

19th May 2026

undefined
ಗಂಗಾವತಿ.
ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಬಿಎಲ್ಎ-2 ನೇಮಕ ಮಾಡುವ ಪ್ರಕ್ರೀಯೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯಾ ಕ್ಷೇತ್ರದಲ್ಲಿರುವ ಮಾಜಿ ಮತ್ತು ಹಾಲಿ ಶಾಸಕರಿಗೆ ಜವಬ್ದಾರಿ ನೀಡಿದೆ. ಆದರೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಕಡೆಗಣಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಅವರನ್ನು ನೇಮಕ ಮಾಡಿ ಆದೇಶ ಮಾಡಿರುವುದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟವಾಗಿದೆ. ಬಿಎಲ್ಎ ಪ್ರಕ್ರೀಯೆಯಲ್ಲಿ ಅನ್ಸಾರಿಕೆಗೆ ಕೋಕ್ ಕೊಡಲು ಸಂಸದ ರಾಜಶೇಖರ ಹಿಟ್ನಾಳ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರಣ ಎಂಬಂತೆ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಬಿಂಬಿಸುತ್ತಿರುವುದು ಈಗ ಹಾಲಿ ಸಚಿವ ಶಿವರಾಜ ತಂಗಡಗಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಾಯಕರ ಕಾರ್ಯಕರ್ತರು ಪೋಸ್ಟ್ ಹಾಕುವ ಮೂಲಕ ಭಿನ್ನಮತವನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಫೇಸ್ಬುಕ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾದ ಜೋರಾಗಿದೆ. ಇಕ್ಬಾಲ್ ಅನ್ಸಾರಿಗೆ ಕೋಕ್ ನೀಡಿ ಸಂಸದ ಹಿಟ್ನಾಳ್ಗೆ ಗಂಗಾವತಿ ಉಸ್ತುವಾರಿ ನೀಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಇಕ್ಬಾಲ್ ಅನ್ಸಾರಿ ಬೆಂಬಲಿಗ ಪುನಿತ್ ಎಂಬ ಕಾರ್ಯಕರ್ತ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಕಾಮೆಂಟ್ ಹಾಕಿದ್ದು, ಅನ್ಸಾರಿ ಅವರು ಯಾವುದಕ್ಕೂ ಹೆದರಬೇಡಿ ಎಂದು ಅಭಯ ನೀಡಿದ್ದಾರೆ. ನಮ್ಮ ಮಾಜಿ ಸಚಿವರು ರಾಜ್ಯ ಸುತ್ತಿ ಕಾಂಗ್ರೆಸ್ ಮುಖಂಡರ ಬಣ್ಣ ಬಯಲು ಮಾಡುತ್ತಾರೆ ಎಂದು ಪೋಸ್ಟ್ ಹರಿಬಿಟ್ಟಿದ್ದಾರೆ. ಇದಕ್ಕೆ ಉತ್ತರವಾಗಿ ಶಿವರಾಜ ತಂಗಡಗಿ ಬೆಂಬಲಿಗ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಪ್ರಶಾಂತ ನಾಯಕ ಮಾಜಿ ಸಚಿವ ರಾಜ್ಯ ಸುತ್ತಾಡುವ ಮೊದಲು ಗಂಗಾವತಿ ಕ್ಷೇತ್ರವನ್ನು ಸುತ್ತಾಡಿ ಜನರ ವಿಶ್ವಾಸ ಗಳಿಸಲಿ. ನೀವು ನಮ್ಮ ಸಚಿವರ ಬಗ್ಗೆ ಇಲ್ಲ ಸಲ್ಲದ ಪೋಸ್ಟ್ ಹಾಕಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪ್ರಶಾಂತ ನಾಯಕ ಫೇಸ್ಬುಕ್ನಲ್ಲೆ ತಿರುಗೇಟು ನೀಡಿದ್ದಾರೆ.
ಇದೇ ರೀತಿ ತಂಗಡಗಿ ಮತ್ತು ಅನ್ಸಾರಿ ಬೆಂಬಲಿಗ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಕಾಮೆಂಟ್ ಮಾಡುತ್ತಾ ತಮ್ಮ ತಮ್ಮಲ್ಲಿ ಇರುವ ವಿವಾದವನ್ನು ಬಹಿರಂಗಪಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಮಂಗಳವಾರ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ ಸುದ್ದಿಗೋಷ್ಟಿ ನಡೆಸಿ ಗಂಗಾವತಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ವಿಷಯದಲ್ಲಿ ತಮ್ಮನ್ನು ಕಡೆಗಣಿಸಿದೆ ತಕ್ಕ ಪಾಠ ಕಲಿಸುವುದಾಗಿ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿರುವುದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ ಮೂರು ವರ್ಷ ಪೂರ್ಣಗೊಳ್ಳುವ ಮೊದಲೇ ಕೊಪ್ಪಳ ಜಿಲ್ಲೆಯಲ್ಲಿ ಸೇರಿದಂತೆ ಕಳೆದ ದಿನ ಯುವ ಕಾಂಗ್ರೆಸ್ ಪದಾಧಿಕಾರಿಗಳ ನಡುವೆ ನಡೆದ ಚಕಮಕಿಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ ಎಂದು ವಿಶ್ಷೇಷಿಸಲಾಗುತ್ತಿದೆ.
