15th April 2025
ಸಂವಿಧಾನ ಆಶಯಕ್ಕೆ ಧಕ್ಕೆ ಬಾರದಿರಲಿ : ಪ್ರೊ. ವಿಜಯ ನಾಗಣ್ಣವರ
ಬೆಳಗಾವಿ : ಪ್ರತಿಯೊಂದು ದೇಶದ ಸಂವಿಧಾನ ಆ ದೇಶವನ್ನು ನಡೆಸಲು ಇರುವ ಕಾನೂನಿನ ಪುಸ್ತಕವಷ್ಟೇ. ಆದರೆ ಭಾರತದ ಸಂವಿಧಾನ ನಮ್ಮ ಭವಿತವ್ಯದ, ಬದುಕಿನ ಪುಸ್ತಕ. ಅದರ ಆಶಯಕ್ಕೆ ಧಕ್ಕೆ ಬಾರದಿರಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರೊ. ವಿಜಯ ನಾಗಣ್ಣವರ ಅಭಿಪ್ರಾಯಪಟ್ಟರು.
ಎ. 14ರಂದು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜವಿಜ್ಞಾನ ವಿಭಾಗಗಳು ಮತ್ತು ಸಂವಿಧಾನ ಓದು ಅಭಿಯಾನ- ಕರ್ನಾಟಕ, ಬೆಂಗಳೂರು ಇವರ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಸಮಾರಂಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಪರಿಶ್ರಮದಿಂದ ಈ ದೇಶಕ್ಕೆ ಅತ್ಯುತ್ತಮ ಸಂವಿಧಾನ ಸಿಕ್ಕಿದೆ. ಈ ಸಂವಿಧಾನಕ್ಕೆ ಸಾವಿರಾರು ವರ್ಷಗಳ ಭವಿಷ್ಯವಿದೆ. ಹಿಂದೆ ಧರ್ಮ ಗ್ರಂಥಗಳು ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದವು. ಇಂದು ಸಂವಿಧಾನ ಸಮಾಜವನ್ನು ಮನ್ನಡೆಸುತ್ತಿದೆ. ಅಂಬೇಡ್ಕರ್ ಅವರ ಆಶಯಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಬುರ್ಕಾ ಸಂಸ್ಕೃತಿ ಕೇವಲ ಒಂದೇ ಧರ್ಮದಲ್ಲಿ ಇಲ್ಲ. ಈಗಲೂ ಕೂಡ ಬೇರೆ ಬೇರೆ ಧರ್ಮದವರು ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಧರಿಸುತ್ತಾರೆ. ವಸ್ತ್ರ, ಆಹಾರ ಅವರವರಿಗೆ ಬಿಟ್ಟದ್ದು. ಸರ್ವಜನಾಂಗದ ಶಾಂತಿಯ ತೋಟವಾದ ಈ ಭಾರತವು ಸಂವಿಧಾನದ ನೆರಳಿನಲ್ಲಿ ಹೀಗೆಯೇ ಮುಂದೆ ಸಾಗಬೇಕು. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ರಥ ಎಂದಿಗೂ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ಎಂ. ಜಿ. ಹೆಗಡೆ ಅವರು ಮಾತನಾಡುತ್ತಾ, ಚರಿತ್ರೆಯ ಬೇರುಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅದನ್ನು ಸರಿಪಡಿಸಿ ಅದಕ್ಕೆ ಹೊಸ ಕಾಯಕಲ್ಪ ನೀಡಿದರು. ಇದಕ್ಕಾಗಿ ಜೀವನ ಪರ್ಯಂತ ಹೋರಾಡಿದರು. ಅವರು ಹುಟ್ಟು ಹಾಕಿದ ಹೋರಾಟದ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ನಿಜದ ಸುದ್ದಿಗಿಂತ ಸುಳ್ಳಿನ ಸುದ್ದಿಯೇ ಸಮಾಜದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಇದರ ಹಿಂದೆ ಪ್ರಭುತ್ವವಿದೆ. ಇಂದಿನ ರಾಜಕೀಯ ವ್ಯವಸ್ಥೆ ಧರ್ಮದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ವ್ಯವಸ್ಥೆಯನ್ನು ದಾರಿ ತಪ್ಪಿಸುತ್ತಿದೆ. ವರ್ತಮಾನದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನವೇ ನಮಗೆ ದಾರಿದೀಪ ಎಂದರು.
ಶಿಬಿರದ ಮೊದಲ ದಿನ ಸಂವಿಧಾನ ರಚನೆ ಮತ್ತು ಮೂಲತತ್ವಗಳು ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಡಾ. ಗೋವಿಂದಪ್ಪ ಪಾವಗಡ, ಸಂವಿಧಾನ ಮತ್ತು ಮಹಿಳೆ ವಿಷಯದ ಕುರಿತು ಶಾಂತಿ ನಾಗಲಾಪುರ ಹಾಗೂ ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಕುರಿತು ಬಿ. ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯತೀತತೆಯ ಕುರಿತು ಆರ್ ರಾಮಕೃಷ್ಣ ಉಪನ್ಯಾಸಗಳನ್ನು ನೀಡಿದರು.
ನ್ಯಾಯವಾದಿ ಅನಂತ ನಾಯ್ಕ ಶಿಬಿರದ ಕುರಿತು ಅನಿಸಿಕೆಯನ್ನು ಹಂಚಿಕೊಂಡರು.
ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು. ಡಾ. ಪ್ರೀತಿ ಪಡದಪ್ಪಗೋಳ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಬೋಧಕವರ್ಗ, ರಾಚವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
13th April 2025
ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಸ್ಮಾರಕ ಕಮೇಟಿ ವತಿಯಿಂದ ಮೂರ್ತಿ ಮೆರವಣಿಗೆ ಹಾಗು ದೇಸೂರ ಗ್ರಾಮದಲ್ಲಿ ಪ್ರತಿಷ್ಠಾಪನೆ.
ಬೆಳಗಾವಿ ಅಂಬೇಡ್ಕರ್ ಉದ್ಯಾನವನದಿಂದ ದೇಸೂರ ಅಂಬೇಡ್ಕರ್ ಭವನವರೆಗು ದಿನಾಂಕ 12-04-2025 ಶನಿವಾರ ದಿಂದ ದಿನಾಂಕ 14-04-2025 ಸೋಮವಾರದ ವರೆಗೂ ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಯ ಮೆರವಣಿಗೆ ಹಾಗು ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಲಾಗುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿರುದ್ದಿಯ ಸಚಿವರಾದ ಲಷ್ಮಿ ಹೆಬ್ಬಾಳ್ಕರ್ ಮೂರ್ತಿ ನೀಡಿ ಸಹಕರಿಸಿದ್ದಾರೆ ಅದೆ ರೀತಿಯ ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಸ್ಮಾರಕ ಕಮಿಟಿ ಹಾಗು ದಲಿತ ಸಂಘರ್ಷ ಸಮಿತಿ ಗ್ರಾಮ ಪಂಚಾಯತ ಪರಶಿಷ್ಟ ಜಾತಿ ಉಪಾಧ್ಯಕ್ಷರಾದ ಕಾಶವ್ವ ವೈಜು ಕಾಂಬಳೆ ಇವರ ಸಯುಕ್ತದಲ್ಲಿ ಹಾಗು
ಅಂಬೇಡ್ಕರ್ ಗಲ್ಲಿಯ ಗುರು ಹಿರಿಯರ ಸಮ್ಮುಖದಲ್ಲಿ ಮತ್ತು ಗಲ್ಲಿಯ ಯುವಕರ ಸಮ್ಮುಖದಲ್ಲಿ ಮೂರ್ತಿಯ ಮೆರವಣಿಗೆ ಹಾಗು ದೇಸೂರ ಗ್ರಾಮದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು.
13th April 2025
ಬೆಳಗಾವಿ 13 ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.13.04.2025 ರಂದು ವೀರ ವೀರಾಗಿಣಿ ವೈರಾಗ್ಯ ನಿಧಿ ಅಕ್ಕಮಹಾದೇವಿ ಅವರ ಕುರಿತು ಉಪನ್ಯಾಸ ಜರುಗಿತು
ಶರಣೆ ದಾನಮ್ಮಾ ಝಳಕಿ ಅವರು ಉಪನ್ಯಾಸ ನೀಡಿದರು. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಮಹಾದೇವಿ ಭಾವ ಬಂಧನವನ್ನ ಕಳಿಚಿ ಭಾವ ದಿಗಂಬರಳಾಗಿ ಭೀಕರ ಕಾಡಿನಲ್ಲಿ ಅಮಾವಾಸ್ಯೆ ಕಾಗ೯ತ್ತಲಿನಲ್ಲಿ ಬೇಸಿಗೆಯ ಬಿಸಿಲಲ್ಲಿ ಕೊರೆಯುವ ಚಳಿಯಲ್ಲಿ ಹುಣ್ಣಿಮೆಯ ಚಂದಿರನ ಬೆಳದಿಂಗಳಲ್ಲಿ ತಮ್ಮ ಆರಾಧ್ಯ ದೈವ ಚೆನ್ನಮಲ್ಲಿ ಕಾರ್ಜುನ ನನ್ನು ಅರಸುತ್ತ ಹಸಿವಾದಡೆ ಭಿಕ್ಷಾನ್ನಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಆತ್ಮಸಂಗಾತಕ್ಕೆ ಚನ್ನಮಲ್ಲಿಕಾಜು೯ನನುಂಟು, ಎಂದು ಹೇಳುತ್ತ ಸಾಗಿದ ಶರಣೆಮಹಾದೇವಿ ಪಟ್ಟ ಪಾಡನ್ನು ತಿಳಿಸಿದರು.ಅಜ್ಞಾನದಿಂದ ಸುಜ್ಞಾನದ ಕಡೆ ಸಾಗುವುದು,ಮಾಯೆ ಯಾರನ್ನು ಬಿಟ್ಟಿಲ್ಲಾ ಏಕ್ರಾಗತೆ ಸಾದಿಸಬೇಕು ಎಂದು ಮಾತನಾಡಿದರು.
