ಮೈಸೂರು ದಸರಾ - ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ..............
ವಿಜಯ ದಶಮಿ - ಆಯುಧ ಪೂಜೆ - ದಸರಾ.....
ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ......
ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನದ ಸಂಕೇತ. ಅದಕ್ಕೆ ವಿರುದ್ಧದ ಎಲ್ಲವೂ ದ್ರೋಹ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಗೆರೆಯೇ ಮಾಯವಾಗಿದೆ......
ಹಣ ಅಧಿಕಾರ ಆಸ್ತಿ ಪೌರುಷಗಳೇ ಒಳ್ಳೆಯ ಗುಣಗಳು ಮತ್ತು ಬಡತನವೇ ಶಾಪ ಎಂಬಲ್ಲಿಗೆ ಈಗ ಬಂದು ನಿಂತಿದೆ.
ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಗಳ ವಿರುದ್ಧ ಜಯಿಸುವುದು ಹೇಗೆ ?
ಅರಿಷಡ್ವರ್ಗಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನು ಗೆಲ್ಲುವುದಕ್ಕಿಂತ ನಿಯಂತ್ರಣ ಸಾಧಿಸುವುದು ಬಹಳ ಮುಖ್ಯ. ಜೊತೆಗೆ ಅದೇ ಅರಿಷಡ್ವರ್ಗಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ಅವಕಾಶ ಆಧುನಿಕ ಕಾಲದಲ್ಲಿ ಇದೆ. ಆದರೆ ಅದಕ್ಕಾಗಿ ಸಾಕಷ್ಟು ಸಾಧನೆ ಮಾಡಬೇಕಾಗುತ್ತದೆ. ವೈಯಕ್ತಿಕ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.
ಹಾಗೆಯೇ ಆಯುಧ ಪೂಜೆ. ರಾಜಪ್ರಭುತ್ವದಲ್ಲಿ ಕತ್ತಿ ಗುರಾಣಿ ಬಂದೂಕು ಸಿಡಿಮದ್ದು ಬಾಂಬುಗಳೇ ನಿಜವಾದ ಆಯುಧಗಳು. ಆದರೆ ಪ್ರಜಾಪ್ರಭುತ್ವದಲ್ಲಿ ಮಾನವೀಯತೆಯೇ ಆಯುಧಗಳು ಎಂಬ ಅರಿವು ಮೂಡಬೇಕಿದೆ.
ವಾಹನಗಳೆಂಬ ನಿರ್ಜೀವ ವಸ್ತುಗಳಿಗೆ ಬೇಕಿರುವುದು ಪೂಜೆಯಲ್ಲ. ಅವುಗಳ ಸುಸ್ಥಿತಿ ಮತ್ತು ನಮ್ಮ ಜವಾಬ್ದಾರಿ ಬಹಳ ಮುಖ್ಯ. ಇಂದು ಅಪಘಾತಗಳು ಬದುಕಿನ ಭಾಗವಾಗಿ ಸಹಜವಾಗುತ್ತಿರುವಾಗ ವಾಹನಗಳ ಚಾಲನೆಯ ಕೌಶಲ್ಯ ಮತ್ತು ನಿಯಂತ್ರಣ ಮುಖ್ಯವೇ ಹೊರತು ನಿಂಬೆಹಣ್ಣು ಇಡುವುದಲ್ಲ.
