ಬಳ್ಳಾರಿ, ಆ.16: ಉತ್ತರಾಖಂಡದ ಹಾಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಾರ್ವಜನಿಕ ಸಭೆಯ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಎದುರು ಬೆಳಿಗ್ಗೆ 10 ಗಂಟೆಗೆ ನಡೆದ ಧರಣಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರು ಭಾಗವಹಿಸಿದ್ದ ಸಾರ್ವಜನಿಕ ಸಭೆ ನಡೆದ ಸ್ಥಳ ಅಶುದ್ಧಗೊಂಡಿದೆ ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಿರುವುದು ಅಸಂವಿಧಾನಿಕ ಹಾಗೂ ಖಂಡನೀಯ ಕ್ರಮವಾಗಿದೆ.
ಇಂತಹ ನಡೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತದ್ದು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮಹಾಪೌರ ಪಿ. ಗಾದೆಪ್ಪ, ರಾಜ್ಯ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿಸಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಎಸ್ಸಿ ಸೆಲ್ ಅಧ್ಯಕ್ಷ ಎರುಕುಲಸ್ವಾಮಿ, ರಾಜ್ಯ ಕ್ರೈಸ್ತರ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಿ.ಜೆ. ರವಿಕುಮಾರ್, ಒಬಿಸಿ ಸೆಲ್ ಅಧ್ಯಕ್ಷ ಸರಗು ನಾಗರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಅಲಿವೇಲು ಸುರೇಶ್, ಹಿರಿಯ ನಾಯಕರಾದ ಮಾನಯ್ಯ, ಎಲ್. ಮಾರೆಣ್ಣ, ಯತೀಂದ್ರ, ಬಿ.ಎಂ. ಪಾಟೀಲ್, ವೀರೇಂದ್ರ ಕುಮಾರ್, ಶಿವರಾಜ್, ಗಂಗಾಧರ್, ಗ್ಯಾರಂಟಿ ಅಧ್ಯಕ್ಷ ಚಿದಾನಂದಪ್ಪ ಯಾದವ್, ಸೇವಾದಳ ಅಧ್ಯಕ್ಷ ಅಥಾವುಲ್ಲಾ, ಮಲ್ಲಿಶ್ವರಿ, ರಾಹುಲ್ ಗಾಂಧಿ ಬ್ರಿಗೇಡ್ ಅಧ್ಯಕ್ಷ ಅಖಿಲ್ ಅಹ್ಮದ್, ವಿಜಯ್ ಕುಮಾರ್, ಕಾರ್ಮಿಕ ಅಧ್ಯಕ್ಷ ಮಂಜುನಾಥ್, ಸಾಮಾಜಿಕ ಜಾಲತಾಣ ಅಧ್ಯಕ್ಷ ಅಫಾಕ್ ಅಹ್ಮದ್, ಗೌಸಿಯಾ, ಒಬಿಸಿ ಉಪಾಧ್ಯಕ್ಷ ಲಿಂಗರಾಜ್, ಸ್ಯಾಮ್ಯೂಲ್, ರಾಜೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.