ಪ್ರಾರಂಭದಲ್ಲಿ ಸುರೇಶ ನರಗುಂದ, ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು,ಬಸವರಾಜ ಗುರನಗೌಡ್ರ,ವಿ ಕೆ ಪಾಟೀಲ,ಆನಂದ ಕಕಿ೯,ಸುನೀಲ ಸಾಣಿಕೊಪ್ಪ,ಬಸವರಾಜ ಬಿಜ್ಜರಗಿ, ಜಾನ್ವಿ ಘೋಪ೯ಡೆ, ಬಶೆಟ್ಟಿ ಅನಸೂಯ,ಅಕ್ಕಮಹಾದೇವಿ ತೆಗ್ಗಿ,ಜಯಶ್ರೀ ಚಾವಲಗಿ, ಮುಂ ವಚನ ವಿಶ್ಲೇಷಣೆ ಮಾಡಿದರು,ಪ್ರಶಾಂತ ಗುತ್ತಿಗೊಳಿ ದಾಸೋಹ ಸೇವೆಗೈದರು,ಸುರೇಶ ನರಗುಂದ ನಿರೂಪಿಸಿದರು.ಸುಜಾತಾ ಮತ್ತಿಕಟ್ಟಿ,ಅನ್ನಪೂರ್ಣ ಕಾಡಣ್ಣವರ,ವಿದ್ಯಾ ಕಕಿ೯, ಸಿದ್ದಪ್ಪ ಸಾರಾಪೂರಿ, ಅನೀಲ ರಘಶೆಟ್ಟಿ,ಬಸವರಾಜ ಗುರನಗೌಡರ,ಶೇಖರ ವಾಲಿಇಟಗಿ,ಬಸವರಾಜ ಮತ್ತಿಕಟ್ಟಿ ,ಮಹಾಂತೇಶ ಮೆಣಸಿನಕಾಯಿ,ಜ್ಯೋತಿ ಬದಾಮಿ,ಗುರುಸಿದ್ದಪ್ಪ ರೇವಣ್ಣವರ,ಬಿ ಪಿ ಜವಣಿ, ಸೋಮಶೇಖರ ಕತ್ತಿ, ನಾಗನಗೌಡ ರಾ ಪಾಟೀಲ,ಶಿವಾನಂದ ಲಾಳಸಂಗಿ ,ಬಿ ಬಿ ಮಠಪತಿ,ಶಿವಾನಂದ ನಾಯಕ,ಬಸವರಾಜ ಇಂಚಲ,ಬಸವರಾಜ ಬಿಜ್ಜರಗಿ, ತಿಗಡಿ ದಂಪತಿಗಳು ಶಂಕರ ಗುಡಸ,ಪ್ರಸಾದ ಹಿರೇಮಠ,ಸುನಂದಾ ಕೆಂಪಿಗೌಡರ ದಂಪತಿಗಳು, ಉಪಸ್ಥಿತರಿದ್ದರು.ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಬಸವ ಜಯಂತಿಗೆ ಎಲ್ಲರೂ ಆಗಮಿಸಿರಿ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವಿನಂತಿಸಿದರು,ಎಲ್ಲಸಂಘಟನೆ ಸೇರಿ ಯಶಸ್ವಿಗೊಳಿಸೋಣ,ಎಂದರು.ಸುರೇಶ ನರಗುಂದ ವಂದಿಸಿದರು.
13th April 2025
ಈ ದೇವಸ್ಥಾನ ಸ್ವರ್ಗಾನುಭವ ನೀಡುವ ಶಕ್ತಿ ಸ್ಥಾನ.
ರಾಮತೀರ್ಥನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಲೋಕಾರ್ಪಣೆಗೊಳಿಸಿದ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅಭಿಮತ.
ಅಂಕಲಗಿ. ಸುಖ ಶಾಂತಿ ಸಿಗುವ ಸ್ಥಳವೇ ದೇವಸ್ಥಾನ. ಆ ಭಾವವೇ ದೇವರು . . ಶುದ್ಧ ಮನಸ್ಸು, ಅತ್ಯುತ್ತಮ ಕಾಯಕ
ಸ್ವರ್ಗ ಸ್ರಷ್ಟಿಸುವ ಎರಡು ಮಾರ್ಗಗಳು. ಈ ದೇವಸ್ಥಾನ ಸ್ವರ್ಗಾನುಭವ ಕಲ್ಪಿಸುವ ಶಕ್ತಿ ಸ್ಥಾನ ಎಂದು ಬೆಳಗಾವಿ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಹೇಳಿದರು.. ಅವರು ಶನಿವಾರ ಸಂಜೆ ರಾಮತೀರ್ಥ ನಗರದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಯಿಂದ ಜೀರ್ಣೋದ್ದಾರಗೊಳಿಸಿ ಹೊಸ ವಿನ್ಯಾಸದಲ್ಲಿ ನಿರ್ಮಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆ, ೬ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ವನ್ನು ದೇವರಿಗೆ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸಿ ಉದ್ಘಾಟಿಸಿ, ದೇವಸ್ಥಾನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮೌಲ್ಯಯುತ ಬದುಕು ನಮ್ಮದಾಗಿಸಿಕೊಂಡು, ಸಮಾಜದೆಡೆಯಲ್ಲಿ ಅರ್ಥಪೂರ್ಣ ಹೆಜ್ಜೆ ನಮ್ಮದಾದಲ್ಲಿ ಸುಂದರ ಜೀವನ ನಮ್ಮದಾಗುವದು. ಈ ಕಾರ್ಯಸಿದ್ದಿ ಆಂಜನೇಯ ಭಕ್ತರ ಅತೀ ದೊಡ್ಡ ಶಕ್ತಿ ದೇವ ಎನ್ನುವದಕ್ಕೆ ಇಲ್ಲಿ ಕೂಡಿ, ಸಂಭ್ರಮಿಸುತ್ತಿರುವ ಅಸಂಖ್ಯಾತ ಭಕ್ತರೇ ಸಾಕ್ಷಿಯಾಗಿದ್ದು ಇಲ್ಲಿ ಜರುಗುವ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಇಲ್ಲಿಯ ಭಕ್ತರ ಉದ್ಧರಿಸಿ ನಾಡು ದೇಶ ಮತ್ತಷ್ಟು ಸಂಪನ್ನಗೊಳಿಸಲಿ ಎಂದು ಶುಭ ಹಾರೈಸಿದರಲ್ಲದೆ, ದೇವಸ್ಥಾನ ಕಟ್ಟಡದ ದಾನಿಗಳು ಶ್ರಮಿಕರು ಮತ್ತು ಗಣ್ಯರನ್ನು ಕಮಿಟಿ ಪರ ಸನ್ಮಾನಿಸಿ ಗೌರವಿಸಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ
ನಗರದ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ, ಎಲ್ಲಿ ನಿಸ್ವಾರ್ಥತೆ ಇರುತ್ತದೋ ಅಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿಯೇ ದೇವರು. ಹನುಮ ಜಯಂತಿ ದಿನದಂದು ದೇವಸ್ಥಾನ ಲೋಕಾರ್ಪಣೆಗೊಳ್ಳುತ್ತಿರುವದು ಇಲ್ಲಿಯ ಜನರ ಪರಿಶುದ್ಧ ಭಾವನೆಗಳ ಸಂಕೇತವಾಗಿದೆ.. ಈ ದೇವಸ್ಥಾನ ನಿರ್ಮಿಸಲು ಕಾರಣರಾದವರನ್ನು ಸ್ಮರಣೆ ಮಾಡಬೇಕು. ಸುರೇಶ ಉರಬಿನಹಟ್ಟಿ ಅವರು ಈ ದೇವಸ್ಥಾನದ ಕಮಿಟಿ ಅಧ್ಯಕ್ಷರಾಗಿ ದೊರಕಿದ್ದು ಸುದೈವ. ಅವರ ನಿಸ್ವಾರ್ಥ ಸೇವೆ, ಶ್ರಮ ನಿಜಕ್ಕೂ ಶ್ಯಾಘನೀಯವಾಗಿದೆ ಎಂದರಲ್ಲದೆ, ಸನ್ಮಾನ ಮಾಡಿದ ಕಮಿಟಿಗೆ ಧನ್ಯವಾದ ಹೇಳಿದರು. . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುರೇಶ ಉರಬಿನಹಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಘ ಸುಮಾರು ವರ್ಷಗಳಿಂದ ಸಮಾಜದ ಅಭಿವ್ರದ್ಧಿಗೆ ಶ್ರಮಿಸುತ್ತಿದ್ದು, ಗುಡಿ ನಿರ್ಮಾಣಕ್ಕೆ ಕೈ ಜೋಡಿಸಿದ ಸರ್ವರಿಗೂ ಧನ್ಯವಾದ ಹೇಳಿದರಲ್ಲದೆ.. ನಿಮ್ಮೆಲ್ಲರ ಪ್ರೀತಿ, ಸಹಕಾರ, ನಮ್ಮ ಸಂಘದ ಮೇಲಿರಲಿ . ನಮಗೆ ಗ್ರಂಥಾಲಯ ಕೊಟ್ಟ ಅಂದಿನ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಮತ್ತು ಶಾಸಕ ಅನಿಲ್ ಬೆನಕೆ ಅವರನ್ನು ಮರೆಯಲಾಗದು ಎಂದರು..
