


22nd May 2026
ಬಳ್ಳಾರಿ: ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರವಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ ಹೇಳಿದರು.
ನಗರದ ಬಿಡಿಎಎ ಮೈದಾನದ ಸಭಾಂಗಣದಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದ ಕಾರಣದಿಂದ ಉನ್ನತ ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬಂದು ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ 7 ಅನುದಾನಿತ ಕಾಲೇಜುಗಳ 129 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಈ ಸಹಾಯಧನವು ಅವರ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಲಿದ್ದು, ಉನ್ನತ ಗುರಿಗಳನ್ನು ಸಾಧಿಸಲು ಆತ್ಮವಿಶ್ವಾಸ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಪದಾಧಿಕಾರಿಗಳು, ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೆಹತಾಬ್, ಯರ್ರಿಸ್ವಾಮಿ, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಎಮ್ಮಿಗನೂರು ಜಗದೀಶ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು ಸೇರಿದಂತೆ ಹಲವಾರು ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯವರು ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

22nd May 2026
ಬಳ್ಳಾರಿ : ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಭಕ್ತಿಭಾವ ಮತ್ತು ಆಧ್ಯಾತ್ಮಿಕ ಚೈತನ್ಯ ತುಂಬಿದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಶ್ರೀ ನಂದ್ವಾರಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸದ್ಗುರು ಸಿದ್ಧಾರೂಡರ ಕತಾಮೃತ ಪಾರಾಯಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯುತ್ತಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ಆರಂಭವಾಗುತ್ತಿರುವ ಈ ಧಾರ್ಮಿಕ ಕಾರ್ಯಕ್ರಮವು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಾಗದ ಭಕ್ತರನ್ನು ಆಕರ್ಷಿಸುತ್ತಿದೆ.
ದಿನಾಂಕ 18-05-2026ರಿಂದ 26-05-2026ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಶ್ರೀ ಸದ್ಗುರು ಸಿದ್ಧಾರೂಢರ ಜೀವನ ತತ್ವ, ಧರ್ಮೋಪದೇಶ, ಭಕ್ತಿ ಮಾರ್ಗ ಮತ್ತು ಸತ್ಸಂಗದ ಮಹತ್ವವನ್ನು ಕತಾಮೃತ ರೂಪದಲ್ಲಿ ಭಕ್ತರಿಗೆ ತಿಳಿಸಲಾಗುತ್ತಿದೆ. ದೇವಸ್ಥಾನದಲ್ಲಿ ನಿತ್ಯ ಭಜನೆ, ಮಂತ್ರೋಚ್ಚಾರಣೆ, ಪಾರಾಯಣ ಮತ್ತು ಪ್ರವಚನಗಳಿಂದ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.
ಈ ವೇಳೆ ಎತ್ತಿನಬೂದಿಹಾಳ ಗ್ರಾಮದ ಪ್ರವಚನಕಾರ ಮುದ್ದೆ ನಾಗರಾಜ್ ಮಾತನಾಡಿ, “ಮಾನವ ಜನ್ಮ ಅತ್ಯಂತ ಅಪರೂಪವಾದುದು. 84 ಲಕ್ಷ ಜೀವ ರಾಶಿಗಳಲ್ಲಿ ಅನೇಕ ಜನ್ಮಗಳನ್ನು ಅನುಭವಿಸಿದ ನಂತರ ಮನುಷ್ಯ ಜನ್ಮ ದೊರೆಯುತ್ತದೆ. ಈ ಜನ್ಮವನ್ನು ಕೇವಲ ಭೌತಿಕ ಸುಖಗಳಿಗೆ ಮಾತ್ರ ಸೀಮಿತಗೊಳಿಸದೇ, ಧರ್ಮ, ದಾನ, ಭಕ್ತಿ ಹಾಗೂ ಸತ್ಸಂಗದ ಮೂಲಕ ಸಾರ್ಥಕ ಮಾಡಿಕೊಳ್ಳಬೇಕು. ಶ್ರೀ ಸದ್ಗುರು ಸಿದ್ಧಾರೂಢರು ಜನರ ಅಜ್ಞಾನವನ್ನು ಹೋಗಲಾಡಿಸಿ, ಸತ್ಯ ಮತ್ತು ಆತ್ಮಜ್ಞಾನಕ್ಕೆ ದಾರಿ ತೋರಿದ ಮಹಾನ್ ಸಂತರು. ಅವರ ಜೀವನವೇ ಮಾನವಕುಲಕ್ಕೆ ದೀಪಸ್ತಂಭವಾಗಿದೆ,” ಎಂದು ಹೇಳಿದರು.
