


20th May 2026
ಬೆಂಗಳೂರು:20: ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ NIAS ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಅನಾವರಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ರವರು ತಿಳಿಸಿದರು.
ಅವರು ಬೆಂಗಳೂರಿನ ವಿಧಾನ ಸೌಧದಲ್ಲಿ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಹೊರತರುವ ಸಲುವಾಗಿ NIAS ಸಂಸ್ಥೆ ವಿಜ್ಞಾನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಈಗಾಗಲೇ 2023 ರಿಂದ ಲಕ್ಕುಂಡಿಯಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ 07 ಇತರೆ ಸ್ಮಾರಕಗಳನ್ನು ಒಳಗೊಂಡಂತೆ ಒಟ್ಟು 70ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಮುಂಬರುವ ಡಿಸೆಂಬರ್-31 ರೊಳಗೆ ಲಕ್ಕುಂಡಿಯಲ್ಲಿ 101 ಬಾವಿ 101 ದೇವಾಲಯಗಳನ್ನು NIAS ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೆ ಅನಾವರಣಗೊಳಿಸಲು ಅಗತ್ಯ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಲಕ್ಕುಂಡಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೋ) ಸೇರಿಸಲು ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಯುನೆಸ್ಕೋ ಪಟ್ಟಿಗೆ ಸೇರಿಸಲು ನವಂಬರ್-2024 ರಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-1ನ್ನು ನಡೆಸಿ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಲಾಗಿದೆ. ಜೊತೆಗೆ 2026 ರ ಮೇ-02 ರಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-2 ನ್ನು ನಡೆಸುತ್ತಿದ್ದು, ಈಗಾಗಲೇ ಎರಡನೇ ಹಂತದಲ್ಲಿ 1800 ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿವೆ. ಮೊದಲ ಹಂತ ಮತ್ತು ಎರಡನೇ ಹಂತದ ಪ್ರಾಚ್ಯಾವಶೇಷಗಳನ್ನು ಸೇರಿಸಿ ಜೂನ್-30 ರ ಒಳಗಾಗಿ ದಾಖಲೆಯ ರೀತಿಯ 5000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಿ ಅವುಗಳನ್ನು ಬಯಲು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಹ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಈಗಾಗಲೇ ಫೆಬ್ರವರಿ ಮಾಹೆಯಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ-2 ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದ್ದು 10 ಕೋಟಿ ವೆಚ್ಚದಲ್ಲಿ 06 ಸ್ಮಾರಕಗಳನ್ನು ಸಂಪೂರ್ಣವಾಗಿ ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2026-27 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 10ಕ್ಕಿಂತ ಹೆಚ್ಚು ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲಾಗುವುದು. ಒಟ್ಟಾರೆಯಾಗಿ ಲಕ್ಕುಂಡಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಕಾರ್ಯಕ್ಕೆ (ಯುನೆಸ್ಕೋ ಪಟ್ಟಿಗೆ ಸೇರಿಸಲು) ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ: ಕಿರಣ ಕುಮಾರ್ ರವರು ಮಾತನಾಡಿ, ಲಕ್ಕುಂಡಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೆರ್ಪಡೆಯಾಗುವುದು ಅಗತ್ಯವಾಗಿದೆ. ಆ ದಿಸೆಯಲಿ ಪ್ರಯತ್ನ ಸ್ವಾಗತಾರ್ಹ. ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಲಕ್ಕುಂಡಿಯಲ್ಲಿರುವ 101 ಭಾವಿ ಹಾಗೂ 101 ದೇವಾಲಯಗಳನ್ನು ಅನಾವರಣಗೊಳಿಸುವ ಪ್ರಯತ್ನಕ್ಕೆ ಕೈಜೊಡಿಸುವುದಾಗಿ ಇಸ್ರೋದ ಮಾಜಿ ಅಧ್ಯಕ್ಷರು ತಿಳಿಸಿದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ರವರು ಕೈಗೊಂಡಿರುವ ಎಲ್ಲಾ ಕಾರ್ಯಗಳಿಗೆ ಸ್ಥಳೀಯರ ಸಂಪೂರ್ಣ ಸಹಕಾರವಿದೆ ಎಂದರು.
