
23rd June 2025
ಸುರಪುರ: ಪೂರ್ವ ಕಾಲದಿಂದಲು ಆಚರಣೆಯಲ್ಲಿರುವ ಯೋಗ ಪದ್ದತಿ ಇತ್ತಿಚಿಗೆ ಹೆಚ್ಚು ಪ್ರಚಾರಪಡೆದಿದ್ದು ಯೋಗ ಕೈಗೊಳ್ಳುವುದರಿಂದ ರೋಗಮುಕ್ತವಾಗಿ ಬದುಕಬಹುದು ಎಂದು ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಇಂದು ಮೇರಾ ಯುವ ಭಾರತ ಕಲ್ಬುರ್ಗಿ/ ಯಾದಗಿರಿ, ಸಗರನಾಡು ಯುವಕ ಸಂಘ ಕನ್ನೆಳ್ಳಿ, ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆಧುನಿಕ ದಿನಮಾನಗಳಲ್ಲಿ ಒತ್ತಡದ ಜಂಜಾಟದಲ್ಲಿ ಬದುಕುತ್ತಿರುವ ಮನುಷ್ಯ ನೆಮ್ಮದಿ ಮತ್ತು ಆರೋಗ್ಯ ಹಾಳು ಮಾಡಿಕೊಂಡಿದ್ದಾನೆ, ಆಹಾರ ಪದ್ದತಿ, ದೈನಂದಿನ ಚಟುವಟಿಕೆ ನಮ್ಮನ್ನು ರೋಗಗ್ರಸ್ತನ್ನಾಗಿಸಿವೆ. ಇವೆಲ್ಲವುಗಳಿಗೆ ಸೂಕ್ತ ಪರಿಹಾರವೆಂದರೆ ಯೋಗ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ಶಿಭಿರದಲ್ಲಿ ಪಾಲ್ಗೊಂಡಿದ್ದರು, ವೇದಿಕೆ ಮೇಲೆ ಹಿರಿಯ ಮುಖಂಡ ಶಿವಶರಣಪ್ಪ ಹೆಡಗಿನಾಳ, ಸಿದ್ದನಗೌಡ ಹೆಬ್ಬಾಳ ಹಾಗೂ ತರಬೇತಿ ಕೇಂದ್ರದ ನಫಿಸಾ ಬೇಗಮ್ ಸೇರಿದಂತೆ ಇತರರಿದ್ದರು. ಹಣುಮಂತ್ರಾಯ ದೇವತ್ಕಲ್ ನಿರೂಪಿಸಿರು,ಸಿದ್ದಪ್ರಸಾದ ಪಾಟೀಲ ಸ್ವಾಗತಿಸಿದರು, ಸೃಜನ ಜಗಶೆಟ್ಟಿ ವಂದಿಸಿದರು.
23rd June 2025
ಯಾದಗಿರಿ: ಸುರಪುರ ತಾಲೂಕಿನಾದ್ಯಾಂತ ಕೆಲ ಅನಧಿಕೃತ ವಸತಿ ಸಹಿತ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆ ಹುಣಸಗಿ ತಾಲೂಕು ಅಧ್ಯಕ್ಷ ಪ್ರಭುಗೌಡ ಪೋತ ರೆಡ್ಡಿ ನೇತೃತ್ವದಲ್ಲಿ ಇಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಬಹುತೇಕ ಖಾಸಗಿ ಶಾಲೆಗಳು ಯಾವುದೇ ಅನುಮತಿ ಪಡೆಯದೆ ವಸತಿ ಸಹಿತ ಶಾಲೆಗಳು ನಡೆಸುತ್ತಿದ್ದು ಇದು ಕಾನೂನು ಬಾಹಿರವಾಗಿದೆ ಪಾಲಕರಿಂದ ಅತಿ ಹೆಚ್ಚು ಹಣ ಪಡೆದು ಅಲ್ಲಿಯ ಮಕ್ಕಳಿಗೆ ಯಾವುದೇ ರೀತಿಯ ಸರಿಯಾದ ಸೌಲಭ್ಯ ಒದಗಿಸದೆ ಶಾಲೆಗಳನ್ನು ನಡೆಸುತ್ತಿದ್ದಾರೆ.
ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್.ಪಾಟೀಲ್ ಚಟ್ನಳ್ಳಿ, ಪರಶುರಾಮ್, ಆಕಾಶ್ ಖಾನಾಪುರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
23rd June 2025
ಯಾದಗಿರಿ: ಕೇಂದ್ರ ಸರಕಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಧ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಡಿನ ಅಭಿವೃದ್ಧಿಗಾಗಿ ಸಚಿವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಆಗುತ್ತಿಲ್ಲ. ಹೀಗಾಗಿಯೇ ಅವರ ವಿರುದ್ಧ ಪಿತೂರಿ ರಾಜಕೀಯ ಮಾಡುವ ಮೂಲಕ ಸಣ್ಣತನ ಪ್ರದರ್ಶನ ಮಾಡುತ್ತಿರುವುದು ನಾಚಿಗೇಡು ಸಂಗತಿಯಾಗಿದೆ ಎಂದು ಹೇಳಿದರು.
ಅಮೆರಿಕಾ ಪ್ರವಾಸಕ್ಕೆ ಸಚಿವರು ಹೋಗಬೇಕಿತ್ತು. ಎರಡು ದಿನಗಳ ಕಾಲ ತಂತ್ರಜ್ಞಾನ ಶೃಂಗ ಸಭೆಯಲ್ಲಿ ಸರಕಾರದ ಪ್ರತಿನಿಧಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗಬೇಕಿತ್ತು. ಆದರೆ ಇದರಲ್ಲಿಯೂ ಧ್ವೇಷದ ರಾಜಕೀಯ ಮಾಡಿದ ಪರಿಣಾಮವಾಗಿ ಸಚಿವರು ಅಮೆರಿಕಾಕ್ಕೆ ಹೋಗಲು ಆಗಲಿಲ್ಲ. ನಾಡಿಗೆ ಕೇಂದ್ರ ಸರಕಾರ ಅವಮಾನ ಮಾಡಿದೆ ಎಂದು ದೂರಿದರು.
23rd June 2025
ಸೈದಪೂರ: ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವುದಲ್ಲದೆ ಅವರನ್ನು ಪ್ರತಿನಿತ್ಯ ತರಗತಿಗಳಿಗೆ ಕಳುಹಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮರಿಲಿಂಗಪ್ಪ ಕಾವಲಿ ಮನವಿ ಮಾಡಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ದಾಖಲಾತಿ ಹಾಗೂ ಹಾಜರಾತಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸರಕಾರಿ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಜೊತೆಗೆ ಎಲ್ ಕೆಜಿ ಮತ್ತು ಯಕೆಜಿಯನ್ನು ಸಹ ಪ್ರಾರಂಭ ಮಾಡಿದ್ದು ಪ್ರತಿಯೊಬ್ಬರೂ ಅದರ ಲಾಭ ಪಡೆದುಕೊಳ್ಳಬೇಕು. ಮಗುವಿನ ವಯೋಮಿತಿ ೪ ವರ್ಷ ಅದಲ್ಲಿ ಎಲ್ ಕೆಜಿ ಮತ್ತು ಕನಿಷ್ಠ ೫ ವರ್ಷ ೫ ತಿಂಗಳು ಆದರೆ ಒಂದನೇ ತರಗತಿಗೆ ನೋಂದಣ ಮಾಡಬಹುದು ಎಂದು ತಿಳಿಸಿದರು.
ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ ಮಾತ್ರವಲ್ಲದೆ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ತತ್ತಿ, ಬಾಳೆಹಣ್ಣು ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಬೋಧನೆಗೆ ಅನುಕೂಲ ಮಾಡಿಕೊಡಲಾಗಿದೆ. ಇದಕ್ಕಾಗಿ ಪಾಲಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಮನೆ ಹೊಲಗದ್ದೆಗಳ ಕೆಲಸಕ್ಕೆ ಬಳಸದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಅಕ್ಷರ ಕಲಿತ ಮಗು ತನ್ನ ಕುಟುಂಬ, ಗ್ರಾಮ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯಬಹುದಾಗಿದೆ ಎಂದರು.
