ದೇವಸ್ಥಾನಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಅನುದಾನ ದುರ್ಬಳಕೆ: ಸಮಗ್ರ ತನಿಖೆಗೆ ಸಿಪಿಐ(ಎಂ) ಪಕ್ಷ ಆಗ್ರಹ
ಇವರಿಂದ: Hari

ಗಂಗಾವತಿ(ಸಮರ್ಥವಾಣಿ ನ್ಯೂಜ್)
ಗಂಗಾವತಿ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಲವು ದೆವಸ್ಥಾನಗಳಿಗೆ ಶಾಸಕರ ಕ್ಷೇತ್ರಾಭಿವೃದ್ದಿ ಯೋಜನೆಯಡಿ ನೀಡಿರುವ ಅನುದಾನ ದುರ್ಬಳಕೆಯಾಗಿರುವ ಆರೋಪವನ್ನು ಖಂಡಿಸಿ ಮತ್ತು ಸಮಗ್ರ ತನಿಖೆ ನಡೆಸುವಂತೆ ಸಿಪಿಐ(ಎಂ) ಪಕ್ಷದ ಗಂಗಾವತಿ ತಾಲೂಕು ಸಮಿತಿ ಆಗ್ರಹಿಸಿದೆ.
ಕಳೆದ ಎರಡ ದಿನಗಳ ಹಿಂದೆ ಸಮರ್ಥವಾಣಿ ದಿನ ಪತ್ರಿಕೆಯಲ್ಲಿ ಬಿತ್ತರವಾಗಿದ್ದ 'ದೇವಸ್ಥಾನ ಜೀರ್ಣೋದ್ಧಾರದ ಶಾಸಕರ ಅನುದಾನ ಗುಳುಂ..!!
ಗಂಗಾವತಿ ಕ್ಷೇತ್ರದಲ್ಲಿ ಕಾಮಗಾರಿ ಬೋಗಸ್ ದಾಖಲೆ ಸೃಷ್ಟಿ-ಶಾಸಕ ಜನಾರ್ಧನರೆಡ್ಡಿ ಬೆಂಬಲಿಗರ ಮತ್ತು ಪಿಎ ಕರಮಾತ್ ಆರೋಪ ಎಂಬ ವರದಿ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಸಿಪಿಐ(ಎಂ) ತಾಲೂಕ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ತಕ್ಷಣ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಲಕುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕಾಮಗಾರಿಗಳಿಗೆ ಆದ್ಯತೆ ನೀಡುವ ಬದಲು, ದೇವಸ್ಥಾನಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಸರ್ಕಾರಿ ಅನುದಾನ ಬಳಕೆಯಾಗಿರುವ ಕುರಿತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಹಲವು ದೇವಸ್ಥಾನಗಳಿಗೆ ರೂ.3 ರಿಂದ ರೂ.10 ಲಕ್ಷದವರೆಗೆ ಅನುದಾನ ಮಂಜೂರಾಗಿದ್ದರೂ, ಮಂಜೂರಾದ ಹಣಕ್ಕೆ ಅನುಗುಣವಾಗಿ ಕಾಮಗಾರಿಗಳು ನಡೆಸದೆ ಬೊಗಸ್ ಬಿಲ್ ಸೃಷ್ಟಿಸಿ ಶಾಸಕರ ಬೆಂಬಲಿಗರು ಮತ್ತು ಆಪ್ತ ಕಾರ್ಯದರ್ಶಿ ಸೇರಿ ಹಣ ದುರ್ಬಳಕೆ ಮಾಡಿರುವುದು ಖಂಡನೀಯವಾಗಿದೆ. ಕ್ಷೇತ್ರದ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಅವರು ಗಂಗಾವತಿಯನ್ನು ಸಿಂಗಾಪುರ್ ಮಾಡುತ್ತೇನೆ ಎಂದು ಭರವಸೆ ನೀಡಿ ಸಂಗಾಪುರವರೆಗೂ ರಸ್ತೆ ಮಾಡಲಾರದೆ ಕೈ ಚೆಲ್ಲಿ ಕುಳಿತಿದ್ದಾರೆ. ಈಗ ದೇವಸ್ಥಾನದ ಅನುದಾನವನ್ನು ಬೋಗಸ್ ಮಾಡಿರುವುದು ಕ್ಷೇತ್ರದ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಸವರಾಜ್ ಮರಕುಂಬಿ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸದೆ ಹಣ ಪಾವತಿಸಲಾಗಿದೆಯೇ? ಕಳಪೆ ಕಾಮಗಾರಿ ನಡೆಸಿ ಸಂಪೂರ್ಣ ಅನುದಾನ ಬಳಸಲಾಗಿದೆಯೇ? ಮಂಜೂರಾದ ಹಣ ನಿಜವಾಗಿಯೂ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗಿದೆಯೇ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು.
