

4th July 2026

ಕೊಪ್ಪಳ.(ಸಮರ್ಥವಾಣಿ)
ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಸಚಿವರಾಗಿ ಆಯ್ಕೆಯಾಗಿ ಜಿಲ್ಲೆಗೆ ಪ್ರಥಮವಾಗಿ ಭೇಟಿ ನೀಡಿರುವ ಶರಣ ಪ್ರಕಾಶ್ ಪಾಟೀಲ್ ಅವರನ್ನು ಸ್ವಾಗತಿಸುತ್ತೇವೆ. ಆಗಮನದ ಪ್ರಥಮ ಸಭೆಯಲ್ಲೇ ಈ ಬಾರಿ ರೈತರಿಗೆ ನೀರು ಕೊಡುವುದಿಲ್ಲ, ರೈತರು ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಕರೆ ನೀಡಿರುವುದು ಖಂಡನೀಯವಾಗಿದೆ ಇಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, 8 ದಿನಗಳ ಹಿಂದೆ ಮುರಿದ ಗೇಟ್ಗಳ ಮರು ಉದ್ಘಾಟನೆ ಮಾಡಲು 3 ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಕಾಂಗ್ರೆಸ್ ಸರಕಾರ ರಾಜಕೀಯ ದೊಂಬರಾಟ ನಡೆಸಿತು. ಸಿಎಂ ಡಿ.ಕೆ. ಶಿವಕುಮಾರ್ ಅವರು ನವಲಿ ಜಲಾಶಯ ಅಥವಾ ನೀರಾವರಿ ಕುರಿತು ಯಾವುದಾದರೂ ಸಿಹಿ ಸುದ್ದಿ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಇದ್ದರು. ಆದರೆ, ಇಲ್ಲಿನ ಸಮಸ್ಯೆಯನ್ನು ಇಲ್ಲಿಯೇ ಬಿಟ್ಟು ಬೆಂಗಳೂರಿಗೆ ತಲುಪಿದ ಕೂಡಲೇ, ನೂತನ ಮೇಲುಸ್ತುವಾರಿ ಸಚಿವರಿಂದ ರೈತರಿಗೆ “ಬೆಳೆ ಬೆಳೆಯಬೇಡಿ” ಎಂಬ ಕಹಿ ಸುದ್ದಿ ಕಳುಹಿಸಿರುವುದು ನೋವಿನ ಸಂಗತಿ.
ಕಾಂಗ್ರೆಸ್ ಸರಕಾರ ನೀರೇ ಕೊಡುವುದಿಲ್ಲ ಎಂದಾದರೆ, ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರು ಎಲ್ಲಿಗೆ ಹೋಗಬೇಕು. ಸರಕಾರ ಕೂಡಲೇ ಬರ ಎಂದು ಘೋಷಣೆ ಮಾಡಿ ರೈತರಿಗೆ ಪರಿಹಾರ ನೀಡಬೇಕು.ಟಿಬಿ ಡ್ಯಾಂನಲ್ಲಿ ಕೇವಲ 9 ಟಿಎಂಸಿ ನೀರಿನ ಸಂಗ್ರಹವಿದೆ. ಆದ್ದರಿಂದ ನೀರು ಕೊಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ.ಆದರೆ, ಈ ಪರಿಸ್ಥಿತಿ ಬರಲು ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯವೇ ಕಾರಣ. ಒಂದು ಗೇಟ್ ಮುರಿದ ತಕ್ಷಣವೇ ಎಲ್ಲಾ ಗೇಟ್ಗಳನ್ನು ಪರಿಶೀಲಿಸಿ, 2 ತಿಂಗಳೊಳಗೆ ಸರಿಪಡಿಸಿದ್ದರೆ ಇಂದು ರೈತರಿಗೆ ನೀರು ಸಿಗುತ್ತಿತ್ತು. ಗೇಟ್ ಮುರಿದ ದಿನದಿಂದ ಒಂದೂವರೆ ವರ್ಷ ಸರಕಾರ ಮೌನವಾಗಿತ್ತು.ನಮ್ಮ ತೀವ್ರ ಹೋರಾಟದ ಬಿಸಿ ತಟ್ಟಿದ ನಂತರ, ಕಳೆದ 4 ತಿಂಗಳಲ್ಲಿ ನಿರ್ಧಾರ ತೆಗೆದುಕೊಂಡು ಗೇಟ್ಗಳನ್ನು ಬದಲಾಯಿಸಿ ಅದನ್ನೇ ದೊಡ್ಡ ಇತಿಹಾಸದಂತೆ ಕಾಂಗ್ರೆಸ್ ಸರ್ಕಾರ ಪ್ರದರ್ಶಿಸಿತು.
