


9th July 2026
ಬೆಂಗಳೂರ: ಕಲಾಭೂಮಿ ಕಂಬೈನ್ಸ್ ಅಡಿಯಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸುತ್ತಿರುವ "ಕುಡುಕ ನನ್ಮಕ್ಳು" ಚಿತ್ರದ ಮೊದಲನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. .
‘ತುಂಬಾ ಒಳ್ಳೆಯವರು’ ಅಡಿ ಬರಹ ಹೊಂದಿರುವ ಚಿತ್ರವು ಬೆಂಗಳೂರು ನಗರ ಹಾಗೂ ಹೊರ ವಲಯಗಳಲ್ಲಿ ಸುಮಾರು ಇಪ್ಪತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಿದ ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳಾದ ಚಂದ್ರಪ್ರಭ, ವಿನೋದ್ ಗೊಬ್ರಗಾಲ, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್, ಚೈತ್ರಾ ಕೊಟ್ಟೂರು ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಇದೆ.
ಚಿತ್ರದಲ್ಲಿ ಎರಡು ಹಾಡುಗಳಿದ್ದು ಸಾಹಿತ್ಯ ಮತ್ತು ಸಂಗೀತ ಮಂಜು ಕವಿ ಅವರದಿದೆ. ವಿನಯ್ ಗೌಡ ಛಾಯಾಗ್ರಹಣ, ಅಯುರ್ ಸಂಕಲನ, ಹಲವಾರು ರಿಯಾಲಿಟಿ ಶೋಗಳಿಗೆ ಹಾಸ್ಯ ಸಾಹಿತ್ಯವನ್ನೊದಗಿಸಿದ ವೆಂಕಟ್ರವರ ಸಂಭಾಷಣೆ, ಪಿ.ಆರ್ ಓ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಆಗಿದ್ದಾರೆ. ಅರುಣ ಎಲ್ ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್. ಹೆಚ್(ತುಮಕೂರು), ರವಿ ನಾಯಕ್, ನಿಂಗರಾಜು.ಬಿ, ಲೋಕೇಶ್ ಕೆ.ಎಸ್ ಮತ್ತು ಸಿದ್ದಲಿಂಗಯ್ಯ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ೨೫,೩೦,೩೫,೪೦ ವರ್ಷದ ನಾಲ್ವರು ವ್ಯಕ್ತಿಗಳ ಬದುಕಿನ ಮೂಲಕ ಕುಡಿತದ ಪರಿಣಾಮ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮನರಂಜನೆಯ ಮೂಲಕ ತೋರಿಸಲಾಗುತ್ತಿದ್ದು ಅರ್ಥಪೂರ್ಣ ಸಂದೇಶವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಆಸ್ಕರ ಕೃಷ್ಣ ತಿಳಿಸಿದ್ದಾರೆ. ದಸರಾ ಅಥವಾ ದೀಪಾವಳಿಗೆ ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
**
-ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬

28th June 2026
ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ-ಕೇಂದ್ರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಸಮಾಜ ಸೇವಕರು ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ವೀರಭದ್ರಯ್ಯ ಪೂಜಾರ ಮಾತನಾಡಿ ನಮ್ಮ ಭಾರತವು ಪೋಲಿಯೋ ರೋಗಮುಕ್ತ ದೇಶವಾಗಲು ಇಂದಿನ ಮತ್ತು ಹಿಂದಿನ ಸರ್ಕಾರಗಳು ತೀವ್ರಗತಿಯಲ್ಲಿನ ವ್ಯವಸ್ಥಿತ ಅನುಷ್ಠಾನ ಹಾಗೂ ರೂಪುರೇಷೆಯಂತೆ ಕಾರ್ಯ, ಅಧಿಕಾರಿಗಳ ಜೊತೆ ಜೊತೆಗೆ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ ಯಶಸ್ಸು ಸಾಧ್ಯವಾಗಿದೆ, ಭಾರತದ ಪಲ್ಸ್ ಪೋಲಿಯೋ ಅಭಿಯಾನ ವಿಶ್ವಕ್ಕೆ ಮಾದರಿ ಎಂದರು.
