“ಬೆಳೆ ಹಾನಿಯಾದರೆ ಅಧಿಕಾರಿಗಳೇ ಹೊಣೆ” — ಜಿಲ್ಲಾಧಿಕಾರಿಗೆ ರೈತರ ಮನವಿ; ಹೋರಾಟದ ಎಚ್ಚರಿಕೆ
ಬಳ್ಳಾರಿ, ಸೆ.2: ಬಳ್ಳಾರಿ ಮಹಾನಗರಕ್ಕೆ ಹೊಂದಿಕೊಂಡಿರುವ ಆಂದ್ರಾಳ್ ಗ್ರಾಮದ ರೈತರ ಕೃಷಿ ಜಮೀನುಗಳಿಗೆ ತುಂಗಭದ್ರ ಡ್ಯಾಂನಿಂದ ಹರಿಯಬೇಕಿದ್ದ ನೀರಿನ ಕಾಲುವೆಯನ್ನು ಜೆಸಿಬಿ ಮೂಲಕ ಮುಚ್ಚಲಾಗಿದೆ ಎಂದು ಆರೋಪಿಸಿ ರೈತರು ಹಾಗೂ ಸಾಗುವಳಿದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂದ್ರಾಳ್ ಗ್ರಾಮದ ಹರಿಜನ ಕಾಲೋನಿ, ವಾರ್ಡ್ ನಂ.9ರ ನಿವಾಸಿಯಾದ ಹೆಚ್. ಹನುಮಪ್ಪ ತಂದೆ ಮಾರೆಪ್ಪ ಸೇರಿದಂತೆ ನೊಂದ ರೈತರು ಹಾಗೂ ಸಾಗುವಳಿದಾರರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೃಷಿ ಭೂಮಿಗೆ ನೀರು ಹರಿಯುವ ಕಾಲುವೆಯನ್ನು ತಕ್ಷಣ ತೆರವುಗೊಳಿಸಿ ಬೆಳೆಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಮನವಿ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಕಡುಬಡ ರೈತರಿಗೆ ಕರ್ನಾಟಕ ಸರ್ಕಾರವು 1960ರಿಂದ 1975ರ ಅವಧಿಯಲ್ಲಿ ನಿಯಮಾನುಸಾರ ಜಮೀನುಗಳನ್ನು ಹಂಚಿಕೆ ಮಾಡಿತ್ತು. ಅಂದಿನಿಂದ ಸುಮಾರು 60 ವರ್ಷಗಳಿಂದ ಫಲಾನುಭವಿಗಳಾದ ತಾವುಗಳು ಸದರಿ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಆಂದ್ರಾಳ್ ಗ್ರಾಮದ ಸರ್ವೆ ನಂ. 101ಎ, 102, 96, 97 ಹಾಗೂ 98ಎ ವ್ಯಾಪ್ತಿಯ ಜಮೀನುಗಳೇ ತಮ್ಮ ಕುಟುಂಬಗಳ ಪ್ರಮುಖ ಜೀವನಾಧಾರವಾಗಿವೆ ಎಂದು ರೈತರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ವಿಶೇಷ ತಹಶೀಲ್ದಾರ್ ಮೂಲಕ ಪಟ್ಟಾ ನೀಡಿ, ಪಹಣಿ ಹಾಗೂ ಸಾಗುವಳಿ ದಾಖಲೆಗಳನ್ನು ಹೊಂದಿದ್ದು, 1981ನೇ ಸಾಲಿನಿಂದ ಇಲ್ಲಿಯವರೆಗೆ ಸಂಬಂಧಿಸಿದ ಖಾತೆ ಸಂಖ್ಯೆ 71ಕ್ಕೆ ಕಂದಾಯವನ್ನೂ ಪಾವತಿಸಿಕೊಂಡು ಬರುತ್ತಿರುವುದಾಗಿ ರೈತರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಜಮೀನುಗಳನ್ನು ಹೊರತುಪಡಿಸಿ ತಮ್ಮ ಕುಟುಂಬಗಳಿಗೆ ಬೇರೆ ಯಾವುದೇ ಆದಾಯ ಅಥವಾ ಆಸ್ತಿಪಾಸ್ತಿ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ತುಂಗಭದ್ರ ಡ್ಯಾಂ ನೀರು ಬಂದ ನಂತರ ಸಾಲ ಮಾಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದು, ಈಗಾಗಲೇ ಗದ್ದೆ ಹಾಗೂ ಮೆಕ್ಕೆಜೋಳದ ಬಿತ್ತನೆ ಮಾಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಆದರೆ, ಸೆ.1ರಂದು ಸಂಜೆ ಸುಮಾರು 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೃಷಿ ಭೂಮಿಗೆ ನೀರು ಹರಿಯುತ್ತಿದ್ದ ಕಾಲುವೆಯ ನೀರಿನ ದಾರಿಯನ್ನು ಜೆಸಿಬಿ ಯಂತ್ರದ ಮೂಲಕ ಮುಚ್ಚಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದು, ಕಾಲುವೆಯನ್ನು ಮುಚ್ಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬೆಳೆ ಹಾನಿಯಾಗದಂತೆ ಕಾಲುವೆಯನ್ನು ತೆರವುಗೊಳಿಸಿ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಾಲ ಮಾಡಿಕೊಂಡು ಬಿತ್ತನೆ ಮಾಡಿದ್ದೇವೆ.
ಇದೀಗ ಕಾಲುವೆ ಮುಚ್ಚಿರುವುದರಿಂದ ಬೆಳೆಗಳಿಗೆ ನೀರು ಸಿಗದೆ ಹಾನಿಯಾದರೆ, ಅದಕ್ಕೆ ಸಂಬಂಧಿಸಿದ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ” ಎಂದು ರೈತರು ಎಚ್ಚರಿಸಿದ್ದಾರೆ.
ರೈತರ ಕೃಷಿ ಭೂಮಿಗೆ ನೀರು ಹರಿಯುವಂತೆ ತಕ್ಷಣ ಕಾಲುವೆ ತೆರವುಗೊಳಿಸಿ, ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳನ್ನು ರಕ್ಷಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಪರವಾಗಿ ಕರ್ನಾಟಕ ಜನಶಕ್ತಿ ಹಾಗೂ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಎಚ್ಚರಿಸಿದ್ದಾರೆ.
“ಅದೇನೇ ಆಗಲಿ, ಪ್ರಾಣ ಬಿಟ್ಟರೂ ಭೂಮಿ ಬಿಡುವುದಿಲ್ಲ” ಎಂದು ರೈತರು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರೈತರ ಸಮಸ್ಯೆಯನ್ನು ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಂದ್ರಾಳ್ ಗ್ರಾಮದ ರೈತರಾದ ಬಿ. ಶ್ರೀನಿವಾಸಲು, ಬಿ. ಹೊನ್ನೂರಮ್ಮ, ಆರ್. ಮಹೇಶ್, ಕೆ. ಸುರೇಶ್, ರಾಮನಗೌಡ, ಲಕ್ಷ್ಮಿ, ಲಕ್ಷ್ಮಮ್ಮ, ರುದ್ರಮ್ಮ, ಲೇಪಾಕ್ಷಿ ವೆಂಕಪ್ಪ, ಅಂಬಮ್ಮ, ದುರ್ಗಣ್ಣ, ಪಾಲಾಕ್ಷಿ, ನಂದೀಶ, ಸಣ್ಣ ಎರ್ರಿಸ್ವಾಮಿ, ನಾಗರಾಜ್, ಸೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







