ಬಳ್ಳಾರಿ:ಜು,19. ಬಳ್ಳಾರಿ ಮಹಾನಗರ ಪಾಲಿಕೆಯ 26 ಸದಸ್ಯರ ಸಂಖ್ಯಾ ಬಲವಿರುವ ಕಾಂಗ್ರೆಸ್ಸಿಗೆ, ಒಮ್ಮತದಿಂದ ಒಬ್ಬ ಮೇಯರ್ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ ಬಯಲಾಗುತ್ತಿದೆ. ಮುಸ್ಲಿಂ ಸದಸ್ಯರೊಬ್ಬರು ಮೇಯರ್ ಆಗಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಾಮಾನ್ಯ ಮೀಸಲಿನಲ್ಲೇ ಮುಸ್ಲಿಮರಿಗೆ ಅವಕಾಶ ಕೊಟ್ಟು ಮೇಯರ್ ಮಾಡಬಹುದಿತ್ತು, ತಾವು ಮುಸ್ಲಿಮರ ಪರ ಎಂದು ಭಾಷಣ ಬೀಗಿಯುತ್ತೀರಿ ನಿಮ್ಮ ಹಣೆಬರಹಕ್ಕೆ ಕಳೆದ ಎರಡು ಅವಧಿಯಲ್ಲಿ ಇಲ್ಲಿವರೆಗೆ ಮುಸ್ಲಿಮರಿಗೆ ಮೇಯರ್ ಮಾಡಲಿಲ್ಲ, ಕುರುಬ ಸಮುದಾಯದವರಿಗೂ ಮೇಯರ್ ಮಾಡಲಿಲ್ಲ. ಬಾಷಣಗಳಲ್ಲಿ ಕಾಂಗ್ರೆಸ್ಸಿನವರು ಹೇಳಿಕೊಳ್ಳೋದು ನಮ್ಮದು ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಪಕ್ಷ ಅಂತ. ನಿಮಗೆ ನಾಚಿಕೆ ಆಗಬೇಕು. ನಮ್ಮ ಬಿಜೆಪಿ ಪಕ್ಷ ಮುಸ್ಲಿಮರಿಗೆ ಎರಡು ಸಲ ಮೇಯರ್, ಎರಡು ಸಲ ಉಪ ಮೇಯರ್ ಹುದ್ದೆ ನೀಡಿದೆ. ಕುರುಬ ಸಮುದಾಯದವರಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ನೀಡಿದ ಪಕ್ಷ ಬಿಜೆಪಿ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಪಾಲಿಕೆಯಲ್ಲಿ ಬಲಾಬಲ ಇರುವುದೇ ಕಾಂಗ್ರೆಸ್ಸಿಗೆ. ಆದರೆ ಇವರ ಹಣೆಬರಹಕ್ಕೆ ಒಂದು ಮೇಯರ್ ಚುನಾವಣೆ ನಡೆಸಲಾಗದು ಎಂದರೆ ಇದಕ್ಕೆ ಯಾರು ಕಾರಣ? ಯಾರು ಜವಾಬ್ದಾರರು? ಕಳೆದ ವರ್ಷ ಮೇಯರ್ ಚುನಾವಣೆ ನಡೆದು, ಅವರ ಅವಧಿ ಮುಗಿದಿದೆ. ಈಗಾಗಲೇ ಚುನಾವಣೆ ನಡೆಯಬೇಕಿತ್ತು, ಮೇಯರ್ ಸ್ಥಾನಕ್ಕೆ ಹಿಂದುಳಿದ ಮಹಿಳೆ ಮೀಸಲು ಬಂದಿತ್ತು, ಅದು ಬದಲಾಗಿ ಮತ್ತೆ ಈಗ ಸಾಮಾನ್ಯ ಮೀಸಲು ಬಂದಿದೆ. ಸಾಮಾನ್ಯ ಮೀಸಲು ವಿರುದ್ಧ ಕಾಂಗ್ರೆಸ್ ಪಕ್ಷದವರೇ ನ್ಯಾಯಾಲಯಕ್ಕೆ ಹೋಗಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದಾರೆ.