ಶಿಂದೊಳ್ಳಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಹಂಚಿನಮನಿಯವರು ಮಾತನಾಡಿ ಅಂಗವಿಕಲತೆಯನ್ನು ಭಾರತ ದೇಶವು ಮೆಟ್ಟಿ ನಿಲ್ಲಲು ಪ್ರತಿ ವರ್ಷ ನಡೆಸುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತಗಾ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸರಕಾರಿ ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

12th June 2026
ಬೈಲಹೊಂಗಲ ತಾಲೂಕಿನಲ್ಲಿ ಈ ವಾರದ ಆರಂಭದಲ್ಲಿ ಸೋಮವಾರದಿಂದ ಎರಡು ಮೂರು ದಿನ ಸುರಿದ ರಣ ಮಳೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿ ಈಗ ಬಿಡುವು ಕೊಟ್ಟಿದೆ. ಮೊದಲೇ ಉಳುಮೆ ಮಾಡಿ ಬಿತ್ತನೆ ಮಾಡಲು ಹೊಲ ಸ್ವಚ್ಛವಾಗಿ ಇಟ್ಟವಾಗಿ ಇಟ್ಟಕೊಂಡ ರೈತರು ಬಿತ್ತನೆ ಮಾಡುತ್ತಿದ್ದಾರೆ. ಇದು ರೈತರ ಅನ್ನದಾತರ ಮೊಗದಲ್ಲಿ ಮಂದಹಾಸಮುಡಿಸಿದೆ. ಮಳೆಯಾದಾರಿತ ಬೆಳೆಗಳಾದ ಸೊಯಾಬಿನ್, ಜೋಳ, ತೊಗರಿ, ಹತ್ತಿ, ಹೆಸರು, ಬಿತ್ತನೆ ಮಾಡುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಸಂತಸಗೊಂಡಿದ್ದಾರೆ. ರೈತರು ಕಬ್ಬು ಬಿಟ್ಟರೆ ಸೊಯಾಬಿನ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸೋಯಾಬಿನ್ ಬಿತ್ತಲು ಇನ್ನು ಒಂದು ತಿಂಗಳು ಅವಧಿ ಇದ್ದು ರೈತರು ಅವಸರ ಮಾಡದೆ ಸರಿಯಾದ ಹದ ಮತ್ತು ತೆವಂಶ ನೋಡಿಕೊಂಡು ಬಿತ್ತನೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರೈತರು ಸಾರಜನಕ, ರಂಜಕ, ಪೋಟ್ಯಾಷ್, ಗಂಧಕ ಸಾಕಷ್ಟು ಇರುವ ಸಂಯುಕ್ತ ಗೊಬ್ಬರ ಬಳಕೆಗೆ ಕೃಷಿ ತಜ್ಞರು ಸಲಹೆ ನೀಡುತ್ತಿದ್ದಾರೆ.

6th June 2026
ಕಾಸರಗೋಡು:- ಕರ್ನಾಟಕದೊಳಗೆ ಎಲ್ಲೂ ಕಾಣಸಿಗದ ಕನ್ನಡ ಗ್ರಾಮ ಗಡಿನಾಡು ಕಾಸರಗೋಡಿನಲ್ಲಿದೆ ಶಿವರಾಮ ಕಾಸರಗೋಡು ಅವರ ಪರಿಕಲ್ಪನೆಯ ಈ ಕನ್ನಡ ಗ್ರಾಮ ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಆಶ್ರಯ ಧಾಮವಾಗಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸುತ್ತಿರುವ ಪ್ರಧಾನ ಕೇಂದ್ರವಾಗಿ ಕನ್ನಡ ಗ್ರಾಮ ಕಾರ್ಯಾಚರಿಸುತ್ತಿರುವುದು ಅಭಿನಂದನೀಯ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಎಲ್.ಜಿ. ಜ್ಯೋತಿಶ್ವರ ಬೆಂಗಳೂರು ಹೇಳಿದರು.
ಮೂರುವರೆ ದಶಕಗಳ ಇತಿಹಾಸವಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಭೇಟಿಯಾಗಲು ಬಂದ ಜ್ಯೋತಿಶ್ವರ ದಂಪತಿಯವರನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ವತಿಯಿಂದ ಕನ್ನಡ ಗ್ರಾಮದಲ್ಲಿ ಗೌರವಿಸಲಾಯಿತು.