ಜಂಬೂ ಸವಾರಿ, ಜಾನಪದ ಕಲೆಗಳ ಪ್ರದರ್ಶನ, ರಾಜ ದರ್ಬಾರ್, ಮೆರವಣಿಗೆ ಎಲ್ಲವೂ ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವಗಳು ಮತ್ತು ಮೇಲ್ನೋಟದ ಆಕರ್ಷಣೆ ಮಾತ್ರ. ನಿಜವಾದ ದಸರಾ ನಮ್ಮೊಳಗೆ ನಮ್ಮೊಂದಿಗೆ ಸಾಧಿಸಬೇಕಾಗಿರುವ ಕೆಟ್ಟ ನಡವಳಿಕೆಗಳ ಮೇಲಿನ ವಿಜಯೋತ್ಸವ. ಹಾಗೆ ಮಾಡಿದಲ್ಲಿ ಅದು ಸಾಮೂಹಿಕವಾಗಿ ಪ್ರಭಾವ ಬೀರಿ ಸಾಮಾಜಿಕವಾಗಿ ಸಹ ಪರಿಣಾಮ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಭ್ರಷ್ಟಾಚಾರ, ಜಾತಿ ಪದ್ದತಿ, ಮೋಸ, ವಂಚನೆ, ಕಲಬೆರಕೆ ಮುಂತಾದ ರಾಕ್ಷಸ ಗುಣಗಳು ಕಡಿಮೆಯಾಗಿ ಈ ಉತ್ಸವಗಳ ಮಹತ್ವ ಹೆಚ್ಚಾಗುತ್ತದೆ.
ಅದನ್ನು ಹೊರತುಪಡಿಸಿ ಯಾವುದೇ ಹಬ್ಬಗಳ ಅದ್ದೂರಿತನ ಕೇವಲ ತೋರಿಕೆಯ, ಅತ್ಯಂತ ಕೃತಕ ಆಚರಣೆ ಅಥವಾ ಪ್ರದರ್ಶನವಾಗುತ್ತದೆ. ಅದು ಎಷ್ಟೇ ಶತಮಾನಗಳಿಂದ ನಡೆದು ಬರುತ್ತಿದ್ದರೂ ಪ್ರಯೋಜನವಿಲ್ಲ.
ಇಡೀ ಮಾಧ್ಯಮ ಲೋಕ ದಸರಾ ಹಬ್ಬದ ಬಾಹ್ಯ ಆಚರಣೆಗಳನ್ನೇ ಗುರಿಯಾಗಿಸಿ ಚರ್ಚೆ ಸಂವಾದ ಪ್ರಸಾರ ಮಾಡುತ್ತವೆ. ಒಳನೋಟಗಳನ್ನು ಮಂಥನ ಮಾಡಿ ದುಷ್ಟ ಶಕ್ತಿಗಳ ಕನಿಷ್ಠ ಪರಿವರ್ತನೆಗೆ ಸ್ವಲ್ಪವೂ ಪ್ರಯತ್ನಿಸುವುದಿಲ್ಲ. ಅದೇ ಆಧುನಿಕ ಕಾಲದ ದುರಂತ.
ಕಣ್ಣಿಗೆ ಕಾಣುವುದನ್ನು ಹೃದಯಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ. ದೃಶ್ಯ ವೈಭವಕ್ಕಿಂತ ಆತ್ಮ ಜ್ಞಾನ ಮುಖ್ಯ ಎಂಬ ಅರಿವು ಮೂಡಬೇಕಿದೆ. ಆಗ ಮಾತ್ರ ವಿಜಯ ದಶಮಿ, ಆಯುಧ ಪೂಜೆ, ಏಕಾದಶಿಗಳಿಗೆ ಒಂದು ಅರ್ಥ ಬರುತ್ತದೆ.
ಆತ್ಮಾವಲೋಕನವೇ ಮಹಾ ದಸರಾ ಮತ್ತು ಬದುಕಿನ ತೃಪ್ತಿಯೇ ನಿತ್ಯ ಹಬ್ಬ....
ದಸರಾ ಹಬ್ಬದ ಸಂದರ್ಭದಲ್ಲಿ ಒಂದು ಸಣ್ಣ ಸಂಕಲ್ಪ ಮಾಡೋಣ..........
" ಒಳ್ಳೆಯವರಾಗೋಣ "....
ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ........
