16th October 2024
ಕಥೆ- "ವಜನು..!"
ಇನ್ನೂ ಬೆಳಕೇ ಹರಿದಿರದೇ ಹಾಸಿಗೆಯಲ್ಲಿಯೇ ಹೊರಳಾಡುತ್ತಿದ್ದವನಿಗೆ ಸ್ನೇಹಿತನಿಂದ ಬಂದ ಕರೆಯ ಸುದ್ದಿ ಕೇಳಿ ಗರ ಬಡಿದಂತಯಿತು.ಏಳಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿಯೇ ಮುಂಜಾನೆಯ ಸವಿ ನಿದ್ರೆಯ ಮಂಪರಿನಲ್ಲಿದ್ದ ನನಗೆ ಆ ಸುದ್ದಿ ಸಿಡಿಲು ಬಂದೆರಗಿದಂತಾಗಿತ್ತು.ನಿನ್ನೆ ಸಂಜೆ ಹೌದು ನಿನ್ನೆ ಸಂಜೆಯಷ್ಟೇ ಪೇಟೆೆಯಲ್ಲಿ ಅವನನ್ನು ನೋಡಿದ್ದೆ.ನನ್ನೆದುರಿಗೆ ಬರುತ್ತಿದ್ದವನು ಹಾಗೆಯೇ ಆ ಜನ ಜಂಗುಳಿಯಲ್ಲಿ ಮಿಂಚಿನಂತೆ ಮರೆಯಾಗಿದ್ದ.ಅವನು ಬೇಕಂತಲೇ ಹಾಗೆ ಮಾಡಿದ್ದ ಅಂತ ನನಗನಿಸಿದರೂ ಯಾಕೋ ಅವನು ಹಾಗೆಲ್ಲಾ ಮಾಡುವ ಮನುಷ್ಯನಲ್ಲ ಅಂತ ನನ್ನ ಒಳ ಮನಸ್ಸು ಹೇಳುತ್ತಿತ್ತು.ಇಂತಹ ಜಾತ್ರೆಯಂತಹ ಜನಜಂಗುಳಿಯಲ್ಲಿ ಆತ ನನ್ನನ್ನು ಗಮನಿಸದೆಯೇ ಇದ್ದಿರಲೂಬಹುದು.ಆದರೆ ಎದುರಿಗೆ ಪ್ರತ್ಯಕ್ಷನಾದವನು ಒಂದೇ ಕ್ಷಣಕ್ಕೆ ಮಾಯವಾಗಿದ್ದು ಮಾತ್ರ ನನ್ನ ಸಹನೆಯನ್ನು ಪರೀಕ್ಷಿಸಿತ್ತು.ಜೊತೆಗೆ ಒಂದು ವಿಚಿತ್ರ ಚಡಪಡಿಕೆಗೆ ದೂಡಿತ್ತು.
ಅಷ್ಟಕ್ಕೂ ಅವನ ಮುಖ ನೋಡದೆಯೇ ಬರೋಬ್ಬರಿ ಎರಡು ತಿಂಗಳ ಮೇಲಾಗಿತ್ತು.ತುಂಬಾ ತೊಂದರೆಯೆಂದು ತನ್ನ ಅಳಲನ್ನು ತೋಡಿಕೊಂಡು ಇನ್ನೆರೆಡೇ ತಿಂಗಳು ಅಷ್ಟರೊಳಗೆ ಬಡ್ಡಿ ಸಮೇತ ಮರಳಿಸಿಬಿಡುತ್ತೇನೆಂದು ಐವತ್ತು ಸಾವಿರ ಪಡೆದಿದ್ದ.ಅಲ್ಲಿಂದ ಇಲ್ಲೀ ತನಕ ಅಲ್ಲಿ ಇಲ್ಲಿ ಸಿಕ್ಕಾಗ ಅದೂ ಇದೂ ನಾಲ್ಕು ಮಾತನಾಡುತ್ತಿದ್ದೇವೆಯೇ ಹೊರತು ದುಡ್ಡಿನ ವಿಷಯವನ್ನು ನಾನೆಂದೂ ಪ್ರಸ್ತಾಪ ಮಾಡಿರಲಿಲ್ಲ.ಏಕೆಂದರೆ ಅವನೆಂದೂ ಮೋಸ ಮಾಡುವವನಲ್ಲ ಅಂತ ನನಗೆ ನಂಬಿಕೆಯಿತ್ತು.