ಬಳ್ಳಾರಿ: ವಾರಕ್ಕೆ ಐದು ದಿನಗಳ ಬ್ಯಾಂಕ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಶೀಘ್ರವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ದೇಶಾದ್ಯಂತ ಬ್ಯಾಂಕ್ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.
ಇದರ ಭಾಗವಾಗಿ ಬಳ್ಳಾರಿ ನಗರದ ರಾಯಲ್ ಸರ್ಕಲ್ನ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗ ಬುಧವಾರ ಸಂಜೆ ಪ್ರತಿಭಟನೆ ನಡೆಯಿತು. ಜಿಲ್ಲೆಯ ವಿವಿಧ ಬ್ಯಾಂಕ್ಗಳ 300ಕ್ಕೂ ಅಧಿಕ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ UFBU ಮುಖಂಡ ಆರ್. ಘನಮಲ್ಲಿ, ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು 90 ಕೋಟಿ ಜನರಿಗೆ ಬ್ಯಾಂಕ್ ಸೇವೆ ಒದಗಿಸುವಲ್ಲಿ ನೌಕರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನೌಕರರ ಜೀವನಮಟ್ಟ ಸುಧಾರಣೆ ಹಾಗೂ ಉತ್ತಮ ಕಾರ್ಯ-ಜೀವನ ಸಮತೋಲನಕ್ಕಾಗಿ ವಾರಕ್ಕೆ ಐದು ದಿನಗಳ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರುವುದು ಅಗತ್ಯವಾಗಿದೆ ಎಂದು ಹೇಳಿದರು.
ಬ್ಯಾಂಕ್ ನೌಕರರು ತಮ್ಮ ದಕ್ಷ ಕಾರ್ಯನಿರ್ವಹಣೆಯ ಮೂಲಕ ಬ್ಯಾಂಕುಗಳು ಉತ್ತಮ ಲಾಭ ಗಳಿಸಲು, ಅನುತ್ಪಾದಕ ಸಾಲಗಳಾದ (NPA) ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ನೌಕರರ ನ್ಯಾಯಯುತ ಬೇಡಿಕೆಯನ್ನು ಕೇಂದ್ರ ಸರ್ಕಾರ ಕೂಡಲೇ ಪರಿಗಣಿಸಿ ಐದು ದಿನಗಳ ಬ್ಯಾಂಕ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ದೇಶದಾದ್ಯಂತ ಸರಿಸುಮಾರು ಎಂಟು ಲಕ್ಷ ಬ್ಯಾಂಕ್ ನೌಕರರು UFBU ಅಡಿಯಲ್ಲಿ ಆಗಸ್ಟ್ 12ರಂದು ಪ್ರತಿಭಟನೆ ನಡೆಸಿ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ UFBU ಮುಖಂಡರಾದ ಸೂರಜ್, ಶಿವರಾಜ್, ಹೆಚ್. ಮಂಜುಳಾ, ರವಿಕುಮಾರ್, ಚೆನ್ನಬಸಪ್ಪ, ಶರಣಗೌಡ, ನಾಗೇಂದ್ರ ಪ್ರಸಾದ್, ರಂಗಣ್ಣ, ಪ್ರತಾಪ್ ಸೇರಿದಂತೆ ಹಲವು ಬ್ಯಾಂಕ್ ನೌಕರರು ಪಾಲ್ಗೊಂಡಿದ್ದರು.







