ದೇವಸ್ಥಾನ ಜೀರ್ಣೋದ್ಧಾರದ ಶಾಸಕರ ಅನುದಾನ ಗುಳುಂ..!! ಗಂಗಾವತಿ ಕ್ಷೇತ್ರದಲ್ಲಿ ಕಾಮಗಾರಿ ಬೋಗಸ್ ದಾಖಲೆ ಸೃಷ್ಟಿ- ಶಾಸಕ ಜನಾರ್ಧನರೆಡ್ಡಿ ಬೆಂಬಲಿಗರ ಮತ್ತು ಪಿಎ ಕರಮತ್ ಆರೋಪ

ಗಂಗಾವತಿ.(ಸಮರ್ಥವಾಣಿ ನ್ಯೂಜ್)
ಅಯೋಧ್ಯದಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ನಂತರ ಅಲ್ಲಿಗೆ ಬರುವ
ಭಕ್ತರ ಕಾಣಿಕೆ ಹುಂಡಿಯಲ್ಲಿನ ಹಣವನ್ನು ಕೆಲವು ಸಿಬ್ಬಂದಿಗಳು ಸ್ವಾಹ ಮಾಡಿರುವ
ಪ್ರಕರಣ ಮರೆ ಮಾಚುವ ಮುನ್ನವೆ ರಾಮನ ಬಂಟ ಅನುಮಂತನ ಜನ್ಮಸ್ಥಾನ ಅಂಜನಾದ್ರಿ
ವ್ಯಾಪ್ತಿಯಲ್ಲಿ ಬರುವ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಹನುಮಂತನ ದೇವಸ್ಥಾನ
ಸೇರಿದಂತೆ ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಬಂದಿರುವ ಶಾಸಕರ ವಿಶೇಷ
ಅನುದಾನವನ್ನು ಗುಳುಂ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಸ್ವತಃ ಶಾಸಕರ ಕೆಲವು
ಬೆಂಬಲಿಗರು ಮತ್ತು ಅವರ ಪಿಎ ಸೇರಿ ದೇವಸ್ಥಾನ ಕಾಮಗಾರಿ ಪೂರ್ಣಗೊಂಡಿದೆ ಎಂದು
ಸಮಿತಿಯವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ಎತ್ತುವಳಿ ಮುಂದಾಗಿರುವುದು
ಬಹಿರಂಗವಾಗಿದೆ.
ಶಾಸಕರ ಕ್ಷೇತ್ರಾಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ. ಈ
ಅನುದಾನದಲ್ಲಿ ವಿವಿಧ ದೇವಸ್ಥಾನಗಳ ಸಮಿತಿಯವರ ಬೇಡಿಕೆಯಂತೆ ಶಾಸಕರು ಪ್ರತಿ
ದೇವಸ್ಥಾನಕ್ಕೆ ರೂ.೫ ರಿಂದ ೧೦ ಲಕ್ಷ ಅನುದಾನ ನೀಡುತ್ತಾರೆ. ಈ ರೀತಿ ನೀಡಿರುವ
ಅನುದಾನವನ್ನೇ ಅವರ ಕೆಲವು ಬೆಂಬಲಿಗರು ಕೆಲವು ದೇವಸ್ಥಾನಗಳಲ್ಲಿ ಕಾಮಗಾರಿ
ಮಾಡದಿದ್ದರೂ ಕಾಮಗಾರಿ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿಯವರಿಂದ ಪಡೆದಂತೆ ದೃಢೀಕರಣ ಸೃಷ್ಟಿಸಲಾಗಿದೆ. ಬೆಂಬಲಿಗರು ಮತ್ತು ಕೆಲವು ಹಿತೈಷಿಗಳ ಶಿಪಾರಸ್ಸಿನಂತೆ ಗಂಗಾವತಿ
ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳಿಗೆ ಶಾಸಕ
ಜನಾರ್ಧನರೆಡ್ಡಿ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯಂತೆ
ಅವರ ಪಿಎ ಜೊತೆ ಸೇರಿಕೊಂಡು ಕೆಲವು ಬೆಂಬಲಿಗರು ಗಂಗಾವತಿ ಕ್ಷೇತ್ರದ ನಗರ ಮತ್ತು
ಗ್ರಾಮೀಣ ಪ್ರದೇಶದ ಸುಮಾರು 50ಕ್ಕು ಹೆಚ್ಚು ದೇವಸ್ಥಾನಗಳ ಪಟ್ಟಿ ಸಿದ್ಧಪಡಿಸಿ
ಅನುದಾನ ಒದಗಿಸಿದ್ದಾರೆ.