ಎಲ್ಲದಕ್ಕಿಂತ ಮುಖ್ಯವಾಗಿ ಎಂದೂ ಯಾರಿಗೂ ಒಂದು ನಯಾ ಪೈಸೆಯ ಸಹಾಯ ಮಾಡದವನು ನಾನು ಇವನಿಗೆ ಕೇಳಿ ತಕ್ಷಣವೇ ಹಣ ಕೊಟ್ಟುಬಿಟ್ಟಿದ್ದೆ.ಈ ಹಣ ಕೊಡುವ ವಿಷಯ ಬಂದಾಗ ನಾನೊಂದು ರೀತಿಯ ನಿರುತ್ಸಾಹಿ,ಜಿಪುಣ ಅಂತ ಬೇಕಾದರೂ ಅಂದುಕೊಳ್ಳಿ.ಎಲ್ಲಿ ತೆಗೆದುಕೊಂಡವನು ಕೈ ಎತ್ತಿಬಿಡುತ್ತಾನೋ ಎಂಬ ಒಂದು ಸಣ್ಣ ಅಳುಕು ಭಯ ನನ್ನ ಮನದ ಮೂಲೆಯಲ್ಲಿ ಅಚ್ಚೊತ್ತಿ ಕೂತುಬಿಟ್ಟಿತ್ತು.ಈ ಹೆದರಿಕೆಯಿಂದಲೇ ಇದೊಂದು ವಿಷಯದಲ್ಲಿ ಮಾತ್ರ ನಾನು ಉದಾರಿಯಾಗಿರಲಿಲ್ಲ.ಆದರೆ ಅವನ ವಿಷಯವೇ ಬೇರೆ.ಅವನು ಕೇಳಿದ ತಕ್ಷಣ ಅವನಿಗೆ ಹಣ ಹೊಂದಿಸಿಕೊಟ್ಟಿದ್ದೆ.ಅದಕ್ಕೆ ಕಾರಣ ಅವನ ವಿನಯ,ಸಜ್ಜನಿಕೆ ಹಾಗೂ ಪ್ರಾಮಾಣಿಕತೆ.ಅಷ್ಟಕ್ಕೂ ಅವನೇನೂ ನಿನ್ನೆ ಮೊನ್ನೆಯ ಪರಿಚಯದವನಲ್ಲ.ಹಲವಾರು ವರುಷಗಳಿಂದ ಅವನ ಸ್ನೇಹವಿದ್ದ ಕಾರಣ ಮೇಲಾಗಿ ಅವನ ಗುಣ ಬಲ್ಲವನಾಗಿದ್ದರಿಂದ ಅವನು ಕೇಳಿದ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಹಣ ಅವನ ಕೈಗಿತ್ತಿದ್ದೆ.
ಎಲ್ಲರಿಗೂ ಹಣದ ವಿಷಯದಲ್ಲಿ ಬಹಳ ಬಿಗಿಯಾಗಿದ್ದ ನಾನು ಅವನಿಗೆ ಹಣ ನೀಡಿದ ಮರುಕ್ಷಣದಲ್ಲೇ ದಿಗಿಲಿಗೆ ಬಿದ್ದುಬಿಟ್ಟೆ.ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಅಷ್ಟು ಹಣ ಸಾಲ ಕೊಟ್ಟಿದ್ದರಿಂದ ಮೈಯೊಳಗೆ ಇರುವೆ ಬಿಟ್ಟುಕೊಂಡವನಂತೆ ಹೊರಳಾಡುತ್ತಿದ್ದೆ.ಅಂದಿನಿಂದ ಪ್ರತಿದಿನವೂ ತಳಮಳವೇ!ಛೇ ಅವನು ಕೇಳಿದ ತಕ್ಷಣ ನಾನು ಕೊಡಬಾರದಿತ್ತು.ಸ್ವಲ್ಪ ಸಮಯ ತೆಗೆದುಕೊಂಡು ಮತ್ತೊಮ್ಮೆ ಯೋಚಿಸಿ ನಂತರ ಕೊಡಬೇಕಿತ್ತು.ಅಕಸ್ಮಾತ್ ಅವನು ಆ ಹಣವನ್ನು ಹಿಂತಿರುಗಿಸುತ್ತಾನೋ ಇಲ್ಲವೋ..?ಅವನೇನಾದರೂ ಕೈಎತ್ತಿಬಿಟ್ಟರೆ ಆಮೇಲೆ ನನ್ನ ಗತಿ?ಎಂದು ಕೂತರೂ ನಿಂತರೂ ಬರೀ ಅದೇ ವಿಷಯದ ಹುಳ ನನ್ನ ತಲೆ ಹೊಕ್ಕಿ ಕೊರೆಯತೊಡಗಿತ್ತು.