ಮೀಸಲು ಬದಲಿ ಆಗಿದ್ದು ಯಾಕೆ? ಮತ್ತೆ ನ್ಯಾಯಾಲಯಕ್ಕೆ ಹೋಗಿದ್ದು ಯಾಕೆ? ಅಂದರೆ ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆಂದರೆ ನಿಮ್ಮ ಮನಸಿಗೆ ಬಂದ ಹಾಗೆ ನಡೆದುಕೊಳ್ತಿರಾ? ಇಲ್ಲಿ ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಎಂದು ಇಬ್ರಾಹಿಂಬಾಬು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಈ ಹಿಂದಿನ ಅವಧಿಯಾಗಿದ್ದ ಎಸ್ಸಿ ಮೀಸಲು ಮೇಯರ್ ಮಾಡುವಾಗ 6 ತಿಂಗಳು ಅವಧಿ ಒಬ್ಬರಿಗೆ, ಉಳಿದ 6 ತಿಂಗಳು ಅವಧಿ ಒಬ್ಬರಿಗೆ ಎಂದು ಕಾಂಗ್ರೆಸ್ಸಿನ ನಾಯಕರು ತೀರ್ಮಾನ ಮಾಡಿಕೊಂಡಿದ್ದರು. ಆದರೆ ಉಳಿದ 6 ತಿಂಗಳಿಗೆ ಮೇಯರ್ ಆಯ್ಕೆ ಮಾಡುವಾಗ ಕಣ್ಣಾಮುಚ್ಚಾಲೆ ಆಟ ಆಡಿದ್ದನ್ನು ಇಡೀ ನಗರದ ಜನ ನೋಡಿದ್ದಾರೆ. ಅದಾದ ಬಳಿಕ ಸಾಮಾನ್ಯ ಮೀಸಲು ಬಂದಾಗಲೂ ಅದೇ ಗೊಂದಲ ಆಯಿತು.
ಈ ಗೊಂದಲ ಯಾಕಾಗುತ್ತಿದೆ? ಈಗ ಮೇಯರ್ ಚುನಾವಣೆ ಮತ್ತೆ ಗೊಂದಲ ಆಗಿದೆ. ಮುಲ್ಲಂಗಿ ನಂದೀಶ್ ಅವರು ಮೇಯರ್ ಆಗಿ ಮುಂದುವರೆದಿದ್ದಾರೆ. ಆದರೆ ಅವರಿಗೆ ಯಾವ ಅಧಿಕಾರವೂ ಇರಲ್ಲ. ಇಷ್ಟು ಮಾತ್ರ ಅಲ್ಲ, ಹೀಗೆ ಮೇಯರ್ ಚುನಾವಣೆಯನ್ನು ವಿಳಂಬ ಮಾಡಿದರೆ ಪಾಲಿಕೆಯ 39 ಸದಸ್ಯರ ಸಾಂವಿಧಾನಿಕ, ಪ್ರಜಾ ಸತ್ತಾತ್ಮಕ ಹಕ್ಕನ್ನು ಕಸಿದುಕೊಂಡಂತೆ ಎಂದು ಇಬ್ರಾಹಿಂಬಾಬು ಹೇಳಿದರು.
ತಲಾ ಒಂದು ವರ್ಷ ಅವಧಿಯ ಮೇಯರ್ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿ ತನ್ನ ಅವಧಿಯನ್ನು ಜನರ ಸಮಸ್ಯೆ ಬಗೆಹರಿಸಲು ವಿನಿಯೋಗಿಸಬೇಕು. ಆದರೆ ಹೀಗೆ ವಿಳಂಬ ಆದರೆ ಅದು ನಾವು ಜನರಿಗೆ ಮಾಡುವ ದ್ರೋಹವಾಗುತ್ತದೆ ಎಂದು ಅಭಿಪ್ರಾಯ ಪಟ್ಟ ಇಬ್ರಾಹಿಂಬಾಬು ಜನರಿಂದ ಅಧಿಕಾರ ಪಡೆದು ಅವರಿಗೆ ಮೋಸ ಮಾಡಿದಂತೆ ಆಗುತ್ತದೆ. ಅಧಿಕಾರ ವಿಕೇಂದ್ರೀಕರಣದ ಆಶಯ ಚರಂಡಿಗೆ ಹಾಕಿದಂತೆ ಆಗುತ್ತದೆ ಎಂದು ಕಿಡಿಕಾರಿದರು.
ಸದ್ಯ ಒಟ್ಟು 39 ಸದಸ್ಯ ಸ್ಥಾನಗಳ ಸಾಮರ್ಥ್ಯ ಇರುವ ಬಳ್ಳಾರಿ ಮಹಾನಗರ ಪಾಲಿಕೆಯು ಕಳೆದ 18 ವರ್ಷಗಳ ಹಿಂದೆ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿತ್ತು.
