

23rd July 2026

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮಗೆ ಒತ್ತಾಯಿಸಿ ದೆಹಲಿಯಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಪ್ರತಿಭಟನೆಯನ್ನು ಮತ್ತು ರಾಹುಲ್ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದರು.
ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಪ್ರಾರಂಭಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಡಳಿತದ ಭವನದ ಎದುರಿಗೆ ಇರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದರು. ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು, ಯುವಕರು ಮತ್ತು ರಾಹುಲ್ಗಾಂಧಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಸೇರಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೇಶ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ರಾಹುಲ್ಗಾಂಧಿ ನಡೆಯನ್ನು ಖಂಡಿಸಿದರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಮುಖಂಡರು ಮತ್ತು ಕೆಲವು ಪದಾಧಿಕಾರಿಗಳನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿಲ್ಲದೇ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವೃತ್ತದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೇ ಬರಗಾಲ ವ್ಯಾಪಿಸಿದೆ. ಇದರ ಬಗ್ಗೆ ಕಿಂಚಿತ್ ಕಾಳಜಿವಹಿಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕರ್ನಾಟಕದ ರೈತರ ಸಂಕಷ್ಟ ಆಲಿಸದೇ ತಮ್ಮ ನಾಯಕರನ್ನು ಓಲೈಸಿಕೊಳ್ಳಲು ದೆಹಲಿಗೆ ಹೋಗಿ ಪ್ರಧಾನಿ ಅವರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಕೊಪ್ಪಳ ಶಾಸಕರು ಮತ್ತು ಸಂಸದರು ಸಹ ರೈತರ ಸಮಸ್ಯೆ ಆಲಿಸದೇ ದೇಹಲಿಯಲ್ಲಿ ಬಿಡು ಬಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹತ್ತಾರು ಭಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ಸೋರಿಕೆಯಾಗಿದೆ. ಆದರೆ ಈಗ ತಾವು ಸಾಚಾ ಎಂಬಂತೆ ರಾಹುಲ್ಗಾಂಧಿ ಮೋದಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶ ವಿರೋಧಿ ಚಟುವಟಿಕೆ ನಡೆಸುವ ವ್ಯಕ್ತಿಗಳು ಈಗ ವಿದ್ಯಾರ್ಥಿಗಳ ಹೆಸರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹವರ ಜೊತೆ ಕಾಂಗ್ರೆಸ್ ಕೈ ಜೋಡಿಸಿ ತನ್ನ ಮಾನ ಹರಾಜು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ನ ಕುತಂತ್ರವನ್ನು ದೇಶದ ಜನರು ನೋಡುತ್ತಿದ್ದಾರೆ ಎಂದು ಗುಡುಗಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ನೆಪ ಮಾಡಿಕೊಂಡು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಕುತಂತ್ರ ಮಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯವಾಗಿದೆ ಎಂದರು.
ಮಾಜಿ ಶಾಸಕ ಶಿವರಾಮಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಮತ್ತಿತರು ಮಾತನಾಡಿ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹಗೌಡ ಹೇರೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ರಮೇಶ ನಾಡಿಗೇರ್, ಮಹಾಲಕ್ಷ್ಮೀ ಕಂದಾರಿ ಸೇರಿದಂತೆ ವಿವಿಧ ಮಂಡಲ ಅಧ್ಯಕ್ಷರು, ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಬಾಕ್ಸ್:
ಕಚೇರಿಗೆ ಮುತ್ತಿಗೆ: ಕಾಂಗ್ರೆಸ್ಸಿನಿಂದ ದೂರು
ಭಾರತೀಯ ಜನತಾ ಪಕ್ಷದ ಮುಖಂಡರು ಪ್ರತಿಭಟನೆ ನೆಪದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಯ ಪೀಠೋಪಕರಣಗಳನ್ನು ದ್ವಂಸ ಮಾಡಿ ಗುಂಡಾ ಪ್ರವೃತ್ತಿ ತೊರಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಜ್ಯೋತಿ ಗೊಂಡಬಾಳ, ಮಲ್ಲಿಕಾರ್ಜುನ, ಕಾಟನ್ ಪಾಷಾ, ಅಕ್ಬರ್ ಪಾಷಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಲ್ಲದೇ ಎಂಎಲ್ಸಿ ಹೇಮಲತಾ ನಾಯಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾರಕಾಸ್ತ್ರಗಳನ್ನು ಹಿಡಿದು ಕಾಂಗ್ರೆಸ್ ಕಚೇರಿಗೆ ನುಗ್ಗಿ ಕಾಂಗ್ರೆಸ್ ಮುಖಂಡರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*

ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಯ್ಕೆ