25th October 2024

ಜಿಲ್ಲಾ ಪಂಚಾಯತ ಕೆಡಿಪಿ ಸಭೆ
ಬಿತ್ತನೆ ಬೀಜ ಪಡೆದು ಮಳೆಯಿಂದ ಹಾನಿಗೊಳಗಾದ ರೈತರಿಗೆ ಮತ್ತೇ ಬೀಜ ವಿತರಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ; ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸಂತೋಷ ಲಾಡ
ಧಾರವಾಡ ಅಕ್ಟೋಬರ್ 22: ಅತಿಯಾದ ಮಳೆಯಿಂದಾಗಿ, ಮುಂಗಾರಿನ ಫಸಲು ಕೊಯ್ಲು ಹಂತದಲ್ಲಿ ನಾಶವಾಗಿದ್ದು ಮತ್ತು ಹಿಂಗಾರು ಬಿತ್ತನೆ ಮಾಡಿದ್ದ ಬೀಜಗಳು ಕೊಚ್ಚಿಕೊಂಡು ಹೋಗಿ ನಾಟಿ ಬಂದಿರುವದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಇಲಾಖೆಯಿಂದ ಹಿಂಗಾರು ಬಿತ್ತನೆಗೆ ಬೀಜ ಪಡೆದಿದ್ದ ರೈತರಿಗೆ ಮರಳಿ ರಿಯಾತಿಯಲ್ಲಿ ಬಿತ್ತನೆ ಬೀಜ ವಿತರಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 2024-25 ನೇ ಸಾಲಿನ ಸೆಪ್ಟೆಂಬರ ಅಂತ್ಯಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಅನೇಕ ಇಲಾಖೆಗಳು ತಮಗೆ ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಯನ್ನು ತಲುಪಿದ್ದು, ಇದು ಉತ್ತಮ ಪ್ರಗತಿ ಆಗಿದೆ. ಇನ್ನೂ ಕೆಲವು ಇಲಾಖೆಗಳು ಪ್ರಗತಿಯಲ್ಲಿ ಹಿಂದುಳಿದಿದ್ದು, ಅವರು ಸಹ ನಿಗದಿತ ಗುರಿ ಸಾಧಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅಕ್ಟೋಬರ್ 1 ರಿಂದ 14 ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಸುಮಾರು 25 ಸಾವಿರ ಹೆಕ್ಟೆರ ಬೆಳೆ ನಾಶವಾಗಿದ್ದು, ಅಕ್ಟೋಬರ್ 14 ರ ನಂತರದ ನಿರಂತರ ಮಳೆಗೆ ಮತ್ತೇ ಬೆಳೆ ಹಾನಿ, ಬಿತ್ತನೆ ಹಾನಿ ಆಗಿದೆ. ಈ ಕುರಿತು ಸರಿಯಾದ ಸಮೀಕ್ಷೆ ಮಾಡಿ, ಸೂಕ್ತ ವರದಿ ಸಲ್ಲಿಸಬೇಕೆಂದು ಸಚಿವರು ಸೂಚಿಸಿದರು.
