ಬಳ್ಳಾರಿ, ಆ.17: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಹಾಗೂ ಎಸ್ಟಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾಗೇಂದ್ರ ಅವರ ವಿರುದ್ಧ 32 ಪ್ರಕರಣಗಳಿದ್ದು, ಲೋಕಾಯುಕ್ತ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಎಸ್ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ಸರ್ಕಾರದ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ವಾರದಲ್ಲಿ ಐದು ದಿನ ಕೋರ್ಟ್ಗೆ ಹಾಜರಾಗುವ ಪರಿಸ್ಥಿತಿ
ಪ್ರಕರಣಗಳು ಯಾರ ಮೇಲೂ ಇರಬಹುದು. ಆದರೆ ನಾಗೇಂದ್ರ ಅವರ ವಿರುದ್ಧ 32 ಪ್ರಕರಣಗಳಿವೆ. ವಾರದಲ್ಲಿ ಐದು ದಿನ ನ್ಯಾಯಾಲಯಕ್ಕೆ ಹಾಜರಾಗುವಂತಹ ಪರಿಸ್ಥಿತಿ ಇರುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಣದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ತನಿಖೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ. ಸರ್ಕಾರ ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.
ಧರಣಿಯಲ್ಲಿ ಬಿಜೆಪಿ ಮುಖಂಡ ಅನಿಲಕುಮಾರ್ ನಾಯ್ಡು ಮೋಕಾ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಧರಪ್ಪನಾಯಕ, ನಗರ ಘಟಕದ ಅಧ್ಯಕ್ಷ ಗುರಂ ವೆಂಕಟರಮಣ, ಮುಖಂಡರಾದ ಕೆ.ಎಸ್.ದಿವಾಕರ್, ಗುತ್ತಿಗನೂರು ವಿರೂಪಾಕ್ಷಗೌಡ, ಓಬಳೇಶ್, ಪಾಲಿಕೆ ಸದಸ್ಯ ಕೆ.ಹನುಮಂತಪ್ಪ, ಪರಮದೇವನಹಳ್ಳಿ ಶಿವಾರೆಡ್ಡಿ, ಕೊಳಗಲ್ ಶಿವಾನಂದ, ಕೊಳಗಲ್ ಭೋಗೇಶ್, ಬಿ.ರಘು, ವಿಜಯಲಕ್ಷ್ಮೀ, ರಾಘವೇಂದ್ರ, ಅಸುಂಡಿ ಸೂರಿ, ತಾಳೂರು ಗಂಗಾಧರ, ಹೊಸಯರಗುಡಿ ಗಡ್ಡಂ ತಿಮ್ಮಪ್ಪ, ಸುಗುಣ, ಜ್ಯೋತಿ, ಉಜ್ವಲ ಶ್ರೀಧರ್ ಸೇರಿದಂತೆ ಬಿಜೆಪಿ ಹಾಗೂ ಎಸ್ಟಿ ಮೋರ್ಚಾದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







