ಗಂಗಾವತಿಯಲ್ಲಿ ಭಾರತ ಯುವ ಜೋಡೋ ಸಂಘ ಸ್ಥಾಪನೆಗೆ ಸಕಲ ಸಿದ್ಧತೆ: 35 ವಾರ್ಡ್ಗಳು ಸೇರಿ 13 ಸಂಘ ರಚನೆ- ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಮಾಹಿತಿ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಗಂಗಾವತಿ( ಸಮರ್ಥವಾಣಿ ನ್ಯೂಜ್)
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನಿರ್ದೇಶನದಂತೆ ರಾಜ್ಯಾದ್ಯಂತ ಭಾರತ ಯುವ ಜೋಡೋ ಸಂಘ ಸ್ಥಾಪಿಸಲು ಆದೇಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾವತಿ ನಗರದ 35 ವಾರ್ಡ್ಗಳನ್ನು ಸೇರಿ 13 ಯುವ ಸಂಘಗಳನ್ನು ರಚನೆ ಮಾಡಲಾಗಿದೆ. ಪ್ರತಿಯೊಂದು ಸಂಘಕ್ಕೆ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ ಮಾಹಿತಿ ನೀಡಿದರು.
ಬುಧವಾರ ನಗರಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಎಂಟು ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಬೇಕೆಂಬ ನಿಯಮವಿದೆ. ಗಂಗಾವತಿ ನಗರದಲ್ಲಿ 1.25 ಲಕ್ಷ ಜನಸಂಖ್ಯೆ ಇದೆ. ಈ ಜನಸಂಖ್ಯೆಲ್ಲಿ ವಿಂಗಡಿಸಿ 13 ಸಂಘಗಳನ್ನು ರಚನೆ ಮಾಡಲು ಸಿದ್ಧತೆ ಮಾಡಿದೆ. ಒಂದು ಸಂಘಕ್ಕೆ ಸರಕಾರದಿಂದ ರೂ.10 ಲಕ್ಷ ಅನುದಾನ ನೀಡಲಾಗುತ್ತದೆ. ಸಂಘದ ಅಡಿಯಲ್ಲಿ ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಕ್ರೀಡೆ, ಪಿಟ್ನೇಸ್, ಯುವಜನರಲ್ಲಿ ಕ್ರೀಯಾಶೀಲತೆ ವೃದ್ಧಿಸುವುದು ಮತ್ತು ತಳಮಟ್ಟದಲ್ಲಿ ಯುವಕರ ನಾಯಕತ್ವಗುಣ ವೃದ್ಧಿಸಲು ಈ ಸಂಘ ಸಕ್ರೀಯವಾಗಿರುತ್ತದೆ. 16 ರಿಂದ 35 ವರ್ಷದ ಒಳಗಿನ ಯುವಕ, ಯುವತಿಯರು ಈ ಸಂಘದಲ್ಲಿ ಸದಸ್ಯರಾಗಬಹುದು. ಒಂದು ಸಂಘಕ್ಕೆ ಕನಿಷ್ಟ ನೂರು ಜನ ಸದಸ್ಯರನ್ನು ನೇಮಕ ಮಾಡಲಾಗುವುದು. ಇದರಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಸೇರಿ 15 ಜನ ಕಾರ್ಯಕಾರಿ ಸದಸ್ಯರಿರುತ್ತಾರೆ. ಒಂದು ಸಂಘದ 15 ಜನ ಕಾರ್ಯಕಾರಿ ಸದಸ್ಯರಲ್ಲಿ ಮೀಸಲಾತಿಯಂತೆ ಆಯ್ಕೆ ಮಾಡಲಾಗುತ್ತದೆ. ಒಂದು ಸಂಘದಲ್ಲಿ ಎಸ್ಸಿ/ಎಸ್ಟಿ ಮೂರು ಜನ, ಇದರಲ್ಲಿ ಒಬ್ಬರು ಮಹಿಳೆ. ಒಬಿಸಿ ಮತ್ತು ಅಲ್ಪಸಂಖ್ಯಾತರು ನಾಲ್ಕು ಜನ ಸದಸ್ಯರಿದ್ದು, ಅದರಲ್ಲಿ ಒಬ್ಬರು ಮಹಿಳೆ ಮತ್ತು ಸಾಮಾನ್ಯ ವರ್ಗದಿಂದ 8 ಜನ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ನಾಲ್ಕು ಜನ ಮಹಿಳೆಯರನ್ನು ಆಯ್ಕೆ ಮಾಡಲಾಗುವುದು ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಷಣ್ಮುಖ ಮತ್ತಿತರರು ಇದ್ದರು.