ಮುಂದುವರಿದು ಅವರು, “ಇಂದಿನ ಯಾಂತ್ರಿಕ ಬದುಕಿನಲ್ಲಿ ಮಾನವರು ಆತ್ಮಶಾಂತಿಯನ್ನು ಕಳೆದುಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ‘ಓಂ ನಮಃ ಶಿವಾಯ’ ಮಂತ್ರ ಪಠಣೆ ಮತ್ತು ಸತ್ಸಂಗದ ಮಾರ್ಗ ಮನಸ್ಸಿಗೆ ಶಾಂತಿ ನೀಡುತ್ತದೆ. ಸಿದ್ಧಾರೂಢರ ಕಥಾಮೃತವನ್ನು ಶ್ರದ್ಧೆಯಿಂದ ಓದಿದರೆ ಹಾಗೂ ಕೇಳಿದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸುತ್ತವೆ. ಈ ಪವಿತ್ರ ಗ್ರಂಥದಲ್ಲಿ ನಾಲ್ಕು ವೇದಗಳು, ಆರು ಶಾಸ್ತ್ರಗಳು, ಹದಿನೆಂಟು ಪುರಾಣಗಳು ಹಾಗೂ ಇಪ್ಪತ್ತೈದು ಆಗಮಗಳ ಸಾರ ಅಡಕವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿರುವ ದುಷ್ಟ ಗುಣಗಳನ್ನು ದೂರ ಮಾಡಿ, ಒಳ್ಳೆಯ ಜೀವನದ ಮಾರ್ಗವನ್ನು ತೋರಿಸುವ ಶಕ್ತಿ ಸತ್ಸಂಗಕ್ಕಿದೆ,” ಎಂದು ಭಕ್ತರಿಗೆ ಆಧ್ಯಾತ್ಮಿಕ ಸಂದೇಶ ನೀಡಿದರು.
ಇದೇ ವೇಳೆ ಕತಾಮೃತ ಪಾರಾಯಣ ಸೇವೆಯನ್ನು ನೆರವೇರಿಸುತ್ತಿರುವ ಗ್ರಾಮದ ಹೊನ್ನಪ್ಪನವರ ಮಗ ಈರಣ್ಣ ಮಾತನಾಡಿ, “ಗ್ರಾಮದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯುವ ಪೀಳಿಗೆಗೆ ಸಂಸ್ಕಾರ ಮತ್ತು ಭಕ್ತಿಯ ಅರಿವು ಮೂಡುತ್ತದೆ. ಶ್ರೀ ಸದ್ಗುರು ಸಿದ್ಧಾರೂಢರ ಕೃಪೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ದೊರೆತಿದ್ದು ನಮ್ಮ ಕುಟುಂಬಕ್ಕೆ ಇದು ಭಾಗ್ಯವಾಗಿದೆ. ಪ್ರತಿದಿನ ಭಕ್ತರು ಭಕ್ತಿಭಾವದಿಂದ ಭಾಗವಹಿಸುತ್ತಿರುವುದು ಸಂತಸ ತಂದಿದೆ,” ಎಂದು ಹೇಳಿದರು.
ಅವರು ಮುಂದುವರಿದು, “ಇಂದಿನ ಕಾಲದಲ್ಲಿ ಜನರು ಒತ್ತಡದ ಬದುಕಿನಲ್ಲಿ ಆಧ್ಯಾತ್ಮಿಕತೆಯಿಂದ ದೂರವಾಗುತ್ತಿದ್ದಾರೆ. ಆದರೆ ಇಂತಹ ಕತಾಮೃತ ಪಾರಾಯಣಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಎಲ್ಲ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು,” ಎಂದು ಮನವಿ ಮಾಡಿದರು.
ಶ್ರೀ ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗುರುಹಿರಿಯರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ನಿತ್ಯ ಪ್ರಸಾದ ವಿನಿಯೋಗ, ಭಜನಾ ಕಾರ್ಯಕ್ರಮ ಹಾಗೂ ಸತ್ಸಂಗಗಳು ನಡೆಯುತ್ತಿದ್ದು, ಸಂಜೀವರಾಯನಕೋಟೆ ಗ್ರಾಮದಲ್ಲಿ ಸಂಪೂರ್ಣ ಭಕ್ತಿಮಯ ವಾತಾವರಣ ನಿರ್ಮಾಣವಾಗಿದೆ.

