

27th February 2026
ಗದಗ, 27. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸರಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೇ ಪ್ರಭುಗಳಾಗಿದ್ದು ಅವರ ಸೇವೆಗೆ ಅವಕಾಶ ಕಲ್ಪಿಸಲು ಜನತಾ ದರ್ಶನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಚೇರಿಗಳಿಗೆ ಬರುವ ಸಾರ್ವಜನಿಕರು ಗ್ರಾಹಕರಲ್ಲ. ಅವರು ಪ್ರಭುಗಳಾಗಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಇಲಾಖೆಯ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಿಂದ ಎಲ್ಲ ಕಡೆಗೆ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಚಿವ ಸಂಪುಟದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ವಿಶೇಷ ಮಹತ್ವವಿದೆ. ಯಾವ ಕಚೇರಿಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸ್ಪಂದನೆ ಪಡೆದಿರುವುದಿಲ್ಲವೋ ಅಂತಹವರು ಜನತಾ ದರ್ಶನ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಜನತಾ ದರ್ಶನ ಹೊಸ ವ್ಯವಸ್ಥೆ : ಜನತಾ ದರ್ಶನ ಕಾರ್ಯಕ್ರಮವಾಗುವುದಕ್ಕಿಂತ ಹತ್ತು ದಿನಗಳ ಮುಂಚೆಯೇ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಕುರಿತು ಜಿಲ್ಲಾಡಳಿತದಿಂದ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗಿದೆ. ವಿವಿಧೆಡೆಯಿಂದ ಬಂದಿರುವ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದರೆ ತಮ್ಮ ಸಮಸ್ಯೆಗಳಿಗೆ ಇವತ್ತಿನ ಸಂಜೆಯೊಳಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎರಡು ದಿವಸಗಳ ಹಿಂದೆ ಬಂದಿರುವ ಅರ್ಜಿಗಳ ಪರಿಹಾರಕ್ಕೆ ಆದಷ್ಟು ಶೀಘ್ರ (ಇಂದು ಸಂಜೆ) ಘೋಷಣೆ ಮಾಡಲಾಗುವುದು.
೩೦೦ ಅರ್ಜಿಗಳ ಸ್ವೀಕೃತಿ : ಜನತಾ ದರ್ಶನದಲ್ಲಿ ಈಗಾಗಲೇ ೩೦೦ ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಂದಾಯ ಇಲಾಖೆಯ ೧೩೫, ನಗರಾಬಿವೃದ್ಧಿ ಕೋಶದ ೩೮, ಜಿಲ್ಲಾ ಪಂಚಾಯತ್ಗೆ ಸಂಬAಧಿತ ೪, ವಿವಿಧ ಇಲಾಖೆಗಳ – ೧೨೩ ಅರ್ಜಿಗಳಿವೆ. ೧೮೮ ಅರ್ಜಿಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.ಉಳಿದವುಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿಶೇಷ ಆಡಳಿತಾತ್ಮಕ ಜಿಲ್ಲೆ ನಮ್ಮದು: ಗದಗ ಜಿಲ್ಲೆಯು ವಿಶೇಷ ಆಡಳಿತಾತ್ಮ ಜಿಲ್ಲೆಯಾಗಿದೆ. ಇ ಆಡಳಿತ ವ್ಯವಸ್ಥೆ ಪ್ರಾರಂಭಿಸಿದ ಮೊದಲ ಹಾಗೂ ಉತ್ತಮ ಜಿಲ್ಲೆ ನಮ್ಮದಾಗಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಶೇಕಡ ೯೯.೦೨ % ಪ್ರಗತಿ ಸಾಧಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ಜಿಲ್ಲೆ ಅಗ್ರಣೀಯ ಸ್ಥಾನದಲ್ಲಿದ್ದು ಇದಕ್ಕೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಕಾಳಜಿ, ಸ್ಪಂದನೆ ಹಾಗೂ ಜವಾಬ್ದಾರಿಯೂ ಕಾರಣವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಕಾಯ್ದುಕೊಂಡಿದ್ದು ಸಂತಸದ ವಿಷಯವಾಗಿದೆ. ಪಂಚ ಗ್ಯಾರಂಟಿಗಳ ಕುರಿತು ಕೆಲವರು ಅಸೂಯೆಯಿಂದ ಟೀಕೆ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಜನರ ಮುಖದಲ್ಲಿ ನಗು ಮೂಡಿಸುವ ಕಾರ್ಯಕ್ರಮಗಳಾಗಿವೆ. ಬಡತನ ನಿರ್ಮೂಲನೆ ಮಾಡುವುದು ಹಾಗೂ ಬಡಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಮಾನವ ಹಕ್ಕುಗಳಾಗಬೇಕು. ನಮ್ಮದು ಸತ್ವ, ತತ್ವ ಆಧಾರಿತ ಆಡಳಿತವಾಗಿದೆ ಎಂದರು.