ಕಾಸರಗೋಡು ಬಹುಭಾಷಾ ಸಂಸ್ಕೃತಿಯ ನಾಡು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಭಾಷೆಗಳ ನಡುವೆ ಸೌಹಾರ್ದತೆಯನ್ನು ಕಾಯ್ದುಕೊಳ್ಳುವಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಆಂಗ್ಲ ಭಾಷಾ ವ್ಯಾಮೋಹವನ್ನು ಬದಿಗಿಟ್ಟು ಕಾಪಾಡುವ ಕೆಲಸ ನಮ್ಮದಾಗಬೇಕು. ಎಂದು ಜ್ಯೋತಿಶ್ವರ ಹೇಳಿದರು. ಕವಿ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನೆ ಸಲ್ಲಿಸಿ ಮಾತನಾಡಿದರು.ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಜ್ಯೋತಿಶ್ವರ ಅವರ ಧರ್ಮಪತ್ನಿ ಬೆಂಗಳೂರು ಜೈನ್ ಕಾಲೇಜಿನ ಇಂಗ್ಲೀಷ್ ವಿಭಾಗದ ನಿವೃತ್ತ ಮುಖ್ಯಸ್ಥೆ ರಂಜಿನಿ ಜ್ಯೋತಿಶ್ವರ ಅವರನ್ನು ಗೌರವಿಸಲಾಯಿತು. ಕೆ.ಕುಶಲಕುಮಾರ್ ಕನ್ನಡ ಗ್ರಾಮ ಶುಭ ಹಾರೈಸಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಧನ್ಯವಾದವಿತ್ತರು.
ಕನ್ನಡ ನಿಘoಟಿನ ಪ್ರಥಮ ಸಂಪಾದಕ ಬಹುಭಾಷಾ ಪಂಡಿತ ಎಲ್. ಗುಂಡಪ್ಪ ಅವರ ಸುಪುತ್ರ ಎಲ್.ಜಿ. ಜ್ಯೋತಿಶ್ವರ ಅವರು ಜಾಹೀರಾತು ಬ್ರಾಂಡ್, ವೈದ್ಯಕೀಯ ಸಂವಹನ ಕ್ಷೇತ್ರಗಳಲ್ಲಿ 57 ವರ್ಷ ಅನುಭವ ಸಂಪನ್ನ ವ್ಯಕ್ತಿಯಾಗಿರುವವರು. ಕನ್ನಡ ಹಿಂದಿ ಇಂಗ್ಲಿeಷ್ ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸಾಕ್ಷ ಚಿತ್ರಗಳನ್ನು,ನುಡಿ ಚಿತ್ರಗಳನ್ನು ಜಾಹೀರಾತುಗಳಿಗೆ ನಿರೂಪಣ ಸಾಹಿತ್ಯವನ್ನು ರಚಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಕಯ್ಯಾರ ರೈಗಳ ಬಗ್ಗೆ ಅಪಾರ ಅಭಿಮಾನವಿರುವ ಅವರು ರಾಷ್ಟ್ರ ಕವಿ ಮನೆಗಳಿಗೆ, ಐತಿಹಾಸಿಕ ಬೇಕಲ ಕೋಟೆಗೆ, ಕಾಸರಗೋಡು ಪಿಲಿ ಕ್ಕುoಜೆಯ ಯಕ್ಷ ಪುತ್ಥಳಿ ಬೊಂಬೆ ಮನೆಗೆ ಭೇಟಿ ನೀಡಿದ್ದಾರೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 2026 ನವಂಬರ್ 7 ಮತ್ತು 8 ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ- ಕರ್ನಾಟಕ ಉತ್ಸವಕ್ಕೆ ಬೆಂಗಳೂರಿನ ವಿವಿಧ ಸಂಘ-ಸಂಸ್ಥೆಗಳು ಟ್ರಸ್ಟ್ ಗಳ ಪ್ರಾಯೋಜಕತ್ವ ನೀಡುವ ಮೂಲಕ ಆರ್ಥಿಕ ಸಹಾಯ ನೀಡಲಾಗುವುದೆಂದು ಎಲ್. ಜಿ. ಜ್ಯೋತಿಶ್ವರ ಅವರು ಘೋಷಿಸಿದರು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇರಳ - ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ಯೋಜನೆಗಳಿಗೆ ಕರ್ನಾಟಕ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿ ಚರ್ಚೆ ನಡೆಸಲಾಗುದೆoದು ಹೇಳಿದರು.