ಸಮಾರಂಭದಲ್ಲಿದ್ದ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ,, ಮಾತನಾಡಿದರು. ಸಮಾಜ ಸೇವಕ ಸುರೇಶ ಯಾದವ ವೇದಿಕೆಯಲ್ಲಿದ್ದರು. ಅಂಕಲಗಿ ಸುಕ್ಷೇತ್ರ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.. ಧರ್ಮ ಪತ್ನಿ ಶಿಲ್ಪಾ ಶೆಟ್ಟರ ಜೊತೆ ಆಗಮಿಸಿದ್ದ
ಮಾಜಿ ಮುಖ್ಯಮಂತ್ರಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಗದ್ದುಗೆಗೆ ಪೂಜೆ ಸಲ್ಲಿಸಿ, ದೇವಸ್ಥಾನ ಅಗತ್ಯ ಅಭಿವ್ರದ್ಧಿಗೆ ಹೆಗಲು ಕೊಡುವದಾಗಿ ಹೇಳಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ,
ಕೆ ಎಲ್ ಇ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ ಸದಸ್ಯ ಎನ್ ರವಿಕುಮಾರ, ಮಾಜಿ ಶಾಸಕ ಅನಿಲ
ಬೆನಕೆ, ಧುರೀಣ ಮುರಘೇಂದ್ರ ಪಾಟೀಲ, ಮಾಜಿ ಬೂಡಾ ಅದ್ಯಕ್ಷ ಗೂಳಪ್ಪ ಹೊಸಮನಿ, ಬಿಜೆಪಿ ಮಂಡಳ ಅದ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಆನಂದ ಅತ್ತುಗೋಳ , ವಿಲಾಸ ಕೆರೂರ, ಈರಯ್ಯಾ ಖೋತ, ರುದ್ರಣ್ಣಾ ಚಂದರಗಿ, ಮುಂತಾದ ಧುರೀಣರು ಗದ್ದುಗೆಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು..
ಕಮಿಟಿ ಎಸ್ ಜಿ ಕಲ್ಯಾಣಿ, ಮಂಜುನಾಥ ಪಾಟೀಲ , ಮನೋಹರ ಕಾಜಗಾರ, ಮಲ್ಲಪ್ಪ ದಂಡಿನವರ, ಸಿದ್ದಪ್ಪಾ ತೇರಣಿ , ಡಿ ಎಮ್ ಟೊಣ್ಣೆ, ಮಲ್ಹಾರ ದಿಕ್ಷಿತ್ ಆರ್ಚಕ, ಸಿದ್ದಬಸಯ್ಯಾ ಹಿರೇಮಠ, ಕ್ರಷ್ಣಾ ಪಾಟೀಲ, ಕಲ್ಲಪ್ಪಾ ಮಜಲಟ್ಟಿ, ಮಹೇಶ ಚಿಟಗಿ, , ಶಿವಾನಂದ ಮಠಪತಿ, ಬಸವರಾಜ ಹಿರೇಮಠ, ಎನ್ ಬಿ ಹನ್ನಿಕೇರಿ, ದುಂಡಪ್ಪಾ ಉಳ್ಳೇಗಡ್ಡಿ, ಜಿ ಎಸ್ ಹಿರೇಮಠ, ಬಸವರಾಜ ಗೌಡಪ್ಪಗೋಳ, ಪ್ರಹ್ಲಾದ ಹೊಳೆಯಾಚಿ, ಅಭಿಮಾನಿಗಳು, ಸೇರಿದಂತೆ
ಮಹಿಳೆಯರು, ಅಸಂಖ್ಯಾತ ಭಕ್ತರು ಉಪಸ್ಥಿತರಿದ್ದರು. ಪ್ರೊ ಎ ಕೆ ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಮಂಜುನಾಥ ಪಾಟೀಲ ವಂದಿಸಿದರು.. ಮಹಾಪ್ರಸಾದ ಜರುಗಿತು.
ಸುರೇಶ ಉರಬಿನಹಟ್ಟಿ
13th April 2025
ಸಂವಿಧಾನದ ಶ್ರೇಷ್ಠತೆ ವಿಶ್ವವ್ಯಾಪಿಯಾಗಲಿ : ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ
ಬೆಳಗಾವಿ: ಆರು ವರ್ಷಗಳ ಹಿಂದೆ ಸಂವಿಧಾನ ಓದು ಪುಸ್ತಕ ಬಿಡುಗಡೆಯಾಗುವ ಪೂರ್ವದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಸಮಾಜದಲ್ಲಿ ನಿರ್ಲಕ್ಷಿತ ಮನೋಭಾವವಿತ್ತು. ಈ ಕೃತಿ ಬಿಡುಗಡೆ ಮತ್ತು ಅದರ ಅಭಿಯಾನದಿಂದಾಗಿ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಜಾಗ್ರತೆ ಮತ್ತು ಗೌರವ ಭಾವನೆ ಮೂಡಿಸಿ, ಸಮಾಜದ ನೋಟವನ್ನೇ ಬದಲಾಯಿಸಿತು ಎಂದು ಕರ್ನಾಟಕ ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹನ ದಾಸ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜವಿಜ್ಞಾನ ವಿಭಾಗಗಳು ಮತ್ತು ಸಂವಿಧಾನ ಓದು ಅಭಿಯಾನ- ಕರ್ನಾಟಕ, ಬೆಂಗಳೂರು ಇವರ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎ. ೧೩ರಂದು ಭಾನುವಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಓದು ಮತ್ತು ಅಭಿಯಾನದಿಂದ ಯುವಕರಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪ್ರಜ್ಞೆ ಬೆಳೆಯುತ್ತಿದೆ. ಸ್ವಾತಂತ್ರ್ಯ ಬಂದ ಮೇಲೆ ಬಹಳಷ್ಟು ಸಾಧನೆ ಮಾಡಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳು ಇನ್ನೂ ಉಳಿದಿವೆ. ಪ್ರಜ್ಞಾವಂತರಾದ ನಾವು ಆ ಸಮಸ್ಯೆಗಳನ್ನು ಸಂವಿಧಾನದ ಬೆಳಕಿನಡಿಯಲ್ಲಿ ಬಗೆಹರಿಸುವ ಪ್ರಯತ್ನ ಮಾಡಬೇಕು. ನಮ್ಮಲ್ಲಿರುವ ಜ್ಞಾನದ ದೀಪವನ್ನು ಮೊದಲು ಬೆಳಗಿಸಿ ನಂತರ ಇತರರನ್ನು ಬೆಳಗಿಸೋಣ. ಸಂವಿಧಾನವನ್ನು ನಾವು ಓದಿ ಅರ್ಥೈಸಿಕೊಂಡು ಇತರರಿಗೂ ತಿಳಿಸೋಣ. ಶಿಕ್ಷಕರು ಸಂವಿಧಾನದ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗ್ರತೆ ಮೂಡಿಸಿ ಅವರನ್ನು ವಾಸ್ತವ ಜಗತ್ತಿಗೆ ಕರೆದು ತರಬೇಕಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮೇಲೆ ಪ್ರಭುತ್ವ ಮತ್ತು ಎರಡೂ ಸಂಸ್ಕೃತಿಯ ಆಳ ಅಧ್ಯಯನ ಇರುವ ಪ್ರೊ. ಎಂ. ಜಿ. ಹೆಗಡೆ ಅವರು ಇಂಗ್ಲಿಷ್ ಭಾಷಾಂತರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ಕೃತಿಯಿಂದ ಸಂವಿಧಾನದ ಶ್ರೇಷ್ಠತೆ ವಿಶ್ವವ್ಯಾಪಿ ಹರಡಲಿ ಎಂದರು.
ನ್ಯಾಯವಾದಿಯಾದ ಅನಂತ ನಾಯ್ಕ ಅವರು ಸಂವಿಧಾನ ಓದು ಸಮಾಜದಲ್ಲಿ ಕ್ರಾಂತಿಯನ್ನು ಮಾಡಿದೆ. ಸಂವಿಧಾನದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗಬೇಕು ಎಂದರು.