ಪ್ರಭುವಿನೆಡೆಗೆ ಪ್ರಭುತ್ವ : ಹಿಂದಿನ ರಾಜರುಗಳ ಕಾಲದಲ್ಲಿ ನ್ಯಾಯದ ಗಂಟೆ ಇರುತ್ತಿತ್ತು. ಅದೇ ಕಲ್ಪನೆಯಲ್ಲಿಯೇ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಜಾರಿತರಲಾಗಿದೆ. ಸಾರ್ವಜನಿಕರ ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತ, ಪೊಲೀಸ ಇಲಾಖೆಯ ಗಮನಕ್ಕೆ ಬಂದು ತ್ವರಿತ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಥರ್ಡ ಐ : ನಾಗರಿಕರಿಗೆ ರಕ್ಷಣೆ ಒದಗಿಸಲು ಪೊಲೀಸ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಥರ್ಡ್ ಐ ಮೂಲಕ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ನಾಗರೀಕರು ಭಯಮುಕ್ತ ವಾತಾವರಣದಲ್ಲಿ ಜೀವನ ನಿರ್ವಹಿಸಬಹುದಾಗಿದೆ. ಸಾರಿಗೆ ಸಂಚಾರದ ನಿಯಮಗಳ ಉಲ್ಲಂಘನೆಗಳು ಕಡಿಮೆಯಾಗಿವೆ.
ಈ ಜನತಾ ದರ್ಶನ ಕಾರ್ಯಕ್ರಮ ಇತರರಿಗೆ ಮಾದರಿಯಾಗಬೇಕು. ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ದಿನನಿತ್ಯದ ಕಚೇರಿ ಕೆಲಸದಲ್ಲಿ ಆಗಬೇಕೆಂದು ರಾಜ್ಯದ ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ನಿರ್ದೇಶನ ನೀಡಿದರು.
ಗದಗ ತಹಶೀಲ್ದಾರರ ಕಚೇರಿ ಕಡತಗಳ ನಿರ್ವಹಣೆ ಬಗ್ಗೆ ವಿಚಾರಿಸಿದಾಗ ೪೪೦ ಅರ್ಜಿಗಳು ಬಾಕಿ ಉಳಿದಿದ್ದು ಅದರಲ್ಲಿ ೨೮೦ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ೧೫೬ ಆದೇಶದ ಪ್ರತಿಯನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾತನಾಡಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯೋಜನೆಗಳ ಬಗ್ಗೆ ಮಾಹಿತಿ ಕೊರತೆ ಇದ್ದಲ್ಲಿ ಅಥವಾ ಯೋಜನೆ ಸೌಲಭ್ಯ ಪಡೆಯಲು ವಿಳಂಬವಾಗಿರುವವರು ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಫೆಬ್ರುವರಿ ೧೬ ರಿಂದಲೇ ಸಾರ್ವಜನಿಕರಿಂದ ಅರ್ಜಿ ಸ್ವೀಕೃತಿ ಕಾರ್ಯ ಪ್ರಾರಂಭಗೊAಡಿರುತ್ತದೆ. ಕೆಲವು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದವುಗಳನ್ನು ನಿಗದಿತ ಕಾಲಾವಧಿಯಲ್ಲೇ ಇತ್ಯರ್ಥಗೊಳಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ ಆರ್, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಗಣ್ಯರಾದ ಸಿದ್ದು ಪಾಟೀಲ, ಶ್ರೀಮತಿ ಸುಜಾತಾ ದೊಡಮನಿ, ತಾಲೂಕು ಮಟ್ಟದ ತಹಶೀಲ್ದಾರರು, ತಾ.ಪಂ. ಕಾರ್ಯ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ವೆಂಕಟೇಶ ಅಲ್ಕೋಡ್ ತಂಡದಿAದ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

27th February 2026
ಹಾವೇರಿ, 27. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರು ನಾಡು ಕಂಡಂತಹ ಅತ್ಯಂತ ಶ್ರೇಷ್ಠ, ಧಿಮಂತ್ರ ನಾಯಕರು. ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಕಾರ್ಯಗಳು ಆಡಳಿತಗಾರರಿಗೆ ಸ್ಪೂರ್ತಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿರುವ ಅವರು, ಯಡಿಯೂರಪ್ಪ ಅವರು, ರೈತ ಪರ ಜನ ಪರ ಹೋರಾಟದ ಮೂಲಕ ರಾಜ್ಯದ ಜನರ ಮನ ಗೆದ್ದವರು. ಅವರು ಮುಖ್ಯಮಂತ್ರಿ ಆಗಿ ಮಕ್ಕಳಿಗೆ ಯುವಕರಿಗೆ ಮಹಿಳೆಯರಿಗೆ ಮಾಡಿರುವ ಕೆಲಸ ಸದಾ ಕಾಲ ಆಡಳಿತಗಾರರಿಗೆ ಸ್ಫೂರ್ತಿಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿರುವ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ನಾಡಿನ ಸೇವೆ ಮಾಡಿರುವುದು ಚಿರಸ್ಮರಣೀಯ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ ಆಯುಷ್ಯ ಶಕ್ತಿಯನ್ನು ಕೊಟ್ಟು ಇನ್ನಷ್ಟು ನಾಡ ಸೇವೆ ಮಾಡುವಂತ ಅವಕಾಶ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

19th September 2025
ಬೆಂಗಳೂರು: ಸಮಾಜವನ್ನು ಭಾಗ ಮಾಡಲು ನಾವು ಸಿದ್ಧರಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜಾತಿ ಗಣತಿ ಗೊಂದಲ ಸಂಬಂಧ ಸಚಿವರುಗಳ ಜೊತೆ ತುರ್ತು ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅಭಿಪ್ರಾಯವನ್ನು ಏನಿದೆ ಎಂಬ ನಮ್ಮ ಸಲಹೆಗಳನ್ನು ನೀಡಿದ್ದೇವೆ. ಯಾರನ್ನೂ ಭಾಗ ಮಾಡಲು ಇಷ್ಟ ಇಲ್ಲ. ಯಾರನ್ನೂ ಒಡೆಯುವ ಕೆಲಸ ಮಾಡುವುದಿಲ್ಲ. ಯಾರೂ ಗಾಬರಿ ಮಾಡುವ ಅಗತ್ಯ ಇಲ್ಲ. ನಮ್ಮ ಅಭಿಪ್ರಾಯವನ್ನು ಸಿಎಂಗೆ ತಿಳಿಸುತ್ತೇವೆ ಎಂದರು.