ಮುಂದಿನ ಮೂರನಾಲ್ಕು ದಿನ ಮಳೆ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ಹಂತದ ಅಧಿಕಾರಿಗಳು ಕಚೇರಿಯಲ್ಲಿ ಕೂಡ್ರದೆ ಹಳ್ಳಿಗಳಿಗೆ ಭೇಟಿ ನೀಡಬೇಕು. ತಮ್ಮ ಇಲಾಖೆಗೆ ಸಂಬಂಧಿಸಿದ ಸೇವೆ, ಮೂಲಸೌಕರ್ಯ ಹಾಗೂ ಇತರೆ ಹಾನಿಗಳನ್ನು ಪರಿಶೀಲಿಸಿ, ತಕ್ಷಣ ಸಾರ್ವಜನಿಕರ ನೆರವಿಗೆ ಬರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾನಿ ಸಂದರ್ಭದಲ್ಲಿ ಮನೆ, ಜಮೀನು, ರಸ್ತೆ ಸೇತುವೆ, ಕಟ್ಟಡಗಳನ್ನು ಪರಿಶೀಲಿಸಿ ಸ್ಪಂದಿಸಬೇಕು. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರ ಭೇಟಿ ಮೂಲಕ ರೈತರ ಹಾನಿ ಕುರಿತು, ಜನಪ್ರತಿನಿಧಿಗಳ, ರೈತ ಮುಖಂಡರ ಗಮನಕ್ಕೆ ತಂದು ವರದಿ ರೂಪಿಸಬೇಕು. ಹಾನಿಯಾಗಿರುವ ಪ್ರತಿ ರೈತರ ಹೊಲಕ್ಕೆ ಖುದ್ದು ಇಲಾಖೆ ಸಿಬ್ಬಂದಿ, ವಿಮಾ ಕಂಪನಿ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರು ತಾಕಿತು ಮಾಡಿದರು.
ಪಶುಪಾಲನೆ ಇಲಾಖೆಯಿಂದ ಪಶು ಸಂಜೀವಿನಿ ಮತ್ತು ಪಶು ಸಖಿಯರ ಸೇವೆಯನ್ನು ಎಲ್ಲ ರೈತರಿಗೆ, ಜಾನುವಾರು ಮಾಲೀಕರಿಗೆ ಮುಟ್ಟುವಂತೆ ಮಾಡಬೇಕು. ಪ್ರತಿ ಪಶು ಸಖಿ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ದನ-ಕರುಗಳ ಬಗ್ಗೆ ಸಮೀಕ್ಷೆ ಮಾಡಿ, ಇಲಾಖೆ ಯೋಜನೆಗಳನ್ನು ತಲುಪಿಸುವಂತೆ ಮುಂಜಾಗೃತೆ ವಹಿಸಬೇಕೆಂದು ಸಚಿವರು ತಿಳಿಸಿದರು.
ಅರಣ್ಯ ಇಲಾಖೆಯಿಂದ ಹೆಚ್ಚು ಸಸಿಗಳನ್ನು ವಿತರಿಸಬೇಕು. ವಿಶೇಷವಾಗಿ ನಗರ ಪ್ರದೇಶದ ಸಿ.ಎ.ಸೈಟು, ಉದ್ಯಾನವನ, ಕೆರೆಗಳ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಪೆÇಷಿಸಬೇಕು. ಅರಣ್ಯ ಪ್ರದೇಶದ ಒಳಗಡೆ ಖಾಲಿ ಇರುವ ಪ್ರದೇಶದಲ್ಲಿ ದಟ್ಟವಾದ ಅರಣ್ಯ ಬೆಳೆಸಲು ಸೂಕ್ತ ಯೋಜನೆ ರೂಪಿಸಬೇಕೆಂದು ಸಚಿವರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜುದಲ್ಲಿ ಅಷ್ಟಾಗಿ ಸಮಸ್ಯೆ ಇರದಿದ್ದರೂ, ನೀರು ಶುದ್ಧೀಕರಣ ಘಟಕಗಳ ದುರಸ್ತಿ ಬಗ್ಗೆ ದೂರುಗಳು ಬರುತ್ತಿವೆ. ಜಿಲ್ಲೆಯ ಎಲ್ಲ 476 ಆರ್.ಓ ಪ್ಲಾಂಟ್ಗಳನ್ನು ಗಮನಿಸಲು ಕೇಂದ್ರಸ್ಥಾನದಲ್ಲಿ ಡ್ಯಾಶ್ ಬೋರ್ಡ್ ವ್ಯವಸ್ಥೆ ಮಾಡಲು ಸಚಿವರು ಸೂಚಿಸಿದರು.
ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಲೋಕೋಪಯೋಗಿ ಮತ್ತು ಪಂಚಾಯತ ರಾಜ್ ಇಂಜನೀಯರಿಂಗ ವಿಭಾಗದಿಂದ ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಿರುವ ರಸ್ತೆಗಳ ತುರ್ತು ದುರಸ್ತಿಗೆ ಕ್ರಮವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.
ಶಾಸಕರಾದ ಎಂ.ಆರ್.ಪಾಟೀಲ ಅವರು ಮಾತನಾಡಿ, ಮಳೆ ನಿರಂತರವಾಗಿರುವದರಿಂದ ಬೆಳೆ ಹಾನಿ ಹೆಚ್ಚಾಗಿದೆ. ಬಿತ್ತಿರುವ ಹಿಂಗಾರಿಗಾಗಿ ಬಿತ್ತಿದ್ದ ಬೀಜಗಳು ಕೊಚ್ಚಿ ಹೋಗಿವೆ. ಇವುಗಳ ಮರು ಸಮೀಕ್ಷೆ ಆಗಬೇಕು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಜಮೀನುಗಳಿಗೆ ತಪ್ಪದೇ ಭೇಟಿ ನೀಡಿ, ನಿಖರವಾಗಿ ಹಾನಿ ದಾಖಲಿಸಬೇಕೆಂದು ಹೇಳಿದರು.
ಶಾಸಕರಾದ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ಮಹಾನಗರದಲ್ಲಿ ನೀರು ಸರಬರಾಜು ಸುಧಾರಿಸಬೇಕು. ಸರಕಾರಿ ಉಪಯೋಗಕ್ಕಾಗಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಬೇಕು. ಬಹಳಷ್ಟು ಸರಕಾರಿ ಯೋಜನೆಗಳಿಗೆ, ಗೃಹ ನಿರ್ಮಾಣಕ್ಕಾಗಿ ಜಮೀನು ಅಗತ್ಯವಿದೆ. ಆರೋಗ್ಯ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮಳೆ ಹಾನಿಯಿಂದ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಕೊಯ್ಲಿಗೆ ಬಂದಿದ್ದ ಈರುಳ್ಳಿ, ಹತ್ತಿ, ಶೇಂಗಾ, ಗೋವಿನ ಜೋಳ ಸೇರಿದಂತೆ ವಿವಿಧ ರೀತಿಯ ಬೆಳೆ ಹಾನಿ ಆಗಿದೆ. ಅಕ್ಟೋಬರ 14 ರವರೆಗಿನ ಮಳೆಗೆ ಅಂದಾಜು 25 ಸಾವಿರ ಹೆಕ್ಟೆರ ಬೆಳೆ ನಾಶವಾದ ವರದಿ ಇತ್ತು. ಈಗಲೂ ಮಳೆ ಮುಂದುವರೆದಿರುವದರಿಂದ ಬೆಳೆಹಾನಿ ಮರು ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಕೃಷಿ ಬೆಳೆ ಹಾನಿ: ಅಕ್ಟೋಬರ್ 21 ರ ವರೆಗಿನ ವರದಿಯಂತೆ, ನವಲಗುಂದ ತಾಲೂಕಿನಲ್ಲಿ 123 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 3,633 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 7,791 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 11,547 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಅಣ್ಣಿಗೇರಿ ತಾಲೂಕಿನಲ್ಲಿ 200 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 100 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 500 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 800 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಕುಂದಗೋಳ ತಾಲೂಕಿನಲ್ಲಿ 3,000 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 2,000 ಹೆಕ್ಟೇರ್ ಪ್ರದೇಶದ ಗೋವಿನಜೋಳ, 5,200 ಹೆಕ್ಟೇರ್ ಪ್ರದೇಶದ ಹತ್ತಿ ಹಾಗೂ 800 ಹೆಕ್ಟೇರ್ ಪ್ರದೇಶದ ಸೊಯಾಬೀನ್ ಸೇರಿ ಒಟ್ಟು 11,000 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 1,800 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 4,950 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 5,250 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 12,000 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಕಲಘಟಗಿ ತಾಲೂಕಿನಲ್ಲಿ 4,013 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 53 ಹೆಕ್ಟೇರ್ ಪ್ರದೇಶದ ಭತ್ತ ಸೇರಿ ಒಟ್ಟು 4,066 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಧಾರವಾಡ ತಾಲೂಕಿನಲ್ಲಿ 7,696 ಹೆಕ್ಟೇರ್ ಪ್ರದೇಶದ ಗೋವಿನಜೋಳ, 2,321 ಹೆಕ್ಟೇರ್ ಪ್ರದೇಶದ ಹತ್ತಿ ಹಾಗೂ 25 ಹೆಕ್ಟೇರ್ ಪ್ರದೇಶದ ಭತ್ತ ಸೇರಿ ಒಟ್ಟು 10,042 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 5,123 ಹೆಕ್ಟೇರ್ ನೆಲಗಡಲೆ (ಶೇಂಗಾ), 22,392 ಹೆಕ್ಟೇರ್ ಗೋವಿನಜೋಳ ಹಾಗೂ 21,062 ಹೆಕ್ಟೇರ್ ಹತ್ತಿ, 800 ಹೆಕ್ಟೇರ್ ಪ್ರದೇಶದ ಸೊಯಾಬೀನ್ ಹಾಗೂ 78 ಹೆಕ್ಟೇರ್ ಪ್ರದೇಶದ ಭತ್ತ ಸೇರಿ ಒಟ್ಟು 49,455 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ ಎಂದು ಪ್ರಾಥಮಿಕವಾಗಿ ವರದಿ ಆಗಿದೆ.
ತೋಟಗಾರಿಕೆ ಬೆಳೆ ಹಾನಿ: ಅಕ್ಟೋಬರ್ 21 ರವರೆಗಿನ ವರದಿಯಂತೆ, ನವಲಗುಂದ ತಾಲೂಕಿನಲ್ಲಿ 700 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಹಾಗೂ 1,500 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯು ಮಳೆಯಿಂದ ಹಾನಿಯಾಗಿದೆ.
ಅಣ್ಣಿಗೇರಿ ತಾಲೂಕಿನಲ್ಲಿ 3,200 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಹಾಗೂ 600 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಕುಂದಗೋಳ ತಾಲೂಕಿನಲ್ಲಿ 800 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಹಾಗೂ 50 ಹೆಕ್ಟೇರ್ ಪ್ರದೇಶದ ಈರುಳ್ಳಿ, 5 ಹೆಕ್ಟೇರ್ ಪ್ರದೇಶದ ಹೂ ಹಾಗೂ 5 ಹೆಕ್ಟೇರ್ ವಿವಿಧ ತರಕಾರಿ ಬೆಳೆಯು ಮಳೆಯಿಂದ ಹಾನಿಯಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 760 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಹಾಗೂ 210 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ ಎರಡು ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ, 20 ಹೆಕ್ಟೇರ್ ಪ್ರದೇಶದ ಈರುಳ್ಳಿ, 80 ಹೆಕ್ಟೇರ್ ಪ್ರದೇಶದ ಹೂ ಹಾಗೂ 40 ಹೆಕ್ಟೇರ್ ವಿವಿಧ ತರಕಾರಿ ಬೆಳೆಯು ಮಳೆಯಿಂದ ಹಾನಿಯಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 