ಬೆಂಗಳೂರು, ಅ.17: ದಲಿತರ ಭೂಮಿ ಕಬಳಿಕೆ, ಕೆರೆ - ರಾಜಕಾಲುವೆ ಒತ್ತುವರಿ ಆರೋಪಿಸಿ ಸಮತಾ ಸೈನಿಕ ದಳ ಹಾಗೂ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ವತಿಯಿಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಕನಕಪುರ ಮುಖ್ಯ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯದ್ವಾರದಿಂದ "ವಿಧಾನಸೌಧ ಚಲೋ"
ಬೃಹತ್ ಪಾದಯಾತ್ರೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ದಲಿತ ಮಹಿಳೆ ರಂಗಮ್ಮನವರಿಗೆ ಸೇರಬೇಕಾದ ಜಾಗ ಹಾಗೂ ಆರ್ಟ್ ಆಫ್ ಲಿವಿಂಗ್ ವಶಪಡಿಸಿಕೊಂಡಿರುವ ಗೋಮಾಳ ಮತ್ತು ಸರ್ಕಾರಿ ಜಾಗಗಳನ್ನು ಮರಳಿ ಪಡೆಯುವಂತೆ ಒತ್ತಾಯಿಸಿ ಈ ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಯಲ್ಲಿ ಸುಮಾರು 500ಕ್ಕೂ ಹೆಚ್ಚು ರೈತರು, ದಲಿತರು ಮತ್ತು ಕಾರ್ಮಿಕರು ಉತ್ಸಾಹದಿಂದ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ನಿಲ್ಲದು: ಅರ್ಜುನ್ ಗೋಪಾಲಯ್ಯ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮುಖಂಡರಾದ ಅರ್ಜುನ್ ಗೋಪಾಲಯ್ಯ ಅವರು, "ದಲಿತ ಮಹಿಳೆ ರಂಗಮ್ಮನವರಿಗೆ ಹಾಗೂ ಸಾರ್ವಜನಿಕರಿಗೆ ಸೇರಿದ ಜಾಗವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಅಕ್ರಮವಾಗಿ ವಶಪಡಿಸಿಕೊಂಡಿದೆ. ಬಡವರಿಗೆ ಸೇರಬೇಕಾದ ಜಾಗವನ್ನು ಮರಳಿ ಪಡೆಯುವವರೆಗೂ ನಮ್ಮ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಎಂದು ಎಚ್ಚರಿಸಿದರು.
ಮುಂದುವರೆದು, "ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಂತ್ರಸ್ತ ದಲಿತ ಮಹಿಳೆ ರಂಗಮ್ಮನವರಿಗೆ ಅವರ ಭೂಮಿಯನ್ನು ವಾಪಸ್ ಕೊಡಿಸಬೇಕು. ಒಂದು ವೇಳೆ ಸರ್ಕಾರವು ನಿರ್ಲಕ್ಷ್ಯ ತೋರಿದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಠಿಣ ಎಚ್ಚರಿಕೆ ನೀಡಿದರು.
ಇದೇ ಪಾದಯಾತ್ರೆಯಲ್ಲಿ ಸಮತಾ ಸೈನಿಕ ದಳ ಹಾಗೂ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಪ್ರಮುಖ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೋಟ್:
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಂತ್ರಸ್ತ ದಲಿತ ಮಹಿಳೆ ರಂಗಮ್ಮನವರಿಗೆ ಅವರ ಭೂಮಿಯನ್ನು ವಾಪಸ್ ಕೊಡಿಸಬೇಕು. ಒಂದು ವೇಳೆ ಸರ್ಕಾರವು ನಿರ್ಲಕ್ಷ್ಯ ತೋರಿದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಠಿಣ ಎಚ್ಚರಿಕೆ ನೀಡಿದರು.
- ಅರ್ಜುನ್ ಗೋಪಾಲಯ್ಯ, ಅಧ್ಯಕ್ಷರು, ರಾಷ್ಟ್ರೀಯ ಅಂಬೇಡ್ಕರ್ ಸೇನೆ







