

7th January 2025

ಶ್ರೀರಂಗಪಟ್ಟಣ: ನಾಲೆಗೆ ನೀರು ಬಿಡುವ ಸಲುವಾಗಿ ಸಿಆರ್ ಎಸ್ ಐಸಿಸಿ ಸಭೆಯಲ್ಲಿ ಶಾಸಕರ, ಅಧಿಕಾರಿಗಳ ಅಭಿಪ್ರಾಯ ತೆಗೆದುಕೊಂಡು ಜನವರಿ 10ರಿಂದ ಕಟ್ಟು ಪದ್ದತಿಯಂತೆ 4 ಕಟ್ಟು ನೀರು ಬಿಡಲು ನಿರ್ಧಾರಿಸಲಾಗಿದೆ. ಅದಷ್ಟೂ ಬೇಗ ರೈತರು ನಾಟಿ ಮಾಡಲು ಮುಂದಾಗುವಂತೆ ಕೃಷಿ ಹಾಗೂ ನೀರಾವರಿ ಸಚಿವ ಎನ್ ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲ್ಲೂಕಿನ ಕೆ ಆರ್ ಎಸ್ ನಲ್ಲಿ ನಡೆದ ಐಸಿಸಿ ಸಭೆ ನಂತರ ಅವರು ಮಧ್ಯಮಗಳ ಜೊತೆ ಮಾತನಾಡಿದರು.
18 ದಿನಗಳು ನೀರು ಹರಿಸಲಾಗುವುದು. 12 ದಿನಗಳು ನಿಲ್ಲಿಸಲಾಗುವುದು. ನಾಲೆಯ ಪ್ರಾರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿಲ್ಲ ಅಲ್ಪಾವಧಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈಗ ಮುಖ್ಯ ನಾಲೆಗಳ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ನಾಲೆಗಳ ದುರಸ್ಥಿಗೆ ಅವಕಾಶವಿದೆ. ಆದ್ಯತೆ ಮೇರೆಗೆ ನಾಲಾ ಕೆಲಸ ಮಾಡಲಾಗುವುದು ಎಂದ ಅವರು ಜೂನ್ ಅಂತ್ಯದವರೆಗೂ ಕುಡಿಯಲು ಹಾಗೂ ಬೆಳೆಗಳಿಗೆ ಸಾಕಾಗಲಿದೆ. ಜಿಲ್ಲೆಯ ನಾಲೆಗಳ ಆಧಾರಿತ ಶೇ 100 ರಷ್ಟು ಕೆರೆಗಳು ತುಂಬಿವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕೆಆರ್ ಎಸ್ ನಿರ್ಮಾಣವಾದ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 156 ದಿನಗಳು 124.48 ಅಡಿ ನೀರಿನ ಲಭ್ಯತೆ ಹೊಂದಿದೆ ಎಂದು ಸಂತಸದಿಂದ ನುಡಿದರು.
ಕಾಂಗ್ರೆಸ್ ಸರ್ಕಾರದ ಕಾಲ್ಗುಣ ಸರಿಯಿಲ್ಲ ಎಂದು ಟೀಕೆ ಮಾಡುತ್ತಿದ್ದರು. ನಮ್ಮದೇ ಸರ್ಕಾರದಲ್ಲಿ ಕೆಆರ್ ಎಸ್ ತನ್ನ ಭಾಗ್ಯ ತೋರಿದೆ. ಕಳೆದ ಆರು ತಿಂಗಳು ನಾಲೆಗಳಿಗೆ ನೀರು ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಕ್ಕಿಂತ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದಾಗಿಯೂ ಜಲಾಶಯ ಸಂಪೂರ್ಣ ಭರ್ತಿ ಇದ್ದು 124.30 ಅಡಿ ಪ್ರಸ್ತುತ ನೀರಿನ ಮಟ್ಟ ಇದೇ ಎಂದು ತಿರುಗೇಟು ನೀಡಿದರು.
ಡಿನ್ನರ್ ಮೀಟಿಂಗ್ ವಿಚಾರವಾಗಿ ಸಿಎಂ, ಡಿಸಿಎಂ ಈಗಾಗಲೇ ಮಾತನಾಡಿದ್ದಾರೆ. ಊಟಕ್ಕೆ ಕರೆಯುವುದು ರಾಜಕಾರಣವಲ್ಲ. ಸಮುದಾಯ ಸಂಘಟನೆ ಮಾಡುವುದು ಪಕ್ಷಕ್ಕೆ ಒಳ್ಳೆಯದು. ತಪ್ಪೇನಿದೆ ಎಂದರು.
ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡಲಿ:
ನರೇಂದ್ರಸ್ವಾಮಿ ಅವರನ್ನ ಸಚಿವರಾಗಿ ಮಾಡಲಿ ಎಂದು ಜಿಲ್ಲೆಯ ಆರು ಶಾಸಕರ ಬಯಕೆ, ಆಶಯವು ಆಗಿದೆ. ಆದರೆ ಸಚಿವ ಸ್ಥಾನ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಉತ್ತರ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮುಂದೆ ತೀರ್ಮಾನ ಮಾಡುವವರೆಗೂ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿದ್ದು, ಮುಂದೆ ಎಐಸಿಸಿ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕಿದೆ ಎಂದರು.
ಒಕ್ಕಲಿಗರ ಸಂಘಟನೆ ಬಗ್ಗೆ ಕೇಳಿದಾಗ, ನಾವು ಸಂಘಟನೆ ಮಾಡುವ ಅವಶ್ಯಕತೆ ಬಂದಾದ ಮಾಡುತ್ತೇವೆ. ಎಲ್ಲಾ ಸಮಾದಾಯದವರು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು.
ಈ ವೇಳೆ ಶಾಸಕರಾದ ರಮೇಶ್ ಬಾಬು ಬಂದಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಸೇರಿದಂತೆ ಕೆಆರ್ ಎಸ್ ಅಧಿಕಾರಿಗಳು ಇದ್ದರು.

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