ಸಭೆಯಲ್ಲಿ 2023 ರಿಂದ ಇಲ್ಲಿಯವರೆಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಕುರಿತು ಪ್ರಾಧಿಕಾರದ ಆಯುಕ್ತ ಡಾ: ಶರಣು ಗೋಗೇರಿ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು. 101 ಬಾವಿ 101 ದೇವಾಲಯಗಳನ್ನು ಪತ್ತೆಹಚ್ಚುವಲ್ಲಿ ಸ್ಯಾಟಲೈಟ್ ತಂತ್ರಜ್ಞಾನದ ಬಳಕೆ ಕುರಿತು NIAS ಸಂಸ್ಥೆಯ ಪ್ರೊಫೆಸರ್ ಎಂ.ಬಿ. ರಜನಿ ಪ್ರಾತ್ಯಕ್ಷಿಕೆ ನೀಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ: ಕೆ.ವಿ. ತ್ರಿಲೋಕಚಂದ್ರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಇಸ್ರೋದ ವಿಜ್ಞಾನಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರೊ. ರಾಮನಗೌಡ ನಾಡಗೌಡರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ ಅ.ಧ. ಕಟ್ಟಿಮನಿ. ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರಾದ ಡಾ: ಆರ್. ಶೇಜೇಶ್ವರ, ಸ್ಮಿತಾ ರೆಡ್ಡಿ, ಇಸ್ರೋ ಹಾಗೂ NIAS ಸಂಸ್ಥೆಯ ವಿಜ್ಞಾನಿಗಳು, ಸಂಶೋಧಕರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

16th May 2026
ಬೆಂಗಳೂರು/ಗದಗ, ಮೇ 16: “ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ವ ವೈಭವವನ್ನು ಒಳಗೊಂಡಿರುವ ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ದಿಸೆಯಲ್ಲಿ ಸಮಗ್ರ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯು ಶನಿವಾರ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲರು, ಲಕ್ಕುಂಡಿಯ ಪುರಾತತ್ವ ಸಂಪತ್ತಿನ ಸಂರಕ್ಷಣೆ, ದೇವಾಲಯಗಳ ಪುನರುಜ್ಜೀವನ, ಪುರಾತನ ಬಾವಿಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಸಮನ್ವಯದಿಂದ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
“ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈಗಾಗಲೇ 15 ಬಾವಿ ಹಾಗೂ 15 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಮ್ಮ ಗುರುತನ್ನು ಕಳೆದುಕೊಂಡಿದ್ದ ಅನೇಕ ಪಾರಂಪರಿಕ ತಾಣಗಳನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಮರು ಅನಾವರಣಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ” ಎಂದು ಹೇಳಿದರು.
2026 ಅತ್ಯದೊಳಗೆ ಕನಿಷ್ಠ 50 ಬಾವಿ ಹಾಗೂ 50 ದೇವಾಲಯಗಳನ್ನು ಗುರುತಿಸುವ, ಲಕ್ಕುಂಡಿಯ ಪಾರಂಪರಿಕ ತಾಣಗಳ ಸಂಖ್ಯೆಯನ್ನು 100ರ ಗಡಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಕ್ಕೆ ಸ್ಥಳೀಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಸಚಿವ ಎಚ್ ಕೆ ಪಾಟೀಲರು ನುಡಿದರು.
ಲಕ್ಕುಂಡಿಯಲ್ಲಿ ಬಾವಿ, ದೇವಾಲಯಗಳಿವೆ ಎಂದು ಇತಿಹಾಸದಲ್ಲಿ ತಿಳಿಸಿದ್ದು, ಅವುಗಳನ್ನು ಹೆಕ್ಕಿ ತೆಗೆಯುವ ಕಾರ್ಯವು ಪ್ರಾಧಿಕಾರದಿಂದ ಆಗಲಿ, ಈ ದಿಶೆಯಲ್ಲಿ ಅಧಿಕಾರಿಗಳು ಹಾಗೂ ಪ್ರಾದಿಕಾರದ ಸದಸ್ಯರು ಕಾರ್ಯ ಪ್ರವೃತ್ತರಾಗಲಿ ಎಂದು ಸಚಿವರು ತಿಳಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, “ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ಸಂಗತಿಯಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಕಲಾತ್ಮಕತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಇಲ್ಲಿ ದೊರೆಯುತ್ತಿರುವ ಶಿಲ್ಪಗಳು ಹಾಗೂ ಪುರಾವೆಗಳು ಜೀವಂತ ಸಾಕ್ಷಿಗಳಾಗಿವೆ” ಎಂದು ಹೇಳಿದರು.
“ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿರುವ ಅನ್ವೇಷಣಾ ಕಾರ್ಯಗಳಿಂದ ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬರುತ್ತಿದೆ. ಈಗ ಪತ್ತೆಯಾಗಿರುವ ಪುರಾವೆಗಳು ಕೇವಲ ಆರಂಭ ಮಾತ್ರ. ಇನ್ನಷ್ಟು ಅನ್ವೇಷಣೆಗಳು ನಡೆದರೆ ಲಕ್ಕುಂಡಿಯ ಗತ ವೈಭವ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರು ಲಕ್ಕುಂಡಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಪಾರಂಪರಿಕ ತಾಣಗಳ ಸಂರಕ್ಷಣೆ, ಪ್ರವಾಸೋದ್ಯಮ ವಿಸ್ತರಣೆ, ಸ್ಥಳೀಯ ಕಲಾ ಪರಂಪರೆಯ ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸದಸ್ಯರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿ.ಜಿ. ಬೆಟಸೂರಮಠ, ಸಿದ್ದಲಿಂಗೇಶ್ವರ ಎಚ್. ಪಾಟೀಲ, ಶ್ರೀಮತಿ ಗೀತಾಂಜಲಿ ರಾವ್, ಅ.ದ. ಕಟ್ಟಿಮನಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಎ., ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ಸೇರಿದಂತೆ ಹಲವ
ರು ಉಪಸ್ಥಿತರಿದ್ದರು.

18th April 2026
ಗದಗ : ಬಾಗಲಕೋಟೆಯ ವಿಧಾನಸಭೆಯ ಉಪ ಚುನಾವಣೆಯ ಸಭೆಯಲ್ಲಿ ಕುರುಬ ಸಮುದಾಯವನ್ನು ದೂರವಿಡಬೇಕು ಎಂದು ಹೇಳಿಕೆ ನೀಡಿರುವ ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಶಾಸಕರಾಗಿ ಮುಂದುವರೆಯಲು ಯೋಗ್ಯರಲ್ಲ ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಶಿಪಾರಸ್ಸಿನ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಸಲ್ಲಿಸಿರುವುದು ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಅವರು ಕುರುಬ ಸಮುದಾಯಕ್ಕೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವುದು ಒಂದೆಡೆಯಾದರೆ ಅದೇ ಪಕ್ಷದ ಒಬ್ಬ ಶಾಸಕ ತನ್ನ ಪ್ರಚಾರ ಬಾಷಣದಲ್ಲಿ ಅಲ್ಪಸಂಖ್ಯಾತರನ್ನು ಮತ್ತು ಕುರುಬ ಸಮುದಾಯವನ್ನು ದೂರವಿಡಬೇಕು ಎಂದು ಬೇಜಾಬ್ದಾರಿ ಹೇಳಿಕೆ ನೀಡಿರುವುದು ಎಷ್ಟು ಸರಿ? ಇಂತವರು ಶಾಸಕರಾಗಿ ಮುಂದುವರೆಯಲು ಯೋಗ್ಯರಲ್ಲ, ಐದು ಖಾತೆಗಳನ್ನು ಪೂರೈಸಿ, ನಾಲ್ಕು ಬಾರಿ ಶಾಸಕರಾಗಿರುವ ಇವರು ಸ್ವಜಾತಿಯವರನ್ನು ಓಲೈಕೆ ಮಾಡಲು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೆ, ಇವರು ಕುರುಬ ಸಮುದಾಯಕ್ಕೆ ಮಾಡುತ್ತಿರುವ ಶೋಷಣೆ ಇದೇ ಮೊದಲಲ್ಲ ಈ ಹಿಂದೆ ಬಳಗಾನೂರ ಗ್ರಾಮದಲ್ಲಿ ಸ್ವಜಾತಿಯ ವಿಷ ಬೀಜ ಬಿತ್ತಿ ಕುರುಬ ಸಮುದಾಯದ ಅಮಾಯಕ 34 ಯುವಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಅವರನ್ನು ಕೋರ್ಟಿಗೆ ಅಲೆದಾಡುವಂತೆ ಮಾಡಿದ್ದಾರೆ ಇಂತವರಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾದ್ಯವಿಲ್ಲ ಎಂದು ಹೇಳಿದರು.