ಆತ್ಮೀಯರೆ,
ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ, ಯಾವ ಸಂದರ್ಭ, ಸನ್ನಿವೇಶ, ಪ್ರದೇಶದಲ್ಲೇ ವಾಸವಾಗಿರಿ, ಯಾವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥರದಲ್ಲೇ ಇರಿ, ಇನ್ನು ಮುಂದೆ ನಿಮ್ಮ ಈಗಿನ ಕೆಟ್ಟತನದಲ್ಲಿ ಕನಿಷ್ಠ ಶೇಕಡಾ 10% ರಷ್ಟು ಕಡಿಮೆ ಮಾಡಿಕೊಳ್ಳಿ. ಅದು ನಿಮ್ಮ ವೈಯಕ್ತಿಕ ನಡವಳಿಕೆಯೇ ಇರಲಿ, ವ್ಯವಹಾರವೇ ಇರಲಿ, ಸಂಬಂಧಗಳಲ್ಲೇ ಇರಲಿ, ಮಾನವೀಯ ಮೌಲ್ಯಗಳಲ್ಲೇ ಇರಲಿ ಕನಿಷ್ಠ 10% ಪರ್ಸೆಂಟ್ ಈಗಿನ ಸ್ಥಿತಿಗಿಂತ ಉತ್ತಮ ಪಡಿಸಿಕೊಳ್ಳಿ.
ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಯಾವುದೇ ಸಂಶೋಧನೆ ಮಾಡಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಈ ಸಮಾಜದ ನಡವಳಿಕೆಯ ಬಗ್ಗೆ ತಿಳಿದೇ ಇರುತ್ತದೆ.
ಇಂದಿನಿಂದ ಮುಂದಿನ ವರ್ಷದ ಇದೇ ದಿನದೊಳಗಾಗಿ ಈ ಶೇಕಡಾ10% ಬದಲಾವಣೆ ನಮ್ಮಲ್ಲಿ ಬರಲೇಬೇಕು. ಅದನ್ನು ನಮ್ಮ ಆತ್ಮಸಾಕ್ಷಿಗೆ ಒಪ್ಪಿಸಬೇಕು. ನಮ್ಮ ಚಿಂತನಾ ಕ್ರಮವನ್ನು ವಿಶಾಲ ಮತ್ತು ಹೆಚ್ಚು ನಾಗರಿಕ ಗೊಳಿಸಿಕೊಳ್ಳಬೇಕು. ಸಮಗ್ರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅದು ಈ ದೇಶಕ್ಕೆ, ನಮ್ಮ ಪ್ರೀತಿ ಪಾತ್ರರಿಗೆ, ನಮ್ಮ ಸಂಸ್ಕೃತಿಗೆ, ಈ ಸೃಷ್ಟಿಗೆ ನಾವು ಕೊಡಬಹುದಾದ ಒಂದು ಕಾಣಿಕೆ.
ಉದಾಹರಣೆ,
ನೀವು ಸರ್ಕಾರಿ ಅಧಿಕಾರಿಯಾಗಿದ್ದು ಇಲ್ಲಿಯವರೆಗೂ ಲಂಚ ಪಡೆಯುವವರಾಗಿದ್ದರೆ ಕನಿಷ್ಠ ಅದರಲ್ಲಿ 10% ಕಡಿಮೆ ಮಾಡಿಕೊಳ್ಳಿ. ತುಂಬಾ ಲಾಭದ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಅತಿ ಎನಿಸಿದರೆ 10% ಬಿಡಿ. ವೈದ್ಯ, ಶಿಕ್ಷಕ, ಪೋಲೀಸ್, ವಕೀಲ, ರಾಜಕಾರಣಿ, ಕಂಟ್ರಾಕ್ಟರ್ ಸೇರಿ ಯಾವುದೇ ವೃತ್ತಿಯಲ್ಲಿ ಇರಿ ಅಲ್ಲಿನ ನಿಮ್ಮ ಮೋಸದ ಪ್ರಮಾಣದಲ್ಲಿ ಕನಿಷ್ಠ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಿ. ಮೋಸ, ವಂಚನೆ, ಸುಳ್ಳು, ಅಸೂಯೆ, ಬೇರೆಯವರ ಬಗ್ಗೆ ಚಾಡಿ, ಕಳ್ಳತನ, ಅತ್ಯಂತ ಕೆಟ್ಟ ಬೈಗುಳ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವುದು ಮುಂತಾದ ವಿಷಯಗಳಲ್ಲಿ ಕನಿಷ್ಠ 10% ಕಡಿಮೆ ಮಾಡಿಕೊಳ್ಳಿ.
