ಬಳ್ಳಾರಿ, ಮೇ.08: ಸುಮಾರು ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಳ್ಳಾರಿ ಎಎಚ್ಟಿಯು (ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್) ತಂಡವು ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದೆ.
ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಿನಾಂಕ 10.10.2023ರಂದು ಮಹಿಳೆ ಹಾಗೂ ಬಾಲಕ ಕಾಣೆಯಾಗಿರುವ ಕುರಿತು ಅಪರಾಧ ಸಂಖ್ಯೆ 153/2023ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆ ಮತ್ತು ಪತ್ತೆ ಕಾರ್ಯಾಚರಣೆಗೆ ಬಳ್ಳಾರಿ ಎಎಚ್ಟಿಯು ಘಟಕಕ್ಕೆ ವರ್ಗಾಯಿಸಲಾಗಿತ್ತು.
ಎಎಚ್ಟಿಯು ಸಿಬ್ಬಂದಿಗಳಾದ ಎ.ವಿ. ಮಾರುತಿ, ರಾಮಲಿಂಗಪ್ಪ ಹಾಗೂ ನೂರ್ ಜಹಾನ್ ಅವರನ್ನೊಳಗೊಂಡ ತಂಡವು ನಿರಂತರ ಕಾರ್ಯಾಚರಣೆ ನಡೆಸಿ, ದಿನಾಂಕ 27.04.2026ರಂದು ತೋರಣಗಲ್ಲು ನಿವಾಸಿ 25 ವರ್ಷದ ಗೃಹಿಣಿ ಶ್ರೀಮತಿ ರಾಧಾ ಹಾಗೂ ಅವರ 7 ವರ್ಷದ ಮಗನನ್ನು ವಿಜಯವಾಡದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಪತ್ತೆಯಾದ ಮಹಿಳೆ ಹಾಗೂ ಮಗುವನ್ನು ಬಳಿಕ ದೂರುದಾರರ ವಶಕ್ಕೆ ಒಪ್ಪಿಸಲಾಗಿದೆ. ಸುಮಾರು ಎರಡು ವರ್ಷಗಳ ಬಳಿಕ ಮಹಿಳೆ ಹಾಗೂ ಬಾಲಕನನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿದ ಎಎಚ್ಟಿಯು ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.