ಜಿಲ್ಲಾ ಪಂಚಾಯತ್ ರಾಜ್ ಇಂಜನೀಯರಿಂಗ್ ಗಂಗಾವತಿ ಉಪ ವಿಭಾಗದ ಮೂಲಕ ಕಾಮಗಾರಿ ನಡೆಸಲಾಗುತ್ತದೆ. ಆದರೆ ಈ ಇಲಾಖೆಯ ಕೆಲವು ಇಂಜನೀಯರ್ಗಳೊಂದಿಗೆ ಸೇರಿ ಶಾಸಕರ ಬೆಂಬಲಿಗರು ದೇವಸ್ಥಾನದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಸೃಷ್ಟಿಸುರುವ ದಾಖಲೆಗಳು ಬೋಗಸ್ ಆಗಿವೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಉದಾಹರಣೆಗೆ ನಗರದ ಹೃದಯ ಭಾಗದಲ್ಲಿರುವ ಯಜ್ಞವಲ್ಕ್ಯ ಮಂದಿರ( ಶ್ರೀ ಆಚಿಜನೇಯ
ದೇವಸ್ಥಾನ)ಕ್ಕೆ ಕಳೆದ 2024--25ನೇ ಸಾಲಿನಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ
ರೂ.4 ಲಕ್ಷ ಅನುದಾನದ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಡೆದುಕೊಂಡಿರುವ ದೃಢೀಕರಣವೇ ನಕಲಿ ಮಾಡಿರುವುದು ಆಶ್ಚರ್ಯ ಮೂಡಿದೆ. ಆದರೆ ಈ ಕುರಿತು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಮಗೆ ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಮತ್ತು ನಾವು ದೃಢಿಕರಣ ಪತ್ರ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನ ಸಮಿತಿಯವರ ನಕಲಿ ಸಹಿ ಮತ್ತು ದೂರವಾಣಿಯನ್ನು ದೃಢಿಕರಣ ಪತ್ರದಲ್ಲಿ
ನಮೂದಾಗಿರುವುದು ಅನುದಾನ ಗೋಲ್ ಮಾಲ್ ಮಾಡಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಶ್ರೀ ಆಂಜನೇಯನ ಪರ ಭಕ್ತರಾಗಿದ್ದಾರಲ್ಲದೇ ಎಲ್ಲಾ
ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ವಿಶೇಷವಾಗಿ ಗಂಗಾವತಿ ಕ್ಷೇತ್ರದಲ್ಲಿ
ಶಾಸಕರಾದ ನಂತರ ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡಲು ಕನಸು
ಕಂಡಿದ್ದು, ಅನುದಾನ ತರಲು ಸಾಕಷ್ಟು ಹರ ಸಾಹಸ ಪಡುತ್ತಿದ್ದಾರೆ. ಆದರೆ ಇತ್ತ ಅವರ
ಬೆಂಬಲಿಗರು ಕೆಲವು ಅಧಿಕಾರಿಗಳೊಂದಿಗೆ ಶ್ಯಾಮೀಲಾಗಿ ದೇವಸ್ಥಾನಕ್ಕೆ ನೀಡಿರುವ ಶಾಸಕರ
ಅನುದಾನವನ್ನು ಸ್ವಾಹ ಮಾಡಲು ಮುಂದಾಗಿರುವುದು ಜನಾರ್ಧನರೆಡ್ಡಿ ಅವರ ಆಡಳಿತದ ಹಿಡಿತ ಕೈ ತಪ್ಪುತ್ತಿರುವುದು ಗೊಇಚರಿಸುತ್ತಿದೆ. ಮತ್ತು ಅವರ ಆಡಳಿತಕ್ಕೆ
ಕಪ್ಪು ಚುಕ್ಕೆಯಾಗಲಿದೆ. ಈ ಕುರಿತು ಶಾಸಕರು ತಕ್ಷಣ ಸತ್ಯಾಸತ್ಯತೆಯನ್ನು ಪರಿಶೀಲಿಸಿ
ದೇವಸ್ಥಾನಕ್ಕೆ ನೀಡಿರುವ ಅನುದಾನ ಸದ್ಬಳಕೆಯಾಗಿರುವ ಕುರಿತು ಮಾಹಿತಿ ಪಡೆದು
ಸ್ಪಷ್ಟನೆ ನೀಡಬೇಕು ಎಂದು ಭಕ್ತರು ಅಗ್ರಹಿಸುತ್ತಿದ್ದಾರೆ.
ಬಾಕ್ಸ್:
ನಾವು ದೃಢೀಕರಣ ಪತ್ರಕ್ಕೆ ಸಹಿ ಮಾಡಿಲ್ಲ
ನಮ್ಮ ಯಜ್ಞವಲ್ಕ್ಯ ಮಂದಿರದಲ್ಲಿ ಕೆಲವು ಕಾಮಗಾರಿಗೆ ಅನುದಾನ ನೀಡುವಂತೆ ಶಾಸಕರಲ್ಲಿ
ಮನವಿ ಮಾಡಿದ್ದೇವು. ಆದರೆ ಅನುದಾನ ಬಿಡುಗಡೆಯಾಗುತ್ತದೆ ಎಂದು ಅವರ ಆಪ್ತರು ನಮಗೆ ತಿಳಿಸಿದ್ದರು. ಹೀಗಾಗಿ ನಾವು ಸಣ್ಣ ಪುಟ್ಟ ಕೆಲಸವನ್ನು ಮಾಡಿದ್ದೇವೆ. ಆದರೆ
ಇದುವರಿಗೂ ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಂಡಿಲ್ಲ. ಮತ್ತು ಕಾಮಗಾರಿ
ತೃಪ್ತಿಕರವಾಗಿದೆ ಎಂದು ನಾವು ಯಾವುದೇ ದೃಢಿಕರಣ ನೀಡಿಲ್ಲ. ಈ ಕುರಿತು ಕೆಲವರನ್ನು
ವಿಚಾರಿಸಿದ್ದು, ಬಂದು ನಿಮಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ ಅಷ್ಟೆ ಎಂದು
ದೇವಸ್ಥಾನ ಸಮಿತಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.