5,462 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ, 2,380 ಹೆಕ್ಟೇರ್ ಪ್ರದೇಶದ ಈರುಳ್ಳಿ, 85 ಹೆಕ್ಟೇರ್ ಪ್ರದೇಶದ ಹೂ ಹಾಗೂ 45 ಹೆಕ್ಟೇರ್ ವಿವಿಧ ತರಕಾರಿ ಬೆಳೆ ಸೇರಿ ಒಟ್ಟು 7,972 ಹೆಕ್ಟೇರ್ ಪ್ರದೇಶದ ಬೆಳೆಯು ಮಳೆಯಿಂದ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಒಟ್ಟಾರೆಯಾಗಿ ಜೂನ್ ಮತ್ತು ಅಕ್ಟೋಬರ ಎರಡು ತಿಂಗಳಲ್ಲಿ ಒಟ್ಟು 66,206 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಮಳೆಯಿಂದ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
2024 ರ ಅಕ್ಟೋಬರ್ ಮಾಹೆಯ ಮಳೆಯಿಂದ ಹಾನಿಯಾದ ಮೂಲಭೂತ ಸೌಕರ್ಯಗಳ ವಿವರ: 2024 ರ ಅಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆಗೆ 8 ಶಾಲೆಗಳ 20 ಕೊಠಡಿಗಳಿಗೆ ರೂ. 2 ಲಕ್ಷ, 2 ಅಂಗನವಾಡಿ ಕೇಂದ್ರಗಳಿಗೆ ರೂ.2.50 ಲಕ್ಷ, ಗ್ರಾಮೀಣ ರಸ್ತೆಗಳಿಗೆ ರೂ.0.60 ಲಕ್ಷ, 55 ಕಿ. ಮೀ ಜಿಲ್ಲಾ ಪ್ರಮುಖ ರಸ್ತೆಗಳಿಗೆ ರೂ.1 ಲಕ್ಷ, ರಾಜ್ಯ ಹೆದ್ದಾರಿ ರಸ್ತೆಗಳಿಗೆ ರೂ.1 ಲಕ್ಷ, ಒಂದು ಸೇತುವೆ ಮತ್ತು ಸಿಡಿಗಳಿಗೆ ರೂ.0.60 ಲಕ್ಷ, 59 ವಿದ್ಯುತ್ ಕಂಬಗಳಿಗೆ ರೂ.0.05 ಲಕ್ಷ, 15 ಟ್ರಾನ್ಸ್ ಫಾರ್ಮಗಳಿಗೆ ರೂ.1 ಲಕ್ಷ ಹಾಗೂ ವಿದ್ಯುತ್ ಲೈನ್ಗಳಿಗೆ ರೂ.0.50 ಲಕ್ಷಗಳನ್ನು ಮಾರ್ಗಸೂಚಿಯ ಅನ್ವಯ ಎಲ್ಲಾ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖಾ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2024-25 ನೇ ಸಾಲಿಗೆ ಧಾರವಾಡ ಜಿಲ್ಲಾ ಪಂಚಾಯತಿಗೆ ರೂ.1411 ಕೋಟಿ ಅನುದಾನ ಹಂಚಿಕೆ ಆಗಿತ್ತು. ಸೆಪ್ಟೆಂಬರವರೆಗೆ ರೂ.701 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿರುವ ಅನುದಾನದಲ್ಲಿ ರೂ.657 ಕೋಟಿ ವೆಚ್ಚವಾಗಿದ್ದು, ಶೇ.93 ರಷ್ಟು ಪ್ರಗತಿ ಆಗಿದೆ. 35,084,26 ವಯಕ್ತಿಕ ಮತ್ತು ಸಮುದಾಯಿಕ ಕಾಮಗಾರಿಗಳ ವಾರ್ಷಿಕ ಭೌತಿಕ ಗುರಿ ಹೊಂದಲಾಗಿತ್ತು, ಇದರಲ್ಲಿ 31,144 ಕಾಮಗಾರಿಗಳನ್ನು ಪೂರ್ಣಗೊಳಿಸಿ, ಶೇ.88.77 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಜ್ಯ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಎಸ್.ಪಾಟೀಲ, ಜಿಲ್ಲಾ ಪೆÇಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೆÇಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿ ಇದ್ದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾ ಉಪಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಜಿಲ್ಲಾ ಕೆಡಿಪಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
***

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