ಶಾಸಕ ಸಿ.ಸಿ.ಪಾಟೀಲ ಅವರು ಕ್ಷಮಾಪಣೆ ಕೇಳುವದು ಬೇಕಾಗಿಲ್ಲ ರಾಜ್ಯಪಾಲರು ಅವರ ಶಾಸಕ ಸ್ಥಾನವನ್ನು ವಜಾಗೊಳಿಸಬೇಕು. ಅವರು ತಮ್ಮ ತಾಕತ್ತನ್ನು ಪ್ರದರ್ಶನ ಮಾಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕುರುಬ ಸಮುದಾಯ ಮತ್ತು ಅಲ್ಪಸಂಖ್ಯಾತರ ಮತಗಳ ತಮಗೆ ಬೇಕಾಗಿಲ್ಲ ಎಂದು ಘೋಷಣೆ ಮಾಡಿ ಚುನಾವಣೆ ಎದುರಿಸಲಿ ಎಂದು ರುದ್ರಣ್ಣ ಗುಳಗುಳಿ ಅವರು ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ, ನರಗುಂದ ಕ್ಷೇತ್ರದ ಮಹಿಳಾ ಮುಖಂಡರಾದ ಉಮಾ ದ್ಯಾವನೂರ, ಹಾಲುಮತ ಮಹಾಸಭಾದ ಗೌರವಾಧ್ಯಕ್ಷರಾದ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷರಾದ ಬಸವರಾಜ ನೀಲಗಾರ, ರಾಘು ವಗ್ಗನವರ, ಸೋಮನಗೌಡ ಪಾಟೀಲ, ಸತೀಶ ಗಿಡ್ಡಹನುಮಣ್ಣನವರ, ಬಸವರಾಜ ಕುರಿ, ಮುತ್ತು ಜಡಿ, ಮಂಜು ಜಡಿ, ಶಿವರಾಜ ವನ್ನೂರ, ಮಂಜು ಪೂಜಾರ, ಸೋಮು ಮೇಟಿ, ರಾಜು ಪೂಜಾರ, ರವಿ ಅಬ್ಬಿಗೇರಿ, ಶ್ಯಾಮಸುಂದರ ಡಂಬಳ, ಬಸವರಾಜ ಹೊಂಬಳ, ಮಂಜುನಾಥ ಡಂಬಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

14th April 2026
ಗದಗ: 2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಿ, ಅಲ್ಲಿ ರಣಜಿ ಪಂದ್ಯವನ್ನು ಆಯೋಜಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಭಾನುವಾರ ರಾತ್ರಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಉದ್ಘಾಟನಾ ಕಾರ್ಯಕ್ರಮದಲ್ಲಿ
ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗದಗ ನಗರದಲ್ಲಿ ರಣಜಿ ಪಂದ್ಯಗಳು ನಡೆಯುವಂತಾ ಗುಣಮಟ್ಟದ ಮೈದಾನ ನಿರ್ಮಾಣಕ್ಕಾಗಿ ಈಗಾಗಲೇ ಕೆಎಸ್ಸಿಎ ಸಂಸ್ಥೆಗೆ ಹೆದ್ದಾರಿಗೆ ಹೊಂದಿಕೊಂಡೇ ಇರುವ 12 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅದಕ್ಕೆ ಬೇಕಾಗುವ ಬೊರ್ ವೆಲ್ ಮತ್ತು ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಅದಕ್ಕಾಗಿ ರಾಜ್ಯ ಕಿಕ್ರೆಟ್ ಸಂಸ್ಥೆ ಕೂಡಲೇ ಗಮನ ಹರಿಸಬೇಕು. ಧಾರವಾಡ ಝೋನ್ ನ ಈರಣ್ಣ ಸವಡಿ ವಿಶೇಷ ಗಮನ ನೀಡಬೇಕು ಎಂದರು. ಈ ಬಾರಿಯ ಆರ್ಸಿಬಿಯನ್ನು ಖರೀದಿಸಿದ ಮೊತ್ತವನ್ನು ಕೇಳಿದರೆ ಸಾಕು, ಕ್ರಿಕೆಟ್ ಎಷ್ಟು ಶ್ರೀಮಂತ ಕ್ರೀಡೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಗದಗ ಭಾಗದಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗುವಂತಾಗ ಉತ್ತಮ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟ್ ಸಂಸ್ಥೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಗದಗ ನಗರದಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಾಧನೆ ಮಾಡುವುದರಲ್ಲಿ ಇಲ್ಲಿನ ಯುವಕರು ಎತ್ತಿದ ಕೈ, ಆದರೆ ಮೂಲಭೂತ ಸೌಲಭ್ಯಕ್ಕೆ ಕೊರತೆ ಇತ್ತು, ಈಗ ಅದೆಲ್ಲಾ ಸರಿ ಹೋಗಿದೆ. ನಮ್ಮ ಹುಡುಗರು ಒಂದೊಮ್ಮೆ ಸಾಧನೆ ಮಾಡಲು ಪ್ರಾರಂಭ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯಾವಳಿಗಳು ಎಲ್ಲರಿಗೂ ಪ್ರೇರಣೆಯಾಗಲಿ, ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಆ ಮೂಲಕ ನಾಡಿಗೆ ಹೊಸ ಪ್ರತಿಭೆಗಳನ್ನು ಈ ಕ್ರೀಡಾಕೂಟ ಕೊಡುವಂತಾಗಲಿ ಎಂದರು.
