಲ ಹೆಚ್ಚಾಗಿದೆ. ಪ್ರಧಾನಿ ರಾಜೀನಾಮೆ ನೀಡಬೇಕು ಎಂಬುದು ಸೇರಿದಂತೆ ಕೇಂದ್ರ ಸರಕಾರದ ವಿರುದ್ಧ ಸಾಲು ಸಾಲು ಟೀಕೆ ಮಾಡಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕದಲ್ಲಿ ಸಹ ಆರ್ಥಿಕ ಸಮಸ್ಯೆಯಾಗಿದೆ. ಪೇಟ್ರೋಲ್ ಸೆಸ್ ಹೆಚ್ಚಿಸಲಾಗಿದೆ. ಯಾವುದಕ್ಕೂ ಅನುದಾನ ಇಲ್ಲ. ಇಲ್ಲಿಯು ಸಾಲ ಹೆಚ್ಚಾಗಿದೆಯಲ್ಲ ಎಂಬ ಮಾಧ್ಯದವರ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಪ್ರಸಂಗ ಸುದ್ದಿಗೋಷ್ಟಿಯಲ್ಲಿ ನಡೆಯಿತು. ಕೇಂದ್ರ ಸರಕಾರದ ವಿರುದ್ಧ ಮಾತನಾಡಿರುವುದನ್ನು ಕೆಳಿಸಿಕೊಂಡ ಮಾಧ್ಯಮದವರು ರಾಜ್ಯದ ಸಮಸ್ಯೆ ಕುರಿತು ಪ್ರಶ್ನಿಸುತ್ತಿದ್ದಂತೆ ಗರ್ಂ ಆದ ರಾಯರೆಡ್ಡಿ ಅವರು ಬಿಜೆಪಿಯವರಂತೆ ಮಾತನಾಡುತ್ತೀರಲ್ಲರಿ ಎಂದು ಮಾಧ್ಯವರಿಗೆ ತಾಕೀತು ಮಾಡಿದರಲ್ಲದೇ ಕರ್ನಾಟಕ ಸರಕಾರ ಅಭಿವೃದ್ಧಿಗಾಗಿ ಸಾಲ ಮಾಡಿದೆ. ಸಾಲ ಮಾಡದೇ ಹೇಗೆ ಸರಕಾರ ನಡೆಯುತ್ತದೆ. ಈಲ್ಲೆಯಲ್ಲಿ ವಿಂಡ್ ಫವರ್ ಕಂಪನಿಗಳು ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ನಾನೆನು ಮಾಡಲಿರಿ ಎಂದು ನುಣಿಚಿಕೊಳ್ಳುವ ಕೆಲಸ ಮಾಡಿದರು.

ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಸೂಚನೆ

ಕುಡುತಿನಿಯಲ್ಲಿ ಉದ್ವಿಗ್ನತೆ ಜಮೀನಿಗೆ ತೆರಳುತ್ತಿದ್ದ ಭೂಸಂತ್ರಸ್ತ ರೈತರನ್ನು ವಶಕ್ಕೆ ಪಡೆದ ಪೊಲೀಸರು

ಸಿದ್ಧರಾಮಯ್ಯ ಬಿಟ್ಟರೆ ಸಿಎಂ ಸ್ಥಾನಕ್ಕೆ ಖರ್ಗೆ ಸೂಕ್ತ ವ್ಯಕ್ತಿ- ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ

ವಿಂಡ್ ಪವರ್ ನಿಯಂತ್ರಣ ನನ್ನ ಕೈಯಲ್ಲಿ ಇಲ್ಲ- ರಾಯರೆಡ್ಡಿ ಸ್ಪಷ್ಟನೆ: ಅಗ್ರಿಮೆಂಟ್ ಮಾಡಬಾರದು