ಬಳ್ಳಾರಿ, ಆ.17: ಸಾವಯವ ಕೃಷಿಕರು ಬೆಳೆದ ರಾಸಾಯನಿಕ ಮುಕ್ತ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ನಗರದ ಗಾಂಧಿ ಭವನದಲ್ಲಿ ಆ.26ರಿಂದ ಪ್ರತಿ ಬುಧವಾರ ‘ನಮ್ದು ಸಂತೆ’ ಆರಂಭವಾಗಲಿದೆ.
ಸಂತೆಯು ಪ್ರತಿ ಬುಧವಾರ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ನಡೆಯಲಿದೆ ಎಂದು ಸಾವಯವ ಕೃಷಿಕ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಹಾಗೂ ವಿಷಮುಕ್ತ ಕೃಷಿಗೆ ಉತ್ತೇಜನ ನೀಡುವುದು, ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ಸಂತೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಸಾವಯವ ಸಂತೆಯ ಪರಿಕಲ್ಪನೆ ಬಳಿಕ ಬೆಂಗಳೂರಿನಲ್ಲಿ ರಾಜ್ಯಮಟ್ಟಕ್ಕೆ ವಿಸ್ತರಣೆಯಾಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ‘ನಮ್ದು ಸಂತೆ’ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಈರಪ್ಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಿಷಮುಕ್ತ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದ್ದು, ರೈತರು ಬೆಳೆಯುವ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಇದಾಗಿದೆ. ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಜವಾಬ್ದಾರಿಯನ್ನು ರೈತ ಸಂಘ ವಹಿಸಲಿದೆ ಎಂದರು.
280ಕ್ಕೂ ಹೆಚ್ಚು ಉತ್ಪನ್ನಗಳು
‘ನಮ್ದು ಸಂತೆ’ಯಲ್ಲಿ 280ಕ್ಕೂ ಹೆಚ್ಚು ಬಗೆಯ ಕೃಷಿ ಹಾಗೂ ಆಹಾರ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿಷಮುಕ್ತ ಆಹಾರ ಪದ್ಧತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಪ್ರತಿಯೊಂದು ಮನೆಯ ಅಡುಗೆಮನೆಯಲ್ಲೂ ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ವಿಶ್ವೇಶ್ವರ ಸಜ್ಜನ್ ಹೇಳಿದರು.
ರಿಫೈನ್ಡ್ ಎಣ್ಣೆ, ಮೈದಾ, ಸಕ್ಕರೆ, ಫಾರಂ ಕೋಳಿ ಮೊಟ್ಟೆ ಸೇರಿದಂತೆ ಆರೋಗ್ಯಕ್ಕೆ ಹಾನಿಕರವೆಂದು ಪರಿಗಣಿಸಲಾದ ಹಲವು ಪದಾರ್ಥಗಳಿಗೆ ಪರ್ಯಾಯವಾಗಿ ಸಾವಯವ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಸಂತೆಯಲ್ಲಿ ಒದಗಿಸಲಾಗುವುದು. ಅಡುಗೆಮನೆಗಳನ್ನು ವಿಷಮುಕ್ತ ಆಹಾರ ಪದ್ಧತಿಯತ್ತ ಕೊಂಡೊಯ್ಯುವಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಉತ್ತಮ ಗುಣಮಟ್ಟದ ಬೀಜ, ಮಾರ್ಗದರ್ಶನ ಹಾಗೂ ಕೃಷಿ ತರಬೇತಿಯನ್ನೂ ನೀಡಲಾಗುವುದು.
ಸಾವಯವ ಕೃಷಿ ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಯುವುದರೊಂದಿಗೆ ಗ್ರಾಹಕರಿಗೂ ಗುಣಮಟ್ಟದ ಆಹಾರ ಸಿಗಲಿದೆ.
“ನಿಮ್ಮ ಆರೋಗ್ಯದ ಭದ್ರತೆಯನ್ನು ನಾವು ಕಾಪಾಡುತ್ತೇವೆ, ನಮ್ಮ ಆರ್ಥಿಕತೆಯನ್ನು ನೀವು ಕಾಪಾಡಿ” ಎಂದು ಗ್ರಾಹಕರಿಗೆ ಮನವಿ ಮಾಡಿದ ಅವರು, ಸಾವಯವ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಬೆಂಬಲಿಸುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಗಾಯಕ್ವಾಡ್, ವಿವೇಕಾನಂದ, ಕೆ.ಜಿ. ಗೋವಿಂದರಾಜುಲು, ಈಶ್ವರ್ ರೆಡ್ಡಿ, ಶಿಲ್ಪಾ, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