22nd May 2026
ಬಳ್ಳಾರಿ, ಮೇ.21 ನಗರ ಸ್ನೇಹ ಸಂಪುಟ ಹಾಲ್ ನಲ್ಲಿ ಡಿ.ಎಸ್.ಎಸ್ ನ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಭೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ)ಸಂಘಟನಾ ಸಂಸ್ಥಾಪಕರಾದ ಪರುಶುರಾಮ ನೀಲನಾಯಕ್ ಆಗಮಿಸಿ ಮುಂದಿನ ತಿಂಗಳು ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆಯುವ ಪ್ರೊ||ಕೃಷ್ಣಪ್ಪ ರವರ 88ನೇ ಜಯಂತಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಕನಾಯಕ ಪತ್ರಿಕೆ ಪುನಾರಂಭದ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಈ ಸಭೆಯಲ್ಲಿ ರಾಜ್ಯ ಸಂಚಾಲಕರಾದ ಓಂಕಾರಪ್ಪ ಕಪ್ಪಗಲ್ಲು ರಾಜ್ಯ ಖಜಾಂಚಿಯಾದ ಞ. ನಾಗರಾಜ ಜಿಲ್ಲಾ ಸಂಚಾಲಕರಾದ ಸಿ. ಲಿಂಗಪ್ಪ ಮಹಿಳಾ ಸಂಚಾಲಕರಾದ ತಿಮ್ಮಲಾಪುರ ಮಲ್ಲಮ್ಮ ಹಾಗೂ ಜಿಲ್ಲಾ ಸಂಚಾಲಕರಾದ ಚಂದ್ರಪ್ಪ ಲಿಂಗದೇವನಳ್ಳಿ ಚಂದ್ರಪ್ಪ ಗೊಟೂರು ಕಪ್ಪಾಗಲ್ಲು ಸುರೇಶ ನಾಗೇಂದ್ರ ಮೋಕಾ ರಾಘವೇಂದ್ರ ಇನ್ನು ಮುಂತಾದವರು ಭಾಗವಹಿಸಿದ್ದರು.

22nd May 2026
ಬಳ್ಳಾರಿ, ಮೇ.21: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ 2026-31 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಸಿ.ನಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಏಸಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಗುಂಡಪ್ಪನವರ ನಾಗರಾಜ, ಉಪಾಧ್ಯಕ್ಷರಾಗಿ ಪರಶುರಾಮ ಚೌಕಳಿ, ಶಾಂತಕುಮಾರಿ ಎಂ.ಹಾಗು ಬಸವನಗೌಡ ಖಜಾಂಚಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ .
ನಿಂಗಪ್ಪ ಅವರು ನಿರಂತರವಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಎರೆಡು ಸಂಘಟನಾ ಕಾರ್ಯದರ್ಶಿ ಹಾಗು ಎರೆಡು ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೇಮಕ ಮಾಡಲಿದೆಂದು ನಿಂಗಪ್ಪ ಅವರು ತಿಳಿಸಿದ್ದಾರೆ.

22nd May 2026
ಬಳ್ಳಾರಿ, ಮೇ.21: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಬಯಲು ರಂಗ ಮಂದಿರ ವೇದಿಕೆಯಲ್ಲಿ ಮಂಗಳವಾರ ಸಂಜೆ ಗ್ರಾಮೀಣ ಕಲೋತ್ಸವ 2026 ಕಾರ್ಯಕ್ರಮವನ್ನು ನೇತ್ರ ಕಲಾ ಸಂಘ ಸಿರುಗುಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿತ್ತು.
ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಲಾಸಂಘ ಸಂಸ್ಥೆಗಳಿಗೆ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ಅಸಂಘಟಿತ ಕಲಾವಿದರಿಗೂ ಪ್ರತಿವರ್ಷವು ಧನ ಸಹಾಯ ನೀಡುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧನ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಎಂದು ಹೇಳಿದರು.
