15th April 2025
ಸಂವಿಧಾನ ಆಶಯಕ್ಕೆ ಧಕ್ಕೆ ಬಾರದಿರಲಿ : ಪ್ರೊ. ವಿಜಯ ನಾಗಣ್ಣವರ
ಬೆಳಗಾವಿ : ಪ್ರತಿಯೊಂದು ದೇಶದ ಸಂವಿಧಾನ ಆ ದೇಶವನ್ನು ನಡೆಸಲು ಇರುವ ಕಾನೂನಿನ ಪುಸ್ತಕವಷ್ಟೇ. ಆದರೆ ಭಾರತದ ಸಂವಿಧಾನ ನಮ್ಮ ಭವಿತವ್ಯದ, ಬದುಕಿನ ಪುಸ್ತಕ. ಅದರ ಆಶಯಕ್ಕೆ ಧಕ್ಕೆ ಬಾರದಿರಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರೊ. ವಿಜಯ ನಾಗಣ್ಣವರ ಅಭಿಪ್ರಾಯಪಟ್ಟರು.
ಎ. 14ರಂದು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜವಿಜ್ಞಾನ ವಿಭಾಗಗಳು ಮತ್ತು ಸಂವಿಧಾನ ಓದು ಅಭಿಯಾನ- ಕರ್ನಾಟಕ, ಬೆಂಗಳೂರು ಇವರ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಸಮಾರಂಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಪರಿಶ್ರಮದಿಂದ ಈ ದೇಶಕ್ಕೆ ಅತ್ಯುತ್ತಮ ಸಂವಿಧಾನ ಸಿಕ್ಕಿದೆ. ಈ ಸಂವಿಧಾನಕ್ಕೆ ಸಾವಿರಾರು ವರ್ಷಗಳ ಭವಿಷ್ಯವಿದೆ. ಹಿಂದೆ ಧರ್ಮ ಗ್ರಂಥಗಳು ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದವು. ಇಂದು ಸಂವಿಧಾನ ಸಮಾಜವನ್ನು ಮನ್ನಡೆಸುತ್ತಿದೆ. ಅಂಬೇಡ್ಕರ್ ಅವರ ಆಶಯಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಬುರ್ಕಾ ಸಂಸ್ಕೃತಿ ಕೇವಲ ಒಂದೇ ಧರ್ಮದಲ್ಲಿ ಇಲ್ಲ. ಈಗಲೂ ಕೂಡ ಬೇರೆ ಬೇರೆ ಧರ್ಮದವರು ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಧರಿಸುತ್ತಾರೆ. ವಸ್ತ್ರ, ಆಹಾರ ಅವರವರಿಗೆ ಬಿಟ್ಟದ್ದು. ಸರ್ವಜನಾಂಗದ ಶಾಂತಿಯ ತೋಟವಾದ ಈ ಭಾರತವು ಸಂವಿಧಾನದ ನೆರಳಿನಲ್ಲಿ ಹೀಗೆಯೇ ಮುಂದೆ ಸಾಗಬೇಕು. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ರಥ ಎಂದಿಗೂ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ಎಂ. ಜಿ. ಹೆಗಡೆ ಅವರು ಮಾತನಾಡುತ್ತಾ, ಚರಿತ್ರೆಯ ಬೇರುಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅದನ್ನು ಸರಿಪಡಿಸಿ ಅದಕ್ಕೆ ಹೊಸ ಕಾಯಕಲ್ಪ ನೀಡಿದರು. ಇದಕ್ಕಾಗಿ ಜೀವನ ಪರ್ಯಂತ ಹೋರಾಡಿದರು. ಅವರು ಹುಟ್ಟು ಹಾಕಿದ ಹೋರಾಟದ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ನಿಜದ ಸುದ್ದಿಗಿಂತ ಸುಳ್ಳಿನ ಸುದ್ದಿಯೇ ಸಮಾಜದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಇದರ ಹಿಂದೆ ಪ್ರಭುತ್ವವಿದೆ. ಇಂದಿನ ರಾಜಕೀಯ ವ್ಯವಸ್ಥೆ ಧರ್ಮದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ವ್ಯವಸ್ಥೆಯನ್ನು ದಾರಿ ತಪ್ಪಿಸುತ್ತಿದೆ. ವರ್ತಮಾನದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನವೇ ನಮಗೆ ದಾರಿದೀಪ ಎಂದರು.
ಶಿಬಿರದ ಮೊದಲ ದಿನ ಸಂವಿಧಾನ ರಚನೆ ಮತ್ತು ಮೂಲತತ್ವಗಳು ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಡಾ. ಗೋವಿಂದಪ್ಪ ಪಾವಗಡ, ಸಂವಿಧಾನ ಮತ್ತು ಮಹಿಳೆ ವಿಷಯದ ಕುರಿತು ಶಾಂತಿ ನಾಗಲಾಪುರ ಹಾಗೂ ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಕುರಿತು ಬಿ. ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯತೀತತೆಯ ಕುರಿತು ಆರ್ ರಾಮಕೃಷ್ಣ ಉಪನ್ಯಾಸಗಳನ್ನು ನೀಡಿದರು.
ನ್ಯಾಯವಾದಿ ಅನಂತ ನಾಯ್ಕ ಶಿಬಿರದ ಕುರಿತು ಅನಿಸಿಕೆಯನ್ನು ಹಂಚಿಕೊಂಡರು.
ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು. ಡಾ. ಪ್ರೀತಿ ಪಡದಪ್ಪಗೋಳ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಬೋಧಕವರ್ಗ, ರಾಚವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