ಬೈಲಹೊಂಗಲ- ನಗರ ಹಾಗೂ ತಾಲೂಕಿನದ್ಯಾoತ ಪ್ರಥಮ ಪೂಜಿತ ವಿನಾಯಕನ ಆಗಮನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ತಾಲೂಕಿನದ್ಯಾoತ ಬರದ ಛಾಯೆ ಇದ್ದರು ಗಣೇಶೋತ್ಸವದ ಸಿದ್ಧತೆ ಭರದಿಂದ ಸಾಗಿವೆ.
ಮನೆ-ಮನೆಗಳಲ್ಲಿ ಹಬ್ಬದ ತಯಾರಿ ಆರಂಭಗೊಂಡಿದ್ದರೆ, ಸಾರ್ವಜನಿಕ ಗಣೇಶೋತ್ಸವದ ಯುವಕ ಮಂಡಳಿಗಳು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಬೃಹತ್ ಮಂಟಪ ನಿರ್ಮಾಣ ಮಾಡುತ್ತಿದ್ದಾರೆ. ಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ವಿವಿಧ ಬಗೆಯ ವಸ್ತುಗಳಿಂದ ಅಲಂಕಾರ ಮಾಡುತ್ತಿದ್ದಾರೆ. ಗಣೇಶನ ವಿವಿಧ ದೇವರ ರೂಪ, ಆಕಾರ, ಸ್ವರೂಪದ ಮೂರ್ತಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಗ್ಗೆ ಇಟ್ಟಿವೆ. ಗಲ್ಲಿ ಬಾಯ್ಸ್ ಚಂದಾ ವಸೂಲಿಗೆ ಇಳಿದಿದ್ದು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದಾರೆ. ಮಕ್ಕಳು ಕೂಡ ಏನು ಕಮ್ಮಿ ಇಲ್ಲಾ ಕೈಲ್ಲೊಂದು ರಶೀದಿ ಬುಕ್ ಹಿಡಿದುಕೊಂಡು ಮನೆ ಮನೆ ತೆರಳಿ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡ ಗಟ್ಟಿ ಗಣೇಶ ಕಾಣಿಕೆ ಸಂಗ್ರಹಣೆ ಮಾಡುತ್ತಿದ್ದಾರೆ. ಪಡ್ಡೆ ಹುಡುಗರು ಗಣೇಶನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸರ್ಕಾರ ನೀಡಿರುವ ಒತ್ತು ಹಾಗೂ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮತ್ತು ರಾಸಾಯನಿಕಯುಕ್ತ ಬಣ್ಣಗಳ ಬಳಕೆಗೆ ಇರುವ ನಿರ್ಬಂಧದ ನಡುವೆಯೇ ತೆರೆ ಮರೆಯಲ್ಲಿ ವಿವಿಧೆಡೆ ಪಿಒಪಿ ಗಣಪನ ಮೂರ್ತಿಗಳ ತಯಾರಿ ನಡೆಯುತ್ತಿರುವುದು ಕಂಡು ಬರುತ್ತಿದೆ.
ಕಳೆದ ವರ್ಷ ಸರ್ಕಾರ ಹಾಗೂ ವಿವಿಧ ಪರಿಸರ ಸಂರಕ್ಷಣೆ ಮಂಡಳಿಯ ಪ್ರಚಾರದಿಂದ ಪರಿಸರ ಪೂರಕ ಮಣ್ಣಿನ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಸಾರ್ವಜನಿಕರು ಕೂಡ ಪರಿಸರಕ್ಕೆ ಹಾನಿಯಾಗದ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಆಸಕ್ತಿ ತೋರಿದ್ದರು. ಆದರೆ, ಬೇಡಿಕೆಗೆ ತಕ್ಕಷ್ಟು ಮಣ್ಣಿನ ಮೂರ್ತಿ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡಿರುವ ಕೆಲವು ಕಲಾವಿದರು ಪಿಒಪಿ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ. . ಗಣೇಶೋತ್ಸವಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ ಮೂರ್ತಿ ತಯಾರಕರು ಕಳೆದ ಮೂರು ತಿಂಗಳಿನಿಂದಲೇ ಪಶ್ಚಿಮ ಬಂಗಾಳದ ಕೋಲ್ಕತ್ತಾ ಕಲಾವಿದರು ಮತ್ತು ಕಾರ್ಮಿಕರು ಟೆಂಟ್ಗಳನ್ನು ನಿರ್ಮಿಸಿಕೊಂಡು ಮೂರ್ತಿಗಳ ತಯಾರಿಕೆಯಲ್ಲಿ ತಮ್ಮ ಕೈಚಳಕ ನಡೆಸುತ್ತಿದ್ದಾರೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಪುಟ್ಟ ಗಣೇಶನ ಮೂರ್ತಿಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಬೃಹತ್ ಗಾತ್ರದ ಮೂರ್ತಿಗಳವರೆಗೆ ವಿವಿಧ ಮಾದರಿ ಸಿದ್ಧಪಡಿಸಲಾಗುತ್ತಿದೆ.
ಗಣೇಶನ ವಿವಿಧ ಭಂಗಿ,ವಿನ್ಯಾಸ, ಅಲಂಕಾರ ಮತ್ತು ಬಣ್ಣಗಳಲ್ಲಿ ಮೂರ್ತಿಗಳನ್ನು ರೂಪಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರ್ತಿಗಳ ಗಾತ್ರ ಹಾಗೂ ಬೆಲೆಯಲ್ಲೂ ಸಾಕಷ್ಟು ವ್ಯತ್ಯಾಸವಿದೆ. ನಗರದಲ್ಲಿ 1 ರಿಂದ 20 ಅಡಿವರೆಗೆ ಅಡಿಯಿಂದ ಸುಮಾರು ₹200ರಿಂದ ಆರಂಭವಾಗುವ ಪುಟ್ಟ ಗಣೇಶನ ಮೂರ್ತಿಗಳು ₹40 ಸಾವಿರದವರೆಗೂ ಮಾರಾಟಕ್ಕೆ ಸಿದ್ಧವಾಗಿವೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮಾತ್ರ ಇನ್ನೂ ದೊಡ್ಡ ಗಾತ್ರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಅವುಗಳ ತಯಾರಿ ಪ್ರತ್ಯೇಕವಾಗಿ ನಡೆಯುತ್ತಿದೆ. ಗಣೇಶ ಹಬ್ಬದ ಅಂಗವಾಗಿ ಭರತ ನಾಟ್ಯ, ಆರ್ಕೆಸ್ಟ್ರಾ, ನೃತ್ಯ, ಸಂಗೀತ ಮುಂತಾದ ಸಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಂಗೋಲಿ, ಚಿತ್ರ ಕಲೆ, ಮನರಂಜನೆ ಆಟಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.