ಅದರಂತೆ ನೇತ್ರಕಲಾ ಸಂಘವು 15 ವರ್ಷಗಳಿಂದ ನಿರಂತರ ಸಾಂಸ್ಕೃತಿಕ ಸಾಹಿತ್ಯಕ ಸಾಮಾಜಿಕ ಸೇವೆ ಜೊತೆಗೆ ಬೀದಿ ನಾಟಕ,ಆರೋಗ್ಯ ಜಾಗೃತಿ, ಬಾಲ್ಯ ವಿವಾಹ, ಅಸ್ಪೃಶ್ಯತೆ ಯಂತಹ ಜಾಗೃತಿ ಕಾರ್ಯಕ್ರಮಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಾನವಾಸಪುರ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಅವರು ಅಧ್ಯಕ್ಷತೆ ವಹಿಸಿದರು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಜೊತೆಗೆ ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಎಂದು ಹೇಳಿದರು. ಹಳ್ಳಿಗಳಲ್ಲಿ ಜನಪದ ಕಲೆ ನಶಿಸುತ್ತಿರುವ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘ-ಸಂಸ್ಥೆಗಳು ಜೊತೆಗೂಡಿ ಕಲೆಗಳನ್ನು ಉಳಿಸುವ ಬೆಳೆಸುವ ಕೆಲಸ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದರೆ ತಪ್ಪಾಗಲಾರದು ಅದರಂತೆ ಸಾರ್ವಜನಿಕರಾದ ನಾವು ಪ್ರತಿಯೊಬ್ಬರೂ ಜನಪದ ಕಲೆಗಳನ್ನು ಉಳಿಸುವ ಮೂಲಕ ಇಂದಿನ ಯುವ ಪೀಳಿಗೆಯವರು ಕೂಡ ಕ್ರೀಡೆ,ಶಿಕ್ಷಣ, ಕೃಷಿ, ಆಧ್ಯಾತ್ಮ, ಜನಪದ ಮತ್ತು ಸಾಮಾಜಿಕ ಅಂಶಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಭಾಗದ ಸೊಗಡನ್ನು ಜನಪದ ಕಲೆಯಿಂದಲೇ ಪರಿಚಯಿಸಿದಾಗ ಜನಪದ ಕಲೆ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗಳ ಅಧಿಕಾರಿಗಳಾದ ಶ್ರೀ ವೀರೇಶ್ ಮತ್ತುಮತ್ತು ಊರಿನ ಹಿರಿಯ ಮುಖಂಡರಾದ ಎಂ. ಈರಪ್ಪ ವೈ. ನಾಗರಾಜ, ಸೋಮಪ್ಪ, ರಾಮಪ್ಪ, ಅಕ್ಬರ್ ಸಾಬ್, ತಿಪ್ಪೇರುದ್ರಗೌಡ, ಅಯ್ಯಪ್ಪ, ಬೈಲೂರು ನಾಗರಾಜ, ಬೈಲಾಟ ಅಕಾಡೆಮಿ ಮಾಜಿ ಸದಸ್ಯ ಹೆಚ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ. ಮಹದೇವಿ ಸಿರುಗುಪ್ಪ ತಂಡದಿಂದ ಸುಗಮ ಸಂಗೀತ, ಮುತ್ತಣ್ಣ ಕುಡುದ್ರಾಳ್ ತಂಡದಿಂದ ಜನಪದ ಸಂಗೀತ, ದೊಡ್ಡ ಹುಸೇನಪ್ಪ ಅರಳಿಗನೂರು ತಂಡದಿಂದ ವಚನ ಸಂಗೀತ, ಹರಿಕೃಷ್ಣ ಸಂಗನಕಲ್ಲು ತಂಡದವರಿಂದ ಡೊಳ್ಳು ಕುಣಿತ, ದಾಸರ ಶಕ್ಷವಲಿ ಜಾಲಿಬೆಂಚಿ ತಂಡದವರಿಂದ ತತ್ವಪದ ಗಾಯನ ಹಾಗೂ ಸುಮಿತ್ರ ಮಾನ್ವಿ ತಂಡದವರಿಂದ ಪೌರಾಣಿಕ ನಗೆ ನಾಟಕ ಶ್ರೀಕೃಷ್ಣ ಸಂಧಾನ ಎಂಬ ನಾಟಕವು ನೆರೆದಿದ್ದ ಸಾವಿರಾರು ಜನರನ್ನು ನಗೆಯಲಿ ತೇಲಿಸುತ್ತಾ ವೇದಿಕೆಯ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ಎಲ್ಲರನ್ನು ಮನರಂಜಿಸಿದರೆ ಮರಿಯಮ್ಮನಹಳ್ಳಿಯ ಜನಪದ ಕಲಾವಿದ ಹನುಮಯ್ಯ ಕಂಠದಲ್ಲಿ ಕೇಳಿ ಬಂದ ಮಹರ್ಷಿ ವಾಲ್ಮೀಕಿ ಗೀತೆ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಶ್ರೀ ವೀರೇಶ ದಳವಾಯಿ ಕಾರ್ಯದರ್ಶಿ ನೇತ್ರಕಲಾ ಸಂಘ ಇವರು ನಿರ್ವಹಿಸಿದರು.

20th May 2026
ಬಳ್ಳಾರಿ.ಮೇ.20-ದಕ್ಷಿಣ ಕೊರಿಯಾದ ಸಿಯೋಲ್ ನ ಯೋಯಿದೋ ಹಾಂಗಾಂಗ್ ಪಾರ್ಕ್ (Yeouido Hangang Park) ನಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ "ಭಾರತ ದಿನಾಚರಣೆ-2026 (2026 India day)" ಕಾರ್ಯಕ್ರಮವು ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಸುವಾಸನೆ ಹರಡಿಸಿದ ಸಂಭ್ರಮವಾಗಿ ಮೂಡಿಬಂದಿತು. ಬೆಳಿಗ್ಗೆಯಿಂದ ಸಂಜೆವರೆಗೆ ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ಸಂಸ್ಕೃತಿ, ಪರಂಪರೆ, ಹಾಗೂ ಕಲೆಗಳ ವೈವಿಧ್ಯತೆ ಮನಮುಟ್ಟುವ ರೀತಿಯಲ್ಲಿ ಅನಾವರಣಗೊಂಡಿತು.
ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ ಗೌರಂಗಲಾಲ್ ದಾಸ್ ಉದ್ಘಾಟನಾ ಮಾತುಗಳನ್ನಾಡಿ ಚಾಲನೆ ನೀಡಿದರು. ನಂತರ ದಿನವಿಡೀ ಭರತನಾಟ್ಯ, ಒಡಿಸ್ಸಿ, ಕಥಕ್ ಸೇರಿದಂತೆ ವಿವಿಧ ಶಾಸ್ತ್ರೀಯ ನೃತ್ಯಗಳು, ಯೋಗ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.