ಬೆಳಗಾವಿ ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಅವರು ಸಂವಿಧಾನ ಓದು ಕೃತಿಯು ಸಮಾಜದ ಅಂಚಿನವರಲ್ಲಿ ಜಾಗೃತಿ ಮೂಡಿಸಿತು. ಧರ್ಮ ಪರಿಕಲ್ಪನೆಯಿಂದ ರಾಜಮಹಾರಾಜರು ಹಾಳಾದರು. ಶಿಕ್ಷಣ ಪರಿಕಲ್ಪನೆಯಿಂದ ಸಮಾಜ ಉದ್ದಾರವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಪ್ರೊ. ಎಂ. ಜಿ. ಹೆಗಡೆ ಅವರು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ ಸಂವಿಧಾನ ಓದು ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಸಂವಿಧಾನ ಓದು ಬಹುತೇಕ ಭಾರತೀಯ ಎಲ್ಲಾ ಭಾಷೆಗಳಿಗೆ ಭಾಷಾಂತರವಾಗಿದೆ. ಅವೆಲ್ಲವುಗಳಿಗಿಂತ ಇಂಗ್ಲಿಷ್ ಭಾಷಾಂತರ ಅತ್ಯಂತ ಗುಣಮಟ್ಟದ್ದಾಗಿದೆ. ಇಂಥ ಒಂದು ಭಾಷಾಂತರದ ಅವಶ್ಯಕತೆ ಇಂದು ತುರ್ತಾಗಿತ್ತು. ಈ ಕೃತಿ ಅದನ್ನು ನೀಗಿಸಿದೆ. ಇದರ ಮರಾಠಿ ಭಾಷಾಂತರವನ್ನು ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದಿಂದ ತಕ್ಷಣ ಮಾಡಿಸುತ್ತೇನೆ ಎಂದರು. ಸಂವಿಧಾನದ ಪ್ರಜ್ಞೆ ಇಲ್ಲದ ವ್ಯಕ್ತಿ ಒಳ್ಳೆಯ ಬದುಕನ್ನು ನಡೆಸುವುದು, ಒಳ್ಳೆಯ ನಾಗರಿಕನಾಗುವುದು ಸಾಧ್ಯವಿಲ್ಲ. ಸಂವಿಧಾನದ ಓದಿನಿಂದ ರಾಷ್ಟ್ರ , ಸಮಾಜ, ವ್ಯಕ್ತಿ , ಆರ್ಥಿಕ, ಸ್ವಾತಂತ್ರ್ಯ , ಬದುಕಿನ ಪ್ರಜ್ಞೆಯು ಬರುತ್ತದೆ. ಸಂವಿಧಾನ ಕೇವಲ ಕಾನೂನಿನ ಪುಸ್ತಕವಲ್ಲ. ಅದು ಆತ್ಮದ ಬೆಳಕು. ಆತ್ಮದ ಬೆಳಕೇ ನಮ್ಮ ಬದುಕಿನ ದಿಕ್ಸೂಚಿ. ಅಂಥ ಸತ್ಯದ ಬೆಳಕು ನಮ್ಮನ್ನು ಕರೆದೊಯ್ಯುತ್ತದೆ. ಅನ್ನ, ಅರಿವು, ಜಾಗೃತಿಯ ಹಕ್ಕನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ. ಜಿ. ಹೆಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿಂದೆ ಮಾನವ ಬದುಕಿನ ಬೆಳಕಾಗಿ ಬಂದವರು ಬುದ್ಧ, ಬಸವಣ್ಣ, ಪ್ರಸ್ತುತ ನಮ್ಮ ಬದುಕಿನ ಬೆಳಕಾಗಿರುವುದು ಸಂವಿಧಾನ. ಈ ಬೆಳಕು ಎಲ್ಲರ ಮನೆ- ಮನಗಳಲ್ಲಿ ಬೆಳಗಬೇಕು. ಸಂವಿಧಾನ ನಮ್ಮ ಬದುಕಿನ ಕೈಪಿಡಿಯಾಗಿದೆ. ಅದನ್ನು ಉಳಿಸಲು ಸದಾ ನಾವು ಜಾಗೃತರಾಗಿರಬೇಕು ಎಂದರು.
ಉಪನ್ಯಾಸಕಿ ಲಾವಣ್ಯ ಗುಂಜಾಳ ವಂದಿಸಿದರು. ಡಾ. ಪ್ರೀತಿ ಪಡದಪ್ಪಗೋಳ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಬೋಧಕವರ್ಗ, ರಾಚವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
13th April 2025
ದಿ ಶ್ರೀ ಕಾಂತ ಹನುಮಂತಪ್ಪಾ ಯಲಿಗಾರ
7th April 2025
ಭಗವದ್ಗೀತಾ ಶ್ಲೋಕ ಸ್ಪರ್ಧೆ – ಸಂಸ್ಕೃತಿ, ಶಿಸ್ತು ಮತ್ತು ಶ್ಲೋಕಗಳ ಸತ್ವದ ಪಾಠ!
ಲಯನ್ಸ್ ಕ್ಲಬ್ ಆಫ್ ಬೆಳಗಾವ, ಲಿಯೋ ಕ್ಲಬ್ ಆಫ್ ಬೆಳಗಾವ ಮತ್ತು ಶ್ರೀ ಕಪಿಲೇಶ್ವರ ಮಹಾದೇವ ವಿಶ್ವಸ್ಥ ಮಂಡಳ ಇದರ ಸಂಯುಕ್ತ ಆಶ್ರಯದಲ್ಲಿ 15ರಿಂದ 27 ಏಪ್ರಿಲ್ 2025 ರವರೆಗೆ, ಪ್ರತಿದಿನ ಬೆಳಿಗ್ಗೆ 6:30 ರಿಂದ 8:00 ಗಂಟೆವರೆಗೆ, ಶ್ರೀ ಕಪಿಲೇಶ್ವರ ದೇವಸ್ಥಾನ, ಬೆಳಗಾವಿ ಯಲ್ಲಿ ಭಗವದ್ಗೀತಾ ಶ್ಲೋಕ ಸ್ಪರ್ಧೆ ಆಯೋಜಿಸಲಾಗಿದೆ.
ಈ ಪವಿತ್ರ ಕಾರ್ಯಕ್ರಮದ ಉದ್ದೇಶ 5ರಿಂದ 25 ವರ್ಷದೊಳಗಿನ ಮಕ್ಕಳಿಗೆ ಹಾಗೂ ಯುವಜನತೆಗೆ ಆಧ್ಯಾತ್ಮಿಕ ಶಕ್ತಿ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮೂಲಕ ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಸುವುದು.
ಕಾರ್ಯಕ್ರಮದ ವಿಶೇಷತೆಗಳು:
ಪ್ರತಿದಿನ ಬೆಳಿಗ್ಗೆ 6:30 ರಿಂದ 8:00 ಗಂಟೆವರೆಗೆ ಶ್ಲೋಕ ಪಾಠ ತರಗತಿಗಳು
ಇಸ್ಕಾನ್ ನ ಗುರುಗಳು ಕನ್ನಡ ಮತ್ತು ಮರಾಠಿಯಲ್ಲಿ ಶ್ಲೋಕ ಪಾಠ ಮಾಡುತ್ತಾರೆ ಮತ್ತು ಅರ್ಥ ತಿಳಿಸುತ್ತಾರೆ
ಪ್ರತಿದಿನ ಸಾತ್ವಿಕ ಉಪಹಾರ ಮತ್ತು ಹಾಲಿನ ವ್ಯವಸ್ಥೆ
ಸ್ಪರ್ಧೆಯ ಅಂತ್ಯದಲ್ಲಿ ಆಕರ್ಷಕ ಬಹುಮಾನಗಳ ವ್ಯವಸ್ಥೆ
ಈ 10 ದಿನಗಳಲ್ಲಿ ಮಕ್ಕಳಿಗೆ 10 ಶಕ್ತಿಶಾಲಿ ಶ್ಲೋಕಗಳನ್ನು ಪಾಠಿಸಿಸಿ, ಅವುಗಳ ಅರ್ಥಗಳನ್ನು ಸಹ ಸಮಜಿಯಾಗಿ ವಿವರಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ಭಗವದ್ಗೀತೆಯ ಸತ್ವವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಪೋಷಕರಿಗೆ ವಿಶೇಷ ಕರೆ:
"ಮಕ್ಕಳನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವುದು ಪ್ರತಿಯೊಬ್ಬ ಪೋಷಕರ ಪ್ರಮುಖ ಜವಾಬ್ದಾರಿ. ಇದು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಶಿಸ್ತು ಮತ್ತು ಗುಣಾತ್ಮಕ ಜೀವನದತ್ತ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಶದ ಪ್ರತಿಯೊಂದು ದೇವಸ್ಥಾನದಲ್ಲೂ ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳು ನಡೆಯಬೇಕೆಂಬುದು ಸಮಾಜದ ಕರ್ತವ್ಯ."
ಮಾಧ್ಯಮದ ಸಹಕಾರ ಅತ್ಯವಶ್ಯಕ:
ಈ ಶ್ರೇಷ್ಠ ಆಧ್ಯಾತ್ಮಿಕ ಪ್ರಯತ್ನವನ್ನು ಹೆಚ್ಚಿನ ಜನರಿಗೆ ತಲುಪಿಸಲು ನಿಮ್ಮ ಮಾಧ್ಯಮದ ಬೆಂಬಲ ಅತ್ಯಂತ ಅಗತ್ಯವಾಗಿದೆ. ನಿಮ್ಮ ಪ್ರೀತಿಪಾತ್ರ ಸಹಕಾರಕ್ಕೆ ನಾವು ನಿರೀಕ್ಷೆಯಿಂದ ಕಾದಿದ್ದೇವೆ.
ಸಂಪರ್ಕ ವಿವರಗಳು:
📞 9448359811 / 8073468638 / 9148139535 / 9448141501
---
ಆಯೋಜಕರು:
ಲಯನ್ ದಯಾ ಪಿ. ಶಾಪೂರಕರ್ – ಅಧ್ಯಕ್ಷರು, ಲಯನ್ಸ್ ಕ್ಲಬ್ ಆಫ್ ಬೆಳಗಾವ
ಲಯನ್ ಗೀತಾ ಎಚ್. ಕಿಟ್ಟೂರು – ಕಾರ್ಯದರ್ಶಿ, ಲಯನ್ಸ್ ಕ್ಲಬ್ ಆಫ್ ಬೆಳಗಾವ
ಲಯನ್ ಸೋಮಶೇಖರ ಜಿ. ಚೊನ್ನದ್ – ಕಾರ್ಯಕ್ರಮದ ಅಧ್ಯಕ್ಷರು
ರಾಹುಲ್ ಕುರ್ಣೆ – ಅಧ್ಯಕ್ಷರು, ಶ್ರೀ ಕಪಿಲೇಶ್ವರ ಮಹಾದೇವ ವಿಶ್ವಸ್ಥ ಮಂಡಳ
ಅಜಿತ್ ಜಾಧವ್ – ನಿರ್ದೇಶಕರು, ವಿಶ್ವಸ್ಥ ಮಂಡಳ
ಶ್ರೀ ವಲ್ಲಭ ಪ್ರಭುಜಿ (ಇಸ್ಕಾನ್) – ಮುಖ್ಯ ಗುರು
6th April 2025
ಭಕ್ತರ ಮನೋಭಿಲಾಷೆ ಈಡೇರಿಸುವ ಶ್ರೀ ಕಾರ್ಯಸಿದ್ಧಿ ಆಂಜನೇಯ.
