ಬಿಜೆಪಿ ಎಸ್.ಟಿ ಮೋರ್ಚಾ ಜಾಗೃತಿ ಸಮಾವೇಶ. ಬಿ.ಶ್ರೀರಾಮುಲು ಚಾಲನೆ- ಮಿಸಲಾತಿ ಹಕ್ಕನ್ನು ಕಾಂಗ್ರೆಸ್ ಕಸಿದುಕೊಂಡಿದೆ- ಸಮಾಜದ ಹಣ ತಿಂದ ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು ನಾಚಿಕೆಗೇಡು

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಎಸ್.ಟಿ ಸಮುದಾಯಕ್ಕೆ ಜಾರಿ ಮಾಡಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಂಡು ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಎಸ್.ಟಿ ಸಮಾಜ ಅಭಿವೃದ್ದಿಗೆ ಸರಕಾರ ಇಟ್ಟಿರುವ ಎಸ್.ಟಿ ನಿಗಮದ ರೂ.180 ಕೋಟಿ ಹಣವನ್ನು ನುಂಗಿ ಹಗರಣ ಮಾಡಿರುವ ನಾಗೇಂದ್ರ ಅವರಿಗೆ ಮತ್ತೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಮಾಡಿತುವುದು ನಾಚಿಕೆಗೆಡಿನ ಸಂಗತಿಯಾಗಿದೆ ಎಂದು ಗುಡುಗಿದರು.
ಭಾರತೀಯ ಜನತಾ ಪಕ್ಷದ ಎಸ್.ಟಿ ಮೋರ್ಚಾವತಿಯಿಂದ ಭಾನುವಾರ ನಗರದ ಶ್ರೀ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಾಲ್ಮೀಕಿ ನಾಯಕ ಸಮಾಜಕ್ಕೆ ಆಗಿರುವ ಅನ್ಯಾಯದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕ, ಸಾಮಾಜಿಕ ಪ್ರಾತಿನಿಧ್ಯ ಸಿಗಬೇಕಾದ ಎಸ್.ಟಿ. ಸಮಾಜಕ್ಕೆ ಈಗಿನ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಸೂತ್ರಗಳನ್ನು ಅಳವಡಿಸಿಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಹಿಂದುಳಿದ ಜನಾಂಗದ ಯಾರನ್ನೂ ನಂಬದ ಕಾಂಗ್ರೆಸ್ ಪಕ್ಷದವರಿಗೆ ಜನರಿಗೆ ಸೌಲಭ್ಯಗಳನ್ನು ಕೊಡಲು ಆಗುತ್ತಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಭ್ರಷ್ಟಾಚಾರ ಕಾಂಗ್ರೆಸ್ನ ರಕ್ತದಲ್ಲಿದೆ. ಸಮುದಾಯದ ಹಣ ಕೊಳ್ಳೆ ಹೊಡೆದ ನಾಗೇಂದ್ರನಿಗೆ ಸಚಿವನನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆಯೂ ಇಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ರಾಮುಲು ಸದಾ ಸಮುದಾಯದ ಜನರ ಮನಸನಲ್ಲಿ ಇರುತ್ತಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಪಕ್ಷ ತಳ ಸಮುದಾಯಕ್ಕೆ ಅಂದಿನಿಂದಇಂದಿನವರೆಗೂ ಅನ್ಯಾಯ ಮಾಡುತ್ತಾ ಬರುತ್ತಿದೆ. ಹೀಗಾಗಿ ಕಾಂಗ್ರೆದ್ ಪಕ್ಷವನ್ನು ಎಂದಿಗೂ ನಂಬಬಾರದು ಎಂದು ನೀವೆಲ್ಲರೂ ನಿಮ್ಮ ಮಕ್ಕಳಿಗೆ ಹೇಳಿಕೊಡಬೇಕು ಎಂದು ರಾಮುಲು ನಾಯಕ ಸಮಾಜಕ್ಕೆ ಕರೆ ನೀಡಿದರು.
ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನಮಂತು ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದರೆ ಎಲ್ಲಾ ಸಮುದಾಯಕ್ಕೆ ಸಮಾನ ಅವಕಾಶ ನೀಡುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಮುದಾಯಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತದೆ. ಒಂದೇ ಸಮುದಾಯವನ್ನು ಓಲೈಕೆ ಮಾಡುವ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಕೊಪ್ಪಳದ ಯುವಕ ಗವಿಸಿದ್ದಪ್ಪನನ್ನು ಹತ್ಯೆ ಮಾಡಿದ್ದರು ದುಷ್ಕರ್ಮಿಗಳಿಗೆ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಎಲ್ಲಾ ಸಮುದಾಯಗಳು ನಮ್ಮ ಸಮಾಜದೊಂದಿಗೆ ಇದ್ದು ಹೋರಾಟ ಮಾಡಿ ಮೃತ ಗವಿಸಿದ್ದಪ್ಪನ ಪಾಲಕರಿಗೆ ನೈತಿಕ ಬೆಂಬಲ ನೀಡಿದ್ದರು. ಮುಂದಿನ 2028 ರ ಚುನಾವಣೆಯಲ್ಲಿ ನಾಯಕ ಸಮುದಾಯ ಸೇರಿ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಸಜ್ಜಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್ ಟಿ ಸಮುದಾಯದ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರ ಕಸಿದುಕೊಂಡು ನಮಗೆ ಅನ್ಯಾಯ ಮಾಡಿದೆ. ಸುಮಾರು ಒಂಬತ್ತು ಸಾವಿರ ಉದ್ಯೋಗದಿಂದ ನಮ್ಮ ಯುವಕರು ವಂಚಿತರಾಗಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕಾಂಗ್ರೆಸ್ ಸರಕಾರ ನಾಯಕ ಸಮಾಜಕ್ಕೆ ಎನು ಮಾಡಲಿಲ್ಲ. ನಮಗೆ ಆದ ಅನ್ಯಾಯವನ್ನು ಸಮಾಜಕ್ಕೆ ತಿಳಿಸಲು ಈ ಸಮಾವೇಶ ನಡೆಸಲಾಗುತ್ತಿದೆ ಎಂದ ಅವರು ಕಳೆದ ಒಂದು ವರ್ಷದ ಹಿಂದೆ ಹತ್ಯೆಗಿಡಾಗಿದ್ದ ನಮ್ಮ ಸಮುದಾಯದ ಕೊಪ್ಪಳದ ಗವಿಸಿದ್ದಪ್ಪನ ಕುಟುಂಬಕ್ಕೆ ಕಾಂಗ್ರೆಸ್ ಸರಕಾರ ಮತ್ತು ಶಾಸಕರು ನ್ಯಾಯ ಕೊಡಲಿಲ್ಲ. ಒಂದು ರೂಪಾಯಿ ಪರಿಹಾರವನ್ನು ನೀಡಲಿಲ್ಲ. ಆ ಕುಟುಂಬಕ್ಕೆ ನಮ್ಮ ಬಿಜೆಪಿ ನಾಯಕರು ನೈತಿಕ ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಕ್ಷದ ಹಿರಿಯರಾದ ಶ್ರೀರಾಮುಲು ಅವರು ಕುಟುಂಬಕ್ಕೆ ರೂ.12 ಲಕ್ಷ ಪರಿಹಾರ ಕೊಟ್ಟಿದ್ದಾರೆ ಎಂದರು.
ವೇದಿಕೆಯಲ್ಲೆ ಬಿಜೆಪಿ ನಾಯಕರು ರೂ.12 ಲಕ್ಷ ಮೊತ್ತದ ಚೆಕ್ ನ್ನು ಗವಿಸಿದ್ದಪ್ಪನ ತಂದೆ ತಾಯಿಯರಿಗೆ ವಿತರಿಸಿದರು.
ಸಮಾವೇಶದಲ್ಲಿ ಮಾಜಿ ಶಾಸಕ ರಾಜುಗೌಡ, ಪ್ರತಾಪಗೌಡ ಪಾಟೀಲ್, ಸೋಮಲಿಂಗಪ್ಪ ನಾಯಕ, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ನಾಗರಾಜ ಬಿಲ್ಗಾರ್, ವೀರಭದ್ರಪ್ಪ ನಾಯಕ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗರ್, ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ತಾಳಕೇರಿ, ಜಿಲ್ಲಾ ಉಪಾಧ್ಯಕ್ಷ ಅರ್ಜುನ ರಾಯ್ಕರ್, ಗೀತಾ ಮುತ್ತಾಳ, ಮುಖಂಡ ರಾಮಚಂದ್ರ, ಅಪ್ಪಣ್ಣ, ಸಿದ್ದಣ್ಣ ಸೇರಿದಂತೆ ಜಿಲ್ಲಾ ಮುಖಂಡರು, ಎಸ್.ಟಿ ಮೋರ್ಚಾ ಪದಾಧಾಕಾರಿಗಳು ಇದ್ದರು. ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಾಕ್ಸ್.
ಮೃತ ಗವಿಸಿದ್ದಪ್ಪನ ಕುಟುಂಬಕ್ಕೆ ರೂ.12 ಲಕ್ಷ ಸಹಾಯ
ಕಳೆದ ಒಂದು ವರ್ಷದ ಹಿಂದೆ ಮುಸ್ಲಿಂ ಯುವಕನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಕೊಪ್ಪಳ ನಗರದ ವಾಲ್ಮೀಕಿ ನಾಯಕ ಸಮಾಜದ ಯುವಕನ ಕುಟುಂಬಕ್ಕೆ ಬಿಜೆಪಿ ಎಸ್.ಟಿ ಮೋರ್ಚಾ ಸಮಾವೇಶದಲ್ಲಿ ರೂ. 12 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಲಾಯಿತು.
ಚೆಕ್ ಪಡೆದು ಮಾತನಾಡಿದ ಮೃತ ಗವಿಸಿದ್ದಪ್ಪನ ತಂದೆ ಮಾತನಾಡಿ, ಒಂದು ವರ್ಷದ ಹಿಂದೆ ದುಷ್ಕರ್ಮಿಗಳು ನನ್ನ ಮಗನನ್ನು ಬಲಿ ತೆಗೆದುಕೊಂಡರು. ಆದರೆ ಸರಕಾರ ನಮಗೆ ಯಾವುದೇ ನ್ಯಾಯ ಒದಗಿಸಲಿಲ್ಲ. ಆದರೆ ಬಿಜೆಪಿ ನಾಯಕರು ನಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದ್ದಾರೆ. ನಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕಣ್ಣೀರು ಹಾಕಿದರು.