ಬಾಕ್ಸ್:
ನಗರದಲ್ಲಿ 35ವಾರ್ಡ್ಗಳಿಗೆ 13 ಸಂಘ ರಚನೆ
ಭಾರತ ಜೋಡೋ ಯುವ ಸಂಘವನ್ನು ರಚನೆ ಮಾಡಲಾಗಿದೆ. ಈ ಸಂಘಕ್ಕೆ ಎರಡು ವರ್ಷ ಅವಧಿಯಾಗಿರುತ್ತದೆ. ಸಂಘದ ಕಾರ್ಯಕ್ರಮಗಳ ಪ್ರತಿಯೊಂದು ಚಟುವಟಿಕೆಯಲ್ಲಿ ಪಾರದರ್ಶಕವಾಗಿ ನಿರ್ವಹಿಸಲು 13 ಜನ ಅಧಿಕಾರಿಗಳನ್ನು ನಿಯೋಜಿಲಾಗುವುದು. 1 ರಿಂದ 3 ವಾರ್ಡ್ ಸೇರಿಸಿ ಒಂದು ಸಂಘಕ್ಕೆ ನಗರಸಭೆಯ ಎಇಇ ಅಷಮಾಬೇಗಂ, ವಾರ್ಡ್ ನಂ.4 ಮತ್ತು 5ರ ಸಂಘಕ್ಕೆ ನೈರ್ಮಲ್ಯ ಅಭಿಯಂತರ ಶರಣಪ್ಪ, ವಾರ್ಡ್.ನಂ.6 ಮತ್ತು 7 ರ ಸಂಘಕ್ಕೆ ಎಇ ಶಾಂತಕುಮಾರ, ವಾರ್ಡ್ ನಂ.8, 9, 10ರ ಸಂಘಕ್ಕೆ ಸಮುದಾಯ ಅಧಿಕಾರಿ ವಿಜಯಲಕ್ಷ್ಮೀ, ವಾರ್ಡ್ ನಂ. 11,12,13 ಸಂಘಕ್ಕೆ ಕಂದಾಯ ಮೆಹಬೂಬಪಾಷಾ, ವಾರ್ಡ್ ನಂ14, 15, 16ರ ಸಂಘಕ್ಕೆ ಕಂದಾಯ ನಿರೀಕ್ಷಕಿ ಮೀನಾಕ್ಷಿ, ವಾರ್ಡ್ ನಂ.17, 18 ಮತ್ತು 19ರ ಸಂಘಕ್ಕೆ ಸಂಗಮೇಶ, 20, 21 ಮತ್ತು 22ರ ಸಂಘಕ್ಕೆ ಬಸವರಾಜ, 23,24 25ನೇ ವಾರ್ಡ್ನ ಸಂಘಕ್ಕೆ ಪ್ರಥಮ ದರ್ಜೆ ಸಹಾಯಕಿ ಅಶ್ವಿನಿ, 26, 27, 28 ಮತ್ತು 29 ವಾರ್ಡ್ನ ಸಂಘಕ್ಕೆ ಕಾಂತಮ್ಮ, 30 ಮತ್ತು 31ರ ವಾರ್ಡ್ ಸಂಘಕ್ಕೆ ಅನ್ನಪೂರ್ಣ, 32 ಮತ್ತು 33 ಶ್ರೀದೇವಿ, 34, 35ರ ವಾರ್ಡ್ನ ಸಂಘಕ್ಕೆ ಸಮುದಾಯ ಅಧಿಕಾರಿ ರೇಷ್ಮಾ ಅವರನ್ನು ನಿಯೋಜಿಸಲಾಗಿದೆ.
ಸಂಘಕ್ಕೆ ಸದಸ್ಯರಾಗಲು ಈಗಾಗಲೆ ಭಾರತ ಜೋಡೋ ಯುವ ಸಂಘದ ವೆಬ್ಸೈಟ್ಗೆ ಹೋಗಿ ತಮ್ಮ ಸಂಪೂರ್ಣ ಮಾಹಿತಿಯನ್ನು ಅಪಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ವಾರ್ಡ್ವಾರು ನಿಯೋಜಿಸಿರುವ ಅಧಿಕಾರಿಗಳು ಸಂಪರ್ಕಿಸಬೇಕು ಎಂದು ಪೌರಾಯುಕ್ತ ವಿರುಪಾಕ್ಷಮೂರ್ತಿ ತಿಳಿಸಿದ್ದಾರೆ.






