ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಯೋಜನೆಯಡಿ ಮನೆಮನೆಗೆ ತೆರಳಿ ಉದ್ಯೋಗ ಬೇಡಿಕೆ ಸ್ವೀಕಾರ
ಹೊಳಲ್ಕೆರೆ: ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಿ, ಗುಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಆರ್ಡಿಪಿಆರ್ ಸಚಿವರು ಹಾಗೂ ಇಲಾಖೆಯ ನಿರ್ದೇಶನದಂತೆ ವಿಬಿಜಿ–ರಾಮ್–ಜಿ ಯೋಜನೆಯಡಿ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ಹಾಗೂ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಅವರ ಮಾರ್ಗದರ್ಶನದಲ್ಲಿ ಯೋಜನೆಯ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳು ಯೋಜನೆಯ ಫಲಾನುಭವಿಗಳನ್ನು ತಲುಪುವ ಕಾರ್ಯದಲ್ಲಿ ತೊಡಗಿವೆ.
ಜಾಬ್ ಕಾರ್ಡ್ ಮೇಳದ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ 318 ಕಾಮಗಾರಿಗಳ ಗುಚ್ಚದ ಕರಪತ್ರ ಹಾಗೂ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಿದ್ದಾರೆ. ಅಲ್ಲದೆ, ನಮೂನೆ–6ರಲ್ಲಿ ಕುಟುಂಬದ ಜಾಬ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಕುಟುಂಬಕ್ಕೆ ಅಗತ್ಯವಿರುವ ಕೆಲಸ ಅಥವಾ ಕಾಮಗಾರಿಯ ಬೇಡಿಕೆಯನ್ನು ಸಹಿಯೊಂದಿಗೆ ಪಡೆದು ದಾಖಲೆ ನಿರ್ವಹಿಸಲು ಸೂಚಿಸಲಾಗಿದೆ.
ಮಳೆಯ ಕೊರತೆ; ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ
ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.35ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯವೂ ಕುಂಠಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಿದ್ದು, ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ಸ್ಥಳೀಯವಾಗಿ ತ್ವರಿತವಾಗಿ ಉದ್ಯೋಗ ಒದಗಿಸುವುದು ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಬಿಜಿ–ರಾಮ್–ಜಿ ಯೋಜನೆಯು ಗ್ರಾಮೀಣ ಜನರ ಉದ್ಯೋಗ ಭದ್ರತೆ ಹಾಗೂ ಜೀವನೋಪಾಯದ ಪ್ರಮುಖ ಮಾರ್ಗವಾಗಿದ್ದು, ಬರ ನಿರ್ವಹಣೆ, ನೀರು ಮತ್ತು ಮಣ್ಣಿನ ಸಂರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುತ್ತದೆ.
ಯೋಜನೆಯಿಂದ ಹೊರಗುಳಿದಿರುವ ಹಾಗೂ ಸಕ್ರಿಯವಾಗಿಲ್ಲದ ಕುಟುಂಬಗಳನ್ನು ಗುರುತಿಸಿ ಯೋಜನೆಯ ವ್ಯಾಪ್ತಿಗೆ ತಂದು, ಸರ್ಕಾರದ ಸೌಲಭ್ಯಗಳನ್ನು ದೊರಕಿಸುವುದೂ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಹೊಳಲ್ಕೆರೆ ತಾಲೂಕಿನ ಜಾಬ್ ಕಾರ್ಡ್ ಮೇಳದ ನೇತೃತ್ವವನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳು ಹಾಗೂ ಹೊಳಲ್ಕೆರೆ ತಾಲೂಕಿನ ಆಡಳಿತಾಧಿಕಾರಿಗಳಾದ ಎಸ್. ಬಾಬು ವಹಿಸಿಕೊಂಡಿದ್ದು, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಬಿಜಿ–ರಾಮ್–ಜಿ ಸಿಬ್ಬಂದಿ, ಸಹಾಯಕ ನಿರ್ದೇಶಕ ನಟರಾಜ್, ಟಿಎಂಐಎಸ್, ಟಿಐಇಸಿ, ಟಿಸಿ, ಟಿಎಇ, ಟಿಎಎ, ಎನ್ಆರ್ಎಲ್ಎಂ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಹೊಳಲ್ಕೆರೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಶಿವಪ್ರಕಾಶ್ ಅವರು ಅಭಿಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಜಾಬ್ ಕಾರ್ಡ್ ಮೇಳದ ಕುರಿತು ಗ್ರಾಮೀಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸೂಚಿಸಿದ್ದಾರೆ.
ಅಭಿಯಾನದ ಪ್ರಚಾರಕ್ಕಾಗಿ ಡಂಗೂರ ಸಾರುವುದು, ಸ್ವಚ್ಛವಾಹಿನಿಗಳ ಮೂಲಕ ಜಿಂಗಲ್ಸ್ ಹಾಗೂ ಧ್ವನಿವರ್ಧಕ ಬಳಕೆ, ಕರಪತ್ರ ಮತ್ತು ಪೋಸ್ಟರ್ಗಳ ಮೂಲಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ತಾಲೂಕು ಐಇಸಿ ಸಂಯೋಜಕ ಉಮಾಶಂಕರ್ ಜಿ.ಆರ್. ಸೇರಿದಂತೆ ಸಂಬಂಧಪಟ್ಟ ಎಲ್ಲ ಸಿಬ್ಬಂದಿ ಅಭಿಯಾನದ ಯಶಸ್ವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಜಾಬ್ ಕಾರ್ಡ್ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಪ್ರತಿಯೊಂದು ಕುಟುಂಬವೂ ಯೋಜನೆಯ ಪ್ರಯೋಜನ ಪಡೆಯುವಂತೆ ಮಾಡಲು ತಾಲೂಕು ಆಡಳಿತ ಮುಂದಾಗಿದೆ.







