ಸ್ಪರ್ಧೆಗಳು ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ವೃದ್ಧಿಸಿ ಕ್ರಿಯಾಶೀಲರನ್ನಾಗಿ ಮಾಡುತ್ತವೆ. ಆಶುಭಾಷಣಗಳಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳಲ್ಲಿ ಹುದುಗಿದ ಸಾಮಾನ್ಯ ಜ್ಞಾನ, ವಿಷಯ ಜ್ಞಾನ, ಭಾಷೆಯ ಪ್ರೌಢತೆ, ಮಾತಿನಲ್ಲಿ ಸ್ಪಷ್ಟತೆ ಮುಂತಾದ ಕೌಶಲ್ಯ ಹೊರ ಹೊಮ್ಮುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸಲು ಆಶುಭಾಷಣ ಸಹಕಾರಿಯಾಗಿದೆ ಎಂದು ಲಿಂಗರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶಿವಾನಂದ ಮೂಲಿಮನಿ ಅಭಿಪ್ರಾಯ ಪಟ್ಟರು.
ಬೆಳಗಾವಿ ಮಾಳಮಾರುತಿ ಬಡಾವಣೆಯ ನಾಗರಿಕ ವಿಕಾಸ ಸಂಘದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಮಹೇಶ ಪಿಯು ಕಾಲೇಜಿನಲ್ಲಿ ಜರುಗಿದ ಕಾಲೇಜ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಆಶುಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇತ್ತೀಚೆಗೆ ಬಿಡುಗಡೆ ಆದ ಅವರ ಮಿಂಚು ಕವನ ಸಂಕಲನ ಕೃತಿ ವಿದ್ಯಾರ್ಥಿಗಳಿಗೆ ಕೊಟ್ಟು ಸಮಾಜದ ಬೆಳವಣಿಗೆಗೆ ಸ್ಪೂರ್ತಿ ನೀಡುವ ಕವನ ರಚನೆಯಾಗ ಬೇಕು ಎಂದು ಹೇಳಿದರು.
ನಾಗರಿಕ ವಿಕಾಸ ಸಂಘದ ಅಧ್ಯಕ್ಷರಾದ ಸಿ.ಎಂ ಬೂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹೇಶ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಭಟ್ಟ ಸ್ವಾಗತಿಸಿದರು. ಸತೀಶ ಸವದಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕಾಂತ ಗುಂಡಕಲ್ಲೆ ವಂದಿಸಿದರು. ಪ್ರಭಾಕರ ವನಹಳ್ಳಿ, ಬಿ ವ್ಹಿ ಅಣ್ಣಿಗೇರಿ, ಮನೋಜ ಬೆನಕೊಪ್ಪ, ಸಿ. ಎಸ್. ಬಗಲಿ, ಅಶೋಕ ಮುನವಳ್ಳಿ, ಹಿರೇಮಠ, ಎಂ.ಎಸ್.ಪಾಟೀಲ, ಎಸ್ ಎಸ್ ರಾಮದುರ್ಗ ಮುಂತಾದ ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧಾ ನಿರ್ಣಯಕರಾಗಿ ಎಸ್ ಬಿ ಲಾಳಸಿಂಗಿ ಹಾಗೂ ಬಾಳಗೌಡ ದೊಡಬಂಗಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿ ಈರಣ್ಣ ಬೆಟಗೇರಿ ಪ್ರಥಮ, ಶಾಂಭವಿ ತೋರಲಿ ದ್ವಿತೀಯ, ಹಾಗೂ ಮಧುರಿತಾ ಹೊನ್ನಪ್ಪನವರ ತೃತೀಯ ಸ್ಥಾನ ಪಡೆದುಕೊಂಡರು.