ಬೆಳಗಾವಿ ರಾಮತೀರ್ಥನಗರದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಅಸಂಖ್ಯಾತ ಭಕ್ತರ ಮನೋಭಿಲಾಷೆ ಈಡೇರಿಸುವ ಶಕ್ತಿದೇವ ಎನ್ನುವದಕ್ಕೆ ದೂರದ ಮಹಾರಾಷ್ಟ್ರ ಗೋವಾ ಆಂಧ್ರ ರಾಜ್ಯಗಳಿಂದ ಬರುವ ಭಕ್ತರೇ ಸಾಕ್ಷಿ ಎಣಿಸಿದ್ದು, ನಂಬಿ ಶುದ್ಧ ಮನಸ್ಸಿನಿಂದ ಸಂಕಲ್ಪ ಮಾಡಿ ,ಹರಕೆ ಫಲ ಕಟ್ಟಿ ತಮ್ಮ ಮನೋಭಿಲಾಷೆ ಈಡೇರಿಸಿಕೊಂಡ ಸುಮಾರು ಭಕ್ತರನ್ನು ಇಲ್ಲಿ ಕಾಣಬಹುದಾಗಿದೆ. ಬೆಳಗಾವಿ ಕೇಂದ್ರ ಬಸ್ಸು ನಿಲ್ದಾಣದಿಂದ ಕಣಬರ್ಗಿ ರಸ್ತೆಯ ರಾಮತೀರ್ಥನಗರದ ೧ ನೇ ಹಂತದ ಮುಖ್ಯ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಬರ ಹೋಗಲು ಸಿಬಿಟಿ ಯಿಂದ ಕಣಬರ್ಗಿ, ಮುಚ್ಚಂಡಿ, ಖನಗಾಂವ, ಸುಳಿಭಾವಿ ಬಸ್ಸುಗಳ ಮೂಲಕ ಬರಬಹುದಾಗಿದೆ. ಈ ದೇವಸ್ಥಾನ ಕರಾವಳಿ ಮಾದರಿಯಲ್ಲಿ ಕಬ್ಬಿಣದ ಸರಳುಗಳನ್ನು ಬಳಸಿದ್ದು, ಸುತ್ತಲೂ ಗಾಜಿನ ಚೌಕಟ್ಟುಗಳಿವೆಯಲ್ಲದೆ, ಕೆಂಪು ಹಂಚಿನ ಮೆಲ್ಹೊದಿಕೆ ಇದೆ. ಅತ್ಯಂತ ಆಕರ್ಷಕವಾಗಿ ಕಾಣುವ ಈ ಮಂದಿರ ಅಪಾರ ಸಂಖ್ಯೆಯ ಭಕ್ತರನ್ನೊಳಗೊಂಡಿದ್ದು ವಿಶೇಷ..
ಮಂದಿರದ ಮುಂದೆ ಹಸಿರು ಹಾಸು ಹುಲ್ಲು, ಸುತ್ತಲೂ ಆಸನಗಳು, ಗಿಡ ಮರಗಳು ಭಕ್ತರನ್ನು ಆಕರ್ಷಿಸಲು ಕಾರಣವೆನ್ನಬಹುದು. ಪ್ರತಿ ದಿನವೂ ಎರಡು ಬಾರಿ ಶ್ರೀ ಆಂಜನೇಯನಿಗೆ ಪೂಜೆ ನೆರವೇರುತ್ತದೆ. ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ಜರುಗುತ್ತದೆ. ಶನಿವಾರ ನೂರಾರು ಭಕ್ತರಿಂದ ಹನುಮಾನ ಚಾಳೀಸಾ ಪಠನೆ, ಮತ್ತು ಮಹಾ ಪೂಜಾ ಜರುಗುತ್ತದೆ. ಆಂಜನೇಯನಿಗೆ
ಸಂಕಲ್ಪ ಮಾಡಿ ಕಾಯಿ ಕಟ್ಟಿ ೯ ವಾರ. ಸರಳ ವ್ರತ ಆಚರಿಸಿ ತಮ್ಮ ಮನೋಭಿಲಾಷೆ ಈಡೇರಿಸಿಕೊಂಡ ಸುಮಾರು ಭಕ್ತರು ಇತರ ಭಕ್ತರಿಗೆ ಸ್ಫೂರ್ತಿ ಎಣಿಸಿದ. ಏಕೈಕ ಮಂದಿರ ಇದಾಗಿದೆ. ಪೂಜಾ ವಿಧಿ,ವಿಧಾನಗಳಲ್ಲಿ ನುರಿತ ಮತ್ತು ವಿದ್ಯಾ ಪಾರಂಗತ ವೇದ ಮೂರ್ತಿ ಸಿದ್ದಬಸಯ್ಯಾ ಹಿರೇಮಠ ದೇವಸ್ಥಾನದ ಆರ್ಚಕರಾಗಿದ್ದು,
ಕಳೆದ ಐದು ವರ್ಷಗಳಿಂದ ರೂಪುಗೊಳ್ಳುತ್ತಿರುವ ಈ ಮಂದಿರ ವಿಶೇಷ ಮಾದರಿಯಾಗಬೇಕೆಂಬುದು ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಅವರ ಬಲವಾದ ಇಚ್ಛೆ. ಮಂದಿರ ನಿರ್ಮಾಣ ಕಾರ್ಯ ಹಂತ,ಹಂತವಾಗಿ ರೂಪುಗೊಂಡಿದ್ದು, . ೯/೮ ಫೂಟು ಅಳತೆಯ ಸ್ಟೀಲನಿಂದ ನಿರ್ಮಿತ ಗರ್ಭ ಗುಡಿ ಇದ್ದು, ಕ್ರಷ್ಣ ಶಿಲೆಯಿಂದಾದ ಕೈ ಮುಗಿದು ಕುಳಿತ ಭಂಗಿಯ ಬಲು ಆಕರ್ಷಕ ಆಂಜನೇಯನ ಮೂರುತಿ ಇದೆ. ಸುಮಾರು ೨೪/೨೧/ ಫೂಟು ಅಳತೆಯ ಅಷ್ಟ ಭುಜಾಕ್ರತಿಯ ಆವರಣ ಮಂದಿರವಿದೆ. ಎಲ್ಲಕ್ಕೂ ಸೌಂದರ್ಯ ಇಮ್ಮಡಿಸಬಲ್ಲ ಆಕರ್ಷಕ ಗೋಪುರ ಕಳಸವಿದೆ. ಇಲ್ಲಿ ಸಂಕಲ್ಪ ಮಾಡಿಕೊಳ್ಳುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಗೆ ೯ ಶನಿವಾರ ಹರಕೆ ವ್ರತ ಆಚರಿಸುವ ಪದ್ಧತಿ ಇದೆ. ತಮ್ಮ ವಿದ್ಯೆ, ಉದ್ಯೋಗ, ವ್ಯಾಪಾರ, ನೌಕರಿ, ವಿವಾಹ ಭಾಗ್ಯ, ಸಂತಾನ ಭಾಗ್ಯ, ಅರೋಗ್ಯ ಸೇರಿದಂತೆ ಇನ್ನಿತರ ಕಾರ್ಯ ಸಿದ್ಧಿಗಾಗಿ ಶ್ರದ್ಧಾ,ಭಕ್ತಿಯಿಂದ ಸ್ವಾಮಿಗೆ ಪೂರ್ಣ ಫಲ ವನ್ನು ದೇವಸ್ಥಾನದಲ್ಲಿ ಕಟ್ಟುತ್ತಾರೆ. ಈ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿಯಿಂದ ಆಶೀರ್ವದಿಸಲ್ಪಟ್ಟ ರಕ್ಷಾ ದಾರವನ್ನು ಕಟ್ಟಿಕೊಳ್ಳುವದರಿಂದ ಮತ್ತು ಸಿಂಧೂರ ವನ್ನು ಹಚ್ಚಿಕೊಳ್ಳುವದರಿಂದ ದ್ರಷ್ಟಿ ದೋಷ, ಧುಃ ಸ್ವಪ್ನ, ದುಷ್ಠ ಶಕ್ತಿ ನಿಗ್ರಹ ನಿವಾರಣೆಯಾಗುವದು ಎಂಬುದು ಇಲ್ಲಿಯ ಭಕ್ತರ ನಂಬಿಗೆಯಾಗಿದೆ. ಇಲ್ಲಿಶನಿವಾರ ಬರುವ ಭಕ್ತರಿಗೆ ಭಕ್ತ ದಾನಿಗಳಿಂದ ಪ್ರಸಾದ ವಿತರಿಸಲಾಗುತ್ತದೆ. ಬೆಳಗಿನ ಮತ್ತು ಸಂಜೆಯ ಪೂಜೆಯ ಸಮಯದಲ್ಲಿ ಇಲ್ಲಿ ಬಂದು ಮೌನ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರೆ ಸಿಗುವ ಸಮಾಧಾನ, ಶಾಂತಿ ,ನೆಮ್ಮದಿ ಮನಸ್ಸಿನ ತಳ,ಮಳ ದೂರಾಗಿಸಿ ದೈವತ್ವ ತುಂಬಿಸಿ, ಮನಸ್ಸಿನ ಆನಂದಕ್ಕೆ ಮೇರೇಯೇ ಇಲ್ಲದಂತಾಗಿಸುವದು. ಇಲ್ಲಿಯ ವಿಶೇಷತೆ. ದೇವಸ್ಥಾನಕ್ಕೆ ಹೊಂದಿಕೊಂಡು ಗ್ರಂಥಾಲಯವಿದ್ದು ಓದುಗ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ , ಹಿರಿಯರಿಗೆ, ವ್ರದ್ಧರಿಗೆ ಕುಳಿತು ಅಧ್ಯಯನ ಮಾಡಲು ಚಿಕ್ಕದಾದ ಕೋಣೆ ಇದ್ದು, ವ್ರತ ಪತ್ರಿಕೆಗಳು, ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕಗಳು ಸೇರಿದಂತೆ ಇತರೆ ಕಥೆ, ಕಾದಂಬರಿಗಳು ಇಲ್ಲಿ ಯಾವತ್ತೂ ಓದ ಸಿಗುತ್ತವೆ. ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರ ಮತ್ತು ಶಾಸಕ ಅನಿಲ್ ಬೆನಕೆ ಅವರ ಕೊಡುಗೆ ಇದಾಗಿದೆ. ಇದೇ ಶನಿವಾರ ದಿನಾಂಕ ೧೨-೦೪-೨೦೨೫ರಂದು ಸಂಜೆ ಈ ಮಂದಿರ ವನ್ನು, ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಲೋಕಾರ್ಪಣೆ ಗೊಳಿಸಲಿದ್ದು, ಸಾನಿಧ್ಯವನ್ನು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಮತ್ತು ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಡಾ ಅಮರಸಿದ್ಧೇಶ್ವರ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಜನ ಮನ ಗೆದ್ದ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಶಾಸಕರಾದ ಆಸಿಫ್ ಸೇಠ್, ಮಹಾಂತೇಶ ಕೌಜಲಗಿ, ಹನುಮಂತ ನಿರಾಣಿ, ಕೆ ಎಲ್ ಇ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಮಾಜಿ ಶಾಸಕ ಅನಿಲ್ ಬೆನಕೆ, ವಿನಯ ನಾವಲಗಟ್ಟಿ, ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಕಾರ್ಪೊರೇಟರ್ ಹನುಮಂತ ಕೊಂಗಾಲಿ ಮುಂತಾದವರು ಉಪಸ್ತಿತರಿರುವರು.. ಕಾರ್ಯಕ್ರಮದ ಲ್ಲಿ ದೇವಸ್ಥಾನದ ದಾನಿಗಳನ್ನು ಸನ್ಮಾನಿಸಲಾಗುತ್ತದೆ ಯಲ್ಲದೆ, ನಂತರ ಸರ್ವರಿಗೂ ಮಹಾಪ್ರಸಾದವಿರುವದಾಗಿ ಕಮಿಟಿ ತಿಳಿಸಿದ್ದು, ಈ ದೇವಸ್ಥಾನಕ್ಕೊಮ್ಮೆ ಭಕ್ತಿಯಿಂದೊಮ್ಮೆ ಭೆಟ್ಟಿ ಕೊಟ್ಟು ಶ್ರೀ ಸ್ವಾಮಿಯ ದರ್ಶನ ಪಡೆದು ಜನ್ಮ ಸಾರ್ಥಕಗೊಳಿಸಿಕೊಳ್ಳಿ ಎಂಬುದು ಲೇಖಕರ ಅನಿಸಿಕೆ.
ಶ್ರೀ ಕ್ಷೇತ್ರ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಸದ್ಯದಲ್ಲಿ ಲೋಕಾರ್ಪಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಶೇಷ ಲೇಖನ - ಸುರೇಶ ಉರಬಿನಹಟ್ಟಿ
3rd April 2025
ಮಾನವನ ಜ್ಞಾನಕ್ಕೆ ಮಹತ್ವ ನೀಡಿ: ಬರಗೂರ ರಾಮಚಂದ್ರಪ್ಪ
ಬೆಳಗಾವಿ: ಇತ್ತೀಚೆಗೆ ತಂತ್ರಜ್ಞಾನವನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರ ಕುರಿತು ವಿಶೇಷ ಕಾಳಜಿವಹಿಸುವ ಅವಶ್ಯಕತೆಯಿದೆ. ತಂತ್ರಜ್ಞಾನವು ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸೃಜನಶೀಲತೆಗೆ ಪೂರಕವಲ್ಲ. ಆದ್ದರಿಂದ ತಂತ್ರಜ್ಞಾನದ ಬದಲಾಗಿ ಮಾನವ ಸೃಜನಶೀಲ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ವಿಭಾಗಗಳ ಸಹಯೋಗದಲ್ಲಿ ಗುರುವಾರ ಏ.3ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಹೊಸ ಸಹಸ್ರಮಾನದ ಧ್ವನಿಗಳು: ಸಮಾಕಾಲೀನ ಭಾರತದಲ್ಲಿ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದಿನಮಾನದಲ್ಲಿ ತಂತ್ರಜ್ಞಾನ ಬಳಕೆ ಅತಿ ಅವಶ್ಯವಾಗಿದೆ. ಆದರೆ, ಕೆಲ ಬಾರಿ ತಂತ್ರಜ್ಞಾನದ ದಾಸರಾಗಿ ವರ್ತಿಸುತ್ತಿರುವುದು ಕೂಡ ತಪ್ಪು. ಕೃತಕ ಬುದ್ಧಿಮತ್ತೆ ಮತ್ತು ಇತರೆ ಮಾಹಿತಿ ತಂತ್ರಜ್ಞಾನ ಉಪಕರಣಗಳೂ ನೀಡುವ ಮಾಹಿತಿಗಳು ಅನೇಕ ಎಡವಟ್ಟುಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ತಂತ್ರಜ್ಞಾನ ನೀಡುವ ಮಾಹಿತಿ ಅಂತಿಮ ಎಂದು ಭಾವಿಸಬಾರದು. ಆದ್ದರಿಂದ ತಂತ್ರಜ್ಞಾನದ ಬಳಕೆಯ ಔಚಿತ್ಯ ಮತ್ತು ವಿವೇಕ ಈ ಎರಡು ಸಂಗತಿಗಳ ಬಗ್ಗೆ ಕಾಳಜಿ ನೀಡಬೇಕಾಗಿದೆ. ಇತ್ತೀಚಿನ ಸಾಹಿತ್ಯ ವಿಚಾರ ಸಂಕಿರಣದಲ್ಲಿ ತಂತ್ರಜ್ಞಾನ ಬಳಕೆ ಕುರಿತಾಗಿ ಮುಕ್ತವಾಗಿ ಚರ್ಚೆ, ಅಧ್ಯಯನ, ವಿಶ್ಲೇಷಣೆ ಜರುಗಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಸಮಕಾಲೀನ ಸಾಹಿತ್ಯ ಎಂದ ಮಾತ್ರಕ್ಕೆ ಇಲ್ಲಿ ಆಧುನಿಕ ಮಾತ್ರ ಎಂಬ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಗತಕಾಲದ ಚಿಂತನೆ, ಸಂಪ್ರದಾಯ ಮತ್ತು ಪರಂಪರೆಗಳ ಮೇಲೆಯೆ ವರ್ತಮಾನದ ಚಿಂತನೆ ರೂಪಿತವಾಗಿರುತ್ತದೆ. 20ನೇ ಶತಮಾನ ಕೈಗಾರಿಕೀಕರಣ ಒಳಗೊಂಡಿದ್ದರೆ, 21ನೇ ಶತಮಾನ ಜಾಗತೀಕರಣದಿಂದ ಕೂಡಿದೆ. ಕೈಗಾರಿಕೀಕರಣದಿಂದ ಜಾತಿ-ಭೇದ-ಅಸ್ಪೃಶ್ಯತೆ ಸ್ವಲ್ಪ ಮರೆಯಾಗಿತ್ತು. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ಮೇಲು ಕೀಳೂ ಭಾವ ದೂರವಾಗಿತ್ತು. ಆದರೆ ಈ ಜಾಗತೀಕರಣದ ಕಾಲದಲ್ಲಿ ಪೌರೋಹಿತ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಮೆಲ್ಪಂಕ್ತಿಗೆ ಬರುತ್ತಿದೆ. ಇದರ ಜೊತೆಗೆ ಇತ್ತೀಚಿಗೆ ಸಂವಾದದ ಬದಲು ರಾಜಕೀಯ ಪ್ರೇರಿತ ಭಾವೋನ್ಮಾದ ಹೆಚ್ಚಾಗುತ್ತಿರುವುದು ವಿ಼ಷಾದನೀಯ ಸಂಗತಿ ಎಂದರು.
ಕೆಲವರು ಸಾಹಿತ್ಯ ಎಂದರೆ ಶಬ್ದ, ಅಕ್ಷರ ಪ್ರಾಸಗಳ ಸತ್ವ ಎಂದು ತಿಳಿದು, ಹೊಸ ಪ್ರಯೋಗದ ಸಾಹಿತ್ಯಕ್ಕೆ ಸತ್ವವಿಲ್ಲ ಎಂದು ಆರೋಪ ಕೂಡ ಮಾಡುತ್ತಾರೆ.