ಗೆಳೆಯರೆ ಇದಕ್ಕಾಗಿ ನೀವು ಯಾವುದೇ ವಿಶೇಷ ಶ್ರಮ, ಹಣ, ಸಮಯ ಯಾವುದೂ ಮೀಸಲಿಡಬೇಕಾಗಿಲ್ಲ. ಇದನ್ನು ಓದಿದ ತಕ್ಷಣ ಕೇವಲ 5 ನಿಮಿಷ ಮೌನಕ್ಕೆ ಜಾರಿ ನಿಮಗೆ ಒಪ್ಪಿತ ಎನಿಸಿದರೆ ನಿಮ್ಮ ಅತಿ ಹೆಚ್ಚು ಕೆಟ್ಟತನ ಅನಿಸುವುದರಲ್ಲಿ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಈ ಸಮಾಜ ಬದಲಾಗಬೇಕು, ನಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಸಮಾಜ ಬಳುವಳಿಯಾಗಿ ನೀಡಬೇಕು ಎಂಬ ಮನೋಭಾವ ನಿಮ್ಮದಾಗಿದ್ದರೆ ದಯವಿಟ್ಟು ದೇಶದ ಮತ್ತು ನಮ್ಮ ಸ್ವಂತ ಹಿತಾಸಕ್ತಿಯಿಂದ ಸ್ವಯಂ ಸ್ಪೂರ್ತಿ ಪಡೆದು ಇದನ್ನು ಪಾಲಿಸೋಣ. ಮುಂದಿನ ದಸರಾ ನಂತರ ಮತ್ತೆ ಇನ್ನೂ ಹೆಚ್ಚಿನ ಬದಲಾವಣೆಗೆ ಪ್ರಯತ್ನಿಸೋಣ.
ಇಲ್ಲಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಪಡೆದುಕೊಳ್ಳುವುದೇ ಹೆಚ್ಚು. ಒಂದು ಒಳ್ಳೆಯ ಅನುಭವ ನಮ್ಮದಾಗುತ್ತದೆ.
ಒಂದು ವೇಳೆ ನಿಮ್ಮಲ್ಲಿ ಯಾವುದೇ ಕೆಟ್ಟ ಗುಣ ಇಲ್ಲ ಎಂದು ಭಾವಿಸುವುದಾದರೆ ನಿಮಗೆ ಅಭಿನಂದನೆಗಳು ಮತ್ತು ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಆದರೆ ಇಂದಿನ ಸಮಾಜ ನೋಡಿದರೆ ಬಹುತೇಕ ಕೆಟ್ಟ ನಡವಳಿಕೆಯ ಜನರೇ ಹೆಚ್ಚಾಗಿ ಕಾಣುತ್ತಾರೆ. ಆದ್ದರಿಂದ ನಮ್ಮ ನಮ್ಮ ವಿಲ್ ಪವರ್ ಉಪಯೋಗಿಸಿ ಈ ಮಾನಸಿಕ ನಿಯಂತ್ರಣ ಸಾಧಿಸೋಣ.
ಕರ್ನಾಟಕದ ಮಟ್ಟಿಗೆ ಇದೊಂದು ಚಳವಳಿಯ ರೂಪ ನೀಡಲು ಪ್ರಯತ್ನಿಸೋಣ. ಒಮ್ಮೆ ವ್ಯಕ್ತಿ ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸಲು ಪ್ರಾರಂಭಿಸಿದರೆ ನಮ್ಮ ಇಂದಿನ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗಿ ಜನರ ನೆಮ್ಮದಿಯ ಮಟ್ಟ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳು ಸೇರಿ ಅನೇಕ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ.