ಸರ್ಕಾರದ ಅನುದಾನವು ಸಾರ್ವಜನಿಕರ ತೆರಿಗೆ ಹಣವಾಗಿದ್ದು, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮೀಸಲಾದ ಹಣದಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ದುರ್ಬಳಕೆ ನಡೆದಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಹಿಂದುತ್ವದ ಹೆಸರಿನಲ್ಲಿ ದೇವಸ್ಥಾನಗಳ ಹೆಸರನ್ನು ಬಳಸಿಕೊಂಡು ಸರ್ಕಾರಿ ಹಣದ ದುರ್ಬಳಕೆಗೆ ಅವಕಾಶ ನೀಡದೆ ತನಿಖೆ ನೆಡಸಬೇಕು ಎಂದು ಒತ್ತಾಯಿಸಿದರು.
ಸಿಪಿಐಎಂ ತಾಲೂಕ ಕಾರ್ಯದರ್ಶಿ ಹುಸೇನಪ್ಪ ಕೆ ಮಾತನಾಡಿ, ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2024-25ರಿಂದ 2025–26ರವರೆಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಎಲ್ಲಾ ಅನುದಾನ, ಕಾಮಗಾರಿಗಳ ದಾಖಲೆ, ಬಿಲ್ಗಳು ಹಾಗೂ ವಾಸ್ತವಿಕ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ತನಿಖೆ ಕೈಗೊಳ್ಳಬೇಕು. ತನಿಖೆಯಲ್ಲಿ ಹಣ ದುರ್ಬಳಕೆಯನ್ನು ಸೂಕ್ತ ತನಿಖೆ ನೆಡಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ದುರ್ಬಳಕೆಯಾದ ಸರ್ಕಾರಿ ಹಣವನ್ನು ವಸೂಲಿ ಮಾಡಬೇಕು ಎಂದು ಅಗ್ರಹಿಸಿದರು.
ನಂತರ ಸಿಪಿಐ(ಎಂ) ಪಕ್ಷದ ಗಂಗಾವತಿ ತಾಲೂಕು ಸಮಿತಿ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನ ಮನವಿ ಸಲ್ಲಿಸಿದರು.
ಸಿಪಿಐಎಂ ಪಕ್ಷದ ಜಿಲ್ಲೆ ಸಮಿತಿ ಸದಸ್ಯರಾದ ಮಂಜುನಾಥ್ ಡಗ್ಗಿ, ಕೃಷ್ಣಪ್ಪ, ಮುತ್ತಣ್ಣ ದಾಸನಾಳ್, ಮುಖಂಡರಾದ ದುರುಗಪ್ಪ ದಾಸನಳ, ದುರುಗೇಶ, ಮಂಜುನಾಥ ನಾಯಕ, ಬಾಲಾಜಿ ಚಳ್ಳಾರಿ, , ಶರೀಫ್ ಎಂ. ಪಿ, ದರ್ಶನ್ ಹೋಸ್ಕೆರ, ಮಾರುತಿ ವಿಠಲಪುರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.






