25th October 2024

ದೀಪಾವಳಿ-5
ಯಮದೀಪ , ಆಕಾಶದೀಪ ಮತ್ತು ಉಲ್ಕಾದೀಪ
ಯಮದೀಪ
ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಿಂದ ಅಂದರೆ ನೀರು ತುಂಬಿಸುವ ಹಬ್ಬದ ದಿನದಿಂದ ಮುಂದಿನ ಮೂರು ದಿನಗಳ ಪರ್ಯಂತ , ಸಂಜೆ ಕತ್ತಲಾಗುತ್ತಿದ್ದಂತೆ ಮನೆಯ ಹೊರಗಡೆ ಅಂಗಳದಲ್ಲಿ ಅಥವಾ ತುಳಸೀಕಟ್ಟೆಯ ಹತ್ತಿರ ದಕ್ಷಿಣಾಭಿಮುಖವಾಗಿ ಯಮನಿಗೆ ಒಂದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಇಡುವುದು. ಅದೇ ಯಮದೀಪ. ಹೀಗೆ ಯಮದೀಪವನ್ನು ಬೆಳಗುವುದರಿಂದ ಯಮನು ಪ್ರಸನ್ನನಾಗುತ್ತಾನೆ ಮತ್ತು ಅದರಿಂದ ನಾವು ಅಪಮೃತ್ಯುವಿಗೆ ತುತ್ತಾಗುವುದಿಲ್ಲ ಎಂಬುದು ನಂಬಿಕೆ.
ಆಕಾಶದೀಪ
ದೀಪಾವಳಿಯ ದಿನಗಳಿಂದ ಆರಂಭಿಸಿ , ಪ್ರತಿ ದಿನವೂ ಸೂರ್ಯಾಸ್ತದ ಬಳಿಕ ಮನೆಯ ಸಮೀಪದಲ್ಲಿಯೇ ಹೊರಗಡೆ ಅಂಗಳದಲ್ಲಿ , ಕನಿಷ್ಠ ಒಂದು ಆಳು ಎತ್ತರವಾದರೂ ಇರುವ ಮರದ ದಂಡವೊಂದನ್ನು ಧ್ವಜಸ್ತಂಭದ ರೀತಿಯಲ್ಲಿ ಭೂಮಿಯಲ್ಲಿ ನೆಟ್ಟು , ಅದರ ತುದಿಯಲ್ಲಿ ಸಿಕ್ಕಿಸಿದ ಬಿದಿರಿನ ಕಡ್ಡಿಗಳ ಅಷ್ಟಪಟ್ಟಿಯ ದೀಪಯಂತ್ರ ಮಂಟಪದ ಗೂಡಿನ ಮಧ್ಯದಲ್ಲಿ , ದಾಮೋದರನ ಪ್ರೀತ್ಯರ್ಥವಾಗಿ , ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆಯ ದೀಪವನ್ನು ಪೂರ್ವಾಭಿಮುಖವಾಗಿ ಬೆಳಗಿಸಬೇಕು. ಇದನ್ನು ಒಂದು ತಿಂಗಳ ಪರ್ಯಂತ ಅಂದರೆ ಕಾರ್ತಿಕ ಮಾಸವು ಮುಗಿಯುವವರೆಗೂ ಮಾಡಬೇಕು. ಅದೇ ಕಾರ್ತಿಕದ ಆಕಾಶದೀಪ ಅಂದರೆ ಗೂಡುದೀಪ. ಈ ರೀತಿ ಆಕಾಶದೀಪ ಬೆಳಗುವುದರಿಂದ ಮಹಾ ಸಂಪತ್ತು ಲಭಿಸುತ್ತದೆ ಎಂಬುದಾಗಿ ಗ್ರಂಥಗಳು ತಿಳಿಸುತ್ತವೆ.
ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಗೂಡು ದೀಪಗಳನ್ನು ಬಳಸುವುದಾಗಲೀ ಮತ್ತು ಅವುಗಳಲ್ಲಿ ಬಣ್ಣ ಬಣ್ಣದ ವಿದ್ಯುದ್ದೀಪಗಳನ್ನು ಬೆಳಗಿಸುವುದಾಗಲೀ ನಮ್ಮ ಸಂಪ್ರದಾಯ ಅಲ್ಲ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಚೀನಾ ನಿರ್ಮಿತವಾದ ಪ್ಲಾಸ್ಟಿಕ್ ಗೂಡು ದೀಪಗಳನ್ನು ಬಳಸದೇ ಸ್ಠಳೀಯರಿಂದಲೇ ನಿರ್ಮಿತವಾದ ಬಿದಿರಿನ ಕಡ್ಡಿಗಳ ಗೂಡು ದೀಪಗಳನ್ನೇ ಬಳಸೋಣ. ಆ ಮೂಲಕ ಸ್ಥಳೀಯ ಗೂಡು ದೀಪ ತಯಾರಕರನ್ನು ಪ್ರೋತ್ಸಾಹಿಸೋಣ.
