7th October 2024

*🌻ದಿನಕ್ಕೊಂದು ಕಥೆ🌻*
*ನಾವೇ ಭಾಗ್ಯವಂತರು! ನಾವೇ ತೀರ್ಮಾನಿಸುವವರು!*
ನಾವೇ ಭಾಗ್ಯವಂತರು ಎಂದು ಹೇಳಿಕೊಳ್ಳುವುದರ ಜತೆಗೆ ತೀರ್ಮಾನ ಮಾಡುವವರೂ ನಾವೇ! ಅದರ ಬಗ್ಗೆಯೇ ಇರುವ ಇಲ್ಲಿರುವ ಕುತೂಹಲಕಾರಿ ಪ್ರಸಂಗವನ್ನು ಹೇಳಿದವರು ರಿಸರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮತ್ತು ಒಳ್ಳೆಯ ವ್ಯಕ್ತಿತ್ವ ವಿಕಸನದ ಉಪನ್ಯಾಸರೂ ಆದ ವೈ.ವಿ.ಗುಂಡೂರಾವ್ ಅವರು. ಆ ಪ್ರಸಂಗ ಹೀಗಿದೆ.
ಒಮ್ಮೆ ಸೂಟು–ಬೂಟು–ಹ್ಯಾಟ್ ಧರಿಸಿದ್ದ ವ್ಯಕ್ತಿಯೊಬ್ಬ ಏರ್ಪೋರ್ಟಿಗೆ ಹೋಗಲು ಟ್ಯಾಕ್ಸಿ ಹತ್ತಿದನಂತೆ. ಟ್ಯಾಕ್ಸಿಯಲ್ಲಿ ಗಂಭೀರವಾಗಿ ಕುಳಿತಿದ್ದ ಅವರನ್ನು ಗಮನಿಸಿದ ಟ್ಯಾಕ್ಸಿ ಡ್ರೈವರ್ ‘ನೀವೇನೋ ಚಿಂತೆಯಲ್ಲಿರುವಂತಿದೆ. ಏರೋಪ್ಲೇನಿನಲ್ಲಿ ಹಾರಾಡುವ ನಿಮಗೇತರ ಚಿಂತೆ ಸಾರ್?’ ಎಂದ. ಆ ‘ವಿಮಾನ ಹಾರಾಟದ ಕಷ್ಟ ಅನುಭವಿಸಿದವರಿಗೇ ಗೊತ್ತು. ನೆಲದ ಮೇಲಿನಿಂದ ನಲವತ್ತು ಸಾವಿರ ಅಡಿಗಳ ಎತ್ತರದಲ್ಲಿ ವಿಮಾನ ಹಾರುತ್ತದೆ. ಅಲ್ಲಿ ಏನಾದರೂ ಆದರೆ ಎಲುಬೂ ಸಿಕ್ಕುವುದಿಲ್ಲ. ಕೆಳಗಿಳಿದು ಬಂದರೆ ಮತ್ತೊಂದು ಪುನರ್ಜನ್ಮ. ವಿಮಾನದೊಳಗಡೆ ಹವಾನಿಯಂತ್ರಿತ ವಾತಾವರಣ. ಉಸಿರಾಡಿದ ಗಾಳಿಯನ್ನೇ ಮತ್ತೆ ಮತ್ತೆ ಉಸಿರಾಡಿ ತಲೆಯೆಲ್ಲ ಬಿಸಿಯಾಗುತ್ತದೆ. ವಿಮಾನ ಪ್ರಯಾಣಿಕರಲ್ಲಿ ಬಹಳ ಜನ ತಾವು ಅಸಮಾನರು ಎಂಬ ಅಹಮ್ಮಿನಲ್ಲಿರುತ್ತಾರೆ. ಗಂಟುಮುಖದವರು. ಕಷ್ಟಪಟ್ಟು ನಗುತ್ತಾರೆ. ಸದಾ ನಗುವ ಗಗನ ಸಖಿಯರದ್ದು ಪ್ಲ್ಯಾಸ್ಟಿಕ್ ನಗೆ. ಅಲ್ಲಿ ಕೊಡುವ ಊಟವೋ ಶ್ರೀಮಂತರ ಪುಷ್ಕಳ ಊಟ. ದಿನಾ ಅದನ್ನೇ ತಿನ್ನುವುದು ಕಷ್ಟ!’ ಎನ್ನುತ್ತ ತೊಂದರೆಗಳ ಸರಮಾಲೆಯನ್ನು ಪೇರಿಸಿದರು.