ಅಷ್ಟಕ್ಕೂ ಆ ಐವತ್ತು ಸಾವಿರ ಹೋದರೆ ನಾನೇನು ಬೀದಿಗೆ ಬೀಳುತ್ತಿರಲಿಲ್ಲ.ಅಥವಾ ನನ್ನ ಜೀವನ ಮುಳುಗಿಯೂ ಹೋಗುತ್ತಿರಲಿಲ್ಲ.ಆದರೂ ಒಂದು ಮಟ್ಟಿಗೆ ಅದೊಂದು ದೊಡ್ಡ ಮೊತ್ತವೇ ತಾನೇ?ಇವೆಲ್ಲಾ ಯೋಚನೆ ಬಂದಾಗ ಮನದೊಳಗೆ ಚಿಂತೆಯ ಎಳೆಯೊಂದು ಸಣ್ಣಗೆ ಕುಟುಕತೊಡಗುತ್ತಿತ್ತು.ಅವನೇನೋ ಒಳ್ಳೆಯವನು ನಿಜ,ಆದರೆ ಈ ಸಮಯ ಸಂದರ್ಭ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿರುತ್ತದೆಯೇ?ಹಾಗೇನಾದರೂ ಅವನ ಸಮಸ್ಯೆಗಳು ಹೆಚ್ಚಾಗಿ ಅವನು ನನಗೆ ಎಲ್ಲಾದರೂ ಕೈಕೊಟ್ಟುಬಿಟ್ಟರೆ ಆ ಸಂಕಟವನ್ನು ನಾನು ಅರಗಿಸಿಕೊಳ್ಳುವುದಾದರೂ ಹೇಗೆ?ಜೀವನದಲ್ಲಿ ಏನನ್ನಾದರೂ ಕಳೆದುಕೊಳ್ಳಬಹುದು ಆದರೆ ಸುಖಾಸುಮ್ಮನೆ ಹಣ ಕಳೆದುಕೊಳ್ಳುವ ತಳಮಳ,ಕಸಿವಿಸಿಯನ್ನು ತಡೆದುಕೊಳ್ಳಲು ನಾನಂತೂ ಆಶಕ್ತನಾಗಿದ್ದೆ.
ಇದರ ನಡುವೆ ಅವನು ಹಣ ಪಡೆದಾಗಿನಿಂದ ನಾನು ಅವನನ್ನು ನೋಡುವ ರೀತಿಯೇ ಬದಲಾಗಿಹೋಗಿತ್ತು.ಮೊದಲಿದ್ದ ಸಲುಗೆ ಆತ್ಮೀಯತೆ ಸಣ್ಣಮಟ್ಟಿಗೆ ಕರಗುತ್ತಾ ಸಾಗಿತ್ತು.ಮೊದಮೊದಲು ಅವನು ನೆನಪಾದೊಡನೆ ನಾನು ಅವನು ಜೊತೆಗೆ ಕಳೆದ ಮಧುರ ಕ್ಷಣಗಳು ಮನದ ಪುಟದೊಳಗಿಂದ ಮಿಂಚಿ ಮರೆಯಾಗಿ ಮುದ ನೀಡುತ್ತಿತ್ತು.ಆದರೆ ಈ ಸಾಲ ಕೊಟ್ಟಾಗಿನಿಂದ ಬರೀ ಹಣದ ವಿಷಯವೇ ಗಿರಕಿ ಹೊಡೆಯತೊಡಗಿತ್ತು.ಅವನು ಮೋಸ ಮಾಡುವುದಿಲ್ಲ ಅಂತ ಗೊತ್ತಿದ್ದರೂ ಕೂಡ ಯಾವುದೋ ಒಂದು ಅನುಮಾನ ಅಪನಂಬಿಕೆ ಕಾಡತೊಡಗಿತ್ತು.ಈಗಂತೂ ಈ ಸಂಕಟದಿಂದ ಹೇಗೆ ಪಾರಾಗುವುದೋ ಎಂಬುದು ತಿಳಿಯದಾಗಿತ್ತು.
