ರಂಗ ಕಲೆ ಗೀಳು ಒಮ್ಮೆ ಹಚ್ಚಿಕೊಂಡ ಕಲಾವಿದರು ಆ ಕ್ಷೇತ್ರವನ್ನು ಬಿಡಲು ಅಸಾಧ್ಯ. ಅದೇ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಲಾವಿದರು ನಮ್ಮ ಮುಂದೆ ಸಾಕಷ್ಟಿದ್ದಾರೆ. ರಂಗಭೂಮಿಯಲ್ಲಿ ವಿಶಿಷ್ಠ ಸಾಧನೆ ಮಾಡಿದ ಬಿ.ಟಿ.ಮಂಜುನಾಥ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ.
ತುಮಕೂರು ಜಿಲ್ಲೆಯ ತಿಪಟೂರಿನ ದಿವಂಗತ ತಿಮ್ಮಯ್ಯ ಬಿ.ಟಿ. ಕಮಲಮ್ಮ ದಂಪತಿಗಳ ದ್ವಿತೀಯ ಪುತ್ರ ಬಿ.ಟಿ. ಮಂಜುನಾಥ ಈತ ಚಿಕ್ಕಂದಿನಲ್ಲಿಯೇ ನಾಟಕದ ಗೀಳು ಬೆಳೆಸಿಕೊಂಡು ನಾಟಕಗಳಲ್ಲಿ ಬಣ್ಣ ಹಚ್ಚಿದವರು. ಈ ಕಲೆ ಇವರ ತಾತನಿಂದ ಬಳುವಳಿಯಾಗಿ ಬಂದಿರುವುದು ವಿಶೇಷ. ತಿಪಟೂರಿನ ಕೋಟೆ ತಿಮ್ಮ ನಾಯಕ ಕಂಸನ ವಧೆ ನಾಟಕದಲ್ಲಿ ಕಂಸನ ಪಾತ್ರಧಾರಿಯಾಗಿ ಅಭಿನಯಿಸಿ ತಾಲೂಕಿನಾದ್ಯಂತ ಹೆಸರುಗಳಿಸಿದ್ದರು. ಇವರ ಈ ಕಲೆ ಮೊಮ್ಮಗ ಮಂಜುನಾಥನಿಗೆ ಬಳುವಳಿಯಾಗಿ ಬಂದಿದೆ. ಇವರು ಎ.ಎನ್. ಮೂರ್ತಿಯವರ ಅಭಿನಯ ತರಂಗ ಸಂಸ್ಥೆಯಲ್ಲಿ ನಾಟಕದ ವಿಷಯದಲ್ಲಿ ಪದವಿ ಪಡೆದು ತನ್ನ ಗೆಳೆಯರನ್ನು ಸೇರಿಸಿಕೊಂಡು 'ದರ್ಪಣ ಕಲಾವಿದರು' ಎಂಬ ನಾಟಕ ಸಂಸ್ಥೆ ಕಟ್ಟಿದರು. ಮಂಜುನಾಥ್ರವರು ವೃತ್ತಿಯಲ್ಲಿ ಅಂಚೆ ಇಲಾಖೆಯಲ್ಲಿ ಹಿರಿಯ ಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಾ ಪ್ರವೃತ್ತಿಯಲ್ಲಿ ರಂಗಭೂಮಿಯಲ್ಲಿ ಕಲಾಸೇವೆಯನ್ನು ಸಲ್ಲಿಸಿದ್ದಾರೆ.
೧೯೯೯ರಲ್ಲಿ ಇವರು ತನ್ನ ಗೆಳೆಯರೊಂದಿಗೆ ಸೇರಿ ಎಸ್.ಎಲ್.ಎನ್. ಸ್ವಾಮಿಯವರ ನಿರ್ದೇಶಕದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ನೆನಪಿಗಾಗಿ ಪ್ರಪಂಚದ ಅತೀ ದೊಡ್ಡ ನಾಟಕ ೫೧ ಗಂಟೆಗಳ ಮಹಾಭಾರತ ಪೂರ್ತಿಕತೆಯ, ನಾಟಕ 'ಸಾರಥ್ಯ' ಹಾಗೂ ಪ್ರಪಂಚದ ಅತೀ ಚಿಕ್ಕ ನಾಟಕ 'ಅಣು' ಎಂಬ ೨೪.೧೩ ಸೆಕೆಂಡು ನಾಟಕ "ಮಾಡಿ ಲಿಮ್ಮಾ ದಾಖಲೆ ವಿಶ್ವದಾಖಲೆ ಮಾಡಿದ್ದಾರೆ. ಇವರ ರಂಗಭೂಮಿ ಸೇವೆ ಗುರ್ತಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಇವರ ಕಲಾಸೇವೆಯನ್ನು ಗುರ್ತಿಸಿ ೨೦೧೧ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಿದರು. ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ರಂಗಭೂಮಿಯ ದೈತ್ಯ ಪ್ರತಿಭೆಗಳಾದ ಸಿ.ಜಿ.ಕೆ., ಆರ್. ನಾಗೇಶ್, ಅಮರದೇವ, ಮೈನಾ ಚಂದ್ರು, ಅನಂತಕೋಟೆ, ಕೆ. ಚೌಡಪ್ಪ, ಬಿ.