ಡ್ರೈವರ್ ಅವರನ್ನು ಸಹಾನುಭೂತಿಯಿಂದ ನೋಡುತ್ತ ‘ಹಾಗಿದ್ದರೆ ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೀರಿ? ರೈಲು–ಬಸ್ಸು–ಕಾರುಗಳಲ್ಲಿ ಹೋಗಬಹುದಲ್ಲ!’ ಎಂದು ಪ್ರಶ್ನಿಸಿದ. ಆತ ನಿಟ್ಟುಸಿರಿನೊಂದಿಗೆ ‘ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೇನೆಂದರೆ ನಾನು ವೃತ್ತಿನಿರತ ವಿಮಾನದ ಪೈಲಟ್!’ ಎಂದ.
ಇದನ್ನು ಕೇಳಿ ಡ್ರೈವರಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆತ ‘ಇಷ್ಟೆಲ್ಲ ಬೇಸರಗಳಿದ್ದರೆ ಪೈಲಟ್ ವೃತ್ತಿಯೇ ಏಕೆ?’ ಎಂದು ಅವರು ‘ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ, ಒಳ್ಳೆಯ ಯೂನಿಫಾರಂ, ಬಂಧು–ಬಳಗದಲ್ಲಿ ಘನತೆ–ಗೌರವ ಮತ್ತೆಲ್ಲಿ ಸಿಗುತ್ತದೆ? ಅದಕ್ಕಾಗಿ ಈ ವೃತ್ತಿ!’ ಎಂದರು.
ಡ್ರೈವರ್ ‘ತಾವು ತಪ್ಪು ತಿಳಿಯದಿದ್ದರೆ ತಮಗೊಂದು ಮಾತು ಹೇಳಲೇ? ಕೆಲಸಕ್ಕೆ ಹೊರಟಾಗ ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ ಮುಂತಾದವುಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಿ. ‘ನಲವತ್ತು ಸಾವಿರ ಅಡಿ ಎತ್ತರ, ಕೃತಕ ನಗೆ, ಉಸಿರುಗಟ್ಟಿಸುವ ವಾತಾವರಣ ಕುರಿತು ಚಿಂತಿಸಬೇಡಿ. ನಾನು ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಆದರೆ ನಾನು ಕಲಿತ ಪಾಠ. ನನ್ನದು ಟ್ಯಾಕ್ಸಿ ಓಡಿಸುವ ಕೆಲಸ. ಟ್ಯಾಕ್ಸಿಗೆ ನಾನೇ ಮಾಲೀಕ. ನಾನೇ ಚಾಲಕ. ನಾನು ಕೆಲಸಕ್ಕೂ ಹೋಗುತ್ತೇನೆ. ಮಕ್ಕಳೊಂದಿಗೆ ಕಾಲವನ್ನೂ ಕಳೆಯುತ್ತೇನೆ. ಬೆಂಗಳೂರು ಮತ್ತು ವಿಮಾನ ನಿಲ್ದಾಣ ಇವೆರಡೂ ಬಿಟ್ಟು ನಾನು ಮತ್ತೇನೂ ನೋಡಿಲ್ಲ. ನನ್ನ ತಿಂಗಳ ಸಂಪಾದನೆ ನಿಮ್ಮ ಒಂದು ದಿನದ ಸಂಪಾದನೆ ಇರಬಹುದು. ಆದರೆ ನಾನು ನಿಮಗಿಂತ ಆನಂದವಾಗಿದ್ದೇನೆ ಎನಿಸುತ್ತದೆ’ ಎಂದು ಹೇಳುವಷ್ಟರಲ್ಲಿ ಅವರು ವಿಮಾನ ನಿಲ್ದಾಣವನ್ನು ಮುಟ್ಟಿದರು.
ಆತ ಟ್ಯಾಕ್ಸಿಯಿಂದಿಳಿದು ಡ್ರೈವರಿಗೆ ರೂಪಾಯಿ ಟಿಪ್ಸ್ ಕೊಟ್ಟು ‘ನನಗೆ ನಿನ್ನ ಮಾತು ಹಿಡಿಸಿತು. ನೀನು ಹೇಳಿದುದನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತೇನೆ. ಭಗವಂತನ ದಯೆಯಿದ್ದರೆ ಮತ್ಯಾವಾಗಲಾದರೂ ಸಿಗೋಣ’ ಎಂದು ಹೇಳಿ ದಡಬಡ ಹೊರಟುಹೋದರು. ಈ ಪ್ರಸಂಗವನ್ನು ಹೇಳಿದ ಉತ್ತಮ ವಾಕ್ಪಟುಗಳಾದ ಗುಂಡೂರಾಯರಿಗೆ ಧನ್ಯವಾದಗಳು.