ಈಗ ನೋಡಿದರೆ ಧುತ್ತನೇ ಅವನ ಸಾವಿನ ಸುದ್ದಿ ಬರಸಿಡಿಲಂತೆ ಬಂದೆರಗಿತ್ತು.ಹಾಗಾದರೆ ನನ್ನ ಹಣದ ಗತಿ?ನೆನೆದೊಡನೆ ಭೂಮಿ ಕಂಪಿಸಿದoತಾಯ್ತು.ಛೇ..ಹಣ ನೀಡಿ ನಾನು ಬಹು ದೊಡ್ಡ ತಪ್ಪು ಮಾಡಿಬಿಟ್ಟೆ.ಈಗ ಆತನೇ ಇಲ್ಲ..ಹಾಗಾದರೆ ಈಗ ನಾನು ಯಾರಲ್ಲಿ ಹಣ ಕೇಳುವುದು?ಈ ವಿಚಾರ ಅವನ ಮನೆಯವರಿಗೆ ಹೇಳಿದ್ದಾನೋ ಇಲ್ಲವೋ?ಅಕಸ್ಮಾತ್ ಹೇಳಿದ್ದರೂ ಕೂಡ ಈಗ ಅವರು ಆ ಹಣವನ್ನು ಕೊಡಲು ಒಪ್ಪುವರೋ ಇಲ್ಲವೋ?ಅಕಸ್ಮಾತ್ ನಮಗ್ಯಾವ ಹಣದ ವಿಚಾರವೂ ಗೊತ್ತಿಲ್ಲ ಅಂತ ಹೇಳಿಬಿಟ್ಟರೆ?ರಾದ್ಧಾಂತ ಮಾಡಿಬಿಟ್ಟರೆ?ಹೀಗೇ ಅದೂ ಇದೂ ಯೋಚನೆ ಹೊಕ್ಕು ಕಣ್ಣಿಗೆ ಕತ್ತಲೆ ಕವಿದಂತಾಯ್ತು.
ಇವೆಲ್ಲವುಗಳ ನಡುವೆ ನನ್ನ ಆತ್ಮಸಾಕ್ಷಿ ಇಂಥ ಸಮಯದಲ್ಲೂ ನೀನು ಗೆಳೆಯನ ಸಾವಿಗೆ ಮರುಗುವುದ ಬಿಟ್ಟು ಆ ಹಣದ ವಿಷಯಕ್ಕೇ ಬೆಲೆ ಕೊಡುತ್ತಿರುವುದು ತಪ್ಪೆಂದು ಎಚ್ಚರಿಸಿದರೂ ಮನಸ್ಸು ಕೇಳಬೇಕಲ್ಲಾ?ಬೇಡವೆಂದರೂ ಅದೇ ವಿಷಯಕ್ಕೆ ಅಂಟಿಕೊoಡುಬಿಟ್ಟಿತ್ತು.ಇರಲಿ,ಏನಾದರಾಗಲಿ ಮೊದಲು ಅವನ ಮನೆಗೆ ಹೋಗಬೇಕು ಎಂದು ಲಗುಬಗನೆ ತಯಾರಾಗಲು ಸಿದ್ಧನಾದೆ.ಸ್ನಾನ ಮಾಡಿ ಮನೆಯಿಂದ ಹೊಡುವವರೆಗೂ ಬರೀ ಇವೇ ಯೋಚನೆಗಳು ನನಗೆ ಇಣುಕಿ ಇಣುಕಿ ಘಾಸಿ ಮಾಡತೊಗಿತು.ಆದರೂ ಇವೆಲ್ಲದರ ನಡುವೆ ಅವನ ಸಾವಿಗಿಂತ ಆ ದುಡ್ಡು ಏನೂ ದೊಡ್ಡದಲ್ಲ ಎಂಬoತೆ ಬಲವಂತವಾಗಿ ನನಗೆ ನಾನೇ ಸಮಾಧಾನಮಾಡತೊಡಗಿದೆ.ಈ ಹಣದ ವ್ಯವಹಾರಕ್ಕೂ ಅವನ ನನ್ನ ಗೆಳೆತನಕ್ಕೂ,ನಮ್ಮ ಬಾಂಧವ್ಯಕ್ಕೂ ತಾಳೆ ಹಾಕಲೇಕೂಡದೆಂದು ಕ್ಷಣ ಕ್ಷಣಕ್ಕೂ ನನ್ನ ನಿರ್ಧಾರ ಬಲ ಮಾಡಿಕೊಂಡವನoತೆ ಹೊರಳಾಡುತ್ತಿದ್ದೆ.