ಬೆಂಗಳೂರು, ಆ.17: ಇಂದಿನ ಸಮಾಜದಲ್ಲಿ ಹಣವಂತರು ಹಾಗೂ ಅಧಿಕಾರಸ್ಥರನ್ನು ಪುರಸ್ಕರಿಸುವ ಮನೋಭಾವ ಹೆಚ್ಚಾಗಿದ್ದು, ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವ ಪರಂಪರೆ ಹಿಂದೆ ಇತ್ತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ನಗರದ ಎನ್.ಆರ್. ಕಾಲೋನಿಯ ಬಿ.ಎಂ. ಶ್ರೀ ಕಲಾಭವನದಲ್ಲಿ ಬಹುಮತ ವಾಣಿ, ದಾರಿದೀಪ ಹಾಗೂ ಜ್ಞಾನ ಸಾಗರ ಪತ್ರಿಕೆಗಳ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಕ್ರಮ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತಿನಿಂದ ಎಂದಿಗೂ ನೆಮ್ಮದಿ ಸಿಗುವುದಿಲ್ಲ.
ಯಾವಾಗ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಬಹುದು ಎಂಬ ಆತಂಕದಲ್ಲಿಯೇ ಅಂತಹವರು ಜೀವನ ಸಾಗಿಸುತ್ತಾರೆ.
ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅನೇಕ ಅನ್ಯಾಯಗಳನ್ನು ಕಂಡಿದ್ದೇನೆ. ವ್ಯಕ್ತಿಗಳ ತಪ್ಪಿಗಿಂತಲೂ ಸಮಾಜದ ತಪ್ಪು ದೊಡ್ಡದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಂತೋಷ್ ಹೆಗಡೆ, ಅಂದು ಒಳ್ಳೆಯ ಕೆಲಸ ಮಾಡಿದವರನ್ನು ಸಮಾಜ ಗುರುತಿಸಿ ಗೌರವಿಸುತ್ತಿತ್ತು.
ತಪ್ಪು ಮಾಡಿದವರನ್ನು ಬಹಿಷ್ಕರಿಸುವ ಸಾಮಾಜಿಕ ವ್ಯವಸ್ಥೆಯೂ ಇತ್ತು. ಆದರೆ ಇಂದು ಹಣ ಮತ್ತು ಅಧಿಕಾರಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ.
ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ನಡೆದಿರುವ ಹಗರಣಗಳ ಪ್ರಮಾಣ ದಶಕದಿಂದ ದಶಕಕ್ಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ತಮ್ಮ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳ ವಿರುದ್ಧ ಚಾರ್ಜ್ಶೀಟ್ ದಾಖಲಿಸಿದ ಪ್ರಕರಣಗಳನ್ನೂ ಅವರು ಪ್ರಸ್ತಾಪಿಸಿದರು.
*ಪತ್ರಿಕೆಗಳು ಜನಜಾಗೃತಿ ಮೂಡಿಸಲಿ*
ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರು ತಮ್ಮ 53 ವರ್ಷಗಳ ವೈದ್ಯಕೀಯ ಸೇವೆಯ ಅನುಭವಗಳನ್ನು ಹಂಚಿಕೊಂಡರು.
ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಇಂದಿನಂತೆ ಸಂಪರ್ಕ ಮಾಧ್ಯಮಗಳಿರಲಿಲ್ಲ. ಆಗ ನೂರಾರು ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಅವುಗಳನ್ನು ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಆ ಮೂಲಕ ಜನರನ್ನು ತಲುಪಲು ಸಾಧ್ಯವಾಯಿತು ಎಂದು ಹೇಳಿದರು.
ಇಂದು ರೋಗಿಗಳಿಲ್ಲದ ಮನೆ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳು ವೈದ್ಯಕೀಯ ವಿಷಯಗಳ ಕುರಿತು ಹೆಚ್ಚು ಬರಹಗಳನ್ನು ಪ್ರಕಟಿಸಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
80ನೇ ವಯಸ್ಸಿನಲ್ಲಿಯೂ ತಾವು ಆರೋಗ್ಯವಾಗಿರುವುದಕ್ಕೆ ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಪ್ರೀತಿಯಿಂದ ಮಾಡುವುದೇ ಕಾರಣ ಎಂದ ಅವರು, ಎಲ್ಲ ಕೆಲಸಗಳನ್ನು ಪ್ರೀತಿಯಿಂದ ಮಾಡಿ, ಎಲ್ಲರನ್ನೂ ಸ್ನೇಹದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಸಂಗೀತ, ನೃತ್ಯ ಮನರಂಜನೆ
ಪ್ರಸಿದ್ಧ ಗಾಯಕ ಶಶಿಧರ್ ಕೋಟೆ ಅವರು ಮಧುರ ಗಾಯನದ ಮೂಲಕ ಸಭಿಕರನ್ನು ರಂಜಿಸಿದರು.
ದಕ್ಷ ಶೈಕ್ಷಣಿಕ ಅಕಾಡೆಮಿಯ ಉಪನ್ಯಾಸಕ ಪ್ರೊ. ರಾಮಮೂರ್ತಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಾಗೂ ಪ್ರಸ್ತುತ ಜನಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಿಂದ ನಡೆದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ತಂದವು.