ನಾವು ಡ್ರೈವರೋ, ಪೈಲಟ್ಟೋ ಅಲ್ಲದಿರಬಹುದು. ಆದರೆ ನಮಗೊಂದು ಉದ್ಯೋಗವಿದೆ. ಬಿಡುವು ಸಿಕ್ಕಾಗ ನಮ್ಮ ಉದ್ಯೋಗದ ಅನುಕೂಲಗಳ ಅನಾನುಕೂಲಗಳ ಪಟ್ಟಿ ಮಾಡಿಕ್ಳೊಬಹುದು. ಅನುಕೂಲಗಳ ಪಟ್ಟಿ ದೊಡ್ಡದಿದ್ದರೆ ನಾವೇ ಭಾಗ್ಯವಂತರೆಂದು ತೀರ್ಮಾನಿಸಿಕೊಳ್ಳಬಹುದು. ಅನಾನುಕೂಲಗಳ ಪಟ್ಟಿ ನಿಧಾನವಾಗಿ ಮತ್ತೊಂದು ಕೆಲಸ ಹುಡುಕಿಕೊಳ್ಳಬಹುದು!
ಸಂಗ್ರಹ: ವೀರೇಶ್ ಅರಸಿಕೆರೆ.
🌻🌻 *ದಿನಕ್ಕೊಂದು ಕಥೆ* 🌻🌻 *ತಕ್ಷಣದ ಪ್ರತಿಕ್ರಿಯೆ*
ಅದೊಂದು ಸುಂದರವಾದ ಕೊಳವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದುಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು.
ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುತ್ತಿತ್ತು. ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು.
ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು. ಅದಕ್ಕೆ ಕೋಪ ತಡೆದುಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು.
ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕಾರಣವಾಗುತ್ತಿತ್ತು. ಹಂಸಗಳು ಅನೇಕ ಬಾರಿ ಅದರ ಬಗ್ಗೆ ಆಮೆಗೆ ಹೇಳಿ ನೋಡಿದವು. ಆಮೆ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಮತ್ತಷ್ಟು ರೇಗಿತು. ‘ಹೇ, ನೀವಿಬ್ಬರೂ ನಿಷ್ಪ್ರಯೋಜಕರು, ಪ್ರತಿಯೊಂದಕ್ಕೂ ಹೆದರುತ್ತೀರಿ. ನಾನು ಯಾರಿಗೂ ಹೆದರುವವನಲ್ಲ. ನನ್ನ ನಡೆ, ನುಡಿ ಯಾವಾಗಲೂ ನೇರ. ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
ನನ್ನದೇನಿದ್ದರೂ ಒಂದು ಹೊಡೆತ, ಎರಡು ತುಂಡು. ಅದೇ ನನ್ನ ನಾಯಕತ್ವದ ಶಕ್ತಿ’ ಎಂದು ಗುಡುಗಿತು. ಇದಕ್ಕೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಹಂಸಗಳು ಸುಮ್ಮನಾದವು. ಮರುವರ್ಷ ಬೆಟ್ಟಗಳ ಇಳಿಜಾರಿನಲ್ಲಿ ಕೆಲವು ಕಾರ್ಖಾನೆಗಳು ಆರಂಭಗೊಂಡವು. ಅವುಗಳ ಕಟ್ಟಡಗಳು ಎಲ್ಲೆಡೆ ಹರಡತೊಡಗಿದವು. ಇದರಿಂದ ಎರಡು ರೀತಿಯ ಹಾನಿ ಕೊಳಕ್ಕೆ ಆಗತೊಡಗಿತು. ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಂತುಹೋಯಿತು.
ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ಕೊಳಕ್ಕೆ ಸೇರಿ, ನೀರು ವಿಷಮಯವಾಗತೊಡಗಿತು. ಇದನ್ನು ಮೊದಲು ಗಮನಿಸಿದ್ದು ಆಮೆ. ಸಣ್ಣಪುಟ್ಟ ಮೀನುಗಳು ಸಾಯುವುದನ್ನು ಕಂಡೊಡನೆ ಅದಕ್ಕೆ ಈ ಸರೋವರ ಇನ್ನು ಬದುಕಲಾರದು ಎನ್ನಿಸಿತು. ತಕ್ಷಣವೇ ಅದು ಹಂಸಗಳನ್ನು ಕರೆದು ಸುತ್ತಮುತ್ತ ಹಾರಾಡಿ ಬೇರೆ ಕೊಳಗಳು ಇರುವುದನ್ನು ನೋಡಿಕೊಂಡು ಬರಲು ಒತ್ತಾಯಿಸಿತು. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಹಂಸಗಳು ಹಿಂದೆಮುಂದೆ ನೋಡಿದಾಗ ಅವುಗಳಿಗೆ ಬೈಯ್ದು, ಪ್ರೋತ್ಸಾಹಿಸಿ ಒಪ್ಪಿಸಿತು. ನಾಲ್ಕು ದಿನಗಳಲ್ಲಿ ಅವು ಮತ್ತೊಂದು ಸುಂದರ ಕೊಳವನ್ನು ನೋಡಿಕೊಂಡು ಬಂದವು.