ಆದರೆ ಏನೇ ಮಾಡಿದರೂ ಈ ಮನಸ್ಸೆಂಬುದು ನಿಯಂತ್ರಣಕ್ಕೇ ಸಿಗುತ್ತಿರಲಿಲ್ಲ.ಅಂತೂ ಕೊನೆಗೆ ಅದೇನಾದರೂ ಚಿಂತೆಯಿಲ್ಲ ಆ ಹಣದ ವಿಚಾರ ಮಾತನಾಡುವುದು ಬೇಡವೇ ಬೇಡ,ಒಂದೆರೆಡು ತಿಂಗಳುಗಳು ಉರುಳಲಿ ಆಮೇಲೆ ಅವರ ಮನೆಯವರಿಗೆ ನಿಧಾನವಾಗಿ ಕೇಳಿದರಾಯಿತು.ಅವರು ಮೊದಲು ಈ ದುಃಖದಿಂದ ಹೊರಬರಲಿ ಅವರಿಗೆ ಈ ವಿಚಾರ ಗೊತ್ತಿದ್ದರೂ ಸರಿ ಇಲ್ಲದಿದ್ದರೆ ಯಾರನ್ನಾದರೂ ದೊಡ್ಡವರನ್ನು ಕರೆಸಿ ಎಲ್ಲರನ್ನೂ ಕೂರಿಸಿ ಒಂದು ತೀರ್ಮಾನ ಮಾಡಿದರಾಯಿಒತು ಅದೂ ಸಾಧ್ಯವಾಗಲಿಲ್ಲ ಅಂದರೆ ಸೀದಾ ಪೊಲೀಸು ಕಂಪ್ಲೆoಟು ಕೊಟ್ಟರಾಯಿತು?
ಅದು ಸರಿ ಕಂಪ್ಲೆoಟು ಕೊಟ್ಟರೂ ನಾನು ಹಣ ಕೊಟ್ಟದ್ದಕ್ಕೆ ಸಾಕ್ಷಿಯಾದರೂ ಎಲ್ಲಿದೆ?ಈ ಸಾಕ್ಷಿ ಅನ್ನುವ ವಿಚಾರ ಬಂದೊಡನೆಯೇ ಒಂದು ಕ್ಷಣ ದೇಹ ಬೆವರಲಾರಂಭಿಸಿತು.ಛೇ..ಎoಥಾ ತಪ್ಪು ಮಾಡಿಬಿಟ್ಟೆ ಕನಿಷ್ಟಪಕ್ಷ ಒಂದು ಪತ್ರವನ್ನಾದರೂ ಬರೆಸಿಕೊಂಡು ಹಣ ಕೊಡಬೇಕಿತ್ತು.ಕೊನೆಗೆ ಯಾರನ್ನಾದರೂ ಜಾಮೀನಾದರೂ ಹಾಕಿಸಬೇಕಿತ್ತು.ಅವೆಲ್ಲವುಗಳೂ ಹಾಳಾಗಿ ಹೋಗಲಿ ಯಾರ ಮುಂದಾದರೂ ಹಣ ಕೊಟ್ಟಿದ್ದರೆ ಕೊನೆ ಪಕ್ಷ ಅದಕ್ಕೊಂದು ಪುರಾವೆ ಅಂತನಾದರೂ ಇರುತ್ತಿತ್ತು.ಹಾಳು ಮನಸ್ಸು ಈಗ ಇಂಥ ಉಪಾಯಗಳನ್ನು ರಾಶಿ ರಾಶಿ ತಂದು ಹಾಕುತ್ತಿದೆ.ಆಗಲೇ ಈ ವಿಷಯಗಳು ಹೊಳೆದಿದ್ದರೆ ಇವೆಲ್ಲ ತಪ್ಪುತ್ತಿತ್ತು.ಇದೇ ಕೊನೆ ಮತ್ಯಾರಿಗೂ ಈ ಹಣದ ವಿಚಾರದಲ್ಲಿ ಸಹಾಯ ಮಾಡಲೇಬಾರದು ಅಂತ ಯೋಚನೆ ಮಾಡಿದ ಮರುಘಳಿಗೆಯೇ ಮುಂದಿನ ವಿಚಾರಗಳು ಹಾಗಿರಲಿ ಈಗ ನನ್ನ ಹಣದ ಗತಿ ಏನು ಎಂಬ ಅಂತ ಚಿಂತೆ ಹತ್ತಿ ಮನಸ್ಸು ಬಾಡಿ ಮುದುಡಿಹೋಯಿತು.