ಉಲ್ಕಾದೀಪ
ದೀಪಾವಳಿಯ ದಿನಗಳಂದು ಅಂದರೆ ಸಾಮಾನ್ಯವಾಗಿ ಚತುರ್ದಶೀ ಹಾಗೂ ಅಮಾವಾಸ್ಯೆಯ ಈ ಎರಡು ದಿನಗಳಂದು ಸಾಯಂಕಾಲ ಪ್ರದೋಷ ಸಮಯದಲ್ಲಿ ಅಂದರೆ ಸೂರ್ಯ ಮುಳುಗುತ್ತಲೇ ಉಂಟಾಗುವ ಮಬ್ಬು ಕತ್ತಲೆಯ ಕಾಲದಲ್ಲಿ ಮನೆಯ ಹೊರಗಡೆ ನಿಂತುಕೊಂಡು ಉಲ್ಕಾದೀಪಗಳನ್ನು ಕೈಯಲ್ಲಿ ಹಿಡಿದುಕೊಂಡು ಪಿತೃದೇವತೆಗಳಿಗೆ ಮಾರ್ಗವನ್ನು ತೋರಿಸಬೇಕು. ಅಥವಾ ಉಲ್ಕಾದೀಪಗಳನ್ನು ಮನೆಯ ಹೊರಗಡೆ ಅಂಗಳದಲ್ಲಿ , ದೇವಾಲಯಗಳಲ್ಲಿ , ಬಯಲುಗಳಲ್ಲಿ , ಗದ್ದೆಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ಬೆಳಗಿಸಬೇಕು. ಉಲ್ಕಾದೀಪಗಳು ಅಂದರೆ ಕುಂದಾಪುರದ ಕಡೆಯಲ್ಲಿ ನಾವು ಹೇಳುವ ಕೋಲು ನೆಣೆಗಳು. ಇತರ ಕಡೆಗಳಲ್ಲಿ ಅದಕ್ಕೆ ತೊಡರ್ ಅಥವಾ ಸೊಡರು ದೀಪಗಳು ಅಥವಾ ದೊಂದಿ ದೀಪಗಳು ಅಥವಾ ಪಂಜುಗಳು ಎನ್ನುತ್ತಾರೆ. ಉರಿಯುವ ಕೋಲು ನೆಣೆಗಳನ್ನು ನೆಲದಲ್ಲಿ ಚುಚ್ಚಿ ಇಡುವುದು ನಮ್ಮಲ್ಲಿ ರೂಢಿಯಾಗಿದೆ.
ನವರಾತ್ರಿಗಿಂತ ಮೊದಲು ನಾವು ಆಚರಿಸಿದ ಪಿತೃಪಕ್ಷ ಅಥವಾ ಮಹಾಲಯಕ್ಕೆಂದು ಯಮಲೋಕದಿಂದ ಭೂಮಿಗೆ ಆಗಮಿಸಿದ ಪಿತೃಗಳು ಮರಳಿ ಯಮಲೋಕಕ್ಕೆ ಹಿಂದಿರುಗುವಾಗ ಅವರಿಗೆ ದಾರಿ ತೋರಿಸುವುದಕ್ಕಾಗಿ ಈ ರೀತಿಯಲ್ಲಿ ಉಲ್ಕಾದೀಪಗಳನ್ನು ಬೆಳಗಿಸಬೇಕು. ಇದರಿಂದ ನಮ್ಮ ಕುಟುಂಬದಲ್ಲಿ ಈ ಹಿಂದೆ ಬೆಂಕಿಯ ಅವಘಡ ಅಥವಾ ಅದಕ್ಕೆ ತತ್ಸಮಾನವಾದ ವಿದ್ಯುತ್ ಅವಘಡ ಅಥವಾ ಸಿಡಿಲಿನ ಆಘಾತದಿಂದ ಯಾರಾದರೂ ಮೃತರಾಗಿದ್ದರೆ ಅವರಿಗೆ ಸದ್ಗತಿಯು ಕೂಡಾ ದೊರಕುತ್ತದೆ ಎಂಬುದಾಗಿ ನಮ್ಮ ಧರ್ಮಗ್ರಂಥಗಳು ತಿಳಿಸುತ್ತವೆ.
- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