28th April 2025

ಪರಿಸರಸ್ನೇಹಿ ನೀತಿಗಳು ಭೂಗ್ರಹವನ್ನು ಉಳಿಸುತ್ತದೆ: ಡಾ. ಸುನಂದಾ ಕಿತ್ಲಿ
ಬೆಳಗಾವಿ:ಜೀವಿಸಲು ಯೋಗ್ಯವಾದ ಏಕೈಕ ಗ್ರಹ ಭೂಮಿ. ಆದರೆ, ಮಾನವನ ವೈಭವೋಪೇತ ಜೀವನ ಮತ್ತು ದುರಾಸೆಯಿಂದಾಗಿ ಈ ಗ್ರಹದಲ್ಲಿ ಇಂದು ವಾಸಿಸುವುದು ದುಸ್ತರವಾಗಿದೆ ಎಂದು ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದ ಸಹ
ಪ್ರಾಧ್ಯಾಪಕರಾದ ಡಾ. ಸುನಂದಾ ಕಿತ್ಲಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗವು ವಿಶ್ವ ಭೂಮಿ ದಿನದ ಅಂಗವಾಗಿ " ನೂತನ
ಸಹಸ್ರಮಾನದಲ್ಲಿನ ಜಾಗತಿಕ ಸವಾಲುಗಳು ಮತ್ತು ಹವಾಮಾನ ಬದಲಾವಣೆ " ಶೀರ್ಷಿಕೆಯಡಿಯಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಮಾನವನು ಪರಿಸರದ ಮೇಲೆ ನಡೆಸುತ್ತಿರುವ ಅತಿಯಾದ ಆಕ್ರಮಣವು ಭೂಗ್ರಹಕ್ಕೆ ಗಂಡಾಂತರ ತಂದಿದೆ. ನೂತನ ಸಹಸ್ರಮಾನದಲ್ಲಿನ ಅನೇಕ ಜಾಗತಿಕ ಸವಾಲುಗಳ ಪರಿಣಾಮವಾಗಿ ಜಾಗತಿಕ
ತಾಪಮಾನದ ಏರಿಕೆ, ಜೀವವೈವಿಧ್ಯತೆಯ ನಾಶ ಹಾಗೂ ಸಂಪನ್ಮೂಲಗಳ ಕೊರತೆ ಉಂಟಾಗಿದೆ. ಇದನ್ನು ನಿಭಾಯಿಸಲು ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಶಕ್ತಿಯ ಬಳಕೆ ಹಾಗೂ ಪರಿಸರ ಸ್ನೇಹಿ ನೀತಿಗಳ ಅನುಷ್ಠಾನ ಅತ್ಯಗತ್ಯವಾಗಿದೆ.ಇದರ ಕುರಿತು ಬಹು ದೊಡ್ಡ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಭವಿಷ್ಯದ ಪೀಳಿಗೆಗಾಗಿ ಸುರಕ್ಷಿತ ಮತ್ತು ಸಮೃದ್ಧ ಜಗತ್ತನ್ನು ನೀಡುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು 21ನೇ ಶತಮಾನದಲ್ಲಿ ಮಾನವಕುಲವು ಎದುರಿಸುತ್ತಿರುವ ಅತ್ಯಂತ ಗಂಭಿರವಾದ ಸಮಸ್ಯೆ ಎಂದರೆ ಅದು ಹವಾಮಾನ ಬದಲಾವಣೆ. ಮನುಕುಲದ ಅಳಿವು ಉಳಿವು ಇದರಲ್ಲಿ ಅಡಗಿದೆ. ಮಾನವನು ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಂಡು ಪರಿಸರಕ್ಕೆ ಪೂರಕವಾಗಿ ಬದುಕಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಈ ಭೂಮಿಯನ್ನೇ ಕಳೆದುಕೊಳ್ಳುತ್ತೇವೆ. ಇದಕ್ಕಾಗಿ ಸುಸ್ಥಿರ ನಿರ್ವಹಣೆಯ ಅಗತ್ಯವಿದೆ. ಭೂಮಿಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿರುವ ಉಪನ್ಯಾಸ, ಕಾರ್ಯಕ್ರಮಗಳು ಕೇವಲ ಒಂದು ಭಾಗವಷ್ಟೇ ಹೊರತು, ಅದೇ ಅಂತಿಮವಲ್ಲ. ಹೀಗಾಗಿ ಅದನ್ನು ಕಾರ್ಯರೂಪಕ್ಕೆ ತರುವುದು ಮಹತ್ವದ್ದಾಗಿದೆ ಎಂದರು.
ಭೂಗೋಳಶಾಸ್ತ್ರದ ಮುಖ್ಯಸ್ಥರಾದ ಡಾ. ದೀಪಿಕಾ ದೇವರಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿಯರಾದ ಜ್ಯೋತಿ ದುರ್ಗಿ ಪ್ರಾರ್ಥಿಸಿದರು, ಲಕ್ಷ್ಮೀ ಕೊಳ್ಳಿ ಸ್ವಾಗತಿಸಿದರು, ಪೂಜಾ ಮಾದಿಗರ ವಂದಿಸಿದರು, ಲಕ್ಷ್ಮೀ ಸಿದ್ದಾಪುರ ನಿರೂಪಿಸಿದರು. ಡಾ. ಅರುಣ ಒಡ್ಡಿನ್ ಪರಿಚಯಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