ಒಂದು ಪಕ್ಷ ಸಾಕ್ಷಿ ಇಲ್ಲವೆಂದ ಮೇಲೆ ನಾನು ಕೊಟ್ಟ ಹಣವನ್ನು ಹಾಗೆಯೇ ಬಿಟ್ಟುಬಿಡಲು ಸಾಧ್ಯವೇ?ನಯವಾಗಿ ಕೇಳುವಷ್ಟು ಕೇಳುವುದು ಒಪ್ಪದಿದ್ದರೆ ಹೆದರಿಸಿ ಬೆದರಿಸಿಯಾದರೂ ಸರಿಯೇ ಒಟ್ಟಿನಲ್ಲಿ ನನ್ನ ಹಣ ನನಗೆ ಮರಳಿ ಸಿಗಬೇಕು ಅಷ್ಟೇ!ಈ ಕಡೆ ಹಣ ಕಳೆದುಕೊಂಡ ಮನಸ್ಸು ಹೀಗೆ ಯೋಚನೆ ಮಾಡುತ್ತಿದ್ದರೆ ಮನದ ಇನ್ನೊಂದು ಬದಿ ಗೆಳೆಯನ ಸಾವಿನ ಸುದ್ದಿ ಕಿವಿಗೆ ಬಿದ್ದಾಗಲೂ ಇಂಥಾ ಯೋಚನೆ ಮಾಡುತ್ತಿದ್ದೀಯಾ ಅಂತ ಮೌನ ಯುದ್ಧ ಮಾಡುತ್ತಲೇ ಇತ್ತು.
ಅದಾಗಲೇ ಅವರ ಮನೆಯ ಹತ್ತಿರ ಸಣ್ಣದಾಗಿ ಜನ ಸೇರತೊಡಗಿದ್ದರು.ಮನೆಯವರ ಆಕ್ರಂದನ ದೂರದಿಂದಲೇ ಕಿವಿಗೆ ಅಪ್ಪಳಿಸುತ್ತಿತ್ತು.ಮನೆ ಹತ್ತಿರವಾಗುತ್ತಿದ್ದಂತೆ ಅಲ್ಲಿನ ಶೋಕ ವಾತಾವರಣದ ಅನುಭವ ನನಗೂ ತನ್ನ ಸ್ಪರ್ಶ ನೀಡಲಾರಂಭಿಸಿತು.ಆ ದುಃಖತಪ್ತ ಸಂದರ್ಭ ಅವನ ಮೇಲಿನ ಸಿಟ್ಟನ್ನು ಕ್ಷಣ ಕ್ಷಣಕ್ಕೂ ತಿಳಿಗೊಳಿಸುವಂತೆ ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳುವತ್ತ ಸಾಗುತ್ತಿತ್ತು.ಯಾಕೋ ಅವರ ಅಳು ನನ್ನ ಕಿವಿಗೆ ಬೀಳುತ್ತಿದ್ದಂತೆ ಮೊದಲ ಬಾರಿಗೆ ನನ್ನೊಳಗೂ ಒಂದು ಅವ್ಯಕ್ತ ದುಃಖ ಮಡುಗಟ್ಟತೊಡಗಿತು.ಒಂದೆರೆಡು ಹನಿಗಳೂ ಕೂಡ ನನಗರಿವಾಗದಂತೆಯೇ ಕಣ್ಣೊಳಗೆ ಹೆಪ್ಪುಗಟ್ಟತೊಡಗಿದವು.ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಹಾಗೆಯೇ ತಡೆದುಕೊಂಡೆ.ಗೆಳೆಯನ ಶವದ ಕಾಲ ಬಳಿ ಬಿದ್ದು ಹೊರಳಾಡುತ್ತಿದ್ದ ಅವನ ಹೆಂಡತಿ ಹಾಗೂ ಅಪ್ಪನ ಸಾವಿನ ಶೋಕದಿಂದ ಆಕಾಶವೇ ಕೇಳಗೆ ಬಿದ್ದಂತೆ ದಿಕ್ಕು ತೋಚದೆ ಕಂಗಾಲಾಗಿ ಅಳುತ್ತಾ ನಿಂತಿದ್ದ ಅವನ ಮಕ್ಕಳನ್ನು ನೋಡಿ ಕರುಳು ಕಿತ್ತು ಬರುವಂತಾಯಿತು.ಹೋದವನೇ ತಂದಿದ್ದ ಹಾರವನ್ನು ಆ ಶವದ ಮೇಲಿಟ್ಟು ಒಮ್ಮೆ ಗೆಳೆಯನ ಮುಖವನ್ನು ದಿಟ್ಟಿಸಿ ನೋಡಿದೆ.ನಿನ್ನೆ ತಾನೇ ಇದ್ದ ಗೆಳೆಯ ಇಂದಿಲ್ಲವಲ್ಲಾ!ಅವನ ನಗುಮುಖವನ್ನೊಮ್ಮೆ ನೆನೆಸಿಕೊಂಡೆ ಆ ಕ್ಷಣಕ್ಕೇ ಅವನ ಸಾಲದ ವಿಚಾರಗಳೆಲ್ಲಾ ಮರೆತುಹೋದಂತಾಯಿತು.