1999 ಲೋಕಸಭೆ ಚುನಾವಣೆಯ ವೇಳೆ ಶ್ರೀಮತಿ ಸೋನಿಯಾ ಗಾಂಧಿಯವರು ಬಳ್ಳಾರಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ್ದರು. ಅದಾದ ಬಳಿಕ ರಾಜ್ಯದಲ್ಲಿ 2005, 06 ರಲ್ಲಿ ನಮ್ಮ ನಾಯಕರು ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಪ್ರಯತ್ನದಿಂದ ಬಳ್ಳಾರಿ ನಗರಸಭೆಯು ಮಹಾನಗರ ಪಾಲಿಕೆ ಆಯಿತು. ಆ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೊದಲ ಮೇಯರ್ ಆಗಿ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಕಾರ್ಯನಿರ್ವಹಿಸಿರುವುದು ತಿಳಿದಿರುವ ಇತಿಹಾಸ.
ಮೊದಲ ಅವಧಿಯಲ್ಲಿ ಅಂದರೆ; ಪಾಲಿಕೆ ಮೇಲ್ದರ್ಜೆಗೆ ಏರಿದ ವರ್ಷ ಬಿಜೆಪಿ ಅಧಿಕಾರದಲ್ಲಿ ಇತ್ತು. ಅದಾದ ನಂತರ ಪಾಲಿಕೆಯ ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂತು. ನಮ್ಮ ಪಕ್ಷ ಅತ್ಯಂತ ಸಮರ್ಥವಾಗಿ ಬಳ್ಳಾರಿಯನ್ನು ಮಹಾನಗರ ಪಾಲಿಕೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಿತು.
ನಮ್ಮ ಬಿಜೆಪಿಗೆ ಸಂಪೂರ್ಣ ಬಹುಮತ ಇದ್ದ ಸಂದರ್ಭದಲ್ಲಿ ಯಾವತ್ತೂ ಮೇಯರ್, ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ಒಂದೇ ಒಂದು ಸಲವೂ ಗೊಂದಲ ಆಗಲಿಲ್ಲ. ಇದರ ಜೊತೆಗೆ ಗಮನಾರ್ಹ ಸಂಗತಿ ಎಂದರೆ ನಮ್ಮ ನಾಯಕರು ಮೀಸಲಾತಿ ಅನ್ವಯ ಎಲ್ಲ ಜಾತಿ ಧರ್ಮದವರಿಗೆ ಮೇಯರ್, ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕಗಳನ್ನು ಸುಸೂತ್ರವಾಗಿ ನಡೆಸಿ, ಜನರಿಗೆ ತೊಂದರೆ ಆಗದ ಹಾಗೆ ಆಡಳಿತ ನಡೆಸಿದೆವು.
ಆದರೆ ಕಳೆದ ಎರಡು ಅವಧಿಗಳಿಂದ ಕಾಂಗ್ರೆಸ್ಸಿಗೆ ಬಳ್ಳಾರಿಯ ಮಹಾಜನತೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಪಕ್ಷ ಕಳೆದ ಎರಡು ಅವಧಿಗಳಿಂದ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ.
ಸದ್ಯ 21 ಕಾಂಗ್ರೆಸ್ ಹಾಗೂ 5 ಜನ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯರೂ ಸೇರಿ 26 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಕಳೆದ ಮೂರು ಅವಧಿಗಳ ಮೇಯರ್, ಉಪ ಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಗೊಂದಲದ ಗೂಡು ಆಗಿ, ಅಭಿವೃದ್ಧಿ ಎಂಬುದು ಪಾತಾಳಕ್ಕೆ ಹೋಗಿದೆ. ನಗರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ.
ಈ ರೀತಿ ಮನಸೋ ಇಚ್ಛೆ ನಡೆದುಕೊಂಡರೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು ಎಂದು ಇಬ್ರಾಹಿಂಬಾಬು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಎಂ.ಗೋವಿಂದರಾಜುಲು, ಕೆ.ಎಸ್.ಅಶೋಕ್, ಶ್ರೀನಿವಾಸ ಮೊತ್ಕರ್, ಗುಡಿಗಂಟಿ ಹನುಮಂತ, ಸುರೇಖಾ ಮಲ್ಲನಗೌಡ, ಕೆ.ಹನುಮಂತಪ್ಪ, ಈರಮ್ಮ ಸುರೇಂದ್ರ, ಕಲ್ಪನ ವೆಂಕಟೇಶ, ಮುಖಂಡರಾದ ವೇಮಣ್ಣ, ಮಲ್ಲನಗೌಡ, ಊಳೂರು ಸಿದ್ದೇಶ್, ಸೂರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







