ಗಂಗಾವತಿ.(ಸಮರ್ಥವಾಣಿ ನ್ಯೂಜ್)
ಭಾರತೀಯ ಜನತಾ ಪಕ್ಷದ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಳ್ಳಾರಿ ಚಲೋ ಪಾದಾಯತ್ರೆ ಗಂಗಾವತಿ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ಬಿಜೆಪಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಭಾರತಿ ಆಗಲೂರ ನೇತೃತ್ವದಲ್ಲಿ ಐದನೂರು ಮಹಿಳೆಯರು ಕುಂಭ ಮತ್ತು ಕಳಸದೊಂದಿಗೆ ಆಗಮಿಸಿ ಭವ್ಯ ಸ್ವಾಗತ ನೀಡಿ ಪಾದಯಾತ್ರೆಗೆ ಹೆಜ್ಜೆ ಹಾಕಿದರು. ಸಾವಿರಾರು ಮಹಿಳೆಯರು ಪಾದಯಾತ್ರೆಗೆ ಸಾತ್ ನೀಡಿದರು.
ಭಾನುವಾರ ಪಾದಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ಕುಂಭದ ಸ್ವಾಗತ ನೀಡಿದ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಮುಖಂಡರನ್ನು ಬರಮಾಡಿಕೊಂಡರು. ಶಾಸಕ ಗಾಲಿ ಜನಾರ್ಧನರೆಡ್ಡಿ ಅವರ ಧರ್ಮಪತ್ನಿ ಅರುಣಾ ಲಕ್ಷ್ಮಿ ಅವರು ಸಹ ಮಹಿಳೆಯರಿಗೆ ಉತ್ಸಾಹ ತುಂಬಿ ಪಾದಯಾತ್ರೆಯಲ್ಲಿ ನಡೆದು ಬಂದಿರುವುದು ವಿಶೇಷವಾಗಿತ್ತು. ರಣ ಬಿಸಿಲನ್ನು ಲೆಕ್ಕಿಸದೆ ಕುಂಭ ಹೊತ್ತ ಮಹಿಳೆಯರು ಗಾಂಧಿ ವೃತ್ತದವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮೆರಗು ತಂದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಭಾರತಿ ಆಗಲೂರು ಮಾತನಾಡಿ, ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಆಡಳಿತವನ್ನು ವಿರೋಧಿಸಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿಜಯೇಂದ್ರ, ಶ್ರೀರಾಮುಲು, ಶಾಸಕರಾದ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯತ್ತಿದೆ. ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಪಕ್ಷದ ಸಾವಿರಾರು ಕಾರ್ಯರ್ತರು, ಮಹಿಳಾ ಮೋರ್ಚಾ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಶಾಸಕರಾದ ಜನಾರ್ಧನರೆಡ್ಡಿ ಅವರು ನಮಗೆಲ್ಲ ಉತ್ಸಾಹ ತುಂಬಿದ್ದಾರೆ. ಮಹಿಳಾಪರ ಧ್ವನಿಯಾಗಿ ಈ ಹೋರಾಟ ನಡೆಯುತ್ತಿದೆ ಎಂದರು.
ಮಹಿಳಾ ಮೋರ್ಚಾ ಪದಾಧಿಕಾರಿಗಳ ಉತ್ಸಾಹಕ್ಕೆ ಪಕ್ಷದ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.







