ವಿಂಡ್ ಪವರ್ ನಿಯಂತ್ರಣ ನನ್ನ ಕೈಯಲ್ಲಿ ಇಲ್ಲ- ರಾಯರೆಡ್ಡಿ ಸ್ಪಷ್ಟನೆ: ಅಗ್ರಿಮೆಂಟ್ ಮಾಡಬಾರದು

ಕೊಪ್ಪಳ.
ಯಲಬುರ್ಗಾ ಸೇರಿದಂತೆ ಜಿಲ್ಲೆಯಲ್ಲಿ ವಿಂಡ್ ಪವರ್ ಕಂಪನಿಗಳನ್ನು ನಿಯಂತ್ರಿಸುವ ಅಧಿಕಾರ ನನಗೂ ಇಲ್ಲ ಮತ್ತು ಕರ್ನಾಟಕ ಸರಕಾರಕ್ಕೂ ಇಲ್ಲ. ಅದೆಲ್ಲ ನೇರವಾಗಿ ಕೇಂದ್ರ ಸರಕಾರದ ಹಿಡಿತದಿಂದ ನಡೆಯುತ್ತದೆ. ಕಂಪನಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಿದರೆ ನಾನು ಎನು ಮಾಡಬೇಕು. ಇದುವರೆಗೂ ಒಬ್ಬ ರೈತ ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿಲ್ಲ. ರೈತರು ಕಂಪನಿಯಿಂದ ಅಗ್ರಿಮೆಂಟ್ ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಅದರಲ್ಲೂ ವಿಶೇಷವಾಗಿ ತಮ್ಮ ಸ್ವಕ್ಷೇತ್ರ ಯಲಬುರ್ಗಾ ತಾಲೂಕಿನಾದ್ಯಂತ ವಿಂಡ್ ಪವರ್ ಕಂಪನಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸಿ ಫ್ಯಾನ್ ಅಳವಡಿಸಿಕೊಳ್ಳುವ ಕೆಲಸ ಮಾಡುತ್ತಿವೆ ಎಂದು ಮಾಧ್ಯಮದವರು ಪ್ರಶ್ನಿಸುತ್ತಿಸುತ್ತಿದ್ದಂತೆ ರಾಯರೆಡ್ಡಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿ ಮಾತನಾಡಿದರು. ಮಧ್ಯವರ್ತಿಗಳ ಮೂಲಕ ರೈತರು ಕಂಪನಿಗಳಿಗೆ ಭೂಮಿಯನ್ನು ನೀಡುತ್ತಾರೆ. ಈ ಸಮಯದಲ್ಲಿ ಅವರು ಮಾಡುವ ಅಗ್ರಿಮೆಂಟ್ಗೆ ಒಪ್ಪಿ ಸಹಿ ಹಾಕುತ್ತಾರೆ. ಇದರಿಂದ ಮುಂದೆ ಕಂಪನಿಯವರು ಎನೆ ಮಾಡಿದರು ಅದಕ್ಕೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕಂಪನಿಗಳು ನೇರವಾಗಿ ಕೇಂದ್ರ ಸರಕಾರದ ಮೂಲಕ ಇಲ್ಲಿ ತಳ ಊರುತ್ತವೆ. ಸ್ಥಳೀಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಕೂಡಾ ಇದಕ್ಕೆ ಎನು ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರಕಾರದಿಂದ ಕೆಲವು ಆದೇಶಗಳು ರವಾನೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಎನು ಮಾಡಲು ಆಗುವುದಿಲ್ಲ. ರಾಜ್ಯ ಸರಕಾರ ನಿಯಂತ್ರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಇದಕ್ಕೆ ಸೂಕ್ತ ಪರಿಹಾರ ರೈತರೇ ಕಂಡುಕೊಳ್ಳಬೇಕು. ಕಂಪನಿಗಳೊಂದಿಗೆ ಭೂಮಿ ನೀಡುವಾಗ ಮಾಡುವ ಕರಾರು ಪತ್ರಕ್ಕೆ ಸಹಿ ಹಾಕದಂತೆ ಎಚ್ಚರವಹಿಸಬೇಕು. ನಮ್ಮ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಂದ ಸಮಸ್ಯೆಯಾಗಿದೆ ಎಂದು ಒಬ್ಬ ರೈತ ಕೂಡಾ ನನ್ನ ಬಳಿ ಬಂದಿಲ್ಲ. ನನ್ನ ಬಳಿ ಬಂದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಿವೈಎಸ್ಪಿ ಮಾತನಾಡಿ, ಕಂಪನಿಗಳು ಭದ್ರತೆ ನೀಡುವಂತೆ ನಮಗೆ ಪತ್ರ ನೀಡುತ್ತಾರೆ. ಹೀಗಾಗಿ ನಾವು ಯಾರಿಂದಳು ತೊಂದರೆಯಾಗದಂತೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಹೊರತು ಕಂಪನಿ ಪರವಾಗಿ ಪೊಲೀಸರು ಕೆಲಸ ಮಾಡುವುದಿಲ್ಲ ಎಂದು ರಾಯರೆಡ್ಡಿ ಅವರಿಗೆ ಮಾಧ್ಯಮಗಳವರ ಮುಂದೆಯೇ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಸಿ, ಕಾಂಗ್ರೆಸ್ ಮುಖಂಡ ರಾಘವೇಂದ್ರ ಜೋಶಿ ಗುನ್ನಾಳ್, ಹನುಮಂತಗೌಡ ಚಂಡೂರ, ಮಹೇಶ ಹಳ್ಳಿ, ಹನುಮೇಶ ಕಡೆಮನಿ ಇದ್ದರು.






