

4th July 2026

ಕೊಪ್ಪಳ. (ಸಮರ್ಥವಾಣಿ ನ್ಯೂಜ್)
ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಸರಣೆ(ಎಸ್ಐಆರ್)ಪ್ರಕ್ರಿಯೆ ಕುರಿತು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ತಿಳುವಳಿಕೆ ಕೊರತೆ ಇದೆ. ತಿಳುವಳಿಕೆಯಿಂದ ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣವರ ಆಗ್ರಹಿಸಿದರು. ಎಸ್ಐಆರ್ ಪ್ರಕ್ರೀಯೆಗೆ ಸಂಬಂಧಿಸಿದಂತೆ ಸ್ಥಳೀಯ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತಾತ್ಮಕ ಮೇಲ್ವಿಚಾರಣೆ ಸಂಪೂರ್ಣವಾಗಿ ರಾಜ್ಯ ಸರಕಾರದ ಹೊಣೆಯಾಗಿದೆ ಎಂಬುದನ್ನು ಮಹತ್ವದ ಜವಬ್ದಾರಿ ಸ್ಥಾನದಲ್ಲಿರುವ ಅವರು ಅರಿಯಬೇಕು ಎಂದು ಟಾಂಗ್ ನೀಡಿದರು.
ಮತದಾರ ಪರಿಷ್ಕರಣೆ ಕುರಿತು ಪ್ರತಿಯೊಬ್ಬ ಮತದಾರರ ಮನೆಗೆ ತೆರಳದೇ ದರ್ಗಾ ಮತ್ತು ಸಮುದಾಯ ಭವನಗಳಲ್ಲಿ ಸಾಮೂಹಿಕವಾಗಿ ಎನುಮುರೇಷನ್ ಫಾರ್ಮ್ ಭರ್ತಿ ಮಾಡುತ್ತಿರುವ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಕೇಂದ್ರ ಸರಕಾರದ ಕೈಯಲ್ಲಿದೆ. ರಾಜ್ಯ ಸರಕಾರ ಇದಕ್ಕೆ ಸಂಬಂಧವಿಲ್ಲ. ಮತ್ತು ನಮ್ಮ ರಾಜ್ಯದ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಸಂಪೂರ್ಣ ಕೇಂದ್ರ ಸರಕಾರದ ಚುನಾವಣಾ ಆಯೋಗದ ಹಿಡಿತದಲ್ಲಿದ್ದಾರೆ. ಕೇಂದ್ರ ಸರಕಾರವೇ ಈ ರೀತಿ ಮಾಡುತ್ತಿರಬಹುದು ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ನೀಡಿದ್ಧ ಹೇಳಿಕೆಗೆ ತಿರುಗೇಟು ನೀಡಿರುವ ನವೀನ್ ಗುಳಗಣ್ಣ ಅವರು ಶನಿವಾರ ಮಾಧ್ಯಮಗಳಿಗೆ ಪ್ರಕಟಣೆ ನೀಡಿ ರಾಯರೆಡ್ಡಿ ಅವರ ನಡೆಯನ್ನು ಖಂಡಿಸಿದ್ದಾರೆ. ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳ ಅಡಿಯಲ್ಲಿ ನಡೆಯುವ ಸ್ವಾಯತ್ತ ಪ್ರಕ್ರಿಯೆಯಾಗಿದೆ ಹೊರತು ಬೂತ್ ಮಟ್ಟದ ಅಧಿಕಾರಿಗಳಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಸಚಿವರು ಆದೇಶಿಸುವ ಅಧಿಕಾರ ಹೊಂದಿಲ್ಲ. ಸ್ವಾಯತ್ತ ಸಂಸ್ಥೆಯ ಕ್ರಮಗಳನ್ನು ಕೇಂದ್ರ ಸಚಿವರ ಮೇಲೆ ಆರೋಪಿಸುವುದು ಆಧಾರರಹಿತವಾಗಿದೆ. ವಾಸ್ತವಾಂಶಗಳಿಗೆ ವಿರುದ್ಧವಾದ ಆರೋಪ ಮಾಡುತ್ತಿರುವ ಶಾಸಕ ಬಸವರಾಜ ರಾಯರಡ್ಡಿ ಅವರ ನಡೆ ಸರಿಯಲ್ಲ. ಶಾಸಕರು ತಮಗೆ ಇಷ್ಟ ಬಂದಂತೆ ಹೇಳಿಕೆ ನೀಡಿದರೆ ಜನರು ಈಗ ನಂಬುವುದಿಲ್ಲ. ಪ್ರತಿಯೊಬ್ಬರು ಈಗ ಪ್ರಜ್ಞಾವಂತರಾಗಿದ್ದಾರೆ. ಮತ್ತು ಹೇಳಿಕೆಯನ್ನು ಅವಲೋಕನ ಮಾಡಿ ಸತ್ಯಾಸತ್ಯತೆಯನ್ನು ಅರಿತುಕೊಳ್ಳುತ್ತಿದ್ದಾರೆ.