ವ್ಯಕ್ತಿ ಒಳ್ಳೆಯವನಾಗದೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಯಾವುದೇ ಕಾನೂನು, ಯಾವುದೇ ಶಿಕ್ಷೆಯ ಭಯ ಜನರನ್ನು ಬದಲಾಯಿಸಲಾರದು. ರೈತರ, ಕಾರ್ಮಿಕರ, ಮಹಿಳೆಯರ, ಜಾತಿ ವ್ಯವಸ್ಥೆಯ, ಭ್ರಷ್ಟಾಚಾರದ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಬಲ್ಲ ಈ
" ಒಳ್ಳೆಯವರಾಗೋಣ " ಬದಲಾಗುವ ಚಳವಳಿಗೆ ನಿಮ್ಮನ್ನು ಸ್ವಾಗತಿಸುತ್ತಾ,
ನಿಮ್ಮ ಸಹಕಾರ ನಿರೀಕ್ಷಿಸುತ್ತಾ.....
ಇದಕ್ಕೆ ಆ... ಓ.... ಎಂಬ ಪ್ರಚಾರದ ಅವಶ್ಯಕತೆ ಇಲ್ಲ. ನಿಂತ ನೆಲೆಯಲ್ಲೇ ಒಂದು ಪ್ರತಿಜ್ಞಾ ನಿರ್ಧಾರ ಕೈಗೊಂಡು ಸಾಮೂಹಿಕವಾಗಿ ಇದನ್ನು ಪಾಲಿಸೋಣ.
ಧನ್ಯವಾದಗಳು.
ಇಂದಿನಿಂದ
" ಒಳ್ಳೆಯವರಾಗೋಣ ".........
ಒಳ್ಳೆಯತನಕ್ಕಾಗಿ ಪ್ರಯತ್ನಿಸೋಣ.......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068......
ರತನ್ ಟಾಟಾ......
ವ್ಯಾಪಾರಂ ದ್ರೋಹ ಚಿಂತನಂ
ಅಥವಾ
ವ್ಯಾಪಾರಂ ಲಾಭ ಚಿಂತನಂ
ಅಥವಾ
ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ
ಅಥವಾ
ವ್ಯಾಪಾರ ಒಂದು ವೈಯಕ್ತಿಕ ಸಾಧನೆ
ಅಥವಾ
ವ್ಯಾಪಾರ ದೇಶ ಸೇವೆ
ಅಥವಾ
ವ್ಯಾಪಾರ ಹೊಟ್ಟೆ ಪಾಡಿನ ಒಂದು ಅನಿವಾರ್ಯ ಮಾರ್ಗ, ಅವಕಾಶ ಮತ್ತು ಮೌಲ್ಯ.......
ಅಸ್ತಂಗತ ಶ್ರೀ ರತನ್ ಟಾಟಾ ಅವರ ನೆನಪಿನ ಹಿನ್ನೆಲೆಯಲ್ಲಿ.....
ಅಂದು ಟಾಟಾ - ಬಿರ್ಲಾ,
ಇಂದು ಅಂಬಾನಿ - ಅದಾನಿ
ಒಂದಷ್ಟು ವ್ಯತ್ಯಾಸ ಮತ್ತು ಅಪಮೌಲ್ಯ.......
ಒಂದು ದೇಶದ ಅಭಿವೃದ್ಧಿಯಲ್ಲಿ ಉದ್ಯಮ ಮತ್ತು ಉದ್ಯಮಿಗಳ ಪಾತ್ರ ಬಹು ಮುಖ್ಯವಾದದ್ದು. ಏಕೆಂದರೆ ಈ ಆಧುನಿಕ ಕಾಲದಲ್ಲಿ ಉದ್ಯಮಗಳ ಸೃಷ್ಟಿ ಉದ್ಯೋಗಕ್ಕೆ ಮತ್ತು ಜೀವನಕ್ಕೆ ಅತ್ಯವಶ್ಯಕವಾಗಿದೆ....
