ಬಳ್ಳಾರಿ, ಜೂ.19: ನಗರದ ಪಾರ್ವತಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿರುವುದು ಶಾಲಾ ಮಕ್ಕಳ ಸುರಕ್ಷತೆ ಕುರಿತು ಆತಂಕಕ್ಕೆ ಕಾರಣವಾಗಿದೆ.
ಶಾಲೆಯ ಮುಖ್ಯ ಪ್ರವೇಶ ದ್ವಾರದ ಪಕ್ಕದಲ್ಲಿರುವ ಗೋಡೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಸಮಯದಲ್ಲಿ ಗೋಡೆ ಕುಸಿದು ಬೀಳುವ ಅಪಾಯ ಎದುರಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳು ಗೇಟ್ ಬಳಿ ಆಟವಾಡುವುದು ಹಾಗೂ ಗುಂಪು ಗುಂಪಾಗಿ ನಿಲ್ಲುವುದು ಸಾಮಾನ್ಯವಾಗಿದ್ದು, ಗೋಡೆ ಕುಸಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಗೋಡೆಯ ದುಸ್ಥಿತಿಯನ್ನು ಗಮನಿಸಿದ ಪೋಷಕರು ಹಾಗೂ ಸಾರ್ವಜನಿಕರು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಾಲಾ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಅವರ ಗಮನಕ್ಕೂ ವಿಷಯ ತರಲಾಗಿದ್ದು, ಶಾಲಾ ಕಟ್ಟಡ ಮತ್ತು ಕಾಂಪೌಂಡ್ ಗೋಡೆಯ ಸುರಕ್ಷತಾ ಸ್ಥಿತಿಯನ್ನು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮತ್ತು ಶಾಲೆ ಮುಖ್ಯಗುರುಗಳು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಗೋಡೆಯನ್ನು ಕೂಡಲೇ ದುರಸ್ತಿಗೊಳಿಸಿ ಸಂಭವನೀಯ ಅನಾಹುತವನ್ನು ತಪ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.







