ಬೈಲಹೊಂಗಲ- ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವರ' ಎಂದರೆ ವರವನ್ನು ನೀಡುವವಳು ಮತ್ತು 'ಲಕ್ಷ್ಮಿ' ಎಂದರೆ ಸಂಪತ್ತಿನ ದೇವತೆ. ಈ ದಿನ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಐಶ್ವರ್ಯ ನೆಲೆಸುತ್ತದೆ ಎಂಬ ಗಾಢ ನಂಬಿಕೆಯಿದೆ. ವರ ವರಮಹಾಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ದಾ ಭಕ್ತಿಯಿಂದ ಪೂಜಿಸಿದರು. ಮನೆ ಸ್ವಚ್ಛಗೊಳಿಸಿ, ಶುದ್ಧ ಮಾಡಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ಸುಂದರವಾದ ಮಂಟಪ ನಿರ್ಮಿಸಿ ಅದಕೆ ತರ ತರಹದ ಹೂವು, ಬಾಳೆ ಕಂಬ, ಮಾವಿನ ತೋರಣ, ವಿದ್ಯುತ್ ದೀಪ ಹಾಗೂ ಅಲಂಕಾರಿಕ ವಸ್ತುಗಳಿಂದ ಶೃಂಗಾರ ಮಾಡಿದ್ದರು. ಮಂಟಪದಲ್ಲಿ ಪೀಠ ಇಟ್ಟು ಅದರ ಮೇಲೆ ಕಲಶ ಸ್ಥಾಪನೆ ಸೀರೆ ಉಡಿಸಿ, ತಾಳಿ, ಆಭರಣಗಳನ್ನು ಧಾರಣೆ ಮಾಡಿ ಅರಿಶಿನ-ಕುಂಕುಮ ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಗಣೇಶ ಪೂಜೆಯೊಂದಿಗೆ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿದರು. ಒಂಬತ್ತು ಗಂಟಿನ ಹಳದಿ ದಾರವನ್ನು (ತೋರವಣ) ಪೂಜಿಸಿ ಕೈಗೆ ಕಟ್ಟಿಕೊಂಡರು. ಹೋಳಿಗೆ , ಕಡಬು, ಹುಗ್ಗಿ, ಪಾಯಸ, ಉಂಡಿ , ಕರ್ಜಿಕಾಯಿ, ಚಕ್ಕುಲಿ, ಕೊಡಬಳೆ ತಯಾರಿಸಿ ಸಿಹಿ ನೈವೇದ್ಯ ಅರ್ಪಿಸಿ ಆರತಿ ಮಾಡಿದರು. ತರ ತರದ ತಿಂಡಿ ತಿನಿಸುಗಳು, ಹಣ್ಣು ಹಂಪಲು, ಗರಿ ಗರಿ ನೋಟು ಮತ್ತು ನಾಣ್ಯಗಳನ್ನು ದೇವರ ಮುಂದೆ ಇಟ್ಟಿದ್ದರು. ವಿವಾಹಿತ ಮಹಿಳೆಯರು ತಮ್ಮ ಪತಿಯ ಆರೋಗ್ಯ, ಆಯುಷ್ಯ ಹಾಗೂ ಮಕ್ಕಳ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಸಾಯಂಕಾಲ ಮಹಿಳೆಯರು ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ಭೇಟಿ ಅರಿಶಿನ, ಕುಂಕುಮ, ತಾಂಬೂಲ, ಪ್ರಸಾದ ಸ್ವೀಕರಿಸಿದರು.
ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಇವರಿಂದ: C.Y. MENASHINAKAI MENASHINAKAI
ಅಅಅ