ಆದರೆ, ಅದು ಈ ಕೊಳದಿಂದ ಒಂದು ಮೈಲಿ ದೂರವಿತ್ತು. ಹಂಸಗಳೇನೋ ಹಾರಿಹೋದಾವು, ಆಮೆ ಹೋಗುವುದು ಹೇಗೆ? ಕೊನೆಗೆ ಅದೇ ಸಲಹೆ ನೀಡಿತು. ‘ನೀವಿಬ್ಬರೂ ನಿಮ್ಮ ಬಾಯಿಯಲ್ಲಿ ಒಂದು ಕಡ್ಡಿ ಹಿಡಿದುಕೊಂಡು ಒಮ್ಮೆಗೇ ಹಾರಿ. ನಾನು ಆ ಕಡ್ಡಿಯ ಮಧ್ಯಭಾಗವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತೇನೆ. ಆಗ ನೀವು ನನ್ನನ್ನು ಎತ್ತಿಕೊಂಡು ಆ ಕೊಳಕ್ಕೆ ಹೋಗಿ ಇಳಿಸಿಬಿಡಿ’. ಅಂತೆಯೇ ಪಕ್ಷಿಗಳು ಉದ್ದ ಕಡ್ಡಿಯ ಎರಡು ತುದಿಗಳನ್ನು ಕಚ್ಚಿಕೊಂಡು ಸಿದ್ಧವಾದವು.
ಆಮೆ ಮಧ್ಯಭಾಗವನ್ನು ಗಟ್ಟಿಯಾಗಿ ಬಾಯಲ್ಲಿ ಹಿಡಿಯಿತು. ಪಕ್ಷಿಗಳು ಮೇಲೆ ಹಾರಿದವು. ನಡುವೆ ಆಮೆ ಗಾಳಿಯಲ್ಲಿ ತೇಲುತ್ತ ಸಾಗಿತ್ತು. ಈ ದೃಶ್ಯವನ್ನು ಕಂಡು ಎಲ್ಲ ಪ್ರಾಣಿಗಳು, ಜನ ಆಶ್ಚರ್ಯಪಟ್ಟರು, ಕೆಲವರು ಕೈ ತಟ್ಟಿ ನಕ್ಕರು. ಹೀಗೆ ನಕ್ಕಿದ್ದು ಆಮೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸಿಟ್ಟು ಸರ್ರನೇ ಏರಿತು. ‘ದರಿದ್ರಗಳಾ, ನನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳುವ ಬದಲು ನಗುತ್ತೀರಾ?’ ಎಂದು ಕೋಪದಿಂದ ಕೂಗಿತು.
ಆಗ ಕಡ್ಡಿಯ ಹಿಡಿತ ತಪ್ಪಿ ಹೋಗಿ ಎತ್ತರದಿಂದ ಕೆಳಗೆ ಬಿದ್ದು ಚಿಪ್ಪೊಡೆದು ಸತ್ತ್ತು ಹೋಯಿತು. ಎಷ್ಟೇ ದೊಡ್ಡ ನಾಯಕರಾದರೂ, ಎಲ್ಲ ನಾಯಕತ್ವದ ಗುಣಗಳಿದ್ದರೂ ಸಿಟ್ಟನ್ನು ನಿಗ್ರಹಿಸದಿದ್ದರೆ, ತಕ್ಷಣದ ಪ್ರತಿಕ್ರಿಯೆಯ ಉದ್ವೇಗ ತಡೆದುಕೊಳ್ಳದಿದ್ದರೆ ಅದೊಂದು ದಿನ ಬಹುದೊಡ್ಡ ಅಪಾಯ ತಂದೊಡ್ಡುತ್ತದೆ. ಅಂತಹ ಪ್ರಕರಣಗಳನ್ನು ನಾವು ಸಾಕಷ್ಟು ಕಂಡಿದ್ದೇವೆಯಲ್ಲವೇ? ಸಂಗ್ರಹ: ವೀರೇಶ್ ಅರಸಿಕೆರೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