ಬಳ್ಳಾರಿ, ಆ.16: ತಾಲೂಕಿನ ಸಂಜೀವರಾಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಕುಂಟೆ ಗ್ರಾಮದ ಸರ್ವೆ ನಂ.46ರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತ ಹನುಮಂತಪ್ಪ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಮುಂಡ್ಲೂರು ಕುಶಾಲ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ನ್ಯಾಯಾಲಯದ ಮೂಲಕವೇ ಜಮೀನು ಖರೀದಿಸಿದ್ದು, ಜಮೀನಿನ ಖರೀದಿ ಹಾಗೂ ಹಕ್ಕುಗೆ ಸಂಬಂಧಿಸಿದ ಅಸಲಿ ದಾಖಲೆಗಳು ನಮ್ಮ ಬಳಿ ಇವೆ ಎಂದು ಸ್ಪಷ್ಟಪಡಿಸಿದರು.
*ಹೆಚ್ಚುವರಿ ಹಣಕ್ಕೆ ಬೇಡಿಕೆ ಆರೋಪ:*
ಜಮೀನಿನ ವಿಚಾರದಲ್ಲಿ ಹನುಮಂತಪ್ಪ ಅವರು ಹೆಚ್ಚುವರಿ ಹಣಕ್ಕಾಗಿ ₹10 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಕುಶಾಲ್ ಆರೋಪಿಸಿದರು.
ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಯಾವುದೇ ದಾಖಲೆ ಆಧಾರವಿಲ್ಲ. ಆರೋಪ-ಪ್ರತ್ಯಾರೋಪಗಳಿಗೆ ಬದಲಾಗಿ ಕಂದಾಯ ದಾಖಲೆ, ಪಹಣಿ, ಮಾರಾಟ ಪತ್ರ ಹಾಗೂ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿದರೆ ವಾಸ್ತವಾಂಶ ಹೊರಬರಲಿದೆ ಎಂದರು.
*ಮೂಲ ದಾಖಲೆ ಪರಿಶೀಲನೆ ಅಗತ್ಯ:*
1983ರಲ್ಲಿ ಸರ್ಕಾರ ಬಡ ರೈತರಿಗೆ ಜಮೀನು ಹಂಚಿಕೆ ಮಾಡಿತ್ತು ಹಾಗೂ ನಂತರ ಪಹಣಿ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಮೂಲ ದಾಖಲೆಗಳನ್ನು ಪರಿಶೀಲಿಸಬೇಕಿದೆ.
ಕೇವಲ ಹೇಳಿಕೆಗಳ ಆಧಾರದ ಮೇಲೆ ಜಮೀನಿನ ಮಾಲೀಕತ್ವ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಮ್ಮ ಬಳಿ ಇರುವ ಅಸಲಿ ದಾಖಲೆಗಳನ್ನು ಅಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧನಿದ್ದೇನೆ.
ಎರಡೂ ಕಡೆಯ ದಾಖಲೆಗಳನ್ನು ಪರಿಶೀಲಿಸಿ, ದಾಖಲೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಹನುಮಂತಪ್ಪ ಅವರು ಸುದ್ದಿಗೋಷ್ಠಿಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಕುಶಾಲ್, ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದರು.
ಇದೇ ವೇಳೆ ಹನುಮಂತಪ್ಪ ಅವರನ್ನು ‘ಫೇಕ್ ಪರ್ಸನ್’ ಎಂದು ಆರೋಪಿಸಿದ ಅವರು, ತಮ್ಮ ಹೇಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಗತ್ಯವಿದ್ದಲ್ಲಿ ಅಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಸಲ್ಲಿಸುವುದಾಗಿ ತಿಳಿಸಿದರು.
ಜಮೀನಿನ ವಿಚಾರದಲ್ಲಿ ಅಕ್ರಮ ಹಸ್ತಕ್ಷೇಪ ಅಥವಾ ಬೆಳೆ ಹಾನಿಯಾಗಿದ್ದರೆ ಕಾನೂನುಬದ್ಧವಾಗಿ ದೂರು ನೀಡಿ ತನಿಖೆ ನಡೆಸಬಹುದು. ಆದರೆ ಆಧಾರರಹಿತ ಆರೋಪಗಳಿಗೆ ಕಾನೂನು ಪ್ರಕಾರವೇ ಉತ್ತರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗೋಪಿ, ಭಾಷಾ ಹಾಗೂ ಆಲಂ ಭಾಷಾ ಉಪಸ್ಥಿತರಿದ್ದರು.







