ಬೈಲಹೊಂಗಲ - ತಾಲೂಕಿನದ್ಯಾoತ ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿಯನ್ನು ಸೋಮವಾರ ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಮಹಿಳೆಯರು ಮಕ್ಕಳು ಕುಟುಂಬ ಸಮೇತರಾಗಿ ಮಣ್ಣಿನ ನಾಗಪ್ಪನಿಗೆ ವಿಧಿ ಪೂರ್ವಕವಾಗಿ ಪೂಜೆ ಸಲ್ಲಿಸಿ ಹಾಲು ಎರೆದರು. ಬೆಳಿಗ್ಗೆ ಎದ್ದು ಜಳಕ ಮಾಡಿ, ಮನೆ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಸಾರಿಸಿ ಮಡಿ ಹುಡಿಯಿಂದ ನಾಗಪ್ಪನಿಗೆ ಪೂಜೆ ಸಲ್ಲಿಸಿದರು. ತರ ತರಹದ ಉಂಡಿ, ಚಕ್ಕುಲಿ, ಕೊಡಬಳೆ, ಅರಳು, ಕಡ್ಲೆ ಉಸುಳಿ, ಕೊಬ್ಬರಿ ಬೆಲ್ಲ, ತಂಬಿಟ್ಟು, ಪಾಯಸ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು. ಮಕ್ಕಳು ಮನೆಯಲ್ಲಿ ದೊಡ್ಡವರು ಊರ ಮುಂದಿನ ಮರಕ್ಕೆ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರು. ನಾಗರ ಕಲ್ಲು ಮತ್ತು ಹುತ್ತಿಗೆ ಅರಿಶಿನ, ಕುಂಕುಮ, ತೆಂಗಿನ ಕಾಯಿ, ಹೂವು, ಹಣ್ಣು, ಕಡ್ಡಿ, ಕರ್ಪುರ ತಂದು ಪೂಜೆ ಸಲ್ಲಿಸಿ . ಕುಟುಂಬದ ಸದಸ್ಯರಿಗೆ ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡು ಎಂದು ನಾಗದೇವತೆಯಲ್ಲಿ ಬೇಡಿಕೊಂಡರು. ಈ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು (ಪಂಚಮಿ) ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಇಲ್ಲಿಂದ ಹಿಂದೂ ಹಬ್ಬಗಳ ಸರಮಾಲೆ ಆರಂಭ ಗೊಳ್ಳುತ್ತವೆ. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧವನ್ನು ಗೌರವಿಸುವ ಈ ಶುಭ ದಿನದಂದು ನಾಗದೇವತೆಯನ್ನು (ಸರ್ಪ) ಭಕ್ತಿಯಿಂದ ಪೂಜಿಸಲಾಗುತ್ತದೆ. ಹಬ್ಬದ ಮುಖ್ಯ ಮಹತ್ವ ರೈತನ ಮಿತ್ರ ಸರ್ಪವು ಮುಂಗಾರು ಮಳೆಯ ಸಮಯದಲ್ಲಿ ಗದ್ದೆಗಳಲ್ಲಿ ಬೆಳೆಗಳನ್ನು ನಾಶಮಾಡುವ ಇಲಿ ಹಾಗೂ ಕೀಟಗಳನ್ನು ತಿಂದು ಹಾವುಗಳು ರೈತನ ಪೈರನ್ನು ರಕ್ಷಿಸುತ್ತವೆ. ಈ ಕೃತಜ್ಞತೆಗಾಗಿ ನಾಗರ ಪಂಚಮಿಯನ್ನು ಪರಿಸರಸ್ನೇಹಿ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ಬಾಂಧವ್ಯದ ಸಂಕೇತವಾದ ಹಬ್ಬವೂ ಹೌದು. ಪೂಜೆಯ ನಂತರ ಹುತ್ತದ ಪವಿತ್ರ ಮಣ್ಣನ್ನು ಒಡಹುಟ್ಟಿದವರ ಬೆನ್ನಿಗೆ ಹಚ್ಚಿ ಶುಭ ಹಾರೈಸುವ ವಿಶಿಷ್ಟ ಸಂಪ್ರದಾಯವಿದೆ. ದೋಷ ನಿವಾರಣೆಗಾಗಿ ದಿನ ನಾಗಾರಾಧನೆ ಮಾಡುವುದರಿಂದ ಜಾತಕದಲ್ಲಿರುವ ಕಾಳಸರ್ಪ ದೋಷ ಹಾಗೂ ರಾಹು-ಕೇತು ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿ ಸಂಭ್ರಮ
ಇವರಿಂದ: C.Y. MENASHINAKAI MENASHINAKAI
ಅಅಅ

Comments