ವಿವಿಧ ಭಾರತೀಯ ಸಮುದಾಯದ ಸದಸ್ಯರು ಭಾಗವಹಿಸಿ ನೃತ್ಯ, ಸಂಗೀತ, ಯೋಗ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ಭಾರತೀಯ ಸಮುದಾಯದ ಜೊತೆಗೆ ಕೊರಿಯಾದ ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇದರಲ್ಲಿ ಕೊರಿಯಾ ಕನ್ನಡ ಕೂಟ (ಏಏಏ) ವು ಅತ್ಯಂತ ಉತ್ಸಾಹ ಮತ್ತು ಜವಾಬ್ದಾರಿ ಯಿಂದ ಭಾಗವಹಿಸಿ ತನ್ನ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಸೌತ್ ಜೋನ್ ನ ಕರ್ನಾಟಕ ಭೂತ್ ನಲ್ಲಿ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಹಲವು ವಸ್ತುಗಳನ್ನು ಮನಮೋಹಕವಾಗಿ ಪ್ರದರ್ಶಿಸಲಾಗಿತ್ತು. ಬಸವಣ್ಣರಂತಹ ಮಹಾನ್ ಚಿಂತಕರ ಪ್ರತಿರೂಪಗಳು (3D images), , ಮೈಸೂರು ಅರಮನೆ, ಅಂಬಾರಿ, ಗೋಲ್ಗುಂಬಜ್, ಬೇಲೂರು - ಹಳೇಬೀಡು ಶಿಲ್ಪಕಲೆ, ಹಂಪಿಯ ಕಲ್ಲಿನ ರಥ ಇತ್ಯಾದಿ ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರತೀಕಗಳು ಗಮನ ಸೆಳೆದವು. ಜೊತೆಗೆ ಮೈಸೂರು ಸಿಲ್ಕ್, ಇಲ್ಕಲ್ ಸೀರೆಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯವು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸಿತು. ಕುವೆಂಪು, ತೇಜಸ್ವಿ, ಶಿವರಾಮ ಕಾರಂತ್ ಮೊದಲಾದ ಮಹನೀಯರ ಕೃತಿಗಳನ್ನು ಪರಿಚಯಿಸುವ ಪುಸ್ತಕಗಳನ್ನೂ ಪ್ರದರ್ಶಿಸಲಾಗಿತ್ತು. ಆನೆಗಳ ಪ್ರತಿರೂಪಗಳು ಮಳಿಗೆಗೆ ಮತ್ತಷ್ಟು ಆಕರ್ಷಣೆಯನ್ನು ತಂದವು.
ಕೊರಿಯಾ ಕನ್ನಡ ಕೂಟ (kkk) ವತಿಯಿಂದ ರಮ್ಯಾ ಗೌಡ ನೇತೃತ್ವದಲ್ಲಿ ಮೂಡಿಬಂದ ಕರ್ನಾಟಕದ ಜನಪದ ನೃತ್ಯ 'ಕೋಲಾಟ'ವು ಉತ್ಸಾಹಭರಿತವಾಗಿ ಪ್ರೇಕ್ಷಕರನ್ನು ರಂಜಿಸಿತು. ಅಧ್ಯಂತ್ ನರಹರಿ ಉಪಾಧ್ಯ ಅವರ ಫೂಟ್ ರೆಸೈಟಲ್ ಕಾರ್ಯಕ್ರಮಕ್ಕೆ ಶಾಂತಮಯ ಸ್ಪರ್ಶ ನೀಡಿದರೆ, ಅುಕ್ತ ಉಪಾಧ್ಯ ಅವರ ಭರತನಾಟ್ಯ ಪ್ರದರ್ಶನ ಶೈಲಿ ಮತ್ತು ಭಾವಾಭಿವ್ಯಕ್ತಿಯಿಂದ ವಿಶೇಷವಾಗಿ ಮೆಚ್ಚುಗೆಗೆ ಪಾತ್ರವಾಯಿತು.

20th May 2026
ಬಳ್ಳಾರಿ: ಮೇ,20-ಪ್ರಸಕ್ತ ಮುಂಗಾರಿನ ಮೊದಲ ಮಳೆಗೆ ನಗರಕ್ಕೆ ತಂಪು ತಂದರೂ. ಅದರಿಂದ ಅನೇಕ ನಷ್ಟಗಳನ್ನು ತಂದೊಡ್ಡಿದೆ.ಗಿಡ ಮರಗಳು ಧರೆಗುರುಳಿವೆ. ಮನೆಗಳು ಕುಸಿದಿವೆ. ತಗ್ಗು ಪ್ರದೇಶದಲ್ಲಿನ ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿವೆ. ಅನೇಕ ಕಡೆ ಮಳೆ ನೀರು ಸರಾಗವಾಗಿ ಹರಿಯದೆ ಮಡುಗಟ್ಟಿದೆ. ಅಂದಾಜಿನ ಪ್ರಕಾರ 40 ಮಿ.ಮೀ. ಮಳೆ ಬಿದ್ದಿದೆಯಂತೆ.
