

19th May 2026

undefined
ಗಂಗಾವತಿ.
ಬಿಎಲ್ಎ-2 ನೇಮಕಾತಿ ಮತ್ತು ಎಸ್ಐಆರ್ ಪ್ರಕ್ರೀಯೆಗೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಸಂಸದ ರಾಜಶೇಖರ ಹಿಟ್ನಾಳ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಗಂಗಾವತಿ ಕ್ಷೇತ್ರದಲ್ಲಿ ಹೆಚ್ಜಿಆರ್ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದೆ. ಹೀಗಾಗಿ ಕ್ಷೇತ್ರದಲ್ಲಿ ಪಕ್ಷದ ಆಗು ಹೋಗುಗಳ ಬಗ್ಗೆ ನಮ್ಮೊಂದಿಗೆ ಚರ್ಚಿಸಬೇಕು. ನನಗೆ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಪರಿಗಣಿಸದೇ ನಿರ್ಲಕ್ಷ ಮಾಡಿದರೆ ನೇರವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮತ್ತು ಸಂಸದ ರಾಜಶೇಖರ ಹಿಟ್ನಾಳ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ ಎಚ್ಚರಿಕೆ ನೀಡಿದರು.
ಮಂಗಳವಾರ ನಗರದ ಸರ್ವೇಶ ಹೊಟೇಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಕಳೆದ ೨೦೨೩ ವಿಧಾನಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ತಮ್ಮ ಅಹಂನಿಂದಾಗಿ ನಮ್ಮನ್ನು ನಿರ್ಲಕ್ಷ ಮಾಡಿ ಪರಭಾವಗೊಂಡಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೂ ನಾನು ಪಕ್ಷಕ್ಕೆ ಗಟ್ಟಿಯಾಗಿ ನಿಂತಿದ್ದೇವೆ. 2024ರ ಲೋಕಸಭೆ ಚುನಾವಣೆಯಲ್ಲೂ ಸಹ ರಾಜಶೇಖರ ಹಿಟ್ನಾಳ್ ಗೆಲುವಿಗೆ ನಾನು ಸಾಕಷ್ಟು ಶ್ರಮಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಿದೆ. ಆದರೆ ಗಂಗಾವತಿ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ನಾಮ ನಿರ್ದೇಶನ, ಪಕ್ಷ ಸಂಘಟನೆ, ಪದಾಧಿಕಾರಿಗಳ ನೇಮಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರು ನಮ್ಮೊಂದಿಗೆ ಚರ್ಚಿಸುವುದಿಲ್ಲ. ಸಂಸದ ರಾಜಶೇಖರ ಹಿಟ್ನಾಳ್ ಗಂಗಾವತಿಗೆ ಬಂದು ಹೊಟೇಲ್ನಲ್ಲಿ ಕುಳಿತು ಕೆಲವರೊಂದಿಗೆ ಮಾತನಾಡಿ ಹೋಗುತ್ತಿದ್ದಾರೆ. ಸಚಿವ ಶಿವರಾಜ ತಂಗಡಗಿ ಗಂಗಾವತಿ ಕ್ಷೇತ್ರದ ಕಡೆ ಕಿಂಚಿತ್ ಗಮನ ಕೊಡುತ್ತಿಲ್ಲ. ಕೇವಲ ಕನಕಗಿರಿ ಕ್ಷೇತ್ರಕ್ಕೆ ಸಿಮೀತರಾಗಿದ್ದಾರೆ. ಆದರೆ ಪದಾಧಿಕಾರಿಗಳ ನೇಮಕ ಮತ್ತಿತರ ವಿಷಯದಲ್ಲಿ ಮಾತ್ರ ಗಂಗಾವತಿ ಕ್ಷೇತ್ರದಲ್ಲಿ ಕೈಯಾಡಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಾನು ಈ ಮೂರು ಮುಖಂಡರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ. ನೇರವಾರಿ ಕನಕಗಿರಿ ಕ್ಷೇತ್ರದಲ್ಲಿ ನಮ್ಮ ಶಕ್ತಿಯನ್ನು ತೊರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದುವರೆದು ಮಾತನಾಡಿದ ಹೆಚ್.ಆರ್.ಶ್ರೀನಾಥ ಅವರು ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲಿ ನಾನು ಮತ್ತು ಮಲ್ಲಿಕಾರ್ಜುನ ನಾಗಪ್ಪ ಆಯುಬ್ಖಾನ್ಗೆ ಅವಕಾಶ ನೀಡುವಂತೆ ಶಿಪಾರಸ್ಸು ಮಾಡಿದ್ದೇವು. ಆದರೆ ಸಚಿವ ತಂಗಡಗಿ ನಮ್ಮೊಂದಿಗೆ ಚರ್ಚಿಸದೇ ನೇರವಾಗಿ ನಾಗರಾಜ ನಂದಾಪುರ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ರೀತಿ ಮಾಡಿದರೆ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗುತ್ತದೆ. ಈ ಕುರಿತು ಹೈಕಮಾಂಡ್ ನಾಯಕರೊಂದಿಗೆ ನಾನು ಮಾತನಾಡಿದ್ದೇನೆ. ಕರ್ನಾಟಕದ ಉಸ್ತುವಾರಿಯಾಗಿರುವ ವೇಣುಗೋಪಾಲ ಅವರು ಬಂದು ಭೇಟಿಯಾಗುವಂತೆ ತಿಳಿಸಿದ್ದಾರೆ. ಆದರೆ ಕೆಪಿಸಿಸಿ ಮುಖಂಡರು ಗಂಗಾವತಿ ಕ್ಷೇತ್ರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದು ಬೇಸರವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ಸರಕಾರವಿದ್ದರೂ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿದೆ. ಬಿಜೆಪಿ ಶಾಸಕರಿದ್ದಾರೆ ಎಂದು ಸಚಿವ ತಂಗಡಗಿ ನಿರ್ಲಕ್ಷ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರಿಗೆ ತೊಂದರೆಯಾಗುತ್ತದೆ. ಗಂಗಾವತಿ ಕ್ಷೇತ್ರದ ಅಭಿವೃದ್ಧಿ, ಪಕ್ಷ ಸಂಘಟನೆ ಕುರಿತು ನಮ್ಮೊಂದಿಗೆ ಸಚಿವರು ಮಾತನಾಡಬೇಕು. ಇಲ್ಲದಿದ್ದರೆ ನಾನು ಅವರ ವಿರುದ್ಧವೇ ಕನಕಗಿರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ ಸಂಸದ ರಾಜಶೇಖರ ಹಿಟ್ನಾಳ್ ಸಹ ಬಿಎಲ್ಎ ನೇಮಕ ಮತ್ತಿತರ ಪಕ್ಷ ಸಂಘಟನೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಬಂದಾಗ ನಮ್ಮೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ರಾಜಶೇಖರ ನೇತೃತ್ವದಲ್ಲಿ ಮತ್ತೊಂದು ಬಣ ಸೃಷ್ಟಿಯಾದಂತಾಗುತ್ತದೆ. ಹೀಗಾಗಿ ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಗಂಗಾವತಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಅನಾಥ ಮಾಡದೇ ನನ್ನ ಮತ್ತು ಮಲ್ಲಿಕಾರ್ಜುನ ನಾಗಪ್ಪ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಕೊರಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ರಾಜಶೇಖರ ಮುಸ್ಟೂರ, ಕಾಂಗ್ರೆಸ್ ಮುಖಂಡರಾದ ರಮೇಶ ಗೌಳಿ, ಸುರೇಶ ಗೌರಪ್ಪ, ಆಯುಬ್ಖಾನ್, ಮಹೇಶ ಸಾಗರ, ಈರನಗೌಡ ವಡ್ಡರಹಟ್ಟಿ, ಶಬ್ಬೀರ್, ಸೈಯದ್ ನಾಜೀನ್, ಮಹ್ಮದ್ ಅಲಿ, ವಸಂತ ನಾಯಕ, ಕಾಂಗ್ರೆಸ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಮಣ್ಣ ಮತ್ತಿತರರು ಇದ್ದರು.
ಬಾಕ್ಸ್:
ಸಚಿವ ತಂಗಡಗಿ ವಿರುದ್ಧ ಶ್ರೀನಾಥ ಆಕ್ರೋಶ
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಗಂಗಾವತಿ ಕ್ಷೇತ್ರದಲ್ಲಿ ನನ್ನನ್ನು ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಗಡೆಗಣಿಸಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗೆ ಇತ್ತಕಡೆ ಗಮನ ಕೊಡದ ತಂಗಡಗಿ ಪಕ್ಷದ ವಿಷಯದಲ್ಲಿ ಮಾತ್ರ ಕೈಯಾಡಿಸುತ್ತಿದ್ದಾರೆ. ಈ ರೀತಿ ಮಾಡಿದರೆ ನಾನು ನೇರವಾಗಿ ಕನಕಗಿರಿ ಕ್ಷೇತ್ರದಲ್ಲಿ ಬಂದು ರಾಜಕೀಯ ಮಾಡಬೇಕಾಗುತ್ತದೆ. ಗಂಗಾವತಿ ಕ್ಷೇತ್ರದ ಪಕ್ಷ ಸಂಘಟನೆ, ನಾಮ ನಿರ್ದೇಶನ ವಿಷಯದಲ್ಲಿ ನಮ್ಮೊಂದಿಗೆ ಚರ್ಚಿಸಬೇಕು. ಇಲ್ಲದಿದ್ದರೆ ನಾನು ಸಚಿವ ತಂಗಡಗಿ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ.
ಹೆಚ್.ಆರ್.ಶ್ರೀನಾಥ, ಮಾಜಿ ವಿಧಾನ ಪರಿಷತ್ ಸದಸ್ಯ, ಗಂಗಾವತಿ.

ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟ- ತಂಗಡಗಿ ಮತ್ತು ಅನ್ಸಾರಿ ಬೆಂಬಲಿಗರ ಮುಸುಕಿನ ಗುದ್ದಾಟ- ಸಾಮಾಜಿಕ ಜಾಲ ತಾಣದಲ್ಲಿ ಕಾರ್ಯಕರ್ತರ ಟಾಕ್ ವಾರ್ -

ಇಕ್ಬಾಲ್ ಅನ್ಸಾರಿಗೆ ಕೋಕ್: ಶೇಖ್ನಬಿಸಾಬ್ ಆಕ್ರೋಶ- ಹಿಟ್ನಾಳ್ ಕುಟುಂಬಕ್ಕೆ ಮತ್ತು ಕಾಂಗ್ರೆಸ್ಸಿಗೆ ತಕ್ಕ ಪಾಠ

ಐಟಿ ಇಲಾಖೆಯ ದತ್ತಾಂಶದಿಂದ ಅನರ್ಹರ ಬೇಟೆ: ಬಳ್ಳಾರಿಯಲ್ಲಿ 4,764 ಬಿಪಿಎಲ್ ಕಾರ್ಡ್ ರದ್ದು ಅನ್ನಭಾಗ್ಯ ಸೌಲಭ್ಯ ದುರುಪಯೋಗಕ್ಕೆ ಕಡಿವಾಣ; ಅಧಿಕಾರಿಗಳ ಡಿಜಿಟಲ್ ಕಾರ್ಯಾಚರಣೆ ತೀವ್ರ