ಕಾಸರಗೋಡು ನಗರ, ಸೆ.5: ಭಗವಾನ್ ಶ್ರೀಕೃಷ್ಣ ಸಾರಿದ ಸಂದೇಶ ಎಂದೆಂದೂ ಪ್ರಸ್ತುತ. ಗೀತೋಪದೇಶದ ಮೂಲಕ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳಿದ ನೀತಿ ಜಗತ್ತಿಗೇ ಮಾರ್ಗದರ್ಶಿ. ಈ ಎಲ್ಲಾ ಸಂದೇಶಗಳನ್ನು ಪಾಲಿಸಬೇಕೆಂದು ಕ್ಷೇತ್ರ ಏಕೀಕರಣಾ ಸಮಿತಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಆರಮಂಗಾನ ಹೇಳಿದರು.
ಅವರು ಕಾಸರಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜರಗಿದ 24 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗೂ 15 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇರಳ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ರಾವ್ ಬೋವಿಕಾನ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಾಹಿತಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅತಿಥಿಯಾಗಿ ಭಾಗವಹಿಸಿದ್ದರು. ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ಪುರುಷೋತ್ತಮ ರಾವ್ ಧರೇರ್ಕಾ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೀತಾಜ್ಞಾನ ಯಜ್ಞ ಕಾಸರಗೋಡು ಘಟಕದ ಸಂಚಾಲಕಿ ನೂತನ ಕುಮಾರಿ ಕೆ, ಲಕ್ಷ್ಮೀಶ ರಾವ್ ಪಟೇಲ್ ಲಂಡನ್, ಡಾ|ನರಸಿಂಹ ಬಲ್ಲಾಳ್, ಅಷ್ಟಮಿ ಸಮಿತಿ ಸಂಚಾಲಕಿ ಅಭಿಲಾಷ ಎಂ.ರಾಜ್, ಜಯಶ್ರೀ ದಿವಾಕರ್, ಶಿಲ್ಪಾ ವರಪ್ರಸಾದ್,ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು, ನವೀನ್ ಕಾಸರಗೋಡು, ನಿಹಾಲ್ ಜಿ.ಕೆ., ತ್ರಿಷಾ ಜಿ.ಕೆ., ಕುಶಾಲ ಕುಮಾರ್, ನಿರ್ಮಲಾ ಶ್ರೀಕಾಂತ್ ಕೃಪಾನಿಧಿ, ಯೋಗೀಶ್ ಕೋಟೆಕಣಿ, ಮಹಾಲಿಂಗ ನಾಯಕ್, ಮುರಳಿ ಪಾರೆಕಟ್ಟೆ, ದಿವಾಕರ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.
ಮುದ್ದುಕೃಷ್ಣ ವೇಷ ಸ್ಪರ್ಧೆ ಹಾಗೂ ಮೊಸರು ಕುಡಿಕೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಷ್ಟಮಿ ಸಮಿತಿ ಅಧ್ಯಕ್ಷೆ ಕಾವ್ಯ ಕುಶಲ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂಚಾಲಕ ಕೆ.ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಅಷ್ಟಮಿ ಸಮಿತಿ ಜೊತೆ ಕಾರ್ಯದರ್ಶಿ ಅಶ್ವಿನಿ ಕೆ.ರಾವ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ತತ್ತ್ವಮಸಿ ಮಹಿಳಾ ಭಜನಾ ಮಂಡಳಿ ಕೂಡ್ಲು ಮತ್ತು ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಕೂಡ್ಲು ಅವರಿಂದ ಭಜನಾ ಸಂಕೀರ್ತನೆ ನಡೆಯಿತು.