ನಾನು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾದ ಸಂದರ್ಭದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುರಿತು ಅಧ್ಯಯನಕ್ಕೆ ಮಹತ್ವ ನೀಡಿದೆ. ಆಗ ಕೆಲವರು ಅಣಕವಾಡಿದರು. ಆ ಅಧ್ಯಯನದಿಂದ ಅನೇಕ ಪುಸ್ತಕಗಳು ಹೊರಬಂದು ಸಮಾಜದಲ್ಲಿ ಹೊಸ ಸಂವೇದನೆ ಹುಟ್ಟುಹಾಕಿತ್ತು. ಆಗ ಅಲೆಮಾರಿ ಸಮುದಾಯದ ಕಡೆ ಸಮಾಜದ ಚಿತ್ತ ಹರಿಯಿತು. 2011ರ ಜನಗಣತಿ ಪ್ರಕಾರ ಒಬ್ಬ ವ್ಯಕ್ತಿಯನ್ನು ಮಾತ್ರ ಹೊಂದಿರುವ ಕುಲಂಕುಲು ಜಾತಿಯಿದೆ. ಮಾನಬಸ್ತಿ ಜಾತಿಯಲ್ಲಿ ಐದು ಜನ, ಬನ್ನಿ ಹಂದಿ ಎಂಬ ಜಾತಿಯಲ್ಲಿ ಹನ್ನೊಂದು ಜನ ಮಾತ್ರ ಇದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಜನರು ಜಾತಿ ರಹಿತರೂ ಎಂಬುದು ತಿಳಿದು ಬರುತ್ತದೆ. ಆದಿವಾಸಿ, ಅಲೆಮಾರಿ ಮತ್ತು ಬುಡಕಟ್ಟು ಸಮದಾಯಕ್ಕೆ ಸೇರಿದ ಒಟ್ಟೂ 11 ಕೋಟಿ ಜನರಿದ್ದಾರೆ. ಸಮಾಜದ ಕೇಂದ್ರದಿಂದ ಅಂಚಿನಲ್ಲಿರುವ ಅದೆಷ್ಟೋ ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ಸಾಹಿತ್ಯದ ಬಹು ದೊಡ್ಡ ಜವಾಬ್ದಾರಿ ಎಂದರು. ಅಸಂಘಟಿತ ಮತ್ತು ಧ್ವನಿರಹಿತ ಜನಾಂಗದ ಕುರಿತಾದ ಸಾಹಿತ್ಯ ನಿರ್ಮಾಣ ಇಂದಿನ ಅವಶ್ಯಕತೆಯಾಗಿದೆ. ಆದ್ದರಿಂದ ಯುವ ಬರಹಗಾರರು ಅಸಂಘಟಿತ ವಲಯದ ಕುರಿತಾದ ಅನುಭವಗಳ ಸಾಹಿತ್ಯ ಹೊರತರುವಲ್ಲಿ ಆಸಕ್ತಿ ವಹಿಸಬೇಕು ಎಂದರು.
ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ವಿಭಿನ್ನ ಸಾಮಾಜಿಕ ಜಗತ್ತುಗಳೊಂದಿಗೆ ಅನುಸಂಧಾನ ವಿಷಯದ ಕುರಿತಾಗಿ ಮಾತನಾಡಿ, ಪರ ಧರ್ಮ ಮತ್ತು ಪರ ಚಿಂತನೆಗಳಿಗೆ ಗೌರವಿಸುವುದು ನಿಜವಾದ ಸಂಸ್ಕೃತಿಯಾಗಿದೆ. ನಗರ ಮತ್ತು ಜಾಗತೀಕರಣದ ನಡುವೆಯೂ ಅಸ್ಪೃಶ್ಯತೆ ಉಳಿದಿದೆ. ಈ ಕುರಿತಾಗಿ ಅನೇಕ ಹೊಸ ಹೊಸ ಬರಹಗಾರರು ಮಾರ್ಮಿಕವಾಗಿ ತಮ್ಮ ಕೃತಿಗಳನ್ನು ರಚಿಸುತ್ತಿದ್ದಾರೆ. ಯುವ ಬರಹಗಾರರು ಹೊಸ ಅನುಭವ, ನಿರೂಪಣೆ, ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ ಸಾಹಿತ್ಯ ರಚಿಸಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಕೇವಲ ಮನರಂಜನೆಯ ವಸ್ತುವಲ್ಲ; ಸಮಾಜದ ವಾಸ್ತವತೆ ಮತ್ತು ಅಂಕು ಡೊಂಕುಗಳನ್ನು ತಿದ್ದುವ ಸಾಧನ ಕೂಡ ಹೌದು. ಸಾಹಿತ್ಯ ತಕ್ಷಣಕ್ಕೆ ಸಮಾಜದಲ್ಲಿನ ತಪ್ಪುಗಳನ್ನು ತಿದ್ದಲಾರದು. ಹಾಗಂತ ಹೇಳಿ ಸಮಾಜದಲ್ಲಿನ ತಪ್ಪುಗಳನ್ನು ಖಂಡಿಸುವ ಮನೋಭಾವವನ್ನು ಕೂಡ ತೊರೆಯುವುದು ಸೂಕ್ತವಲ್ಲ. ಸಾಹಿತ್ಯವು ಸಮುದಾಯದಲ್ಲಿನ ವಿವೇಕವನ್ನು ಜಾಗೃತಿಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ಸಾಹಿತ್ಯವು ಓದುಗರಿಗೆ ಕೇವಲ ಸಂತೋಷ ನೆಮ್ಮದಿ ನೀಡುವುದು ಮಾತ್ರವಲ್ಲ. ಆದರ ಆಚೆಗೂ ಸಮಾಜವನ್ನು ತಿದ್ದುವ, ವಿಚಾರಧಾರೆಗಳನ್ನು ಬಿತ್ತುವುದಾಗಿದೆ. ಸಮಾಜದಲ್ಲಿನ ವಾಸ್ತವ ಸಂಗತಿಗಳನ್ನು ಅರಿತು, ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮುಖ್ಯ ಆಶಯ ಸಾಹಿತ್ಯ ಹೊಂದಿದೆ. ಜಗತ್ತಿನ ಬದಲಾವಣೆಯ ಕಣ್ಣು ತೆರೆಸಿದುದು ಸಾಹಿತ್ಯ ಎಂದರು.
ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಾಹಿತ್ಯ ಹಿಂದಿನ ಸಾಹಿತ್ಯಕ್ಕಿಂತ ಹೇಗೆ ಬದಲಾವಣೆ ಹೊಂದಿದೆ ಮತ್ತು ಭಿನ್ನವಾಗಿದೆ, ಜೊತೆಗೆ ಅದರ ಹೊರಳು ದಾರಿಯನ್ನು ಗಮನಿಸುವುದು ಮತ್ತು ಸಮಕಾಲೀನ ಸಾಹಿತ್ಯದ ಮೇಲೆ ಯಾವೆಲ್ಲ ಅಂಶಗಳು ಪ್ರಭಾವ ಬೀರಿವೆ ಎಂಬುದನ್ನು ಗುರುತಿಸುವುದು ಇಂದಿನ ತುರ್ತಾಗಿದೆ. ಭಾರತೀಯ ಸಾಹಿತ್ಯವೆಂದರೆ ಯಾವುದೋ ಒಂದು ಭಾಷೆಗೆ ಸೀಮಿತವಾಗಿಲ್ಲ. ಆದ್ದರಿಂದ ಈ ವಿಚಾರ ಸಂಕಿರಣವನ್ನು ಕನ್ನಡ, ಮರಾಠಿ, ಇಂಗ್ಲೀಷ್ ಮತ್ತು ಹಿಂದಿ ಈ ನಾಲ್ಕು ಭಾಷೆಯ ಸಾಹಿತ್ಯದಲ್ಲಿನ ಸಮಕಾಲೀನ ಬೆಳವಣಿಗೆಗಳನ್ನು ಚರ್ಚಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ಶಾಂಭವಿ ಥೋರ್ಲಿ ನಿರೂಪಿಸಿದರು. ಅನನ್ಯ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗ್ಲೋರಿಯಾ ಮತ್ತು ಸಂಗಡಿಗರು ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಸೇಜಲ್ ಮಗದುಮ್ ವಂದಿಸಿದರು.
3rd April 2025
ಸರ್ವಜ್ಞರ ವಚನಗಳಲ್ಲಿ ಆರೋಗ್ಯ ಮತ್ತು ಸಂಯಮ
ಸರ್ವೆಸಾಮಾನ್ಯವಾಗಿ ಎಲ್ಲರೂ ಬಯಸುವುದು ಸುಖಮಯವಾದ ಜೀವನವನ್ನು ಆದರೆ ಇದು ಬಯಕೆಯಷ್ಟೇ ಆಗಿದೆ.ಈ ಬಯಕೆಯನ್ನು ಈಡೇರಿಸಿಕೊಳ್ಳಲು ಜೀನದ ಶೈಲಿ ಮತ್ತು ವರ್ತನೆಗಳು ಕೂಡ ಬದಲಾಗಬೇಕು. ನಮ್ಮ ಪೂರ್ವಜನರು ಉತ್ತಮ ಜೀವನದ ಆದರ್ಶಗಳನ್ನು ಪಾಲಿಸಿಕೊಂಡು ನೂರಾರು ವರ್ಷಗಳ ಕಾಲ ಬದುಕಿದ್ದರು ಹಾಗೆ ಬದುಕಿದವರು ಈಗ ಅಲಲ್ಲಿ ಕೆಲವರು ಕಾಣ ಸಿಗುತ್ತಾರೆ. ಆದರೆ ನಮ್ಮ ಇಂದಿನ ಪೀಳಿಗೆ ಅವರ ಆದರ್ಶಗಳನ್ನು, ಜೀವನ ಪದ್ದತಿಗಳನ್ನು ಗಾಳಿಗೆ ತೂರಿ ಪಾಶ್ಚಾತ್ಯ ಐಶಾರಾಮಿ ಜೀವನಕ್ಕೆ ಮರುಳಾಗಿ ಅನೇಕ ತರಹದ ಸೇವಿಸಬಾರದಂತಹ ಆಹಾರ ಸೇವಿಸಿ ಅನೇಕ ರೋಗ-ರುಜಿನಗಳಿಗೆ ಆಹ್ವಾನ ನೀಡಿ ಅವುಗಳಿಂದ ಆಗುವ ತೊಂದರೆಗಳಿಂದ ಆರ್ತಧ್ಯಾನದಲ್ಲಿ ತೊಡಗಿ ನರಳಾಡುತ್ತಾ ಮಾನಸಿಕ ವೇದನೆಯನ್ನು ಅನುಭವಿಸುತ್ತಾ ಕೊನೆಗೆ ಕುಟುಂಬದವರಿಗೂ ಕೂಡ ಜಿಗುಪ್ಪೆ ಬರುವಂತಾಗಿ ನರಳಾಡುತ್ತಾ ಅಸು ನೀಗುತ್ತಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದಾಗ ನನಗನಿಸಿದ್ದು ಪಾಶ್ಚಾತ್ಯರ ಊಟದ ಪದ್ಧತಿ, ಲಗುಬಗೆಯ ಜೀವನ ಶೈಲಿ ಮುಂತಾದವುಗಳು ಸ್ಪಷ್ಟವಾದವು.