ಭಾರತ ಕೃಷಿ ಪ್ರಧಾನ ದೇಶವಾದರೂ ಅದೊಂದರಿಂದಲೇ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾಗಿ ಇತರ ಉದ್ಯಮಗಳು ನಿರಂತರವಾಗಿ ಬೆಳವಣಿಗೆ ಹೊಂದುತ್ತಲೇ ಇರಬೇಕು. ಕೃಷಿಗೆ ಪೂರಕವಾದ ವಸ್ತುಗಳು ಮತ್ತು ಮಾರುಕಟ್ಟೆ ರೂಪದಲ್ಲಿ ಈ ಕೈಗಾರಿಕೆಗಳಿಂದಲೇ ಅನೇಕ ತಂತ್ರಜ್ಞಾನ ಪೂರೈಕೆಯಾಗುತ್ತದೆ. ಅದರಲ್ಲೂ ಈ ಆಧುನಿಕ ಕಾಲದಲ್ಲಿ ತೀವ್ರ ಜನಸಂಖ್ಯಾ ಸ್ಪೋಟ ನಿರುದ್ಯೋಗವನ್ನು ಸೃಷ್ಟಿ ಮಾಡುವ ಸಾಧ್ಯತೆ ಇರುವುದರಿಂದ ಅನೇಕ ಹೊಸ ಹೊಸ ಉದ್ಯಮ ವಲಯಗಳು ಹಾಗೂ ಸೇವಾ ವಲಯಗಳು ಅಭಿವೃದ್ಧಿ ಹೊಂದುತ್ತಲೇ ಇರಬೇಕಾಗುತ್ತದೆ.....
ಅದಕ್ಕೆ ಈ ಉದ್ಯಮಿಗಳ ಕೊಡುಗೆಯು ಬಹಳ ದೊಡ್ಡದು. ಸ್ವಾತಂತ್ರ್ಯ ಭಾರತ ಪ್ರಾರಂಭದಲ್ಲಿ ಶೇಕಡಾ 90% ಕ್ಕೂ ಹೆಚ್ಚು ಕೃಷಿ ಪ್ರಧಾನ ದೇಶವಾಗಿತ್ತು. ಇದು ಮೂಲಭೂತವಾಗಿ ಹಳ್ಳಿಗಳ ದೇಶ. ಆಗ ಆರ್ಥಿಕವಾಗಿ ಸಹ ತುಂಬಾ ದುರ್ಬಲ ಪರಿಸ್ಥಿತಿಯಲ್ಲಿತ್ತು. ಎಷ್ಟೋ ಮನೆಯಲ್ಲಿ ಸೌದೆ ಒಲೆ ಹಚ್ಚಲು ಬೆಂಕಿ ಪೊಟ್ಟಣವೂ ಸಹ ಇರುತ್ತಿರಲಿಲ್ಲ. ಪಕ್ಕದ ಅಥವಾ ಊರಿನ ಇನ್ಯಾರದೋ ಮನೆಯಲ್ಲಿ ಬೆಂಕಿ ಹಚ್ಚಿದಾಗ ಅದರ ಕೆಂಡವನ್ನು ಮನೆಗೆ ತಂದು ಬೆಂಕಿ ಹಚ್ಚಬೇಕಾಗಿತ್ತು....
ಎರಡು ಹೊತ್ತಿನ ಊಟಕ್ಕೂ ಸಾಕಷ್ಟು ತೊಂದರೆ ಇತ್ತು. ಕ್ರೀಡಾಪಟುಗಳಿಗೆ ಸ್ವಂತ ಶೂಗಳು ಇರುತ್ತಿರಲಿಲ್ಲ. ವಾಹನಗಳು ತುಂಬಾ ಕಡಿಮೆ ಪ್ರಮಾಣದಲ್ಲಿದ್ದವು. ಯಾವುದೇ ದೊಡ್ಡ ಉದ್ಯಮಗಳು ಬೆಳವಣಿಗೆ ಹೊಂದಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಅವರಿಗೆ ಅವಶ್ಯಕತೆ ಇದ್ದ ಕೆಲವು ಉದ್ಯಮಗಳನ್ನು ಮಾತ್ರ ಸ್ಥಾಪಿಸಿದ್ದರು.....