ನಿನ್ನೆ ಸಂಜೆ ನಗರದಲ್ಲಿ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ತೆರೆದ ಚರಂಡಿಗಳನ್ನು ಪಾಲಿಕೆ ಸರಿಯಾದ ರೀತಿಯಲ್ಲಿ ಸ್ವಚ್ಚಗೊಳಿಸದ ಕಾರಣ ಅವು ತುಂಬಿ ಹರಿದು ರಸ್ತೆಗಳ ಮೂಲಕ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿವೆ.
ಬೀಸಿದ ಬಿರುಗಾಳಿಗೆ ಎಪಿಎಂಸಿ ಸೇರುದಂತೆ ಅನೇಕ ಕಾಲೋನಿಗಳಲ್ಲಿನ 500 ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಬಿಸಿಲುನ ತಾಪ ತಡೆಯಲು ಕಂಟೋನ್ ಮೆಂಟ್ ಬಳಿ ಹಾಕಿದ್ದ ಹಸಿರು ಪರದೆ ವ್ಯವಸ್ಥೆ ಕುಸಿದು ಬಿದ್ದಿದೆ.
ಇನ್ನು ಕೋಟ್ಯಾಂತರ ರೂಪಾಯಿ ವೆಚ್ಚದಿಂದ ಅಭಿವೃದ್ಧಿ ಪಡಿಸಿದ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಮಳೆ ನೀರು ಹೊರಗೆ ಹರಿದು ಹೋಗುವ ಅವ್ಯವಸ್ಥೆಯಿಂದ ಸಿಂಥಟಿಕ್ ಟ್ರಾಕ್, ಸುತ್ತಮುತ್ತ ನೀರು ಮಲೆ ನಿಂತಿದೆ.
ಅನೇಕ ಕಡೆಗಳಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಹ ಉರುಳಿ ಬಿದ್ದಿವೆ. ಇದರಿಂದ ರಾತ್ರಿ ಇಡೀ ಅನೇಕ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು.
ಅವಾಂತರಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಈಗಲೇ ಪಾಲಿಕೆ ತೆರೆದ ಚರಂಡಿ, ರಾಜಕಾಲುವೆಗಳಲ್ಲಿನ ಹೂಳನ್ನು ತೆಯುವ ಕಾರ್ಯ ಭರದಿಂದ ಸಾಗಬೇಕಿದೆ.

20th May 2026
ಬಳ್ಳಾರಿ, ಮೇ,20- ವೀ.ವಿ.ಸಂಘದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರಿಡಾ ವಿಭಾಗದಿಂದ ನಿನ್ನೆ ಬೆಳಗ್ಗೆ 9.00 ಗಂಟೆಗೆ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಾಹುಕಾರ್‍ಸತೀಶ್ ಬಾಬು ವಹಿಸಿದ್ದರು. ವಾರ್ಷಿಕ ಕ್ರೀಡಾ ಕೂಟವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ “ಸದೃಢ ದೇಹದಲ್ಲಿ ಸದೃಢ ಮನಸ್ಸು” ಎಂದು ತಿಳಿಸಿದರು.
ವಿಎಸ್ ಕೆ ವಿವಿ ಕುಲಸಚಿವ ಪ್ರೋ.ಎನ್.ಎಂ.ಸಾಲಿ ಯವರು ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡುತ್ತ ಎಲ್ಲಾ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ.ಜಿ.ಮಲ್ಲನಗೌಡ ಇವರು ಪ್ರಾಸ್ತಾವಿಕ ನುಡಿ ಮಾತನಾಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್.ಪಿ.ಜಯಪ್ರಕಾಶ್ ಗೌಡ, ಹೆಚ್.ಚಂದ್ರಶೇಖರ್ ಗೌಡ, ಡಾ.ಶಶಿದರ್.ಎ.ಕೆಲ್ಲೂರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್.ವೆಂಕಟೇಶ್‍ಗೌಡ, ಕಾರದಪುಡಿ ಮುದ್ದನಗೌಡ, ಅಕ್ಕಿ ಶಿವರಾಜ್ ಮತ್ತು ಡಿ.ನಂಜುಂಡಪ್ಪ ಮತ್ತು ವೀರಶೈವ ಪದವಿ ಪೂರ್ವ ಕಾಲೇಜಿನ ಸದಸ್ಯರಾದ ಮಹೇಶ್‍ಶ್ವರ ಸ್ವಾಮಿ ರವರು ಭಾಗವಹಿಸಿದ್ದರು. ವೀರಶೈವ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು 400ಕ್ಕು ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ ಕ್ರಿಡಾ ಕೂಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕವಿತಾ ಸಂಗನಗೌಡ.ಎಂ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ ಶರಣಬಸವ, ಮುಖ್ಯಸ್ಥರು ಸಸ್ಯಶಾಸ್ತ್ರ ವಿಭಾಗ ಇವರು ಸ್ವಾಗತಿಸಿದರು. ಡಾ.ವಿನೋದಕುಮಾರ, ಐ.ಕ್ಯೂ.ಎ.ಸಿ, ಸಂಯೋಜಕರು ಇವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕುಮಾರಿ.ರೇಖಾಶ್ರಿ.ಎಸ್. ಉಪನ್ಯಾಸಕರು, ಸಸ್ಯಶಾಸ್ರ್ತ ವಿಭಾಗ ವಂದಿಸಿದರು.