ವಿಧಾನಸೌಧದಲ್ಲಿ ನಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೆ.ಹೆಚ್.ಮುನಿಯಪ್ಪ ಭಾಗಿಯಾಗಿದ್ದರು. ಜೊತೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಸಮೀಕ್ಷೆ ಮುಂದೂಡಿಕೆಗೆ ಸಭೆಯಲ್ಲಿ ಆಗ್ರಹ: ಸಭೆಯಲ್ಲಿ ಜಾತಿ ಪಟ್ಟಿಯಲ್ಲಿ 331 ಜಾತಿ ಕಾಲಂ ಸೇರ್ಪಡೆ ಬಗ್ಗೆ ಆಯೋಗದ ಅಧ್ಯಕ್ಷರಿಂದ ಸ್ಪಷ್ಟನೆ ಕೇಳಿದರು. ಈ ರೀತಿ ಜಾತಿಗಳನ್ನು ಸೃಷ್ಟಿ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಜಾತಿ ಒಡೆದಂತಾಗುತ್ತದೆ. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಈ ಹಿಂದಿನ ಸಮೀಕ್ಷೆಗಳಲ್ಲಿ ಸಾರ್ವಜನಿಕರು ಹೇಳಿದ ಜಾತಿಯನ್ನೇ ನಾವು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದೇವೆ. ಹೊಸದಾಗಿ ನಾವು ಯಾವುದೇ ಜಾತಿಗಳನ್ನು ಸೇರ್ಪಡೆ ಮಾಡಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಬಹುತೇಕ ಸಚಿವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಗೊಂದಲದಲ್ಲಿ ಸಮೀಕ್ಷೆ ನಡೆಸುವುದು ಸರಿಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಂದೂಡುವ ಬಗ್ಗೆ ಬಹುತೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಇದ್ದರೆ ಸಮೀಕ್ಷೆ ಮುಂದೂಡುವ ಸಾಧ್ಯತೆ: ಸಭೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಈಗ ನಾನು ಯಾವುದೇ ರಿಪ್ಲೇ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ದಯವಿಟ್ಟು ಕೇಳಬೇಡಿ. ನಾವು ಇನ್ನು ಏನು ತೀರ್ಮಾನ ತೆಗೆದುಕೊಂಡಿಲ್ಲ. ಅವರ ಕಾಳಜಿ ಏನು ಅಂತ ಕೇಳಿದ್ದೇವೆ. ಮತ್ತೆ ಮೀಟಿಂಗ್ ಮುಂದುವರೆಯಲಿದೆ. ಯಾವುದಾದರು ತೀರ್ಮಾನಕ್ಕೆ ಬಂದ್ರೆ ಅದು ಎಫೆಕ್ಟ್ ಆಗುತ್ತದೆ. ನಾನು ಈಗ ಹೇಳೋಕೆ ಆಗಲ್ಲ. ಮಾಡಲೇಬೇಕು ಹತ್ತು ವರ್ಷ ನಂತರ ಮಾಡಿ ಅಂತ ತಲೆಗೆ ಬಂದ್ರೆ ಮಾಡ್ತೇವೆ. ನಾನು ಈಗ ಅದರ ಬಗ್ಗೆ ಚರ್ಚೆ ಮಾಡಲ್ಲ. ಇವತ್ತಿನ ಬೆಳವಣಿಗೆ ಪ್ರಕಾರ ಮುಂದೆ ಹೋಗುತ್ತದೆ. ಏನು ಚೇಂಜಸ್ ಮಾಡಬೇಕು ಅಂತ ತೀರ್ಮಾನ ಮಾಡ್ತೇವೆ ಎಂದರು.