ಅಂತಹ ಸಂದರ್ಭದಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ಗಾಂಧಿಯವರ ಜೊತೆ ಭಾಗವಹಿಸಿ, ಸಾಕಷ್ಟು ಆರ್ಥಿಕ ಸಹಾಯವನ್ನು ನೀಡಿ, ತದನಂತರ ಸರ್ಕಾರದ ಜೊತೆ ಸೇರಿ ಸಮಾಜವಾದಿ ಆರ್ಥಿಕ ತತ್ವದ ಆಧಾರದ ಮೇಲೆ ಉದ್ಯಮ ಬೆಳವಣಿಗೆ ಹೊಂದಲು, ಆ ಸಂದರ್ಭದ ಬಹುಮುಖ್ಯ ಉದ್ಯಮಿದಾರರು ಇದೇ ಟಾಟಾ ಬಿರ್ಲಾ ಗಳು....
ಆ ಕಾಲಘಟ್ಟದ ನಂತರ ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಮತ್ತೆ ಮುಂದೆ ಜಾಗತೀಕರಣದಿಂದಾಗಿ ಮತ್ತಷ್ಟು ವೇಗ ಪಡೆಯಿತು. ಅಂತಹ ಸಂದರ್ಭದಲ್ಲಿ ಈ ದೇಶದ ಉದ್ಯಮ ಕ್ಷೇತ್ರದ ಮುಂಚೂಣಿಯಲ್ಲಿ ಕೆಲಸ ಮಾಡಿದವರಲ್ಲಿ ರತನ್ ಟಾಟಾ ಪ್ರಮುಖರು......
ಉದ್ಯಮ ಎಂದ ತಕ್ಷಣ ಕೆಲವರಿಗೆ ಸಂಬಳ, ಸಾರಿಗೆ, ಉದ್ಯೋಗ, ಅಧಿಕಾರ ನೆನಪಾದರೆ ಮತ್ತಷ್ಟು ಜನರಿಗೆ ಅಲ್ಲಿನ ಶೋಷಣೆ, ಉದ್ಯಮಿಗಳ ಲಾಭಕೋರತನ ಸಹಜವಾಗಿಯೇ ನೆನಪಾಗುತ್ತದೆ. ವ್ಯಾಪಾರಂ ದ್ರೋಹ ಚಿಂತನಂ ಎಂಬ ಘೋಷ ವಾಕ್ಯವನ್ನು ಹಿಡಿದು ನಮ್ಮ ಯುವಶಕ್ತಿಯನ್ನು ದುಡಿಸಿಕೊಂಡು ಕೈಗಾರಿಕೆಗಳು ಒಂದು ರೀತಿಯ ಅಸಮಾನತೆಗೆ ಕಾರಣವಾಗುತ್ತಿರುವ ಸಂದರ್ಭಗಳು, ಸನ್ನಿವೇಶಗಳು ಸೃಷ್ಠಿಯಾಗುತ್ತಿರುವಾಗ ಮುಖ್ಯವಾಗಿ ರತನ್ ಟಾಟಾ ಅವರ ಕಾರ್ಯವೈಖರಿ ಸ್ವಲ್ಪಮಟ್ಟಿಗೆ ಅದಕ್ಕೆ ಭಿನ್ನವಾಗಿತ್ತು. ಒಂದಷ್ಟು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ವ್ಯಾಪಾರಂ ಲಾಭ ಚಿಂತನಂ ಎನ್ನುವಷ್ಟರ ಮಟ್ಟಿಗೆ ಸ್ವಲ್ಪ ಮೌಲ್ಯಅವರಲ್ಲಿ ಉಳಿದಿತ್ತು......