20th May 2026
ಬಳ್ಳಾರಿ, ಮೇ,20- ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಅವರ 200 ನೇಜನ ವಾರ್ಷಿಕೋತ್ಸ ವಸಂದರ್ಭದಲ್ಲಿ ಎಐಡಿಎಸ್‍ಓವತಿಯಿಂದ ಅಮರಾಪುರ ಗ್ರಾಮದಲ್ಲಿ ಮಕ್ಕಳ ಶಿಬಿರ ಸಂಘಟಿಸಲಾಗಿತ್ತು.ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಮುಖಂಡರು ಹಾಗೂ ಹೋರಾಟಗಾರರಾದ ವಿದ್ಯಾ ಅವರು, ಇಂದಿನ ಸಾಮಾಜಿಕ ವಾತಾವರಣ ಮೌಲ್ಯಗಳಿಲ್ಲದೆ ಕೊಳೆತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ನಮ್ಮದೇ ದೇಶದಲ್ಲಿ ನಿಸ್ವಾರ್ಥವಾಗಿ ದೇಶಕ್ಕಾಗಿ ಜೀವ ಕೊಟ್ಟ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿಳಿಸದೆ ಬರೀ ಮಾಕ್ರ್ಸ್ ಕಾರ್ಡ್‍ಗಳಲ್ಲಿ ಬರುವ ಅಂಕಿಗಳ ಹಿಂದೆ ಬಿದ್ದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದ-ರಿಂದ ಮಕ್ಕಳೆಲ್ಲರೂ ಮಹಾನ್ ವ್ಯಕ್ತಿಗಳ ಹೋರಾಟದ ಬದುಕು ಮತ್ತು ಅವರು ಪಾಲಿಸಿದ ನೈತಿಕತೆ ಪರಿಚಯಿಸುವುದರಿಂದ ಮಾತ್ರ ನಿಮ್ಮಲ್ಲಿ ಸದೃಢ ವ್ಯಕ್ತಿತ್ವರೂಪಿಸಲು ಸಾಧ್ಯ, ಎಂದು ಹೇಳಿದರು.
ಶಿಬಿರದ ಮೊದಲ ಗೋಷ್ಠಿಯಲ್ಲಿ ಜ್ಯೋತಿಬಾ ಫುಲೆ ಅವರ ಜೀವನ ಕಥೆಯನ್ನು ಹೇಳುತ್ತಾ, ಅಂದು ಪುಲೆ ಅವರು ಸಾಮಾಜಿಕ ಸಂಪ್ರದಾಯದ ವಿರೋಧದ ಮಧ್ಯೆ ಹೆಣ್ಣು ಮಕ್ಕಳಿಗಾಗಿವಮತ್ತು ದಲಿತ ದಮನಿತ ಮಕ್ಕಳಿಗಾಗಿ ಶಾಲೆಯನ್ನು ತೆರೆಯದಿದ್ದರೆ, ಇಂದು ನಾವ್ಯಾರೂ ಈ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಮತ್ತು ಸಮಾನವಾಗಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು, ಎಂದು ತಿಳಿಸಿದರು.
ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಒಂದೆಡೆ ಸರ್ಕಾರಗಳು ಇಂದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿವೆ. ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲಾಗುತ್ತಿದೆ. ಇದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಸಂಚು ಎಂದು ಹೇಳಿದರು.