ಜಿ. ರಾಮಕೃಷ್ಣ ಮುಂತಾದ ನಿರ್ದೇಶಕರ ಜೊತೆ ಕೆಲಸ ಮಾಡಿ ರಂಗಭೂಮಿಗೆ ಉತ್ತಮ ನಾಟಕಗಳನ್ನು ನೀಡಿದ್ದಾರೆ. ಹಾಗೆಯೇ ರಂಗಭೂಮಿಯ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪ್ರೀತಿ ಪಾತ್ರರಾಗಿದ್ದಾರೆ. ಸುಧಾಕರ್ ಸಾತ್ವಿಕ್ರವರ ನಿರ್ದೇಶನದಲ್ಲಿ ಪಿ. ಲಂಕೇಶ್ರವರ 'ಕೆರೆಗಳು' ನಾಟಕವನ್ನು ಬಾಂಬೆ ಕರ್ನಾಟಕ ಸಂಘದಲ್ಲಿ ಅಭಿನಯಿಸಿ ಉತ್ತಮ ತಂಡವೆAದು ಹೆಸರು ಗಳಿಸಿತ್ತು. ಮೈನಾ ಚಂದ್ರುರವರ ನಿರ್ದೇಶನದಲ್ಲಿ -'ಮಾರನಾಯಕ', 'ಸಾಕ್ಷಿ ಕಲ್ಲು', 'ದೇವರಾಯಣ''ಮೀನಾಕ್ಷಿ ಮರ್ಡರ್ ಮಿಸ್ಟ್ರಿ'ಇನ್ನೂ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಇವರು ಗಿರೀಶ್ ಕಾರ್ನಾಡ್ರವರ 'ತಲೆದಂಡ, 'ಯಯಾತಿ', 'ನಾಗಮಂಡಲ', 'ಹೆಜ್ಜೆಗೊಂದು ಗಂಡು', 'ಹಾವು ಹರಿದಾಡತಾವ', 'ಅಪ್ಪ', 'ಸಾವು ಕಾಣದ ಆತ್ಮಹತ್ಯೆ' ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಇವರ ಸಂಸ್ಥೆಯಿAದ 'ದಾರಿಯಾವುದಯ್ಯಾ ಮುಂದೆ', 'ದೇವರಾಯಣ', 'ರೊಟ್ಟಿ ರೊಣ್ಣ', 'ಏಕಲವ್ಯ' ನಾಟಕಗಳು. ಪ್ರಸಾರಗೊಂಡಿವೆ. 'ಕಾವ್ಯಕನ್ನಿಕಾ', 'ಗೌರಿ', 'ಕುಸುಮ' ಕಥೆಗಳು ಧಾರವಾಹಿಗಳಾಗಿ ದೂರದರ್ಶನದಲ್ಲಿ ಪ್ರಸಾರವಾಗಿವೆ. 'ಕಾರು ಬಂತು ಕಾರು', 'ಸಾವಿನಂಚಿನಲ್ಲಿ ಮಾನವ', 'ಕುಸುಮ', 'ಮಧುಮಾಸ', 'ಗೌರಿ', 'ನಿರ್ಣಯ', 'ಅನಿರೀಕ್ಷಿತ ಧಾರವಾಹಿಗಳಿಗೆ ಸಹ ನಿರ್ದೆಶಕರಾಗಿ ಕೆಲಸ ಮಾಡಿದ್ದಾರೆ.
ಇವರು ಬಾಂಬೆ, ದೆಹಲಿ, ಕಾಸರಗೋಡು, ಕಾಶಿ, ಗೋವಾ, ಹೈದರಾಬಾದ್, ಲಕ್ಕೋ, ಹಾಗೂ ಹೊರದೇಶ ನೇಪಾಳಗಳಲ್ಲಿ ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಹೆಸರು ಮಾಡಿದ್ದಾರೆ. ಮದಕರಿನಾಯಕ, ಮಹರ್ಷಿ ವಾಲ್ಮೀಕಿ, ಸಿಂಧೂರ ಲಕ್ಷ್ಮಣ ಕಥೆಗಳನ್ನು ನಾಟಕಕ್ಕೆ ರೂಪಾಂತರ ಮಾಡುತ್ತಿದ್ದಾರೆ.
ರಂಗಭೂಮಿಯಲ್ಲಿ ಅಗಾಧ ಪ್ರತಿಭೆ ಇರುವ ಇವರಿಗೆ ಸೂಕ್ತ ಸಹಕಾರ ಸಿಕ್ಕರೆ ಇನ್ನು ಎತ್ತರಕ್ಕೇರುತ್ತಾರೆ. ಇಂತಹ ಕಲಾವಿದರನ್ನು ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಮಾಜ ಗುರ್ತಿಸಬೇಕಾಗಿದೆ. ಇವರಿಗೆ ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲಿ ಮತ್ತು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಸಿಗುವಂತಾಗಲಿ ಎಂದು ಹಾರೈಸೋಣ.
ಲೇಖನ- ಸಿ.ವಾಯ್.ಮೆಣಸಿನಕಾಯಿ
ನೇಸರಗಿ, ತಾ- ಬೈಲಹೊಂಗಲ ಜಿ-ಬೆಳಗಾವಿ
ಮೊ-8050168504