ಹಾಗೆಯೇ ಒಂದು ಹಂತದ ನಂತರ ಸಾರ್ವಜನಿಕ ಸೇವೆಗಾಗಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಇದೇ ಮಾತನ್ನು ಈಗಿನ ಅಂಬಾನಿ, ಅದಾನಿ ಮುಂತಾದ ಈಗಿನ ಕೆಲವರಿಗೆ ಹೇಳಲಾಗುವುದಿಲ್ಲ. ಏಕೆಂದರೆ ಅವರು ಈಗಲೂ ಲಾಭವನ್ನೇ ಕೇಂದ್ರೀಕೃತ ಮಾಡಿಕೊಂಡು ತಮ್ಮ ಉದ್ಯಮವನ್ನು ನಡೆಸುತ್ತಿದ್ದಾರೆ. ಇಲ್ಲಿನ ಮೌಲ್ಯಗಳು, ಜನಜೀವನ, ಉದ್ಯೋಗಿಗಳ ಬಗೆಗಿನ ಕಾಳಜಿ, ಮಾನವೀಯತೆ ಇವುಗಳ ಬಗ್ಗೆ ಟಾಟಾ ಅವರಿಗಿದ್ದಷ್ಟು ಕಾಳಜಿ ಇವರುಗಳಿಗೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ......
ಇಂದು ಈ ಸಂದರ್ಭದಲ್ಲಿ ಸಾಮಾನ್ಯ ಜನರು, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರತನ್ ಟಾಟಾ ಅವರನ್ನು ಇಷ್ಟೊಂದು ವಿಜೃಂಭಿಸಲು ಕಾರಣ ಅವರ ಒಳಗೆ ಇದ್ದ ಒಂದಷ್ಟು ನೈತಿಕ ಪ್ರಜ್ಞೆ ಮತ್ತು ಸೇವಾ ಮನೋಭಾವ ಕಾರಣವಾಗಿದೆ.....
ಇದರ ಅರ್ಥ ಈ ಸಮಾಜದಲ್ಲಿ ಇನ್ನೂ ಒಳ್ಳೆಯದನ್ನು ಮತ್ತು ಒಳ್ಳೆಯವರನ್ನು ಗುರುತಿಸುವ ಮನೋಭಾವ ಉಳಿದಿದೆ. ಸಮಾಜಮುಖಿ ಕೆಲಸಗಳು ಮತ್ತು ಚಿಂತನೆಗಳಿಗೆ ಈಗಲೂ ಸ್ಪಂದಿಸುವ ಗುಣವಿದೆ. ಸ್ವಾರ್ಥಿಗಳು, ವಂಚಕರು, ಭ್ರಷ್ಟಾಚಾರಿಗಳು, ಲಾಭಕೋರರು, ದುರಹಂಕಾರಿಗಳ ಬಗ್ಗೆ ಜನರ ಅಂತರ್ಯದಲ್ಲಿ ಅಸಹನೆ ಇದ್ದೇ ಇರುತ್ತದೆ. ಸಮಯ ಬಂದಾಗ ಅದು ಹೊರಬರುತ್ತದೆ ಎಂಬ ಅಂಶ ತುಂಬಾ ಸ್ಪಷ್ಟವಾಗಿ ಈಗ ಅರ್ಥವಾಗುತ್ತಿದೆ....
ನಮ್ಮನ್ನು ನಾವು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಮತ್ತೊಮ್ಮೆ ನಮ್ಮ ಕಾರ್ಯವೈಖರಿಯನ್ನು ಪುನರ್ ವಿಮರ್ಶಿಸುವ ಅವಶ್ಯಕತೆಯನ್ನು ನೆನಪಿಸುತ್ತಾ.....
ಶ್ರೀಯುತ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068.......






