ಗಂಗಾವತಿ.
2023 ರಲ್ಲಿ ನಗರದ ಸಾರ್ವಜನಿಕ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಗಂಗಾವತಿ ಪ್ರಧಾನ ಸಿವಿಲ್ ಜೆ.ಎಂ.ಎಫ್ .ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನಾಲ್ಕು ಜನ ಆರೋಪಿಗಳಾದ ಅಬ್ದುಲ್ ಸಮೀರ್, ಮಂಜುನಾಥ, ಅಲ್ತಾಫ್ ಮತ್ತು ಖಾಜಾಪಾಷ ಅವರು ದೋಷಿಗಳೆಂದು ಸಾಬೀತುಪಡಿಸಿ ಮೂರು ವರ್ಷ ಸೆರೆಮನೆ ವಾಸ ಮತ್ತು ರೂ.5000 ದಂಡ ವಿಧಿಸಿ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ನೀಡಿದ್ದಾರೆ.
ಬುಧವಾರ ಸೆ.24 ರಂದು ತೀರ್ಪು ಪ್ರಕಟವಾಗಿದೆ. ದಿನಾಂಕ:- 18-08-2023 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಹಾಗೂ ಅದೇ ದಿನದಂದು ಸಂಜೆ 6-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಸರಕಾರಿ ಉಪ-ವಿಭಾಗ ಆಸ್ಪತ್ರೆಯ ಕಂಪೌಂಡ್ ಒಳಗೆ ಪ್ರವೇಶ ಮಾಡಿ ಆಸ್ಪತ್ರೆಯಲ್ಲಿನ 1) ಮಾಡ್ಯುಲರ್ ಶಸ್ತ್ರ ಚಿಕಿತ್ಸೆ ಕೊಠಡಿಯ ಎ.ಸಿಂ ಕಾಪರ್ ಪೈಪ್ ಲೈನ್ ರೂ. 40.000=00, 2) ಮುಖ್ಯ ವೈದ್ಯಾಧಿಕಾರಿ ಕೊಠಡಿಯ 02 ಟನ್ ಎ.ಸಿಯ 04 Mtr ಕಾಪರ್ ಪೈಪ್ ಲೈನ್ ರೂ.6,000=00 ಬೆಲೆಯ, 3) ಲಿಕ್ವಿಡ್ ಬ್ಯಾಂಕನ 42 MM ಕಾಪರ್ ಪೈಪ ಲೈನ್ 40 ಫಿಟ್ ಉದ್ದದ ರೂ.50,000-00 ಬೆಲೆಯ, 4) ಆಕ್ಸಿಜನ್ ಜನರೇಷನ್ ಪ್ಲಾಂಟ್ಸ 42 MM ಕಾಪರ್ ಪೈಪ್ ಲೈನ್ 40 ಫಿಟ್ ಉದ್ದ ರೂ. 50,000-00 ಬೆಲೆಯ, ಮತ್ತು ಆಕ್ಸಿಜನ್ ಮ್ಯಾನಿಪೋಲ್ಡ್ ಕೊಠಡಿಯಲ್ಲಿ ಕಾಪರ್ ಟೆಲ್ ಪೈಪುಗಳು ರೂ 25,000-00 ಬೆಲೆಯ ಒಟ್ಟು 1,71,000-00 ರೂಪಾಯಿ ಬೆಲೆ ಬಾಳುವ ವಸ್ತಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಕಲಂ 380 ಐಪಿಸಿ ಅಡಿ ಅಪರಾಧ ಕಂಡುಬಂದಿದ್ದರಿಂದ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಯಾದ ಗಂಗಾವತಿ ನಗರ ಪೊಲೀಸ್ ಠಾಣೆಯ ಕಾಮಣ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಶುಭಾಷ್ , ಯಮನೂರಪ್ಪ, ಬೀಮಣ್ಣ, ಯಲ್ಲರೆಡ್ಡಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ಸರಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ತಿಳಿಸಿದ್ದಾರೆ.