ಶಿಬಿರದಲ್ಲಿ ಮನೋರಂಜನೆ ಆಟಗಳು, ಹಾಡುಗಳುಹಾಗೂ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳು ಕೆಲವು ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರು ಮತ್ತು ಸಾರ್ವಜನಿಕ ಶಿಕ್ಷಣ ಸಮಿತಿಯ ನಾಗರಾಜ,ಬಸವರಾಜ, ಪಾರ್ವತಿ, ನಾಗಮ್ಮ, ಲಕ್ಷ್ಮಿ, ಸುಂಕಪ್ಪ, ಎಐಡಿಎಸ್‍ಒ ಜಿಲ್ಲಾ ಕಾರ್ಯದಲ್ಲಿ ಮಂಜುನಾಥ ಮತ್ತು ಊರಿನ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

18th May 2026
ಬಳ್ಳಾರಿ, ಮೇ.18: ಬಳ್ಳಾರಿ ತಾಲೂಕಿನ ತಗ್ಗಿನ ಬೂದಿಹಾಳ ಗ್ರಾಮದಲ್ಲಿ ಎಐಡಿಎಸ್ಓ (ಆಲ್ ಇಂಡಿಯಾ ಡೆಮೊಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ನಮ್ಮ ತಗ್ಗಿನ ಬೂದಿಹಾಳ ಗ್ರಾಮದ ಶಾಲೆಯಲ್ಲಿ 120ಕ್ಕೂ ಹೆಚ್ಚಿನ ಮಕ್ಕಳು ಓದುತ್ತಿದ್ದು ಎಲ್ಲರೂ ರೈತ ಕೂಲಿ ಕಾರ್ಮಿಕರ ಮಕ್ಕಳು 5 ಕಿ.ಮೀ ದೂರವಿರುವ ಕಕ್ಕಬೇವಿನಹಳ್ಳಿ ಆರಂಭವಾಗುವ ಕೆಪಿಎಸ್ ಶಾಲೆಗೆ ಮಕ್ಕಳನ್ನು ಕಳುಹಿಸಲು ಸಾದ್ಯವಿಲ್ಲ, ನಮ್ಮ ಮಕ್ಕಳನ್ನು ಸೇರಿಸಲು ಒಪ್ಪಿಗೆ ಇರುವುದಿಲ್ಲ ಎಂದು ನಮ್ಮ ಊರಿನ ಶಾಲೆಗೆ ಸಮರ್ಪಕ ಸೌಲಭ್ಯಗಳನ್ನು ನೀಡಿ ನಮ್ಮ ಊರಿನಲ್ಲಿ ಶಾಲೆ ಉಳಿಯಬೇಕು ಎಂದು ತಗ್ಗಿನ ಬೂದಿಹಾಳ್ ಗ್ರಾಮದ ಪೋಷಕರು ಹಾಗು ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಬ್ಯಾನರ್ ಕಟ್ಟಿ, ಹೋರಾಟ ನಡೆಸಿದರು.
ನಂತರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ ಶಾಲೆಗಳನ್ನು ವಿಲೀನಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ತೆಗ್ಗಿನ ಬೂದಿಹಾಳ ಗ್ರಾಮದ ಶಾಲೆಯನ್ನು ಉಳಿಸಬೇಕೆಂದು ಗ್ರಾಮ ಪಂಚಾಯಿತಿಯ ಮುಂದೆ ಪಿಡಿಓ ಮುಖಾಂತರ ಡಿಡಿಪಿಐ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ ಅವರು ಮಾತನಾಡುತ್ತಾ... ನಮ್ಮೂರ ಶಾಲೆ ನಮ್ಮ ಊರಿನಲ್ಲಿ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ. ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ. ನಮ್ಮೂರ ಶಾಲೆಯನ್ನು ಮುಚ್ಚಲು/ವಿಲೀನಗೊಳಿಸಲು ನಮ್ಮ ಒಪ್ಪಿಗೆಯಿಲ್ಲ ಎಂದು.
ಅಷ್ಟೇ ಅಲ್ಲದೇ ಸರ್ಕಾರವು 1ನೇ ತರಗತಿಯಿಂದಲೇ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಮಾಧ್ಯಮ ಕೂಡ ಆರಂಭಿಸುತ್ತಿದೆ. ದ್ವಿಭಾಷಾ ಮಾಧ್ಯಮದ ಹೆಸರಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮ ಕಲಿಸಲು ಹೇರಿಕೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ತೆಗೆದು ಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದು ಜನರ ಆಗ್ರಹ.
ಈ ದೇಶದ ಶಿಕ್ಷಣಕ್ಕಾಗಿ ಹೋರಾಡಿದ ಮಹಾತ್ಮಾ ಜ್ಯೋತಿಬಾಫುಲೆ ಅವರದು ಈ ವರ್ಷ ಜನ್ಮ ದ್ವಿ ಶತಮಾನೋತ್ಸವ ಸಂದರ್ಭದಲ್ಲಿ ಅವರ ಜೀವನ ಹೋರಾಟದಿಂದ ಸ್ಫೂರ್ತಿ ಪಡೆದು ನಮ್ಮೂರ ಶಾಲೆಯನ್ನು ಉಳಿಸಿಕೊಳ್ಳಲು ಪಣತೊಡಣ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಶಾಂತ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ ನೀಲಮ್ಮ,
ವಂಡ್ರಮ್ಮ ಮತ್ತು ಪೋಷಕರು ಸಾಕಮ್ಮ, ಇನ್ನು ಹಲವರು ಉಪಸ್ಥಿತರಿದ್ದರು