ಇಷ್ಟು ದಿನದಿಂದ ಅವನ ಬಗ್ಗೆ ನನ್ನಷ್ಟಕ್ಕೇ ನಾನೇ ಏನೇನೋ ಕೆಟ್ಟದಾಗಿ ಕಲ್ಪನೆ ಮಾಡಿಕೊಂಡದ್ದು ನೆನಪಾಗಿ ನನಗೆ ನನ್ನ ಮೇಲೇ ಹೇಸಿಗೆ ಹುಟ್ಟಿಕೊಳ್ಳತೊಡಗಿತು.ಆದರೂ ಒಳಗೊಳಗೆ ಆಗೊಮ್ಮೆ ಈಗೊಮ್ಮೆ ಮತ್ತೆ ಆ ಸಾಲದ ವಿಚಾರ ಒಂದು ಎಳೆಯಂತೆ ಹಾದುಹೋಯಿತು.ಯಾಕೋ ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗಲಿಲ್ಲ.ತಕ್ಷಣವೇ ಅಲ್ಲಿಂದ ಹೊರಡಲು ಸಿದ್ಧನಾದೆ ಇನ್ನೇನು ಹೆಜ್ಜೆ ಕದಲಿಸಬೇಕು ಅಷ್ಟರೊಳಗೆ ಯಾರೋ ಮೆತ್ತಗೆ ಕೂಗಿದಂತಾಯಿತು.ಯಾರಿರಬಹುದೆAದುತಿರುಗಿ ನೋಡುವಷ್ಟರಲ್ಲಿ ಅವನ ಹಿರಿಯ ಮಗ ನನ್ನ ಕಣ್ಣ ಮುಂದಿದ್ದ.ಹತ್ತಿರ ಬಂದವನೇ ತನ್ನ ಜೇಬಿನಿಂದ ಹಣದ ಕಂತೆಯನ್ನು ತೆಗೆದು ನನ್ನ ಕೈಯೊಳಗಿಟ್ಟ.
"ಅಪ್ಪ ನಿಮ್ಮ ಹತ್ತಿರ ಸಾಲ ಇಸ್ಕೊಂಡಿದ್ರoತೆ.ನಿನ್ನೆ ಸಂಜೆ ಬಂದು ಇದನ್ನು ನನ್ನ ಕೈಲಿಟ್ಟು ಒಳಗೆ ಜೋಪಾನ ಮಾಡಿಡು ನಿಮಗೆ ಅದನ್ನು ಮರು ಪಾವತಿಸಬೇಕು.ನಾಳೆಯೇ ಕಡೇ ದಿನ ಈ ಹಣವನ್ನು ನಿಮಗೆ ಹಿಂತಿರುಗಿಸಬೇಕು.ಪಾಪ ನನ್ನ ಮೇಲೆ ಎಷ್ಟು ವಿಶ್ವಾಸವಿಟ್ಟು ಕಷ್ಟ ಕಾಲಕ್ಕೆ ನನಗೆ ಸಹಾಯ ಮಾಡಿದ್ದಾನೆ.ಯಾವುದೇ ಕಾರಣಕ್ಕೂ ಅವನ ನಂಬಿಕೆಯನ್ನು ಕಳೆದುಕೊಳ್ಳಬಾರದು ಅಂತ ಯಾವತ್ತೂ ತಮ್ಮ ವ್ಯವಹಾರಗಳನ್ನು ನಮ್ಮ ಹತ್ತಿರ ಹೇಳದವರು ಅಂದು ಅದನ್ನು ನನ್ನ ಕೈಯಲ್ಲಿತ್ತು ಬೀರೊಳಗೆ ಇಟ್ಟವರೇ ಯಾಕೋ ಎದೆನೋವೆಂದು ಮಲಗಿದವರು ಮತ್ತೆ ಏಳಲೇ ಇಲ್ಲ.ಈಗ ನೋಡಿದರೇ ಅವರೇ ಇಲ್ಲ!ಅಂತ ಹೇಳದವನೇ ಬಿಕ್ಕಿ ಬಿಕ್ಕಿ ಅಳತೊಡಗಿದ.
