


11th August 2026
ಬಳ್ಳಾರಿ, ಆ.10: ನಗರದ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಂಘದ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ನೂತನವಾಗಿ ಸ್ಥಾಪನೆಯಾದ ಕೇವಲ 20 ದಿನಗಳಲ್ಲೇ ಸಂಘವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಿರುವುದು ವಿಶೇಷವಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ವಿಜಯ್ ಕುಮಾರ್, “ಮುಂದಿನ ದಿನಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಊರುಗೋಲಾಗಿ ನಮ್ಮ ಸಂಘ ನಿಲ್ಲಲಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು” ಎಂದು ಧೈರ್ಯ ತುಂಬಿದರು.
ಸಮುದಾಯದ ಮುಖಂಡ ನಿಂಗಪ್ಪ ಅವರು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಓದಿನ ಮಹತ್ವ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಜಡೇಶ್, ಗೌರವಾಧ್ಯಕ್ಷ ಚಾಮರಾಜ, ಹಿರಿಯ ಉಪಾಧ್ಯಕ್ಷ ಗೋವಿಂದಪ್ಪ, ಮುಖಂಡರಾದ ಎರಕುಲಸ್ವಾಮಿ ಮೀನಹಳ್ಳಿ, ಖಜಾಂಚಿ ಹುಲೆಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ವಿವಿಧ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಪರೀಕ್ಷೆ ಬರೆಯುವ ವಿಧಾನ, ಪೂರ್ವ ಸಿದ್ಧತೆ ಹಾಗೂ ಅಧ್ಯಯನ ತಂತ್ರಗಳ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದ ಹುಲುಗಪ್ಪ ಎಸ್.ಎಂ. ಹನುಮಯ್ಯ ಸುಂಕಪ್ಪ, ಎರ್ರಿಸ್ವಾಮಿ ಹಾಗೂ ವಿಜಯ ಅವರು ಕ್ರಾಂತಿ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶೇಖರ್ ಮೇಗಳ ಮನೆ ಅವರ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಾಣೇಶ್ ಅವರು ವಿದ್ಯಾರ್ಥಿಗಳಿಗೆ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ದಾನ ಮಾಡಿದರು. ಸುರೇಶ್ ಬಾಬು ಧ್ವನಿವರ್ಧಕ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಜಿಲ್ಲಾ ಮಾದಿಗ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜಮುಖಿ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳಿಗೂ ಸಮುದಾಯದವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಜೋಡಿಸಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಹೆಚ್. ಏಸಯ್ಯ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.