ಆ ಕಾರ್ಯಕ್ರಮದಿಂದ ಆದ ಒಂದು ಮಾತ್ರ ಅನುಕೂಲವೆಂದರೆ, ನಮ್ಮ ಬಿಜೆಪಿ ಕೇಂದ್ರ ಸಚಿವರಿಂದ ತುಂಗಭದ್ರಾ ಡ್ಯಾಂನ ಹೂಳು ತೆಗೆಯುವ ಭರವಸೆ ಸಿಕ್ಕಿದ್ದು.ಆದರೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಕೊಪ್ಪಳ ಜಿಲ್ಲೆಯ ರೈತರಿಗೆ ಯಾವುದೇ ಭರವಸೆ ಸಿಕ್ಕಿಲ್ಲ.ಜತೆಗೆ, ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳದ ಶಾಸಕರಿಗೂ ಕಾರ್ಯಕ್ರಮದಲ್ಲಿ ಎರಡು ಮಾತು ಮಾತನಾಡಲು ಅವಕಾಶ ಇರಲಿಲ್ಲ. ಇದರ ಒಳಮರ್ಮ ಕಾಂಗ್ರೆಸ್ ಪಕ್ಷದ ಬಣ ಬಡಿದಾಟವೇ ಆಗಿದೆ. ಸಿಎಂ ಪಾಲಿಗೆ ಇಲ್ಲಿನ ಶಾಸಕರು ಲೆಕ್ಕಕ್ಕೇ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆ ಬಣ ಬಡಿದಾಟ ಮುಂದುವರೆದು, ಜಿಲ್ಲೆಗೆ ಮೊದಲ ಬಾರಿಗೆ ಬಂದಿರುವ ಉಸ್ತುವಾರಿ ಸಚಿವರನ್ನು ಸ್ವಾಗತಿಸಲು ಮತ್ತು ಸರ್ಕಾರಿ ಸಭೆಯಲ್ಲಿ ಪಾಲ್ಗೊಳ್ಳಲು ಈ ಕ್ಷೇತ್ರದ ಶಾಸಕರು ಹಾಗೂ ಸಂಸದರು ಗೈರಾಗಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಪ್ರತಿಭಟನೆ ಮಾಡಿಸುವ ಶಾಸಕರು, ಜಿಲ್ಲೆಯ ಜನರ ಸಮಸ್ಯೆಗಳ ಕುರಿತು ನಡೆಯುವ ಸಭೆಗೆ ಹಾಜರಾಗಿಲ್ಲ. ಇವರಿಗೆ ಜನಪರ ಕಾಳಜಿ ಇಲ್ಲ, ಅಧಿಕಾರದ ದಾಹ ಮಾತ್ರ ಇದೆ. ಕಾಂಗ್ರೆಸ್ ಸರ್ಕಾರ ರೈತರಿಗೆ ನೀರು ಕೊಡಲು ತಯಾರಿಲ್ಲದಿದ್ದರೆ, ಕೂಡಲೇ ಬರ ಎಂದು ಘೋಷಣೆ ಮಾಡಬೇಕು. ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದ್ದರಿಂದ ಸರ್ಕಾರ ತಕ್ಷಣ ಮುನ್ನೆಚ್ಚರಿಕೆ ವಹಿಸಿ, ಜನರಿಗೆ ಹಾಗೂ ದನಕರುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂದುವರೆದು ಮಾತನಾಡಿದ ಅವರು ಅಯೋಧ್ಯೆಯಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶ ಸರ್ಕಾರ ಅಗತ್ಯವಿದ್ದರೆ ಕಠಿಣ ಕ್ರಮ ಕೈಗೊಂಡು, ತಪ್ಪಾಗಿದ್ದರೆ ತಪ್ಪಿತಸ್ಥರಿಗೆ ಪಾಠ ಕಲಿಸಲಿದೆ. ಆದರೆ ನೂತನ ಉಸ್ತುವಾರಿ ಸಚಿವರು ಬಿಜೆಪಿಯ ಹಿಂದುತ್ವದ ಬಗ್ಗೆ ಮಾತನಾಡುವ ಮೊದಲು, ಅವರಿಗೆ ನಿಜವಾಗಿಯೂ ಗಟ್ಟಿತನವಿದ್ದರೆ ಒಮ್ಮೆ ಮದರಸಾ ಮತ್ತು ಮಸೀದಿಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಮಾತನಾಡಲಿ. ಅದೇ ರೀತಿ, ಹಿಂದೂ ದೇವಾಲಯಗಳ ಆದಾಯವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಸುವ ಕಾನೂನು ತರಲು ಧೈರ್ಯ ತೋರಲಿ. ಕರ್ನಾಟಕದ ಮುಜುರಾಯಿ ದೇವಾಲಯಗಳ ಹಣ ಏನೇನಾಗಿದೆ ಲೆಕ್ಕ ಕೊಡಲಿ. ಚಾಮುಂಡಿ ದೇವಾಲಯಲದ ಆಷಾಡ ಮಾಸದ ವಿಶೇಷ ದರ್ಶನಕ್ಕೆ 2000 ನಿಗದಿಪಡಿಸುವ ಮೂಲಕ ಹಿಂದೂ ದೇವಾಲಯಗಳಲ್ಲಿ ಲೂಟಿಗಿಳಿದಿರುವುದು ಕಾಂಗ್ರೆಸ್ ಸರ್ಕಾರ ಎಂದು ಬಸವರಾಜ ಕ್ಯಾವಟರ್ ಅವರು ಕಾಂಗ್ರೆಸ್ ಸರಕಾರದ ಧೋರಣೆಗಳ ವಿರುದ್ಧ ಕಿಡಿಕಾರಿದ್ದಾರೆ.
ಬಾಕ್ಸ್*
*ಬೆಳೆ ಪರಿಹಾರ ಘೋಷಿಸಿ
ಸಕಾಲಕ್ಕೆ ಮಳೆಯಾಗದ ಹಿನ್ನಲೆ ಹಾಗೂ ಜಲಾಶಯದಿಂದ ನೀರು ಬಿಡುಗಡೆಯಾಗದಿರುವ ಹಿನ್ನಲೆ ಕೂಡಲೇ ಖುಷ್ಕಿ ಹಾಗೂ ನೀರಾವರಿ ಪ್ರದೇಶದ ರೈತರಿಗೆ ಬೆಳೆ ಹಾನಿ ಪರಿಹಾರ ಘೋಷಿಸಬೇಕೆಂದು ಇದೇ ವೇಳೆ ಬಸವರಾಜ ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅದರಲ್ಲಿಯೂ ಒಣ ಬೇಸಾಯ ಪ್ರದೇಶದಲ್ಲಿ ರೈತರು ಮಳೆ ನಂಬಿ ಈಗಾಗಲೇ ಬಿತ್ತನೆ ಮಾಡಿದ್ದು, ಮಳೆಯಿಲ್ಲದ್ದಕ್ಕೆ ಹೊಲದಲ್ಲಿ ಬಿತ್ತಿದ ಬೀಜಗಳು ಹಾಳಾಗುತ್ತಿವೆ. ಹೀಗಾಗಿ ಸರಕಾರ, ಬರ ಪರಿಹಾರ ಘೋಷಣೆ ಮಾಡಬೇಕು.
ಡಾ.ಬಸವರಾಜ್ ಎಸ್ ಕ್ಯಾವಟರ್
ನಿಕಟಪೂರ್ವ ಬಿಜೆಪಿ ಅಭ್ಯರ್ಥಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ

ಸಾಲಬಾಧೆ ತಾಳಲಾರದೆ ಪತಿ, ಪತ್ನಿ, ಮಗ ನೇಣಿಗೆ ಶರಣು- ಸ್ಥಳಕ್ಕೆ-ಎಸ್.ಪಿ ರಾಮ್ ಅರಸಿದ್ದಿ ಭೇಟಿ

ಮುಂಗಾರು ಕ್ಷೀಣ-ಭದ್ರಾ ಜಲಾಶಯದಲ್ಲಿ ನೀರು ಖಾಲಿ- ಮುಂಗಾರು ಬೆಳೆಗೆ ನೀರು ಇಲ್ಲ: ರೈತರಿಗೆ ಆತಂಕ