ಬೆಳಿಗ್ಗೆಯಿoದ ನನ್ನ ಮನದೊಳಗೆ ಹೊಯ್ದಾಡುತ್ತಿದ್ದ ಈ ಹಣದ ವಿಚಾರ ಧುತ್ತೆಂದು ಮತ್ತೆ ಹಾದುಹೋಯಿತು.ಛೇ..ಅವನ ಬಗ್ಗೆ ಏನೆಲ್ಲಾ ಕಲ್ಪನೆಗಳನ್ನು ಮಾಡಿಕೊಂಡೆ ಎಂದು ಮನಸ್ಸು ಕೊರಗತೊಡಗಿತು.ಹೃದಯ ಭಾರವಯಿತು.ಭೂಮಿ ಕಂಪಿಸಿದoತಾಯಿತು.ಅವನು ನನ್ನ ಕೈಲಿಟ್ಟ ಆ ಹಣದ ಕಂತೆ ಒಂದು ಕ್ಷಣ ಬಲು ಭಾರವಗಿ ನನ್ನ ಕೈಗಳನ್ನು ನೋಯಿಸತೊಡಗಿತು.ಗೆಳೆಯನ ವಿಶ್ವಾಸ ನಂಬಿಕೆಯ ಮುಂದೆ ನಾನು ಕುಬ್ಜನಾಗಿಹೋದೆ.ಅವನ ಬಗ್ಗೆ ಇಲ್ಲಸಲ್ಲದ್ದನ್ನು ಯೋಚನೆ ಮಾಡಿದ್ದೆಲ್ಲಾ ನೆನಪಾಗಿ ನನ್ನ ಬಗ್ಗೆ ನನಗೇ ಜಿಗುಪ್ಸೆಯಾಗತೊಡಗಿತು.ಆ ಹಣದ ಕಂತೆಯ ಮೌಲ್ಯದ ಮುಂದೆ ಗೆಳೆಯನ ನಂಬಿಕೆ ಗೆಳೆತನ ಪ್ರಾಮಾಣಿಕತೆಯ ತೂಕ ತುಸು ಹೆಚ್ಚೇ ತೂಗತೊಡಗಿತ್ತು.ಈಗ ನನಗ ಯಾವುದರ ವಜನು ಎಷ್ಟು ತೂಗುತ್ತದೆ ಎಂದು ಮನವರಿಕೆಯಾಗತೊಡಗಿತ್ತು.
ತಕ್ಷಣವೇ ಆ ಹಣವನ್ನು ಅವನ ಕೈಗೆ ವಾಪಸ್ಸು ಕೊಟ್ಟವನೇ
"ಈಗ ಇದನ್ನು ನೀವೇ ಇಟ್ಟುಕೊಳ್ಳಿ.ನಿಮ್ಮ ಮುಂದಿನ ಕಾರ್ಯಕ್ಕೆ ಬಳಸಿಕೊಳ್ಳಿ.ಮುಂದೆ ಎಂದಾದರೂ ನನಗೆ ಅವಶ್ಯಕತೆ ಬಿದ್ದರೆ ನಾನೇ ಅದನ್ನು ಕೇಳಿ ಪಡೆದುಕೊಳ್ಳುವೆ."ಎಂದು ಹೇಳಿದವನೇ ಅಲ್ಲಿ ಒಂದು ಕ್ಷಣವೂ ನಿಲ್ಲಲಾರದೇ ಅಲ್ಲಿಂದ ಹೊರಟೆ.ಅವನು ಇನ್ನೇನೋ ಹೇಳಲು ನನ್ನ ಬಳಿ ಬಂದು ನಿಂತ.ಮನಸ್ಸು ಶೂನ್ಯವಾಗಿ ಏನೂ ಅರಿವಾಗದಂತಾಯಿತು.ಮತ್ತೊಮ್ಮೆ ಗೆಳೆಯನ ಮುಖ ನೋಡುವ ಮನಸ್ಸಾದರೂ ಯಾಕೋ ಆ ಕಳೇಬರದ ಮುಖದ ಎದುರು ನನ್ನ ಜೀವಂತ ಮುಖ ಒಡ್ಡಲು ಧೈರ್ಯ ಸಾಲಲಿಲ್ಲ.
____
ಆರ್. ಸುನೀಲ್, ತರೀಕೆರೆ.
(09-01-2019ರ ಮಂಗಳ ಪ್ರಕಟವಾದ ಕಥೆ)