ಬಾಕ್ಸ್:
ಸಚಿವರ ವಿರುದ್ಧ ಮಾತನಾಡಿದರೆ ಸುಮ್ಮನಿರಲ್ಲ
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮತ್ತು ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಿದ್ದಾರೆ. ಆಯಾ ಕ್ಷೇತ್ರದಲ್ಲಿರುವ ಮುಖಂಡರಿಗೆ ಸಂಘಟನೆ ಜವಬ್ದಾರಿ ನೀಡಿದ್ದಾರೆ. ಎಸ್ಐಆರ್ ಪ್ರಕ್ರೀಯೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಇಕ್ಬಾಲ್ ಅನ್ಸಾರಿ ಅವರಿಗೆ ಜವಬ್ದಾರಿ ನೀಡಲಾಗಿತ್ತು. ಆದರೆ ಅನ್ಸಾರಿ ಅವರು ಆರು ತಿಂಗಳಿಂದ ಯಾವುದೇ ಕೆಲಸ ಮಾಡದೇ ದೂರು ಉಳಿದಿದ್ದರಿಂದ ಕೆಪಿಸಿಸಿಯಿಂದ ಸಂಸದರಿಗೆ ಜವಬ್ದಾರಿ ನೀಡಿ ಆದೇಶ ಮಾಡಿದೆ. ಇದರಲ್ಲಿ ಸಚಿವ ತಂಗಡಗಿ ಅವರ ಪಾತ್ರ ಇಲ್ಲ. ಆದರೆ ಅನ್ಸಾರಿ ಬೆಂಬಲಿಗರು ಅನವಶ್ಯಕವಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ತಪ್ಪು ಮಾಹಿತಿ ಹರಿಬಿಡುತ್ತಿದ್ದಾರೆ. ಇದಕ್ಕೆ ನಾನು ನೇರವಾಗಿ ಅನ್ಸಾರಿ ಬೆಂಬಲಿಗರಿಗೆ ಉತ್ತರಿಸಿದ್ದೇನೆ.
ಪ್ರಶಾಂತ ನಾಯಕ, ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ,
ಬಾಕ್ಸ್:
ದೇವೇಗೌಡರ ಹುಟ್ಟುಹಬ್ಬಕ್ಕೆ ಫೇಸ್ಬುಕ್ಲ್ಲಿ ಪೋಸ್ಟ್
ಇಕ್ಬಾಲ್ ಅನ್ಸಾರಿ ಮತ್ತೆ ಜೆಡಿಎಸ್ ಪಕ್ಷಕ್ಕೆ ಎಂಬ ಚರ್ಚೆ..!!
ಗಂಗಾವತಿ ಕ್ಷೇತ್ರದ ಬಿಎಲ್ಎ ನೇಮಕ ಪ್ರಕ್ರೀಯೆ ಉಸ್ತುವಾರಿಯನ್ನು ಕೆಪಿಸಿಸಿ ಅನ್ಸಾರಿಗೆ ಕೋಕ್ ನೀಡಿ ಸಂಸದ ಹಿಟ್ನಾಳ್ಗೆ ಜವಬ್ದಾರಿ ನೀಡಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅನ್ಸಾರಿ ಬೆಂಬಲಿಗರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಇಕ್ಬಾಲ್ ಅನ್ಸಾರಿ ದೇವೇಗೌಡರೊಂದಿಗೆ ಇರುವ ಹಳೆಯ ಫೋಟೋವನ್ನು ಫೇಸ್ಬುಕ್ಲ್ಲಿ ಹರಿಬಿಟ್ಟು ದೇವೇಗೌಡರಿಗೆ ಹುಟ್ಟುಹಬ್ಬದ ಸ್ವಾಗತ ಕೊರಿರುವುದು ಆಶ್ಚರ್ಯ ಮೂಡಿಸಿದೆ. ಅನ್ಸಾರಿ ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ಮತ್ತೆ ಜೆಡಿಎಸ್ ಸೇರುತ್ತಾರೆ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.

ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಲು ಸೈಯದ್ ಮೀರಾ ಅಗ್ರಹ- ಕಡೆಗಣಿಸಿದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ

ಟಿಎಪಿಸಿಎಂಎಸ್ ಚುನಾವಣೆ: ಸಂದಾನ ಯಶಸ್ವಿ ಅಧ್ಯಕ್ಷರಾಗಿ ಚೆನ್ನಪ್ಪ ಮಳಿಗಿ, ಉಪಾಧ್ಯಕ್ಷರಾಗಿ ಕನಕಪ್ಪ ಆಯ್ಕೆ

ಎಸ್ಐಆರ್ ಸಭೆಗೆ ಗೈರಾದ ಪದಾಧಿಕಾರಿಗಳಿಗೆ ಕಾಂಗ್ರೆಸ್ ಕೊಕ್- ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ವಜಾ: ಡಿಕೆಶಿ ಆದೇಶ- ಕೆಪಿಸಿಸಿ 3 ಉಪಾಧ್ಯಕ್ಷರು 29 ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಕ್ರಮ