ಕೆಎಸ್ ಸಿಎ ಧಾರವಾಡ ಜೋನ್ ಕವ್ನೀಯರ್ ಈರಣ್ಣ ಸವಡಿ ಮಾತನಾಡಿ, ಹಿರಿಯರಾದ ಎಚ್.ಕೆ.ಪಾಟೀಲರ ಸದಾಯಶದಂತೆ 2030 ರಲ್ಲಿ ಗದಗ ನಗರದಲ್ಲಿ ರಣಜಿ ಪಂದ್ಯಗಳನ್ನು ನಡೆಸಲು ಬೇಕಾದ ಮೈದಾನ ನಿರ್ಮಾಣಕ್ಕೆ ವಿಶೇಷ ಗಮನ ನೀಡಲಾಗುವುದು. ಇದಕ್ಕೆ ವಿಶೇಷ ಆದ್ಯತೆ ಮೇರೆಗೆ ನಾವೆಲ್ಲಾ ಶ್ರಮಿಸೋಣ ಎಂದರು.
ಅಂತಾರಾಷ್ಟ್ರೀಯ ಕ್ರಿಕೆಟಿಗ ಗದಗನ ಸುನೀಲ್ ಜೋಶಿ ಮಾತನಾಡಿ, ಗದಗ ಭಾಗದಲ್ಲಿ ಅತ್ಯುತ್ತಮ ಕ್ರಿಕೆಟ್ ಪಟುಗಳಿದ್ದು ಅವರಿಗೆ ಸೂಕ್ತ ವೇದಿಕೆ ಸಿಗಬೇಕಿದೆ. ಇಲ್ಲಿ ಕೂಡಾ ಸಾಕಷ್ಟು ಜನ ಐಪಿಎಲ್ ಆಡುವಂತಾ ಸಾರ್ಮಥ್ಯವನ್ನು ಹೊಂದಿದ್ದಾರೆ. ಆದರೆ ಅವರಿಗೆ ಉತ್ತಮವಾದ ಕ್ರೀಡಾಂಗಣದ ಅವಶ್ಯಕತೆ ಇದೆ, ಗದಗ ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಾನು ಕೂಡಾ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಮಿಥುನ್ ಪಾಟೀಲ, ವೆಂಕಟೇಶಗೌಡ ಪಾಟೀಲ, ಬಸವರಾಜ ಕಡೇಮನಿ, ವಿದ್ಯಾಧರ ದೊಡ್ಡಮನಿ, ಡಾ.ಎಸ್.ಆರ್.ನಾಗನೂರ, ಡಾ.ವೇಮನ ಸಾಹುಕಾರ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ ಶೇಖ ಮುಂತಾದವರು ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿದರು. ಪಂದ್ಯಾವಳಿಯ ಆಯೋಜಕ ಕೃಷ್ಣಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟ್.
ಕಳೆದ ಸಾಲಿನಲ್ಲಿ ಗದಗ ನಗರದಲ್ಲಿ ನಡೆಸಿದ ಕೆ.ಎಚ್.ಪಾಟೀಲ ಕ್ರಿಕೆಟ್ ಲೀಗ್ ಸೀಸನ್ 1 ಅಭೂತಪೂರ್ವ ಯಶಸ್ಸ ಕಂಡಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಿದ ನಮ್ಮ ಯುವಕರು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅದರಂತೆ ಸೀಸನ್ -2 ಕೂಡಾ ಯಶಸ್ವಿಯಾಗಲಿದೆ.
..ಎಚ್.ಕೆ.ಪಾಟೀಲ. ಕಾನೂನು ಸಚಿವ