


25th May 2026
ಗದಗ, ಮೇ.25 : ಐತಿಹಾಸಿಕ ಲಕ್ಕುಂಡಿಯಲ್ಲಿ ರಾಷ್ಟ್ರಕೂಟರ ಕಾಲದ 13 ಸಾಲುಗಳುಳ್ಳ ಶಾಸನವು ಪತ್ತೆಯಾಗಿದ್ದು ಕುತೂಹಲ ಮೂಡಿಸಿದೆ. ಸೋಮವಾರ ಲಕ್ಕುಂಡಿಯ ರಾಷ್ಟ್ರೀಯ ಹೆದ್ದಾರಿಯ ಬಲಗಡೆ ಇರುವ ಬಟ್ಟೂರ್ ಮತ್ತು ಕವಲೂರ ಅವರಿಗೆ ಸೇರಿದ ಹೊಲದ(ಜಮೀನ) ಹತ್ತಿರದ ಕಠಿಣ ಹಳ್ಳದ ಪಕ್ಕದಲ್ಲಿ ೧೩ ಸಾಲುಗಳ ಹೊಸ ಶಾಸನ ದೊರೆತಿದೆ. ಲಕ್ಕುಂಡಿ ಗ್ರಾಮದ ಬಸಪ್ಪ ಮುಸಕಿನಬಾವಿಯವರು ಶಾಸನವಿದೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದು ಸುಮಾರು ಎರಡೂವರೆ ಫೂಟ್ ಎತ್ತರವಿರುವ ಈ ಶಾಸನ ರಾಷ್ಟ್ರಕೂಟರ ಕಾಲದ್ದು ಇರಬಹುದು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರಲ್ಲದೆ ಈ ಶಾಸನದಲ್ಲಿರುವ ವಿಷಯವನ್ನು ತಿಳಿಯಲು ಶಾಸನ ತಜ್ಞರಿಗೆ, ಇತಿಹಾಸ ತಜ್ಞರಿಗೆ ತೋರ್ಪಡಿಸಿ ಶಾಸನದಲ್ಲಿಯ ಇತಿಹಾಸವನ್ನು ತಿಳಿಯಲಾಗುವದೆಂದು ಹೇಳಿದ್ದಾರೆ.

7th May 2026
ಪ್ರಾಚ್ಯಾವಶೇಷ ಅನ್ವೇಷಣೆಯಲ್ಲಿ ಗುರುವಾರ ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ಅದ್ಭುತ ಈ ಎರಡು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು ಅದರಲ್ಲಿ
ಒಂದು ಸುಂದರವಾದ ಕಲಾತ್ಮಕತೆಯಿಂದ ಕೂಡಿದ ದೇವಾಲಯದ ಬಿಡಿ ಭಾಗಗಳಾಗಿವೆ. ಎರಡು ಭಾಗಗಳಲ್ಲೂ ವಾದ್ಯ ನುಡಿಸುತ್ತಿರುವ ಪುರುಷ ಮತ್ತು ನೃತ್ಯನಿರತಳಾಗಿ ತ್ರಿಭಂಗಿಯಲ್ಲಿರುವ ಸ್ತ್ರೀಯ ಶಿಲ್ಪಗಳಿವೆ. ಒಂದು ಶಿಲ್ಪದಲ್ಲಿ ಪುರುಷನು ಮದ್ದಳೆಯನ್ನು ಬಾರಿಸುತ್ತಿದ್ದು, ಅಲಂಕೃತಳಾದ ಸ್ತ್ರೀಯು ನೃತ್ಯ ಮಾಡುತ್ತಿದ್ದರೆ, ಎರಡನೆಯ ಭಾಗದಲ್ಲಿ ಪುರುಷ ವೇಣುವಾದನದಲ್ಲಿ ತಲ್ಲಿನನಾಗಿದ್ದಾರೆ, ಮಹಿಳೆಯು ನೃತ್ಯ ನಿರತಳಾಗಿ ನೃತ್ಯ ಸಂಗೀತ ಎರಡರಲ್ಲೂ ಪರಿಣತಳು ಎಂಬುದನ್ನು ಸುವಿಸುತ್ತದೆ
ಈ ಎರಡು ಪ್ರಾಚ್ಯಾವಶೇಷಗಳ ಭಾಗಗಳನ್ನು ಗಮನಿಸಿದಾಗ ಈ ಶಿಲ್ಪಗಳ ಮೇಲೆ ಹೊಯ್ಸಳರ ಶೈಲಿಯ ನಿಚ್ಚಳ ಪ್ರಭಾವವಿರುವುದನ್ನು ಕಾಣಬಹುದು. ಪುರುಷನ ಮೇಲ್ವಸ್ತ್ರ, ಸ್ತ್ರೀಯರ ಉಡುಪು, ಅಲಂಕೃತವಾದ ಕೆತ್ತನೆ ಹೊಂದಿರುವುದಲ್ಲದೆ ವಿಶಿಷ್ಟ ಕೇಶವಿನ್ಯಾಸವನ್ನು ಶಿಲ್ಪಿ ಮೂಡಿಸಿದ್ದಾನೆ. ಇದು ಯಾವುದೋ ಅತ್ಯುತ್ಕೃಷ್ಟ ದೇವಾಲಯದ ಬಿಡಿ ಭಾಗವಾಗಿದೆ ಎಂದು ಗ್ರಾಮಸ್ಥರು ಹೇಳಿದರು