ಹೀಗೆ ಒಂದು ದಿನ ಯೋಚಿಸುತ್ತಿರುವಾಗ ಸರ್ವಜ್ಞರ ವಚನಗಳು ಎಂಬ ಪುಸ್ತಕ ದೊರೆಯಿತು. ಆಗ 800 ವರ್ಷಗಳ ಹಿಂದೆಯೇ ಸರ್ವಜ್ಞ ಕವಿ ಆರೋಗ್ಯದ ಬಗ್ಗೆ ಸರಳ ರೀತಿಯಲ್ಲಿ ತ್ರಿಪದಿಗಳಲ್ಲಿ ಹೇಳಿದ ವಚನಗಳು ನನಗೆ ದೊರೆತವು. ಅವನ್ನು ಓದಿದಾಗ ನನಗನಿಸಿದ್ದು ಈ ತರಹದ ಕಷ್ಟ-ಕಾರ್ಪಣ್ಯಗಳ ಜೀವನದ ಪರಿಣಾಮಕ್ಕೆ ನಮ್ಮ ಸಂಯಮರಹಿತ ಜೀವನ ಪದ್ದತಿಯೇ ಕಾರಣವಿದೆ ಎಂದೆನಿಸಿತು.
ಹಾಗಾದರೆ ಸಂಯಮ ಎಂದರೇನು ?
ಪರಪದಾರ್ಥಗಳಲ್ಲಿ ಲೀನವಾಗಿರುವ ಉಪಯೋಗವನ್ನು ಕ್ರೂಢೀಕರಿಸಿ ನಿಜ ಆತ್ಮನೆಡೆಗೆ - ಶಿವನೆಡೆಗೆ-ಜ್ಞಾನದೊಳಗೆ ಲೀನಗೊಳಿಸುವುದು ಎಂದಾಗುತ್ತದೆ. ಈ ಸಂಯಮವನ್ನು ಪ್ರಾಣಿ ಸಂಯಮ, ಇಂದ್ರಿಯ ಸಂಯಮ ಎಂಬುದಾಗಿ ವಿಂಗಡಿಸಲಾಗುತ್ತದೆ.
ಇಲ್ಲಿ ಪ್ರಾಣಿ ಸಂಯಮದ ಬಗ್ಗೆ ಹೇಳುವುದಾದರೆ ನಾವು ಅನೇಕ ಸ್ಥಾವರ ಜೀವಗಳ ಬಗ್ಗೆ ಇಟ್ಟಿರುವ ಅಗೌರವವೆಂದೇ ಹೇಳಬಹುದಾಗಿದೆ. ಮಣ್ಣು, ಬೆಂಕಿ, ಜಲ, ವಾಯು, ವನಸ್ಪತಿಗಳನ್ನು ಯಾವ ರೀತಿಯಾಗಿ ಹಿಂಸಿಸುತ್ತಿದ್ದೇವೆಂಬುದು ನಮಗರಿಯದಂತಾಗಿದೆ. ರಾಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಅನೇಕ ಜೀವಗಳ ನಾಶದಿಂದಾಗಿ ಮಣ್ಣು ಈಗ ನಿಶ್ಯಕ್ತ ಮಣ್ಣಾಗಿ ಪರಿವರ್ತನೆಗೊಂಡಿದೆ. ಇದನ್ನು ಕೃಷಿ ವಿಜ್ಞಾನಿಗಳೂ ಕೂಡ ಹೇಳಿದ್ದಾರೆ. ಅಷ್ಟೇ ಏಕೆ ಶ್ರೀ ಹೇಮಂತ ರಾಮಡಗಿಯವರು ತಮ್ಮ ಕೃಷಿ ಮಾಹಿತಿ ಪ್ರಸಾರ ಕಾರ್ಯಕ್ರಮದಲ್ಲಿ ಸೂಜಿಯ ತುದಿಯ ಮೇಲೆ ಅನಂತ ಜೀವಿಗಳು ಇರುತ್ತವೆ ಎಂಬುದಾಗಿ ಹೇಳಿದುದು ನೆನಪಿಗೆ ಬರುತ್ತದೆ. ಜಲವನ್ನಂತೂ ಅನೇಕ ರೀತಿಯಲ್ಲಿ ಮಾಲಿನ್ಯ ಮಾಡುತ್ತಿದ್ದಾರೆ. ಮನೆಯಲ್ಲಿ ಕಾರ್ಖಾನೆಗಳಲ್ಲಿ ಬರುವಂತಹ ತ್ಯಾಜ್ಯಗಳನ್ನೆಲ್ಲ ಹಾಕಿ ಜಲವೂ ಕೂಡ ರೋಗಮಯವಾಗಿಬಿಟ್ಟಿದೆ. ರೆಫ್ರಿಜರೇಟರ, ಏರಕಂಡಿಷನ್ಗಳಂತಹವುಗಳ ಬಳಕೆಯಿಂದ ಕಾರ್ಬನ್ ಮೋನಾಕ್ಸೆಡ್ ಉತ್ಪತ್ತಿಯಾಗಿ ವಾಯು ಕೂಡಮಲಿನವಾಗಿಬಿಟ್ಟಿದೆ. ಅಷ್ಟೇ ಅಲ್ಲ ವನಸ್ಪತಿಗಳ ನಾಶದಿಂದ ಅನಿರೀಕ್ಷಿತ ಮಳೆ, ಕ್ಷಾಮ, ಉಷ್ಣತೆಯ ತೀವ್ರತೆ ಎದುರಿಸುತ್ತಿದ್ದೇವೆ. ಹೀಗೆ ಇನ್ನೂ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ಇದೆಲ್ಲ ಪ್ರಾಣಿಸಂಯಮದ ಬಗೆಯಾದರೆ
ಇಂದ್ರಿಯ ಸಂಯಮದ ಬಗ್ಗೆ ಸರ್ವಜ್ಞರು ಪ್ರಾಮುಖ್ಯವಾಗಿ ತನ್ನ ತ್ರಿಪದಿಗಳಲ್ಲಿ ವರ್ಣಿಸಿದ್ದಾರೆ. ಇಂದ್ರಿಯಗಳಂತೂ ದಾಹದ ದುಃಖ ಉತ್ಪನ್ನ ಮಾಡುವಂಥ ಮಹಾವ್ಯಾದಿಗಳಿವೆ. ಇಂದ್ರಿಯ ವಿಷಯಗಳು ಸ್ವಲ್ಪ ಕಾಲದ ಸಲುವಾಗಿ ದಾಹದ ದುಃಖವನ್ನು ಉಪಶಮನ ಕಾರಣವಾಗಿ ವಿಪರೀತ ಅಪಥ್ಯ ಔಷಧಿಯಂತಿವೆ. ಇವುಗಳಿಂದ ಇಚ್ಛಾರೂಪದ ದಾಹ ವೃದ್ಧಿಸುತ್ತ ಹೋಗುತ್ತದೆ. ಯಾರು ಇಂದ್ರಿಯಗಳ ದಾಸರಾಗಿಬಿಟ್ಟಿದ್ದಾರೆ ಅವರು ಸ್ವಾಭಾವಿಕವಾಗಿ ದುಃಖಗಳೇ ಇದ್ದಾರೆ. ಮೀನು ತನ್ನ ರಸನೇಂದ್ರಿಯದ ವಿಷಯ ಆಧೀನವಾಗಿ ಗಾಳಕ್ಕೆ ಅಂಟಿಸಿದ ಮಾಂಸದ ತುಂಡಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತದೆ. ದುಂಬಿ ಕಮಲದ ಮಕರಂದ ಹೀರಲು ಹೋಗಿ ಘಾಣೇಂದ್ರಿಯದ ವಶವಾಗಿ ಸೂರ್ಯಾಸ್ತದಲ್ಲಿ ಕಮಲ ಮುದುಡುವನ್ನು ಲಕ್ಷಿಸದೇ ಪ್ರಾಣ ಕಳೆದುಕೊಳ್ಳುತ್ತದೆ. ಪತಂಗ ನೇತ್ರದ ವಿಷಯಾಧೀನವಾಗಿ ಬೆಂಕಿಗೆ ಬಿದ್ದು ಸಾವನ್ನಪ್ಪುತ್ತದೆ. ಜಿಂಕೆ ಕರ್ಣೇಂದ್ರಿಯದ ವಶವಾಗಿ ಬೇಟೆಗಾರನ ಕೊಳಲಿನ ಶಬ್ದಕ್ಕೆ ವಶವಾಗಿ ಪ್ರಾಣಹಾನಿ ಮಾಡಿಕೊಳ್ಳುತ್ತದೆ. ಸ್ಪರ್ಶನೇಂದ್ರಿಯದ ಆಧೀನವಾಗಿ ಹೆಣ್ಣಾನೆ ಅನೇಕ ತರಹದ ಕಷ್ಟ ಅನುಭವಿಸಬೇಕಾಗುತ್ತದೆ.