ಬದ್ದೇಪಲ್ಲಿ ಗ್ರಾಮದ ವೆಂಕಟೇಶ ಕಾವಲಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿದರು. ಇದಕ್ಕೂ ಮುನ್ನ ಮಕ್ಕಳು ವಿವಿಧ ಗ್ರಾಮದಲ್ಲಿ ಪ್ರಭಾತಪೇರಿ ನಡೆಸಿ, ಜಾಗೃತಿ ಮೂಡಿಸಲಾಯಿತು.
ಈ ವೇಳೆ ಕಡೇಚೂರು ಕ್ಲಸ್ಟರ್ ಸಿಆರ್ ಪಿ ಸುಬ್ರಮಣ , ಮುಖ್ಯಗುರು ಮಹದೇವಯ್ಯ, ಗ್ರಾಮದ ಮುಖಂಡರಾದ ನರಸೇಗೌಡ ಕಲಾಲ್, ಕಲಿಕಾ ಟಾಟಾ ಟ್ರಸ್ಟ್ ನ ಸಂಯೋಜಕರು ಶರಣು ನಾಡಗೌಡ ಡಿ. ಅಚಿಜನಕುಮಾರ, ಅನಿಲಕುಮಾರ ಕಾವಲಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
17th June 2025
ಯಾದಗಿರಿ: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕೆಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ. ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ, ಸುಳ್ಳು ಕೇಸ್ ಹಾಕಲಾಗುತ್ತಿದೆ. ಇದು ಬಹಳ ದಿನಗಳ ನಡೆಯುವುದಿಲ್ಲ ಎಂಬುವುದನ್ನು ರಾಜ್ಯದಲ್ಲಿ ಆಳುತ್ತಿರುವ ಕಾಂಗ್ರೆಸ್ ಪಕ್ಷದ ಎಲ್ಲರೂ ಅರಿತುಕೊಳ್ಳಬೇಕು. ಬರುವ ದಿನಗಳಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೇ ಇದ್ದಾರೆ. ಏನೇ ಘಟನೆ ಜರುಗಿದರೂ ಗಂಭಿರವಾಗಿ ತೆಗೆದುಕೊಳ್ಳುವುದೇ ಇಲ್ಲ, ಇನ್ನೂ ಕಲಬುರಗಿ ಸೇರಿದಂತೆಯೇ ಆರು ಸಚಿವರು ತಮ್ಮ,ತಮ್ಮ ಜಿಲ್ಲೆಗಳನ್ನು ರಿಪಬ್ಲಿಕ್ ಜಿಲ್ಲೆಗಳನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿರುವ ಯುವ ಮೋರ್ಚಾ ಆರ್ ಎಸ್ ಎಸ್ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಗುರಿ ಮಾಡಿ ನೋಟಿಸ್ ನೀಡಿ, ಠಾಣೆಗಳಲ್ಲಿ ಕೂಡಿಹಾಕುವುದು ನಡೆದಿದೆ ಮತ್ತು ಬೆದರಿಸುವ ಕೆಲಸ ನಡೆದಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನವರು ಅಧಿಕಾರ ಇದೆ ಎಂದು ಏನೆಲ್ಲ ಮಾಡಿದರೇ ನಾವು ಸುಮ್ಮನ್ನೆ ಇರುವುದಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ ಎಲ್ಲ ಮುಖಂಡರು ಕಾರ್ಯಕರ್ತರ ಬೆನ್ನಿಗೆ ಇದ್ದು, ಯಾರು ಅಂಜಬೇಕಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಗೌಡ ಮುದ್ನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಪರಶುರಾಮ ಕುರಕುಂದಾ, ಹಿರಿಯ ಮುಖಂಡ ದೇವೆಂದ್ರನಾಥ ನಾದ್, ಮೌನೇಶ ಬೇಳಿಗೇರಿ, ಜಿಲ್ಲಾ ಮಾಧ್ಯಮ ಸಂಚಾಲಕ ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆಯೇ ಇತರರಿದ್ದರು.