ಧಾರ್ಮಿಕ ಸ್ಥಳವೊಂದರ ಒಳಗೆ ಇಂತಹ ಪ್ರಕ್ರಿಯೆ ನಡೆದಿರುವುದು ನಿಜವೇ ಆಗಿದ್ದರೆ, ಅದರ ಹೊಣೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಪೊಲೀಸ್ ಇಲಾಖೆಯ ಮೇಲಿದೆ. ಇದನ್ನು ಕೇಂದ್ರ ಸರಕಾರದ ಪಿತೂರಿ ಎಂದು ಬಣ್ಣಿಸುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಎಂದು ಕಿಡಿ ಕಾರಿರುವ ಗುಳಗಣ್ಣ ಅವರು ಮಂತ್ರಿ ಸ್ಥಾನ ಸಿಗದ ಹಿನ್ನಲೆ ಸಂಪೂರ್ಣ ವಿಚಲಿತರಾಗಿರುವ ಶಾಸಕ ರಾಯರೆಡ್ಡಿ ಅವರು ತಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಮಾತನಾಡುವ ಧೈರ್ಯ ಮಾಡದೇ ಕೇಂದ್ರ ಸರಕಾರಕ್ಕೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಾಕ್ಸ್:
ಸಚಿವ ಸ್ಥಾನ ಸಿಗದಿದ್ದಕ್ಕೆ ರಾಯರೆಡ್ಡಿ ವಿಚಲಿತರಾಗಿದ್ದಾರೆ
ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರಕಾರದಲ್ಲಿ ತಮಗೆ ಮಂತ್ರಿ ಸ್ಥಾನ ಸಿಗದ ಕಾರಣ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಮಾತನಾಡುತ್ತಿದ್ದಾರೆ. ಎಸ್ಐಆರ್ ಪ್ರಕ್ರೀಯೆಯಲ್ಲಿನ ಲೋಪಗಳು ಮತ್ತು ತಾಲೂಕಿನಲ್ಲಿ ವಿಂಡ್ ಪವರ್ ಯೋಜನೆಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಶಾಸಕರಾಗಿರುವ ತಾವು ಜವಬ್ದಾರಿಯುತವಾಗಿ ಮಾತನಾಡದೇ ಎಲ್ಲವನ್ನು ಕೇಂದ್ರ ಸರಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಪಂಡಿತರಂತೆ ಮಾತನಾಡುವ ರಾಯರೆಡ್ಡಿ ಅವರು ತಾಲೂಕಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲು ಮುಂದಾಗದೇ ಕೇಂದ್ರ ಸರಕಾರದ ಮೇಲೆ ಹಾಕಿ ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ನವೀನ್ಕುಮಾರ ಗುಳಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷರು, ಕೊಪ್ಪಳ.

ದಾವಣಗೆರೆಯಲ್ಲಿ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ: ಪ್ರತಿಭಾವಂತ ಮಹಿಳಾ ಕಲಾವಿದರಿಗೆ ಸುವರ್ಣಾವಕಾಶ

ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ-2026: ನಾಲ್ಕನೇ ಪೂರ್ವಭಾವಿ ಸಭೆ ಯಶಸ್ವಿ

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